ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿದುವಾಗಿರಲಿ ಮನ

Last Updated 10 ಫೆಬ್ರುವರಿ 2016, 11:16 IST
ಅಕ್ಷರ ಗಾತ್ರ

ಅತ್ಯಂತ ಶ್ರೇಷ್ಠವಾದ, ಸಕಾರಾತ್ಮಕವಾದ, ಪ್ರೀತಿ ತುಂಬಿದ ವಿಚಾರಗಳನ್ನು ನೀಡುತ್ತಿರುವುದಕ್ಕೆ ನಿಮ್ಮ ಮನಸ್ಸಿಗೇ ಕೃತಜ್ಞರಾಗಿರಿ. ಪ್ರಾಮಾಣಿಕವಾಗಿರುವುದ್ಕಕೆ, ನಿಮ್ಮ ದೇಹವನ್ನು ಕ್ರಿಯಾಶೀಲವಾಗಿ ಇಟ್ಟಿರುವುದಕ್ಕೆ ಹೃದಯಕ್ಕೆ ಕೃತಜ್ಞತೆ ಹೇಳಿ. ನಿಮ್ಮ ಮನಸ್ಸು ಬುದ್ಧಿವಂತಿಕೆಯಿಂದ ಹೊಳೆಯುವುದನ್ನು ನೋಡಿ. ಪರಿಶುದ್ಧತೆ, ಪ್ರಶಾಂತ ಸ್ವಭಾವ ಮತ್ತು ನಿರಂತರ ಶಕ್ತಿಯನ್ನು ಹೊಂದಿರುವ ನಿಮ್ಮ ಹೃದಯವನ್ನು ನೋಡಿಕೊಳ್ಳಿ. ನಿಮ್ಮ ದೇಹದ ತಾಳ್ಮೆಯನ್ನೂ ನೋಡಿ. ನಿಮಗೆ ಸಿಕ್ಕಿರುವ ಅಮೂಲ್ಯವಾದ, ಅಪಾರ ಸಂಪತ್ತನ್ನು ನೋಡಿ ಬೆರಗು ಮೂಡುವುದಿಲ್ಲವೇ?

ನೀವು ಸಂರ್ಪೂಣ ತೃಪ್ತರಾಗಿದ್ದಾಗ ಮತ್ತು ಕೃತಜ್ಞತೆಯಿಂದ ಇದ್ದಾಗ ಎಲ್ಲರೂ ಸಂತೋಷದಿಂದ ಇರಬೇಕೆಂದು ಬಯಸುತ್ತೀರಿ. ಎಲ್ಲರ ಬಳಿ ಮೃದುವಾಗಿ ಇರುತ್ತೀರಿ. ಕೃತಜ್ಞತೆ, ಸಂತೃಪ್ತಿ, ಪ್ರೀತಿ ಇವು ದೈವಿಕ ಗುಣಗಳು. ಎಲ್ಲರನ್ನೂ ಇವು ಒಗ್ಗೂಡಿಸುತ್ತವೆ. ಈ ಗುಣಗಳು ಇದ್ದಾಗ ಮೇಲು, ಕೀಳು ಎಂಬ ಭಾವ ಬಾಧಿಸದು.

ಉದಾಹರಣೆಗೆ ಸಿರಿವಂತರು ಬಡವರ ಬಗ್ಗೆ ಉದಾಸೀನ ಭಾವ ಹೊಂದಿರುತ್ತಾರೆ, ವಿದ್ಯಾವಂತರು ಅನಕ್ಷರಸ್ಥರೆಂದರೆ ಮೂಗು ಮುರಿಯುತ್ತಾರೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುವವರು ಸಣ್ಣ ಕಂಪೆನೆಗಳ ಹೆಸರನ್ನು ಸಹ ನೆನಪಿಟ್ಟುಕೊಂಡಿರುವುದಿಲ್ಲ. ಹೃದ್ರೋಗ ಇರುವವರು ಸಹ ತಮ್ಮ ಪಕ್ಕದ ಮನೆಯವರು ಸಣ್ಣ ವೈದ್ಯರ ಬಳಿ ಹೋದಲ್ಲಿ ಅತಿ ದೊಡ್ಡ ಹೃದ್ರೋಗ ತಜ್ಞರ ಹೆಸರು ಹೇಳುತ್ತಾರೆ.

ಇದು ನಮ್ಮ ಮನಸ್ಸನ್ನು ನಾವೇ ಕೆಡಿಸಿಕೊಳ್ಳುವ ವಿಧಾನ. ಚಿನ್ನದ ತುಂಡುಗಳನ್ನು ಮೃದುವಾದ ವೆಲ್ವೆಟ್ ಬಟ್ಟೆಯಲ್ಲಿ ಇಡುವ ಬದಲು ಆಸಿಡ್‌ನಲ್ಲಿ ಮುಳುಗಿಸುವ ವಿಧಾನ ಇದು. ಕೃತಜ್ಞತೆ, ಸಂತೃಪ್ತಿ, ಪ್ರೀತಿ, ವಿನಮ್ರತೆ, ಪ್ರಾಮಾಣಿಕತೆ, ಒಳ್ಳೆಯತನ, ಔದಾರ್ಯ ಪ್ರರ್ದಶಿಸಿದಾಗ ಮನಸ್ಸು ವೆಲ್ವೆಟ್‌ನಂತಹ ಮೃದುತ್ವ ಅನುಭವಿಸುತ್ತದೆ. ಪುಟ್ಟ ಹಕ್ಕಿಯೊಂದು ತಾಯಿಹಕ್ಕಿ ಕಟ್ಟಿದ ಮೃದುವಾದ ಗೂಡಿನಲ್ಲಿ ಬೆಚ್ಚಗೆ ಮಲಗಿದಂತೆ, ಈ ಗುಣಗಳನ್ನು ಹೊಂದಿದಾಗ ಮನಸ್ಸು ಸುರಕ್ಷಾ ಭಾವ ಅನುಭವಿಸುತ್ತದೆ.

ನಿಮ್ಮ ಮಾತಿನ ಧಾಟಿ, ದನಿಯ ಏರಿಳಿತ ಎಲ್ಲವನ್ನೂ ಗಮನಿಸಿ, ಅವು ಸಕಾರಾತ್ಮಕವಾಗಿದೆಯೇ?, ಆಶಾದಾಯಕವಾಗಿದೆಯೇ? ಪ್ರೋತ್ಸಾಹದಾಯಕವಾಗಿದೆಯೇ? ಪ್ರೀತಿಯಿಂದ ತುಂಬಿದೆಯೇ? ಮೆಲುವಾಗಿದೆಯೇ?, ಕೃತಜ್ಞತೆಯಿಂದ ಕೂಡಿದೆಯೇ?, ವಿನಮ್ರವಾಗಿದೆಯೇ? ಅಚ್ಚರಿಯಿಂದ ಕೂಡಿದೆಯೇ ಅಥವಾ ಅಣಕಿಸುವ ರೀತಿ ಇದೆಯೇ ಎಂದು ಗಮನಿಸಿಕೊಳ್ಳಿ. ನೀವು ಏನನ್ನೂ ಯೋಚಿಸುತ್ತಿದ್ದೀರಿ ಮತ್ತು ಏನನ್ನು ಹೇಳುತ್ತಿದ್ದೀರಿ ಎಂಬುದನ್ನು ಗಮನಿಸಿ. ನೀವು ಏನನ್ನು ಹೇಳುತ್ತೀರೋ ಅದನ್ನು ನಾಳೆ ಅನುಭವಿಸುತ್ತೀರಿ. ಉತ್ತಮ ವಿಚಾರಗಳಿಂದ ಉತ್ತಮ ಆರೋಗ್ಯ ನೆಲೆಸುತ್ತದೆ. ಸೌಹಾರ್ದಯುತ ವಿಚಾರಗಳಿಂದ ಸೌಹಾರ್ದಯುತ ಸಂಬಂಧಗಳು ನೆಲೆಸುತ್ತವೆ.

ಶಬ್ದಗಳಿಗೆ ಅಪಾರವಾದ ಶಕ್ತಿ ಇರುತ್ತದೆ. ಹೆಂಡತಿಯೊಂದಿಗೆ ಜಗಳವಾಡುತ್ತಿದ್ದಾಗ ಗಂಡನೊಬ್ಬ ನೀನು ನಾಶವಾಗಿ ಹೋಗುತ್ತೀಯ ಎಂದು ಅಬ್ಬರಿಸಿದ. ಮೊದಲಾದರೆ ಹೆಂಡತಿ ನೋವು ಅನುಭವಿಸುತ್ತ ತನ್ನೊಳಗೆ ಕುಸಿದುಹೋಗುತ್ತಿದ್ದಳು. ಆದರೆ, ವರ್ಷಗಳೆದಂತೆ ಆಕೆ ವ್ಯಾಯಾಮ ಮಾಡುತ್ತಿದ್ದಳು, ಧ್ಯಾನ ಮಾಡತೊಡಗಿದಳು. ಮಾನಸಿಕವಾಗಿ, ಆಧ್ಯಾತ್ಮಿಕವಾಗಿ ಬೆಳೆದಿದ್ದಳು. ನಾನು ನಾಶವಾಗುವುದಿಲ್ಲ. ನಾನು ಅತ್ಯಂತ ಸಾರ್ಥಕ ಬದುಕು ಸಾಗಿಸುತ್ತಿದ್ದೇನೆ ಎಂದು ಗಂಡನಿಗೆ ಮಾರುತ್ತರ ನೀಡಿದಳು. ಗಂಡನ ಮೇಲೆ ಸಿಟ್ಟಿನಿಂದ ಆಕೆ ಈ ಮಾತನ್ನು ಹೇಳಿರಲಿಲ್ಲ. ಆ ಮಾತನ್ನು ಹೇಳುತ್ತ ಆಕೆಯಲ್ಲಿ ಸಂತೃಪ್ತಿ, ಸಂತಸ ತುಂಬಿತ್ತು.

ಯಾವುದೋ ರೋಗ, ಜಗಳ ಅಥವಾ ಸಂಕಷ್ಟವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಆಧ್ಯಾತ್ಮಿಕ ಔನ್ನತ್ಯಕ್ಕೆ ಏರುವ ಸೋಪಾನ ಗೋಚರಿಸುತ್ತದೆ. ನಿಮ್ಮ ಮನಸ್ಸು ಸಕಾರಾತ್ಮಕ ಆಲೋಚನೆಗಳನ್ನು ಹುಟ್ಟಿಹಾಕಿದಾಗ ಅಲ್ಲಿ ನಿಮ್ಮ ಉನ್ನತಾತ್ಮ (ಹೈಯರ್ ಸೆಲ್ಫ್) ಜಾಗೃತಗೊಂಡಿರುತ್ತದೆ. ನಿಮ್ಮ ಉನ್ನತಾತ್ಮದ ಅರಿವು ಮೂಡಿಸಿದ್ದಕ್ಕಾಗಿ ನಿಮ್ಮ ಮನಸ್ಸಿಗೆ ಕೃತಜ್ಞತೆ ಹೇಳಿ. ಮತ್ತಷ್ಟು ಎತ್ತರಕ್ಕೆ, ನಿಮ್ಮ ಉನ್ನತಾತ್ಮದ ಮಟ್ಟಕ್ಕೆ ಏರಿ. ನೀವು ಏನು ನೋಡಬೇಕು ಎಂದು ಬಯಸಿದ್ದೀರೋ ಅದನ್ನೇ ನೋಡುವಿರಿ.

ನೀವು ಯಾವ ನಗರ, ಯಾವ ದೇಶದಲ್ಲಿ ಇದ್ದೀರಿ ಎಂಬುದು ಮುಖ್ಯವಲ್ಲ. ನೀವು ಈ ಭೂಮಿಯ ಮೇಲೆ ಇದ್ದೀರಿ. ನೀವು ಎಲ್ಲಿಯೇ ಇರಲಿ, ನದಿ ಸಂಗೀತದ ನಾದದಂತೆ ಹರಿಯುತ್ತದೆ. ಪಕ್ಷಿ ಆ ನಿನಾದವನ್ನು ತನ್ನದಾಗಿಸಿಕೊಳ್ಳುತ್ತದೆ. ಈ ಶಬ್ದಕ್ಕೆ ಗಾಳಿ ನರ್ತಿಸುತ್ತದೆ. ಹೂವುಗಳು ನಗುತ್ತವೆ. ಸಂತರು ಹೇಳುತ್ತಾರೆ. ನೀವು ದೇವರನ್ನು ಎಲ್ಲಕಡೆ ಕಾಣಬಲ್ಲಿರಾದರೆ, ಯಾವುದೇ ಸ್ಥಳದಲ್ಲಿ ದೇವರು ನಿಮಗೆ ಕಾಣುತ್ತಾನೆ. ದೇವರನ್ನು ಎಲ್ಲ ಸಮಯದಲ್ಲೂ ಕಾಣಬಲ್ಲಿರಾದರೆ, ಯಾವುದೇ ಕ್ಷಣದಲ್ಲೂ ದೇವರು ನಿಮಗೆ ಕಾಣುತ್ತಾನೆ. ಈ ಜಗತ್ತು ದೇವರು ನಮಗೆ ನೀಡಿರುವ ಕಾಣಿಕೆ. ಇದೊಂದು ಪ್ರೀತಿಯ ಹೂಗಳು ತುಂಬಿದ ಸುಂದರ ತೋಟ. ನಾವು ದೈವಿಕವಲ್ಲದ ನಡೆ, ಆಲೋಚನೆಯಲ್ಲಿ ಮೈಮರೆಯುವುದರಿಂದ ಈ ಸುಂದರ ತೋಟವನ್ನು ಕಾಣಲು ಸಾಧ್ಯವಾಗುವುದಿಲ್ಲ. ಹಾಗಾಗಿ ಜಾಗೃತರಾಗಿ ಎಂದು ನಾನು ಹೇಳುತ್ತೇನೆ.

ಯಾವುದೇ ಕೆಲಸವನ್ನು ಯಾಂತ್ರಿಕವಾಗಿ ಮಾಡಬೇಡಿ. ನಿಮ್ಮೆಲ್ಲ ಗಮನ ಕೇಂದ್ರೀಕರಿಸಿ ಆ ಕೆಲಸ ಮಾಡಿ. ಒಂದು ಕೆಲಸ ಮಾಡುತ್ತಿರುವಾಗ ನಾಳೆ ಏನು ಮಾಡಬೇಕು ಎಂಬುದರ ಬಗ್ಗೆ ಯೋಚಿಸಬೇಡಿ. ಆಗ ಯಾವುದೇ ಕೆಲಸ ಹೊರೆ ಎಂದು ನಿಮಗೆ ಅನಿಸುವುದಿಲ್ಲ. ಎಲ್ಲವನ್ನೂ ಸ್ವೀಕರಿಸಿದಾಗ, ಪ್ರತಿರೋಧದ ಗುಡ್ಡ ನಿಮ್ಮೊಳಗೆ ಕರಗಿ ಹೋಗುತ್ತದೆ. ಆರೋಗ್ಯ ಸುಧಾರಿಸುತ್ತದೆ.
ಮನಸ್ಸು ನಮ್ಮ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಹಲವು ಅಧ್ಯಯನಗಳು ನಡೆದಿವೆ.

ಈ ನಿಟ್ಟಿನಲ್ಲಿ ಅಪ್ಲೈಡ್ ’ಕೈನೆಸಿಯೊಲೊಜಿ’ ಎಂಬ ವಿಜ್ಞಾನದ ಶಾಖೆಯೇ ಬೆಳೆದಿದೆ. ೬೦ರ ದಶಕದಲ್ಲಿ ಈ ಬಗ್ಗೆ ಅಧ್ಯಯನ ನಡೆಸಿದ್ದ ಡಾ. ಜಾನ್ ಗುಡ್‌ಹಾರ್ಟ್ ಎಂಬಾತ ಋಣಾತ್ಮಕ ಭಾವನೆಗಳು ತುಂಬಿದ್ದಾಗ ದೇಹದ ಸ್ನಾಯುಗಳು ಬಲಹೀನಗೊಳ್ಳುವುದನ್ನು ಗಮನಿಸಿದ್ದ. ಅದೇ ರೀತಿ ಸಕಾರಾತ್ಮಕವಾದ ಭಾವ ತುಂಬಿದ್ದಾಗ ಸ್ನಾಯುಗಳು ಬಲಗೊಳ್ಳುವುದನ್ನು ಮತ್ತಷ್ಟು ಆರೋಗ್ಯಶಾಲಿ
ಆಗುವುದನ್ನು ಈ ವಿಜ್ಞಾನಿ ದಾಖಲಿಸಿದ್ದ.

ನೀವು ಏನು ಯೋಚಿಸುತ್ತೀರಿ, ಹೇಳುತ್ತೀರಿ ಎಂಬುದನ್ನು ಗಮನಿಸಿ. ಇಷ್ಟಪಡುವುದನ್ನು ಮತ್ತು ಅನುಭವಿಸುವುದು ಎರಡರ ನಡುವೆ ವ್ಯತ್ಯಾಸ ಏನಿದೆ ಎಂದು ಬುದ್ಧನನ್ನು ಪ್ರಶ್ನಿಸಲಾಯಿತು. ನೀವು ಹೂವನ್ನು ಇಷ್ಟಪಟ್ಟಾಗ ಅದನ್ನು ಕೀಳುತ್ತೀರಿ. ಅದರ ಸೌಂದರ್ಯವನ್ನು ಅನುಭವಿಸಿದಾಗ ಅದಕ್ಕೆ ನೀರೆರೆಯುತ್ತೀರಿ ಎಂದು ಬುದ್ಧ ಉತ್ತರಿಸಿದ. ನಿಮ್ಮ ಮನಸ್ಸನ್ನು ಅನುಭವಿಸಿ.....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT