ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ರವೀಂದ್ರ ಜಡೇಜ, ಡ್ವೇನ್‌ ಸ್ಮಿತ್‌

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮಣಿದ ರಾಜಸ್ತಾನ ರಾಯಲ್ಸ್‌
Last Updated 23 ಏಪ್ರಿಲ್ 2014, 20:13 IST
ಅಕ್ಷರ ಗಾತ್ರ

ದುಬೈ (ಪಿಟಿಐ): ರವೀಂದ್ರ ಜಡೇಜ ತೋರಿದ ಆಲ್‌ರೌಂಡ್‌ ಆಟ ಮತ್ತು ಡ್ವೇನ್‌ ಸ್ಮಿತ್‌ ಗಳಿಸಿದ ಅರ್ಧಶತಕದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಏಳು ರನ್‌ಗಳಿಂದ ರಾಜಸ್ತಾನ ರಾಯಲ್ಸ್‌ ತಂಡವನ್ನು ಮಣಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಸೂಪರ್‌ ಕಿಂಗ್ಸ್‌ 6 ವಿಕೆಟ್‌ಗೆ 140 ರನ್‌ ಪೇರಿಸಿತು. ಈ ಗುರಿ ಬೆನ್ನಟ್ಟಿದ ಶೇನ್‌ ವಾಟ್ಸನ್‌ ಬಳಗ 19.5 ಓವರ್‌ಗಳಲ್ಲಿ 133 ರನ್‌ಗಳಿಗೆ ಆಲೌಟಾಯಿತು. 36 ರನ್‌ ಗಳಿಸಿದ್ದಲ್ಲದೆ ಬೌಲಿಂಗ್‌ನಲ್ಲೂ ಕೈಚಳಕ ತೋರಿ 33 ರನ್‌ಗಳಿಗೆ 4 ವಿಕೆಟ್‌ ಪಡೆದ ಜಡೇಜ ಸೂಪರ್‌ ಕಿಂಗ್ಸ್‌ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
ಸೂಪರ್‌ ಕಿಂಗ್ಸ್‌ ತಂಡದ  ಬ್ರೆಂಡನ್‌ ಮೆಕ್ಲಮ್‌ (6), ಸುರೇಶ್ ರೈನಾ (4), ಫಾಫ್ ಡು ಪ್ಲೆಸಿಸ್‌ (7) ಮತ್ತು ನಾಯಕ ದೋನಿ (5) ಎರಡಂಕಿಯ ಮೊತ್ತ ಮುಟ್ಟದೇ ಪೆವಿಲಿಯನ್‌ ಸೇರಿದರು.

ಆರಂಭಿಕ ಜೋಡಿ ಡ್ವೇನ್‌ ಸ್ಮಿತ್‌ ಮತ್ತು ಮೆಕ್ಲಮ್‌ ಮೊದಲ ವಿಕೆಟ್‌ಗೆ 35 ರನ್‌ ಕಲೆ ಹಾಕಿತು.  ಆದರೆ, ಹತ್ತು ರನ್ ಕಲೆ ಹಾಕುವ ಅಂತರದಲ್ಲಿ ರೈನಾ, ಪ್ಲೆಸಿಸ್‌ ಮತ್ತು ದೋನಿ ಅವರ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 28 ಎಸೆತಗಳಲ್ಲಿ 50 ರನ್‌ ಸಿಡಿಸಿದ ಸ್ಮಿತ್‌ ಅಬ್ಬರದ ಬ್ಯಾಟಿಂಗ್‌ ಬಲದಿಂದ ಸೂಪರ್‌ ಕಿಂಗ್ಸ್‌ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರಾಯಿತು. ಸ್ಮಿತ್‌ ಗಳಿಸಿದ ಅರ್ಧಶತಕದಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿವೆ.

ಆಸರೆಯಾದ ಜಡೇಜ: ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್‌ ಕಲೆ ಹಾಕಿದ ರವೀಂದ್ರ ಜಡೇಜ ತಂಡಕ್ಕೆ ಆಸರೆಯಾದರು. 33 ಎಸೆತಗಳಲ್ಲಿ ಎರಡು ಬೌಂಡರಿ ಸೇರಿದಂತೆ 36 ರನ್‌ ಕಲೆ ಹಾಕಿ ತಂಡದ ಮೊತ್ತವನ್ನು ಹೆಚ್ಚಿಸಿದರು.

11.1 ಓವರ್‌ ಆಗಿದ್ದಾಗ ಸೂಪರ್‌ ಕಿಂಗ್ಸ್‌ ಐದು ವಿಕೆಟ್‌ ಕಳೆದುಕೊಂಡು 74 ರನ್‌ಗಳನ್ನಷ್ಟೇ ಗಳಿಸಿತ್ತು. ಜಡೇಜ ಮತ್ತು ಮಿಥುನ್‌ ಮನ್ಹಾಸ್‌ ಆರನೇ ವಿಕೆಟ್‌ಗೆ 27 ಕಲೆ ಹಾಕಿದರು. ಏಳನೇ ವಿಕೆಟ್‌ಗೆ ಆರ್‌. ಅಶ್ವಿನ್‌ ಜೊತೆ ಸೇರಿದ ಜಡೇಜ 39 ರನ್‌ ಪೇರಿಸಿ ಆಪದ್ಭಾಂಧವರೆನಿಸಿದರು. ಎರಡು ವಿಕೆಟ್‌ ಪಡೆದ ರಜತ್‌ ಭಾಟಿಯಾ  ರಾಯಲ್ಸ್‌ ಪರ ಯಶಸ್ವಿ ಬೌಲರ್‌ ಎನಿಸಿದರು.

ಬ್ಯಾಟಿಂಗ್‌ ವೈಫಲ್ಯ: ಸಾಧಾರಣ ಮೊತ್ತ ಮುಂದಿದ್ದರೂ ರಾಯಲ್ಸ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಸೂಪರ್‌ ಕಿಂಗ್ಸ್‌ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವಲ್ಲಿ ಯಶಸ್ವಿಯಾದರು. 

ಅಭಿಷೇಕ್‌ ನಾಯರ್‌ (5) ಎರಡನೇ ಓವರ್‌ನಲ್ಲಿ ರನೌಟಾಗಿ ಮರಳಿದರು. ಅಜಿಂಕ್ಯ ರಹಾನೆ (15, 12 ಎಸೆತ) ಮತ್ತು ಸಂಜು ಸ್ಯಾಮ್ಸನ್‌ (16, 16 ಎಸೆತ) ಎರಡನೇ ವಿಕೆಟ್‌ಗೆ 27 ರನ್‌ ಸೇರಿಸಿದರು. ರಹಾನೆ ವಿಕೆಟ್‌ ಪಡೆದ ಅಶ್ವಿನ್‌ ಈ ಜೊತೆಯಾಟ ಮುರಿದರು.

ಆ ಬಳಿಕ ಜಡೇಜ ತಮ್ಮ ‘ಜಾದೂ’ ತೋರಿದರು. ಸತತ ಎರಡು ಎಸೆತಗಳಲ್ಲಿ ವಾಟ್ಸನ್‌ (7) ಮತ್ತು ಸ್ಯಾಮ್ಸನ್‌ ಅವರನ್ನು ಪೆವಿಲಿಯನ್‌ಗಟ್ಟಿ ರಾಯಲ್ಸ್‌ಗೆ ಆಘಾತ ನೀಡಿದರು. ಆ ಬಳಿಕ ಸ್ಟೀವನ್‌ ಸ್ಮಿತ್‌ (19), ರಜತ್‌ ಭಾಟಿಯಾ (23, 20 ಎಸೆತ) ಮತ್ತು ಧವಳ್‌ ಕುಲಕರ್ಣಿ (ಅಜೇಯ 28, 19 ಎಸೆತ, 2 ಸಿಕ್ಸರ್‌) ತಕ್ಕಮಟ್ಟಿನ ಪ್ರಯತ್ನ ನಡೆಸಿದರೂ ತಂಡ ಗೆಲುವಿನ ದಡದಲ್ಲಿ ಎಡವಿತು.

ಅಂತಿಮ ಓವರ್‌ನಲ್ಲಿ ರಾಯಲ್ಸ್‌ ಗೆಲುವಿಗೆ 24 ರನ್‌ಗಳು ಬೇಕಿದ್ದವು. ಆರ್‌. ಅಶ್ವಿನ್‌ ಎಸೆದ ಓವರ್‌ನಲ್ಲಿ ಧವಳ್‌ ಕುಲಕರ್ಣಿ ಎರಡು ಸಿಕ್ಸರ್‌ ಸಿಡಿಸಿದ ಕಾರಣ ಪಂದ್ಯಕ್ಕೆ ರೋಚಕತೆ ಬಂತು. ಕೊನೆಯ ಎರಡು ಎಸೆತಗಳಲ್ಲಿ 9 ರನ್‌ಗಳು ಬೇಕಿದ್ದವು. ಐದನೇ ಎಸೆತದಲ್ಲಿ ಪ್ರವೀಣ್‌ ತಾಂಬೆ ರನೌಟಾಗುವುದರೊಂದಿಗೆ ರಾಯಲ್ಸ್‌ನ ಹೋರಾಟಕ್ಕೆ ತೆರೆಬಿತ್ತು. ರವೀಂದ್ರ ಜಡೇಜಗೆ ಉತ್ತಮ ಬೆಂಬಲ ನೀಡಿದ ಈಶ್ವರ್‌ ಪಾಂಡೆ, ಮೋಹಿತ್‌ ಶರ್ಮ, ಅಶ್ವಿನ್‌ ಮತ್ತು ಬೆನ್‌ ಹಿಲ್ಫೆನಾಸ್‌ ತಲಾ ಒಂದು ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT