ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಾಜ್‌ 2000 ಹಾರಾಟ ಯಶಸ್ವಿ

ತಾಂತ್ರಿಕ ಸಮಸ್ಯೆ ನಿವಾರಣೆಗಾಗಿ ಆಧುನೀಕರಣಗೊಂಡ ಯುದ್ಧವಿಮಾನ
Last Updated 29 ಜುಲೈ 2016, 19:38 IST
ಅಕ್ಷರ ಗಾತ್ರ

ಬೆಂಗಳೂರು: ತಾಂತ್ರಿಕವಾಗಿ ಸುಧಾರಣೆಗೊಂಡಿರುವ ಯುದ್ಧ ವಿಮಾನ ಮಿರಾಜ್‌– 2000  ಯಶಸ್ವಿ ಹಾರಾಟ ಗುರುವಾರ ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ನಡೆಯಿತು.

‘ಎಚ್‌ಎಎಲ್‌ ಪೂರ್ವ ನಿಗದಿಯಂತೆ ಈ ಪರೀಕ್ಷಾ ಹಾರಾಟವನ್ನು ನಡೆಸಿತು. ಸಂಸ್ಥೆಯ ನಿರಂತರ ಯಶಸ್ಸಿನ ಸಾಲಿಗೆ ಮಿರಾಜ್‌–2000 ಮತ್ತೊಂದು ಸೇರ್ಪಡೆ’ ಎಂದು ಎಚ್‌ಎಎಲ್‌ ಅಧ್ಯಕ್ಷ ಟಿ. ಸುವರ್ಣರಾಜು ತಿಳಿಸಿದ್ದಾರೆ.

‘ಯುದ್ಧ ವಿಮಾನಗಳ ಕಾಲಮಾನಕ್ಕೆ ತಕ್ಕಂತೆ ಸುಧಾರಣೆ ಮಾಡುವ ಸಾಮರ್ಥ್ಯವನ್ನು ಎಚ್‌ಎಎಲ್‌ ಹೊಂದಿದ್ದು, ಅದನ್ನು ಯಶಸ್ವಿಯಾಗಿ ಸಾಧಿಸಿದೆ. ಕೆಲವು ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ದೃಷ್ಟಿಯಿಂದ ಮೆಲ್ದರ್ಜೆಗೇರಿಸಲಾಗಿದೆ.

ಇದರಿಂದಾಗಿ ಯುದ್ಧ ವಿಮಾನದ ಮೇಲಿನ ಅವಲಂಬನೆ ಮತ್ತು ನಿರ್ವಹಣಾ ಸಾಮರ್ಥ್ಯವು ಹೆಚ್ಚಿದಂತಾಗಿದೆ. ಈಗ  ಮಿರಾಜ್‌ ಪಡೆಯೂ ಸದೃಢಗೊಂಡಂತಾಗಿದೆ’ ಎಂದು ಅವರು ಹೇಳಿದ್ದಾರೆ.

ಅಂತಿಮ ಕಾರ್ಯಾಚರಣೆ ಸಂರಚನೆಯ (ಫೈನಲ್ ಆಪರೇಷನ್‌ ಕಾನ್ಫಿಗರೇಷನ್‌) ವಿನ್ಯಾಸವನ್ನು ಮಿರಾಜ್‌ಗೆ ಅಳವಡಿಕೆ ಮಾಡಲಾಗಿದೆ. ಎಂಟು ತಿಂಗಳ ಹಿಂದಷ್ಟೇ ಈ ತಂತ್ರಜ್ಞಾನವನ್ನು ಎಚ್‌ಎಎಲ್‌ ಪಡೆದಿತ್ತು.  ಭಾರತೀಯ ವಾಯುಪಡೆ ಸೇರಿದಂತೆ ವಿವಿಧ ಸಂಸ್ಥೆಗಳ ನೆರವಿನಿಂದ ಇದರ ಅಭಿವೃದ್ಧಿ ಸಾಧ್ಯವಾಗಿದೆ.

ಮಿರಾಜ್‌ ಈ ಹಿಂದೆ ಹೊಂದಿದ್ದ ಆರಂಭಿಕ ಕಾರ್ಯಾಚರಣೆ ಸಂರಚನೆಯನ್ನು  ಫ್ರಾನ್ಸ್‌ನ ಥೇಲ್ಸ್‌ ಮತ್ತು  ಡಸಾಲ್ಟ್‌ ವಿನ್ಯಾಸಗೊಳಿಸಿತ್ತು. ಅಂತಿಮ ಕಾರ್ಯಾಚರಣೆಯ ಸಂರಚನೆಯನ್ನು ವಿನ್ಯಾಸ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಎಚ್‌ಎಎಲ್‌ ವಹಿಸಿಕೊಂಡಿತ್ತು. ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳು, ಸೆನ್ಸರ್‌, ವಿದ್ಯುನ್ಮಾನ ಸಮರ ವ್ಯವಸ್ಥೆಯನ್ನು ಒಳಗೊಂಡಿದೆ.

ಮೊದಲ ಹಾರಾಟವು 45 ನಿಮಿಷಗಳ ಕಾಲ ನಡೆಯಿತು. ಕ್ಯಾಪ್ಟನ್‌ ಸಿ.ಸುಬ್ರಮಣಿಯನ್‌ ಮತ್ತು ವಿಂಗ್‌ ಕಮಾಂಡರ್‌ ಹಲ್ದೀಕರ್‌ ಅವರು  ಹಾರಾಟ ನಡೆಸಿದ ಪೈಲಟ್‌ಗಳು.

ಮುಖ್ಯಾಂಶಗಳು
*ನಗರದ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಯಶಸ್ವಿ ಹಾರಾಟ
*ವಿವಿಧ ಶಸ್ತ್ರಾಸ್ತ್ರಗಳು, ಸೆನ್ಸರ್‌, ವಿದ್ಯುನ್ಮಾನ ಸಮರ ವ್ಯವಸ್ಥೆ ಅಳವಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT