ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರತಳಿ ರೇಷ್ಮೆಗೂಡಿಗೂ ಇ–ಹರಾಜು ಆರಂಭ

ವಹಿವಾಟಿನಲ್ಲಿ ಪಾರದರ್ಶಕ ವ್ಯವಸ್ಥೆ: ಪ್ರತಿದಿನ ಬೆಳಿಗ್ಗೆ 10ಕ್ಕೆ ಪ್ರಾರಂಭ, 45 ನಿಮಿಷದಲ್ಲಿ ಪೂರ್ಣ
Last Updated 6 ಅಕ್ಟೋಬರ್ 2015, 9:31 IST
ಅಕ್ಷರ ಗಾತ್ರ

ರಾಮನಗರ: ನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಿಶ್ರ ತಳಿ (ಸಿ.ಬಿ) ರೇಷ್ಮೆಗೂಡಿಗೂ ಇ– -ಹರಾಜು ಪದ್ಧತಿಯನ್ನು ಸೋಮವಾರದಿಂದ ಜಾರಿಗೊಳಿಸಲಾಯಿತು. ಈಗಾಗಲೇ ಬೈವೋಲ್ಟನ್ (ಸಿಎಸ್‌ಆರ್‌) ಗೂಡಿನ  ಇ–-ಹರಾಜು ಪದ್ಧತಿಯನ್ನು ಜಾರಿಗೊಳಿಸಲಾಗಿದ್ದು, ಅದನ್ನು ಮಿಶ್ರ ತಳಿ ಗೂಡಿಗೂ ವಿಸ್ತರಿಸಲಾಗಿದೆ.

ಇ– ಹರಾಜು ಪದ್ಧತಿಗೆ ಚಾಲನೆ ನೀಡಿದ ರೇಷ್ಮೆ ಇಲಾಖೆ ಆಯುಕ್ತ ಜಿ. ಸತೀಶ್ ಅವರು ಮಾತನಾಡಿ, ಇ– -ಹರಾಜು ವ್ಯವಸ್ಥೆಯಿಂದ ರೇಷ್ಮೆಗೂಡಿನ ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬಹುದು. ಇದರಿಂದ ರೈತರು ಮತ್ತು ನೂಲು ಬಿಚ್ಚಾಣೆದಾರರಿಗೂ (ರೀಲರ್‌) ಅನುಕೂಲವಾಗಲಿದ್ದು, ಯಾವುದೇ ಗೊಂದಲ ಉಂಟಾಗದು ಎಂದರು.

ಈ ಪದ್ಧತಿಯಿಂದ ಸಿಬ್ಬಂದಿ ಕೆಲಸ ಕಡಿಮೆಯಾಗುತ್ತದೆ. ಮಾರುಕಟ್ಟೆಗೆ ಬರುವ ರೈತರ ನಿಖರ ಮಾಹಿತಿ ಕಲೆ ಹಾಕಿ ಅಗತ್ಯವಿದ್ದಾಗ ಬಳಕೆ ಮಾಡಿಕೊಳ್ಳಲು ಉಪಯುಕ್ತವಾಗುತ್ತದೆ. ಈ ಪ್ರಕ್ರಿಯೆಯಿಂದ ನಿರ್ದಿಷ್ಟವಾಗಿ ರೈತರು ವಹಿವಾಟಿಗೆ ಒಳಪಡಿಸಿದ ರೇಷ್ಮೆಗೂಡಿನ ವಿವರ ಸಂಗ್ರಹಿಸಿ, ಸರ್ಕಾರದಿಂದ ಒದಗಿಸುವ ಸಹಾಯಧನ ಮತ್ತು ಇತರೆ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಲು ಸಹಕಾರಿಯಾಗುತ್ತದೆ. ಇದರಲ್ಲಿ ಅವ್ಯವಹಾರಕ್ಕೆ ಆಸ್ಪದವಿರುವುದಿಲ್ಲ ಎಂದು ಹೇಳಿದರು.

ಇ– -ಹರಾಜು ಪ್ರಕ್ರಿಯೆ ಅಳವಡಿಕೆಗೆ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಾಗಿರುತ್ತದೆ. ವಿದ್ಯುತ್ ಸಮಸ್ಯೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ 25 ಕೆವಿ ಸಾಮರ್ಥ್ಯದ ಸೌರ ಘಟಕ ಅಳವಡಿಸಿಕೊಂಡು, ನಿರಂತರ ವಿದ್ಯುತ್ ಪೂರೈಕೆಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಪದ್ಧತಿಯಲ್ಲಿ ರೀಲರ್‌ಗಳು ಹರಾಜಿಗೆ ಮುನ್ನ ತಾವು ಖರೀದಿಸಬಹುದಾದ ಗೂಡಿನ ಪ್ರಮಾಣ ಆಧರಿಸಿ ಮುಂಗಡ ಹಣವನ್ನು ಠೇವಣಿಯಾಗಿ ಇಡಬೇಕು. ಅವರಿಗೆ ‘ಪಾಸ್‌ವರ್ಡ್’ ಪಡೆದು ‘ಆ್ಯಂಡ್ರಾಯ್ಡ್’ ಮೊಬೈಲ್ ಮೂಲಕ ಲಾಗಿನ್ ಆಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಅವರು ವಿವರಿಸಿದರು.

ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಇ– -ಹರಾಜು ಪ್ರಕ್ರಿಯೆ ಪ್ರತಿದಿನ ಬೆಳಿಗ್ಗೆ 10ಕ್ಕೆ ಪ್ರಾರಂಭಗೊಂಡು, 45 ನಿಮಿಷದಲ್ಲಿ ಪೂರ್ಣಗೊಳ್ಳುತ್ತದೆ. ರೈತರು ಮಾರುಕಟ್ಟೆಗೆ ಬಂದೊಡನೆ ಕೌಂಟರ್‌ನಲ್ಲಿ ಚೀಟಿ ಪಡೆದು, ಅದನ್ನು ತಮ್ಮ ಗೂಡಿನ ಲಾಟ್‌ನಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಲಾಟ್ ಸಂಖ್ಯೆಗೆ ಅನುಗುಣವಾಗಿ ಗೂಡಿನ ಧಾರಣೆಯ ವಿವರವು ಮಾರುಕಟ್ಟೆಯಲ್ಲಿ ಅಳವಡಿಸಿರುವ ಎಲ್ಇಡಿ ಟಿವಿಯಲ್ಲಿ ಬಿತ್ತರವಾಗುತ್ತದೆ. ಆ ಬೆಲೆಗೆ ಗೂಡು ಮಾರಲು ಸೂಚಿಸಿದರೆ, ಮಾರಾಟವಾಗುತ್ತದೆ. ರೈತರು ಬೇಕಾದರ ಬೆಲೆಗೆ ಅಸಮ್ಮತಿ ಸೂಚಿಸಿ ಪುನರ್ ಹರಾಜಿಗೂ ತಮ್ಮ ಗೂಡನ್ನು ಒಳಪಡಿಸಬಹುದು ಎಂದು ಅವರು ಹೇಳಿದರು.

ಇ-–ಹರಾಜು ಪ್ರಕ್ರಿಯೆ ಸಂಬಂಧ ರೈತರು, ರೀಲರ್‌ಗಳಿಗೆ ಅಗತ್ಯ ಮಾಹಿತಿ ಒದಗಿಸಲು ಮಾರುಕಟ್ಟೆ ಸಿಬ್ಬಂದಿ ಲಭ್ಯವಿರುತ್ತಾರೆ. ಅವರ ನೆರವು ಪಡೆದು, ಹೊಸ ವ್ಯವಸ್ಥೆಗೆ ಸಹಕರಿಸಬೇಕು. ಪ್ರಾರಂಭದಲ್ಲಿ ಕೆಲವು ದಿನ ಗೊಂದಲಗಳು ಉಂಟಾಗಬಹುದು. ನಂತರದಲ್ಲಿ ಎಲ್ಲವೂ ಸರಿ ಹೋಗುತ್ತವೆ. ಆದ್ದರಿಂದ ಎಲ್ಲರೂ ಸಹಕರಿಸಬೇಕು ಎಂದು ಅವರು ತಿಳಿಸಿದರು.

ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಆರ್. ಪ್ರಭಾಕರ್, ಉಪ ನಿರ್ದೇಶಕ ವಿ.ಎಂ. ಶ್ರೀನಿವಾಸಲು, ಅಧಿಕಾರಿ ಡಿ.ವಿ. ವಿಜಯ್‌ಕುಮಾರ್‌ ಇತರರು ಉಪಸ್ಥಿತರಿದ್ದರು.

***
ಇ–ಹರಾಜು ಪದ್ಧತಿಯಿಂದ ಸಿಬ್ಬಂದಿ ಕೆಲಸ ಕಡಿಮೆಯಾಗುತ್ತದೆ. ಮಾರುಕಟ್ಟೆಗೆ ಬರುವ ರೈತರ ನಿಖರ ಮಾಹಿತಿ ಕಲೆ ಹಾಕಿ ಅಗತ್ಯವಿದ್ದಾಗ ಬಳಕೆ ಮಾಡಿಕೊಳ್ಳಲು ಉಪಯುಕ್ತವಾಗುತ್ತದೆ.
-ಜಿ. ಸತೀಶ್, 
ರೇಷ್ಮೆ ಇಲಾಖೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT