ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಸುಚಿತ್‌, ಮೋರೆ

ಕ್ರಿಕೆಟ್‌: ಕರ್ನಾಟಕಕ್ಕೆ ಮಣಿದ ತಮಿಳುನಾಡು
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಕೊಚ್ಚಿ (ಪಿಟಿಐ): ವೇಗಿ ರೋನಿತ್‌ ಮೋರೆ (3–2–1–2) ಮತ್ತು ಆಫ್‌ ಸ್ಪಿನ್ನರ್‌ ಜೆ. ಸುಚಿತ್‌ ( 1–0–2–3) ಶಿಸ್ತಿನ ದಾಳಿಯ ಮೂಲಕ ತಮಿಳುನಾಡು ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಗೊಳಿಸಿದರು . ಇವರಿಬ್ಬರ  ಅಪೂರ್ವ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ  ಸೈಯದ್‌ ಮುಸ್ತಾಕ್‌ ಅಲಿ ಟ್ರೋಫಿ ದಕ್ಷಿಣ ವಲಯ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವಿನ ಸವಿ ಕಂಡಿತು.

ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್‌ ಪಾಂಡೆ ಫೀಲ್ಡಿಂಗ್‌ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸುವಂತೆ ದಾಳಿ ನಡೆಸಿದ ಬೌಲರ್‌ಗಳು ತಮಿಳುನಾಡು ತಂಡವನ್ನು 13.5 ಓವರ್‌ಗಳಲ್ಲಿ 61ರನ್‌ಗಳಿಗೆ ಕಟ್ಟಿ ಹಾಕಿದರು.
ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ 9.1 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಗೆಲುವಿನ ಕೇಕೆ ಹಾಕಿತು.

ಆರಂಭಿಕ ಆಘಾತ: ತಮಿಳುನಾಡು ತಂಡ  ಎಂಟು ರನ್‌ ಆಗುವಷ್ಟರಲ್ಲಿ ಶ್ರೀಕಾಂತ್‌ ಅನಿರುದ್ಧ್‌ (5) ಅವರ ವಿಕೆಟ್‌ ಕಳೆದುಕೊಂಡಿತು.
ಬಳಿಕ ಬಂದ ಎಚ್‌.ಗೋಪಿನಾಥ್‌ (1) ತಾವೆದುರಿಸಿ ಮೂರನೇ ಎಸೆತದಲ್ಲೇ ರೋನಿತ್‌ ಮೋರೆ ಅವರ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು.  ವಿಜಯ್‌ ಶಂಕರ್‌ಗೆ (0) ಮೋರೆ ರಟ್ಟೆ ಅರಳಿಸಲು ಅವಕಾಶ ನೀಡಲಿಲ್ಲ.

ತಂಡ 36ರನ್‌ ಆಗುವಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಒಂದಾದ ಲಕ್ಷ್ಮೇಶಾ ಸೂರ್ಯಪ್ರಕಾಶ್‌ (24) ಮತ್ತು ಎಂ.ಶಾರುಖ್‌ ಖಾನ್‌ (12) ಐದನೇ ವಿಕೆಟ್‌ಗೆ 24ರನ್‌ಗಳ ಕಾಣಿಕೆ ನೀಡಿದರು.

13ನೇ ಓವರ್‌ನಲ್ಲಿ ದಾಳಿಗಿಳಿದ ಸುಚಿತ್‌ ಸತತ ಎರಡು ಎಸೆತಗಳಲ್ಲಿ ಸೂರ್ಯಪ್ರಕಾಶ್‌ ಮತ್ತು ರಾಜಗೋಪಾಲ್‌ ಸತೀಶ್‌ ಅವರ ವಿಕೆಟ್‌ ಕಬಳಿಸಿದರಲ್ಲದೇ , ಓವರ್‌ನ ಕೊನೆಯ ಎಸೆತದಲ್ಲಿ ಶಾರುಖ್‌ ಖಾನ್‌ ಅವರಿಗೂ ಪೆವಿಲಿಯನ್‌ಗೆ ಕಳುಹಿಸಿ ದರು.

1 ರನ್‌ 5 ವಿಕೆಟ್‌ !: ಆ ಬಳಿಕ ಬಂದ ಬ್ಯಾಟ್ಸ್‌ಮನ್‌ಗಳು ಯಾರೂ ಕರ್ನಾಟಕದ ಬೌಲರ್‌ಗಳನ್ನು ದಿಟ್ಟತನದಿಂದ ಎದುರಿಸಿ ನಿಲ್ಲಲಿಲ್ಲ. ಈ ತಂಡ ಒಂದು ರನ್‌ ಅಂತರದಲ್ಲಿ ಕೊನೆಯ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದೇ ಇದಕ್ಕೆ ಸಾಕ್ಷಿ.

ಬಿರುಸಿನ ಆರಂಭ: ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಆರ್‌.ಸಮರ್ಥ್‌ (ಔಟಾಗದೆ 24) ಮತ್ತು ಮಯಂಕ್‌ ಅಗರವಾಲ್‌ (26) ಬಿರುಸಿನ ಆರಂಭ ಒದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ ಐದು ಓವರ್‌ಗಳಲ್ಲಿ 38ರನ್‌ ಕಲೆಹಾಕಿದರು.

ಈ ಹಂತದಲ್ಲಿ ದಾಳಿಗಿಳಿದ ಅಂಥೋಣಿ ದಾಸ್‌ ಅಗರವಾಲ್‌ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು.  ಬಳಿಕ ಕರುಣ್‌  ನಾಯರ್‌ (ಔಟಾಗದೆ 10) ಮತ್ತು ಸಮರ್ಥ್‌ ಯಾವುದೇ ಅಪಾಯಕ್ಕೆ ಅವಕಾಶ ನೀಡದೆ ತಂಡವನ್ನು ಗೆಲುವಿನ  ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ತಮಿಳುನಾಡು: 13.5 ಓವರ್‌ಗಳಲ್ಲಿ 61 (ಲಕ್ಷ್ಮೇಶಾ ಸೂರ್ಯಪ್ರಕಾಶ್‌ 24, ಎಂ.ಶಾರುಖ್‌ ಖಾನ್‌ 12; ರೋನಿತ್‌ ಮೋರೆ 1ಕ್ಕೆ2, ಜೆ.ಸುಚಿತ್‌ 2ಕ್ಕೆ3, ಉದಿತ್‌ ಬಿ ಪಟೇಲ್‌ 0.5ಕ್ಕೆ2). ಕರ್ನಾಟಕ: 9.1 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 65 (ಆರ್‌.ಸಮರ್ಥ್‌ ಔಟಾಗದೆ 24, ಮಯಂಕ್‌ ಅಗರವಾಲ್‌ 26, ಕರುಣ್‌ ನಾಯರ್‌ ಔಟಾಗದೆ 10; ಅಂಥೋಣಿ ದಾಸ್‌ 15ಕ್ಕೆ1).
ಫಲಿತಾಂಶ: ಕರ್ನಾಟಕಕ್ಕೆ 8 ವಿಕೆಟ್‌ ಜಯ ಹಾಗೂ ನಾಲ್ಕು ಪಾಯಿಂಟ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT