ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಹೂರಣ, ಸ್ಫೂರ್ತಿಯ ತೋರಣ

‘ರೈತರ ಸಂತೆ’ ಕೃಷಿ ಮೇಳಕ್ಕೆ ತೆರೆ, ಐದು ಲಕ್ಷ ಮಂದಿ ಭೇಟಿ
Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ನನ್ನ ಪಾಲಿಗೆ ಇದೊಂದು ರೈತರ ಜಾತ್ರೆ. ಇದರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ಅದಕ್ಕಾಗಿಯೇ ದೂರದ ಊರಿನಿಂದ ಬಂದು ವಸತಿಗೃಹದಲ್ಲಿ ಉಳಿದುಕೊಂಡು ಮೂರೂ ದಿನ ಭೇಟಿ ನೀಡಿದೆ. ಕೃಷಿಯೇ ಜೀವಾಳವಾಗಿರುವ ನಮ್ಮಂಥವರ ಪಾಲಿಗೆ ಈ ರೀತಿಯ ಮೇಳಗಳು ಮಾಹಿತಿ ಕಣಜವಿದ್ದಂತೆ. ಇಲ್ಲಿ ನೋಡಿ ತಿಳಿದ ಅಂಶಗಳನ್ನು ನನ್ನ ಐದು ಎಕರೆ ತೋಟದಲ್ಲಿ ಅಳವಡಿಸುತ್ತೇನೆ’ –ಹೀಗೆಂದು ಖುಷಿಯಿಂದ ಹೇಳಿದ್ದು ಸಕಲೇಶಪುರದ ರೈತ ಗಿರಿಯಪ್ಪಗೌಡ.

‘ಮೂರು ವರ್ಷಗಳಿಂದ ಕೃಷಿ ಮೇಳ ವೀಕ್ಷಿಸು­ತ್ತಿದ್ದೇನೆ. ಇದಷ್ಟೇ ಅಲ್ಲ, ಧಾರವಾಡದಲ್ಲಿ ನಡೆ­ಯುವ ಕೃಷಿ ಮೇಳಕ್ಕೂ ಹೋಗುತ್ತಿರುತ್ತೇನೆ. ಇಲ್ಲಿ ಕಲಿತ ವಿಷಯಗಳಿಂದಲೇ ಕೃಷಿ ಮಾಡಿ ಯಶಸ್ಸು ಕಂಡಿದ್ದೇನೆ. ಸಮಗ್ರ ಬೇಸಾಯ ಪದ್ಧತಿಯಡಿ 3 ಎಕರೆ ಜಮೀನಿನಲ್ಲಿ ಕೃಷಿ ಮಾಡಿದ್ದೇನೆ. ತರಕಾರಿ ಬೆಳೆಯುತ್ತೇನೆ. ಹಸು, ಕುರಿ, ಕೋಳಿ ಸಾಕಿದ್ದೇನೆ. ಇದಕ್ಕೆಲ್ಲಾ ಕೃಷಿ ಮೇಳವೇ ಸ್ಫೂರ್ತಿ’ ಎಂದಿದ್ದು ಕನಕಪುರದ ರೈತ ಶಿವನಂಜಪ್ಪ.

ಹೀಗೆ ಕೃಷಿ ಮೇಳದಿಂದ ಲಭಿಸಿದ ಪ್ರಯೋಜನ ಪಡೆದ ರೈತರು ಖುಷಿಯ ಮೂಡಿನಲ್ಲಿದ್ದರು. ಊರಿಗೆ ತೆರಳಿ ಹೊಸ ಪದ್ಧತಿಗಳನ್ನು ಅಳವಡಿಸುವ ತವಕ ಅವರಲ್ಲಿತ್ತು. ರೈತರ ಮಾಹಿತಿ ಕಣಜದಂತಿದ್ದ ಕೃಷಿ ಮೇಳಕ್ಕೆ ಶುಕ್ರವಾರ ತೆರೆಬಿತ್ತು.  ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಬೆಂಗಳೂರು ಕೃಷಿ ವಿವಿ ಆಯೋಜಿಸಿದ್ದ 3 ದಿನದ ಈ ಮೇಳಕ್ಕೆ ಸುಮಾರು 5 ಲಕ್ಷ ಜನ ಭೇಟಿ ನೀಡಿ ಮಾಹಿತಿ ಪಡೆದರು.

ಸುಧಾರಿತ ಬೆಳೆ ತಳಿಗಳ ಪ್ರಾತ್ಯಕ್ಷಿಕೆ, ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ, ಖುಷ್ಕಿ ಬೇಸಾಯದಲ್ಲಿ ಸಮಗ್ರ ಬೆಳೆ ನಿರ್ವಹಣೆ, ಕಡಿಮೆ ನೀರಿನ ಬಳಕೆಯಿಂದ ಭತ್ತದ ಬೇಸಾಯ, ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳು, ಕೋಳಿ ಸಾಕಣೆ, ಹೈನುಗಾರಿಕೆ, ಮೀನು ಸಾಕಣೆಯ ಸುಧಾರಿತ ಪದ್ಧತಿ ಹಾಗೂ ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ರೈತರ ಗಮನ ಸೆಳೆದವು.

ಕೃಷಿ ಸಂಬಂಧಿಸಿದ ಸಮಸ್ಯೆಗಳಿಗೆ ತಜ್ಞರಿಂದ ಸಲಹೆಯೂ ಇತ್ತು. ರೈತರಿಂದ ರೈತರಿಗಾಗಿ ಚರ್ಚಾ­ಗೋಷ್ಠಿ ಏರ್ಪಡಿಸಲಾಗಿತ್ತು. ವಿವಿಧ ಜಿಲ್ಲೆಗ­ಳಿಂದ ಬಂದಿದ್ದ ರೈತರು ಮಾಹಿತಿ ಪಡೆದರು. ಹೊಸ ಪರಿಕರಗಳನ್ನು ಖರೀದಿಸಿದರು. ವಿದ್ಯಾರ್ಥಿಗಳು ಕೂಡ ಕುತೂಹಲದಿಂದ ವೀಕ್ಷಿಸಿ ಕೃಷಿ ಜಗತ್ತಿನ ಬಗ್ಗೆ ಹೊಸ ವಿಚಾರ ತಿಳಿದುಕೊಂಡರು.

ಜೊತೆಗೆ ಅಸಮಾಧಾನದ ಧ್ವನಿಯೂ ಇತ್ತು. ‘ಐದು ವರ್ಷಗಳಿಂದ ಕೃಷಿ ಮೇಳ ವೀಕ್ಷಿಸುತ್ತಿದ್ದೇನೆ. ಆದರೆ, ಈ ಬಾರಿ ಹೊಸತನವಿರಲಿಲ್ಲ. ಹೋದ ಬಾರಿ ಹೊಸ ತಳಿಗಳು, ಹೊಸ ಪರಿಕರಗಳು ಬಹಳ ಸಂಖ್ಯೆಯಲ್ಲಿದ್ದವು. ಈ ಬಾರಿಯ ಮೇಳ ಬೇಸರ ತರಿಸಿತು’ ಎಂದು ಹೊಸಕೋಟೆಯ ರೈತ ಸದಾಶಿವಪ್ಪ ನುಡಿದರು.

610 ಮಳಿಗೆಗಳು: ಈ ಬಾರಿ ಕೃಷಿ ಮೇಳದಲ್ಲಿ 610 ಮಳಿಗೆಗಳಿದ್ದವು. ಪ್ರದರ್ಶನದ ಜೊತೆಗೆ ಪ್ರಾತ್ಯಕ್ಷಿಕೆ ಹಾಗೂ ಮಾರಾಟವೂ ಇತ್ತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮ­ರಾಜ­ನಗರ, ಕೋಲಾರ, ಹಾಸನ, ಮಂಡ್ಯ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅತ್ಯುತ್ತಮ ರೈತರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯುವಜನ ಸೇವೆ ಹಾಗೂ ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್‌, ‘ಕೃಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ರೈತರ ಮಕ್ಕಳು ರೈತರಾಗಲು ಬಯಸುತ್ತಿಲ್ಲ. ಸದ್ಯ ಸಂಕಷ್ಟದಲ್ಲಿರುವ ಕೃಷಿಯ ಪುನಶ್ಚೇತನಕ್ಕೆ ಆಧುನಿಕ ಕೃಷಿ ಪದ್ಧತಿ ಅಳವಡಿಕೆಯೇ ಸೂಕ್ತ ಮದ್ದು’ ಎಂದರು.

ಬೆಂಗಳೂರು ಕೃಷಿ ವಿವಿ ಕುಲಪತಿ ಪ್ರೊ. ಡಿ.ಪಿ.­ಕುಮಾರ್‌, ಕೆನರಾ ಬ್ಯಾಂಕ್‌ ಕಾರ್ಯ­ನಿರ್ವಾಹಕ ನಿರ್ದೇಶಕ ವಿ.ಎಸ್‌.ಕೃಷ್ಣಕುಮಾರ್‌ ಇದ್ದರು.

ಪ್ರಥಮ ಬಹುಮಾನ ಪಡೆದ ಉತ್ತಮ ಮಳಿಗೆಗಳು
1. ಸರ್ಕಾರಿ ಇಲಾಖೆಗಳು/ಮಳಿಗೆಗಳು: ಸಮಗ್ರ ಜಲಾನಯನ ಮಾದರಿ, ಕೃಷಿ ಭಾಗ್ಯ (ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ)
2. ಕೃಷಿ ವಿ.ವಿ.ಗಳ ಮಳಿಗೆಗಳು: ಕೃಷಿ­ಯಲ್ಲಿ ಮಳೆ ನೀರಿನ ಸಂರಕ್ಷಣೆ ಮತ್ತು ಸಮ­ರ್ಪಕ ಬಳಕೆ (ಕೃಷಿ ವಿಜ್ಞಾನ ಕೇಂದ್ರಗಳ ಮಳಿಗೆ)
3. ಕೃಷಿ ಪರಿಕರಗಳ ಮಳಿಗೆ: ಇಂಡೊ ಅಮೆರಿ­ಕನ್‌ ಹೈಬ್ರಿಡ್‌ ಸೀಡ್ಸ್‌್ (ಬೆಂಗಳೂರು)
4. ಸಾವಯವ ಕೃಷಿ ಮಳಿಗೆ: ಸಾವಯವ ಕೃಷಿ ಸಂಶೋಧನಾ ಸಂಸ್ಥೆ (ಜಿಕೆವಿಕೆ, ಬೆಂಗಳೂರು)
5. ಸ್ವಸಹಾಯ ಸಂಘಗಳು:  ಸಾಯಿ ಶ್ರೀ ಶಕ್ತಿ ಸಂಘ (ನಂದಿನಿ ಲೇಔಟ್‌, ಬೆಂಗಳೂರು)
6. ಪಶು ಸಂಗೋಪನೆ: ಕುಕ್ಕುಟ ವಿಭಾಗ (ಹೆಬ್ಬಾಳ)
7. ಅತ್ಯುತ್ತಮ ಫಾರ್ಮ್‌: ಖುಷ್ಕಿ ಬೇಸಾಯ ಪ್ರಯೋಜನೆ (ಜಿಕೆವಿಕೆ, ಬೆಂಗಳೂರು)
8. ನರ್ಸರಿ: ಚೌಡೇಶ್ವರಿ ನರ್ಸರಿ (ಶ್ರೀನಿವಾಸಪುರ)
ಸಮಗ್ರ ಪ್ರಶಸ್ತಿ
ಕೃಷಿ ವಿಜ್ಞಾನ ಕೇಂದ್ರಗಳ ಮಳಿಗೆ–
ಕೃಷಿಯಲ್ಲಿ ಮಳೆ ನೀರಿನ ಸಂರಕ್ಷಣೆ ಮತ್ತು ಸಮರ್ಪಕ ಬಳಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT