ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ತ್ರಿ ನಾಟಕೀಯ ಬಂಧನ

ವಡೋದರಾದಲ್ಲಿ ಬಿಜೆಪಿ–ಕಾಂಗ್ರೆಸ್‌ ಭಿತ್ತಿಪತ್ರ ಸಮರ
Last Updated 3 ಏಪ್ರಿಲ್ 2014, 19:43 IST
ಅಕ್ಷರ ಗಾತ್ರ

ವಡೋದರಾ (ಪಿಟಿಐ): ನರೇಂದ್ರ ಮೋದಿ ಸ್ಪರ್ಧಿಸ­ಲಿರುವ  ವಡೋದರಾ ಲೋಕಸಭಾ ಕ್ಷೇತ್ರ ಇದೀಗ  ಜಾಹೀರಾತು ಫಲಕಗಳ ವಿಷಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಕಾದಾಟಕ್ಕೆ ಅಖಾಡವಾಗಿದೆ.

ಗುರುವಾರ ನಡೆದ ನಾಟಕೀಯ ಬೆಳವಣಿಗೆ­ಯಲ್ಲಿ, ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಧು­ಸೂದನ ಮಿಸ್ತ್ರಿ ಹಾಗೂ ಅವರ ಬೆಂಬಲಿಗರು ಮೋದಿ ಅವರ ಜಾಹೀರಾತು ಹರಿದು ಆ ಜಾಗದಲ್ಲಿ ಕಾಂಗ್ರೆಸ್‌ ಭಿತ್ತಿ ಪತ್ರ ಹಚ್ಚಲು ಮುಂದಾದರು. ತಕ್ಷಣವೇ ಪೊಲೀಸರು ಅವರನ್ನೆಲ್ಲ ವಶಕ್ಕೆ ತೆಗೆದು­ಕೊಂಡು ನಂತರ ಜಾಮೀನು ಮೇಲೆ ಬಿಡುಗಡೆ ಮಾಡಿದರು.

‘ವಿದ್ಯುತ್‌ ಕಂಬದಲ್ಲಿ ಅಳವಡಿಸ­ಲಾಗಿರುವ ಜಾಹೀರಾತು ಫಲಕ­ದಲ್ಲಿ ಭಿತ್ತಿ ಪತ್ರಗಳನ್ನು ಹಚ್ಚಲು ಯತ್ನಿಸಿ­ದ್ದ­ಕ್ಕಾಗಿ ಮಿಸ್ತ್ರಿ ಹಾಗೂ ಅವರ 33 ಬೆಂಬಲಿಗರನ್ನು ವಶಕ್ಕೆ ಪಡೆಯ­ಲಾಗಿತ್ತು’ ಎಂದು ವಡೋದರಾ ಡಿಸಿಪಿ ದೀಪಂಕರ್‌ ತ್ರಿವೇದಿ ಹೇಳಿದ್ದಾರೆ.

‘ಮಿಸ್ತ್ರಿ ಹಾಗೂ ಬೆಂಬಲಿಗರ ಮೇಲೆ ದೊಂಬಿ, ಸಾರ್ವ­ಜನಿಕ ಆಸ್ತಿ ಹಾನಿ ಹಾಗೂ ಅಕ್ರಮವಾಗಿ ಗುಂಪು ಸೇರಿದ ಆರೋಪ ಹೊರಿಸಲಾಗಿದೆ’

ಎಂದು ನಗರ ಪೊಲೀಸ್‌ ಆಯುಕ್ತ ಸತೀಶ್‌ ಶರ್ಮಾ ತಿಳಿಸಿದ್ದಾರೆ.

‘ಮಿಸ್ತ್ರಿ  ಸೇರಿದಂತೆ ಇತರ ಕಾಂಗ್ರೆಸ್‌ ಮುಖಂಡರು ಅನುಮತಿ ಪಡೆಯದೆ ಈ ಕೃತ್ಯ ಎಸಗಲು ಯತ್ನಿಸಿದರು’ ಎನ್ನುವುದು ಪೊಲೀಸರ ಆರೋಪ.

‘ಮಿಸ್ತ್ರಿ  ಅವರು ವಿದ್ಯುತ್‌ ಕಂಬ ಏರಿ, ಅಲ್ಲಿ ಅಳವಡಿಸಲಾಗಿದ್ದ ಮೋದಿ ಜಾಹೀರಾತಿನ ಮೇಲೆ ತಮ್ಮ ಭಿತ್ತಿ ಪತ್ರ ಹಚ್ಚಲು ಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ತಡೆ ಒಡ್ಡಿದರು’ ಎಂದು ಕಾಂಗ್ರೆಸ್‌ ಕಾರ್ಯಕರ್ತ­ರೊಬ್ಬರು ಹೇಳಿದ್ದಾರೆ.

ಮಿಸ್ತ್ರಿ ಆರೋಪ: ‘ಪೊಲೀಸರು ಹಾಗೂ ಜಿಲ್ಲಾಡಳಿತ ಪಕ್ಷಪಾತ ಮಾಡುತ್ತಿವೆ. ನಗರದ ರಸ್ತೆಗಳಲ್ಲಿ ಜಾಹೀರಾತಿಗೆ ಮೀಸಲಾಗಿ­ರುವ ಫಲಕಗಳಲ್ಲಿ ನನ್ನ ಭಿತ್ತಿಪತ್ರ­ಗಳನ್ನು ಹಚ್ಚುವುದಕ್ಕೆ ತಡೆ ಒಡ್ಡುತ್ತಿವೆ’ ಎಂದು ಮಿಸ್ತ್ರಿ ಆರೋಪಿಸಿದ್ದಾರೆ.

‘ನಗರಸಭೆಗೆ ಸೇರಿದ ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ಆಡಳಿತ ಪಕ್ಷವೇ ಬಳಸಿಕೊಂಡಿದೆ. ವಡೋದರಾ ನಗರದ ಪ್ರಮುಖ ಸ್ಥಳಗಳಲ್ಲಿ ಮೋದಿ ಅವರ 1,000 ಭಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಜಾಹೀರಾತು ಫಲಕಗಳಲ್ಲಿ  ನಮಗೂ   ನ್ಯಾಯಯುತ ಪಾಲು ಬೇಕು’ ಎನ್ನುವುದು ಮಿಸ್ತ್ರಿ ಆಗ್ರಹ.

ಆಯೋಗದ ಮೊರೆ ಹೋದ ಕಾಂಗ್ರೆಸ್‌
ನವದೆಹಲಿ:
ಗುಜರಾತ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಈ ಸಂಬಂಧ ಚುನಾವಣಾ ಆಯೋಗದ ಮೊರೆ ಹೋಗಿದೆ.

ಮಿಸ್ತ್ರಿ ಬಂಧನ ಪ್ರಕರಣವನ್ನು ಉಲ್ಲೇಖಿಸಿದ ಕಾಂಗ್ರೆಸ್‌, ‘ಸರ್ಕಾರಿ ಯಂತ್ರವನ್ನು ಬಿಜೆಪಿ ತನ್ನ ಲಾಭಕ್ಕೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು’ ಎಂದು ಆಯೋಗವನ್ನು ಕೋರಿದೆ.

‘ಈ ಘಟನೆಯು ಪಕ್ಷಪಾತ ಧೋರಣೆ ತೋರಿಸುತ್ತದೆ’ ಎಂದೂ ಕಾಂಗ್ರೆಸ್‌ ನಿಯೋಗ ಆರೋಪಿಸಿದೆ.  ಪಕ್ಷದ ಮುಖಂಡರಾದ ಅಭಿಷೇಕ್‌ ಮನು ಸಿಂಘ್ವಿ, ಮೋತಿಲಾಲ್‌ ವೋರಾ, ಅಹ್ಮದ್‌ ಪಟೇಲ್‌, ಜನಾರ್ದನ ದ್ವಿವೇದಿ, ಕೆ.ಸಿ.ಮಿತ್ತಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT