ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಳೆಲ್ಲ ಅಮಾಯಕವಲ್ಲ!

Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಹಾವು, ಚೇಳುಗಳು ವಿಷಕಾರಿ ಜಂತುಗಳು. ಮನುಷ್ಯರು ಕೂಡ ಕೆಲವು ಸಂದರ್ಭಗಳಲ್ಲಿ ವಿಷ ಕಕ್ಕುತ್ತಾರೆ! ಆದರೆ, ನೋಡಲಿಕ್ಕೆ ಮುದ್ದಾಗಿ ಕಾಣಿಸುವ ಕೆಲವು ಮೀನುಗಳಲ್ಲಿ ಕೂಡ ವಿಷ ಇರುತ್ತದೆ ಎನ್ನುವುದನ್ನು ಬಲ್ಲಿರಾ?

ಮತ್ಸ್ಯ ಪ್ರಪಂಚದಲ್ಲೂ ನಾಗರ ಹಾವಿನಷ್ಟೇ ಭಯಾನಕ ವಿಷ ಹೊಂದಿರುವ ಮೀನುಗಳಿವೆ. ಆದರೆ, ಈ ಮೀನುಗಳು ಮನುಷ್ಯರಂತೆ ಅಸೂಯೆ, ಸೇಡು ಅಥವಾ ವಿನಾ ಕಾರಣ ವಿಷ ಉಗುಳುವುದಿಲ್ಲ. ಅವುಗಳ ವಿಷ ಬಳಕೆಯಾಗುವುದು ಆತ್ಮರಕ್ಷಣೆಗೆ, ಆಹಾರ ಸಂಪಾದನೆಗೆ.

ವಿಷವನ್ನು ಇತರೆ ಜೀವಿಗಳಿಗೆ ಇಂಜೆಕ್ಟ್ ಮಾಡುವ ಪ್ರಾಣಿಗಳಿಗೆ  ಇಂಗ್ಲಿಷ್ ಬಾಷೆಯಲ್ಲಿ ‘ವೆನಮಸ್’ ಪ್ರಾಣಿಗಳೆಂದು ಗುರುತಿಸುತ್ತಾರೆ. ಈ ವರ್ಗಕ್ಕೆ ಸೇರಿರುವ ಮೀನುಗಳನ್ನು ‘ನಂಜು ಮೀನು’ ಎಂದು ಕರೆಯಬಹುದು. ಕೆಲವು ಪ್ರಾಣಿಗಳು ವಿಷವನ್ನು  ಇಂಜೆಕ್ಟ್ ಮಾಡುವುದಿಲ್ಲ. ಅವುಗಳ ಇಡೀ ದೇಹವೇ ಅಥವಾ ದೇಹದ ಹೆಚ್ಚಿನ ಭಾಗ ವಿಷಮಯವಾಗಿರುತ್ತದೆ.

ಇಂಥ ಜೀವಿಗಳನ್ನು ಸ್ಪರ್ಶಿಸಿದರೆ ಅಥವಾ ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಗ್ಲಿಷ್‌ನಲ್ಲಿ ಇಂತಹ ಪ್ರಾಣಿಗಳನ್ನು ‘ಪಾಯಿಸನಸ್’ ಎಂದು ಕರೆಯುತ್ತಾರೆ.  ಈ ಗುಂಪಿಗೆ  ಸೇರಿರುವ ಮೀನುಗಳನ್ನು ‘ವಿಷ ಮೀನು’ ಎನ್ನಬಹುದು. ವಿಷ ಮೀನು ವಿಷವನ್ನು ಕಕ್ಕುವುದಿಲ್ಲ. ಅಪ್ಪಿತಪ್ಪಿ ಈ ಮೀನುಗಳನ್ನ ತಿಂದರೆ ಮಾತ್ರ ನೋವು ನರಳಾಟ ತಪ್ಪಿದ್ದಲ್ಲ. ಈ ಮೀನುಗಳ ದೇಹದಲ್ಲಿರುವ ವಿಷ, ಜೀರ್ಣಕ್ರಿಯೆಯಲ್ಲಿ ನಾಶವಾಗದೆ ಇರುವುದೇ ಈ ನರಳಾಟಕ್ಕೆ ಕಾರಣ.

ನಂಜು ಎನ್ನುವ ಅಸ್ತ್ರ
‘ನಂಜು ಮೀನು’ಗಳ ವಿಷಯಕ್ಕೆ ಬಂದರೆ, ಅವು ತಮ್ಮ ರಕ್ಷಣೆಗೆ ಹಾಗೂ ಆಹಾರದ ಬೇಟೆಗೆ ನಂಜನ್ನು ಶೇಖರಿಸಿಕೊಂಡು ಸಿದ್ಧವಾಗಿರುತ್ತವೆ. ಜೀವಕ್ಕೆ ಅಪಾಯ ಎದುರಾದ ಸಂದರ್ಭದಲ್ಲಿ ಅಥವಾ ಹಸಿವಿನ ಸಂದರ್ಭದಲ್ಲಿ ಆಹಾರದ ಮೀನು ಹತ್ತಿರ ಸುಳಿದಾಗ ತಮ್ಮ ನಂಜು ಅಸ್ತ್ರವನ್ನು ನಿರ್ದಾಕ್ಷಿಣ್ಯವಾಗಿ ಪ್ರಯೋಗಿಸುತ್ತವೆ. ಕಚ್ಚಿ, ಕುಟುಕಿ, ಚುಚ್ಚಿ ಅಥವಾ ತಿವಿದು, ಈ ಮೀನುಗಳು ನಂಜನ್ನು ವರ್ಗಾವಣೆ ಮಾಡುತ್ತವೆ. ಈ ಪ್ರಕ್ರಿಯೆಗೆ ದವಡೆಯ ಕೋರೆ ಹಲ್ಲು, ಮೈಮೇಲಿರುವ ವಿಶೇಷವಾದ ಮುಳ್ಳು, ಈಜು ರೆಕ್ಕೆಯ ಮುಳ್ಳು ಅಥವಾ ಹೊರ ಚರ್ಮ ಕೂಡ ಸಾಧನವಾಗಿ ಬಳಕೆಯಾಗಬಹುದು.

ನಂಜು ಹಾವುಗಳಿಗಿಂತ ನಂಜು ಮೀನುಗಳೇ ಹೆಚ್ಚು. ಒಂದು ಅಧ್ಯಯನದ ಪ್ರಕಾರ, 1200 ಪ್ರಭೇದದ ನಂಜು ಮೀನುಗಳವೆ. ಪ್ರಪಂಚದಾದ್ಯಂತ ಶೀತ, ಉಷ್ಣ ಎಲ್ಲಾ ಪರಿಸರಗಳಲ್ಲಿ ಈ ಮೀನುಗಳನ್ನು ಕಾಣಬಹುದು. ಆದರೆ, ಉಷ್ಣ ನೀರಿನಲ್ಲಿ ಇವು ಹೆಚ್ಚು ಕಂಡು ಬರುತ್ತವೆ. ಪ್ರತಿ ವರ್ಷ ವಿಶ್ವದ ವಿವಿಧ ಭಾಗಗಳಲ್ಲಿ 50 ಸಾವಿರಕ್ಕೂ ಹೆಚ್ಚು ಜನ ನಂಜು ಮೀನುಗಳ ಸುಳಿಯಲ್ಲಿ ಸಿಕ್ಕಿ ನರಳುತ್ತಾರೆ ಎನ್ನುವ ಅಂದಾಜಿದೆ. ಈ ಮೀನಿನ ಕುಟುಕಿನಿಂದ ನೋವಾದಾಗ, ಗಾಯವಾದ ಜಾಗಕ್ಕೆ ಬಿಸಿನೀರಿನ ಶಾಖ ನೀಡಿ ನೋವನ್ನು ಸ್ವಲ್ಪ ಮಟ್ಟಿಗೆ ಉಪಶಮನ ಮಾಡಿಕೊಳ್ಳಬಹುದು.

ನಂಜು ಮೀನುಗಳಲ್ಲಿ ಎರಡು ಬಗೆಯ ಗುಂಪುಗಳನ್ನು ಕಾಣಬಹುದು. ಕಣ್ಣು ಕುಕ್ಕುವ ರಂಗು ರಂಗಿನ ಬಣ್ಣಗಳನ್ನು ಹೊಂದಿದ್ದು, ತಮ್ಮ ಇರುವಿಕೆಯನ್ನು ಶತ್ರುಗಳಿಗೆ ಧೈರ್ಯದಿಂದ ಸಾರಿ ಹೇಳುವ ಮೀನುಗಳದು ಒಂದು ಗುಂಪಾದರೆ, ತಮ್ಮ ಮೈಬಣ್ಣವನ್ನು ಸುತ್ತಮುತ್ತಲ ಪರಿಸರಕ್ಕೆ ತಕ್ಕಂತೆ ಬದಲಿಸಿಕೊಂಡು, ಮರಳಿನಲ್ಲಿ ಹುದುಗಿಕೊಂಡು ಹೊಂಚುಹಾಕುವ ಅಂಜುಬುರುಕ ಮೀನುಗಳದು ಇನ್ನೊಂದು ಗುಂಪು.

ನಂಜು ಮೀನುಗಳಲ್ಲಿ ಉತ್ಪಾದನೆಯಾಗುವ ವಿಷ ಆತ್ಮರಕ್ಷಣೆ ಹಾಗೂ ಮಿಕದ ಬೇಟೆಗೆ ಅನುವಾಗುವುದರ ಜೊತೆಗೆ, ಹಾನಿಕಾರಕ ಬ್ಯಾಕ್ಟೀರಿಯಗಳು ದೇಹಕ್ಕೆ ಲಗ್ಗೆ ಹಾಕುವುದನ್ನು ಯಶಸ್ವಿಯಾಗಿ ತಡೆಯಲು ಕೆಲವು ಮೀನುಗಳಲ್ಲಿ ಸಹಕಾರಿಯಾಗುತ್ತದೆ. ಹಾವಿನ ನಂಜಿಗೆ ವೈದ್ಯಕೀಯ ಜಗತ್ತಿನಲ್ಲಿ ಅನೇಕ ಉಪಯೋಗಗಳನ್ನು ಕಂಡುಕೊಂಡಿದ್ದೇವೆ. ಅದೇ ರೀತಿ, ಮೀನುಗಳು ಉತ್ಪಾದಿಸುವ  ನಂಜನ್ನು ವೈದ್ಯಕೀಯ ಕ್ಷೇತ್ರದಲ್ಲಿ ಹೇಗೆ ಸದುಪಯೋಗ ಮಾಡಿಕೊಳ್ಳಬಹುದು ಎನ್ನುವ ಸಂಶೋಧನೆ ನಡೆಯುತ್ತಿದೆ.  

ರೀಫ್‌ ಸ್ಟೋನ್‌ ಮತ್ತು ಸ್ಟಾರ್ ಗೇಸರ್
ನಂಜು  ಮೀನುಗಳಲ್ಲಿ ಅತಿ ನಂಜಿನ ಮೀನೆಂದರೆ ರೀಫ್-ಸ್ಟೋನ್ ಮೀನು. ಹವಳ ದಿಬ್ಬಗಳ ಕಲ್ಲು ಬಂಡೆಗಳ ಮಧ್ಯೆ ಈ ಮೀನು ವಾಸಿಸುತ್ತದೆ. ಹುಡುಕಿದರೂ ಗೋಚರವಾಗದಂತೆ, ಅಲ್ಲಿನ ಪರಿಸರಕ್ಕೆ ಹೊಂದುವಂತೆ ಮೈ ಬಣ್ಣ ಬದಲಿಸಿಕೊಳ್ಳುವುದರಿಂದ ಈ ಮೀನನ್ನು ‘ಸ್ಟೋನ್ ಮೀನು’ ಎಂದು ಕರೆಯುತ್ತಾರೆ. ಅಪಾಯದ ಸೂಚನೆ ಕಾಣಿಸಿದರೆ ಅಲ್ಲಿಂದ ಕಾಲ್ಕೀಳದೆ, ತನ್ನ ಬೆನ್ನ ಮೇಲಿರುವ ನಂಜುಯುಕ್ತ 13 ಮುಳ್ಳುಗಳನ್ನು ನಿಮಿರಿಸಿ ಎದುರಾಳಿಯನ್ನು ನಡುಗಿಸುತ್ತದೆ. 

ಈ ಮೀನು ತನ್ನ ರಕ್ಷಣೆಗೆ ಯಾವುದಾದರೂ ಒಂದು ಮುಳ್ಳು ಅಥವಾ ಅನೇಕ ಮುಳ್ಳುಗಳಿಂದ ಏಕ ಕಾಲದಲ್ಲಿ ವಿಷವನ್ನು ಚಿಮ್ಮಿಸಬಲ್ಲ ನಿಯಂತ್ರಣ ಶಕ್ತಿ ಹೊಂದಿದೆ. ಒಂದೊಂದು ಮುಳ್ಳು ಒಂದೊಂದು ಇಂಜೆಕ್ಷನ್ ಸಿರಿಂಜ್ ಅಥವಾ ವಿಷಯುಕ್ತ ಬಾಣ! ಪ್ರತಿ ಮುಳ್ಳಿಗೂ ಎರಡೆರಡು ನಂಜಿನ ಚೀಲವಿರುತ್ತದೆ. ವಿಷದಿಂದ ಅತಿಯಾದ ನೋವು, ನರ ನಿಸ್ತೇಜತೆ ಸಂಭವಿಸಬಹುದು. ಇಂತಹ ರಕ್ಷಣಾ ಕವಚವಿದ್ದರೂ, ಸ್ಟೋನ್ ಮೀನನ್ನು ತಮ್ಮ ಬಲಿಷ್ಟ ಹಲ್ಲು ದವಡೆಯಿಂದ ಜಜ್ಜಿ ಪುಡಿ ಮಾಡಿ ತಿಂದು ತೇಗುವ ಕೆಲವು ರೇ ಮತ್ತು ಶಾರ್ಕ್ ಮೀನುಗಳಿವೆ.

ಸಮುದ್ರವಾಸಿಯಾದ ‘ಸ್ಟಾರ್ ಗೇಸರ್’ ಮೀನಿಗೆ  ನೆತ್ತಿಯ ಮೇಲೆ ಕಣ್ಣು ಹಾಗೂ ತಲೆಯ ಹಿಂಭಾಗದಲ್ಲಿ ನಂಜು ಕಕ್ಕುವ ಮುಳ್ಳು ಇರುತ್ತೆ. ಈ ಮೀನು ಬೇರೆ ನಂಜು ಮೀನುಗಳಿಗಿಂತ ಸ್ವಲ್ಪ ಭಿನ್ನ. ನಂಜು ಉಣಿಸುವುದರ ಜೊತೆಗೆ ವಿದ್ಯುದಾಘಾತವನ್ನೂ ಇವುಗಳು ನೀಡುತ್ತವೆ. ಸ್ಟಾರ್‌ ಗೇಸರ್ ಮೀನು ಮರಳಿನಲ್ಲಿ ಅವಿತುಕೊಂಡಿದ್ದು, ಮಿಕ ಸನಿಹವಾದಾಗ ಮರಳಿನಿಂದ ಎಗರಿ ಆಕ್ರಮಣ ಎಸಗುತ್ತದೆ. ಕೆಲವು ಪ್ರದೇಶಗಳಲ್ಲಿ ಈ ಮೀನಿನ ಅಡುಗೆಯನ್ನು ವಿಶೇಷವಾಗಿ ಇಷ್ಟಪಡುತ್ತಾರೆ. ಈ ಮೀನನ್ನು ಮಾರಾಟಕ್ಕಿಡುವ ಮೊದಲು, ಮೀನು ವ್ಯಾಪಾರಿಗಳು ಅದರ ವಿದ್ಯುತ್ ಅಂಗವನ್ನು  ಬೇರ್ಪಡಿಸುವುದಕ್ಕೆ ಮರೆಯುವುದಿಲ್ಲ.

‘ಸಿಂಹ ಮೀನು’ ಸಹ ಸಮುದ್ರ ಜೀವಿ. ತನ್ನ ಮೈಮೇಲಿನ ಕೆಂಪು, ಬಿಳಿ ಅಥವಾ  ಕಪ್ಪು ಪಟ್ಟೆಗಳಿಂದ ನೋಡುವುದಕ್ಕೆ ಆಕರ್ಷಕವಾಗಿರುವ ಮೀನಿದು. ಅದರ ಭುಜ ಹಾಗೂ ಈಜು ರೆಕ್ಕೆಗಳು ಹರಡಿಕೊಂಡಿರುವಾಗ ಚಿಟ್ಟೆಯ ತರಹ ಮೋಹಕವಾಗಿ ಕಾಣಿಸುವುದರಿಂದ ‘ಚಿಟ್ಟೆ ಮೀನು’ ಎಂದೂ ಇದನ್ನು ಕರೆಯುತ್ತಾರೆ. ಇದರ ನಂಜು ಮನುಷ್ಯರಲ್ಲಿ ನೋವು, ವಾಂತಿ, ಜ್ವರ, ಉಸಿರಾಟದ ತೊಂದರೆ, ತಲೆ ಸುತ್ತುವಿಕೆ ಮುಂತಾದ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು. ಇದಕ್ಕೆ ಅಲಂಕಾರಿಕ ಮೀನು ಮಾರುಕಟ್ಟೆಯಲ್ಲಿ ಅತೀ ಬೇಡಿಕೆಯಿದೆ. 

ನಮ್ಮ  ನದಿ, ಕೆರೆ, ಜಲಾಶಯಗಳಲ್ಲಿ ಅತಿ ಸಾಮಾನ್ಯವಾಗಿ ಕಂಡು ಬರುವ ಚೇಳು ಮೀನು ಹಾಗೂ ಒಂದು ಜಾತಿಯ ಗಿರಲು ಮೀನುಗಳು ಕೂಡ ಉಪದ್ರವಿಗಳೇ. ಇವುಗಳ ಮುಳ್ಳುಗಳಿಂದ ಉಂಟಾಗುವ ಗಾಯ, ಉರಿ ತಾಸುಗಟ್ಟಲೆ ನರಳಿಸುತ್ತದೆ. ಒಂದಂತೂ ನಿಜ– ಮೀನುಗಳೆಲ್ಲ ಅಮಾಯಕ, ನಿರುಪದ್ರವಿಗಳಲ್ಲ. ಮೀನುಗಳ ಅಂದ ಚೆಂದಕ್ಕೆ ಮರುಳಾಗದೆ ಎಚ್ಚರಿಕೆಯಿಂದಿರುವುದು ಕ್ಷೇಮ.
*
ಪಪ್ಫರ್‌ ಎನ್ನುವ ಕಾಲಕೂಟ
ಕಶೇರುಕ ಗುಂಪಿನಲ್ಲಿ, ‘ಗೋಲ್ಡನ್ ಕಪ್ಪೆ’ಯ ನಂತರ ಎರಡನೆಯ ಅತೀ ನಂಜು ಜಂತು ‘ಪಪ್ಫರ್ ಮೀನು’ ಎನ್ನುವ ಅಭಿಪ್ರಾಯವಿದೆ. ಈ ಮೀನಿನ ದೇಹದಲ್ಲಿ ಸಯನೈಡ್‌ಗಿಂತ ಹಲವು ಪಟ್ಟು ಮಾರಕವಾದ ‘ಟೆಟ್ರಡೊಟಾಕ್ಸಿನ್’ ಎಂಬ ವಿಷವಿರುತ್ತದೆ. ಒಂದು ಪಪ್ಫರ್ ಮೀನಿನ ವಿಷದ ಪ್ರಮಾಣ ಮೂವತ್ತು ಮನುಷ್ಯರನ್ನು ಯಮಲೋಕಕ್ಕೆ ಕಳಿಸುವಷ್ಟು ಶಕ್ತಿಶಾಲಿ.

ನೋಡಲು ಆಕರ್ಷಕವಾಗಿ ಮುದ್ದಾಗಿ ಕಾಣಿಸುವ ಈ ಮೀನುಗಳು ಕಂಪ್ಯೂಟರ್‌ಗಳ ವಾಲ್ ಪೇಪರ್‌ನಲ್ಲಿ ತಾರಾಗಿರಿ ಪಡೆದಿವೆ. ಕೆಲವು ಪ್ರಭೇದದ ಮೀನುಗಳು ಒಂದು ಇಂಚು ಉದ್ದವಿದ್ದರೆ, ಮತ್ತೆ ಕೆಲವು ಎರಡು ಅಡಿಯವರೆಗೂ ಬೆಳೆಯುತ್ತವೆ. ಇದೊಂದು ‘ಬ್ಯೂಟಿಫುಲ್ ಬೀಸ್ಟ್’. ಸ್ವಾಭಾವಿಕವಾಗಿ ಮಂದಗತಿಯಲ್ಲಿ ಇದರ ಚಲನೆ. 

ಪಪ್ಫರ್ ಮೀನು ಸಾಮಾನ್ಯ ಸ್ಥಿತಿಯಲ್ಲಿ ಚಪ್ಪಟೆಯಾಗಿರುತ್ತದೆ. ಅಪಾಯದ ವಾಸನೆ ಬಂದ ತಕ್ಷಣ ಅದರ ರೂಪವೇ ಬದಲಾವಣೆಯಾಗುತ್ತದೆ. ಚಪ್ಪಟೆ ದೇಹ, ಇಲಾಸ್ಟಿಕ್ ಚೀಲದಂತಿರುವ ಉದರಕ್ಕೆ ನೀರು ಗಾಳಿ ತುಂಬಿ, ಬಲೂನಿನಂತೆ ಉಬ್ಬಿ ಗುಂಡಗಾಗುತ್ತದೆ. ಇಂತಹ ಸಮಯದಲ್ಲಿ ಎದುರಾಳಿ ಪ್ರಾಣಿ ಒಂದು ಕ್ಷಣ ತಬ್ಬಿಬ್ಬಾದರೆ ಆಶ್ಚರ್ಯವಿಲ್ಲ. ಒಂದು ಪಕ್ಷ ಪಪ್ಫರ್ ಮೀನನ್ನು ಹೊಟ್ಟೆಗೆ ಸೇರಿಸಿಲು ಯಶಸ್ವಿಯಾದರೂ, ಆ ಮೀನು ಸತ್ತ ನಂತರವೂ ಸೇಡು ತೀರಿಸಿಕೊಳ್ಳದೆ ಸುಮ್ಮನಿರುವುದಿಲ್ಲ.

ಅದರ ದೇಹದಲ್ಲಿ, ಮುಖ್ಯವಾಗಿ ಲಿವರ್ ಮತ್ತು ಅಂಡಾಶಯದಲ್ಲಿ ಶೇಖರವಾಗಿರುವ ವಿಷವು ಭಕ್ಷಕ ಪ್ರಾಣಿಗೆ ಪ್ರಾಣಾಂತಿಕವಾಗಬಹುದು. ಮನುಷ್ಯರು ಪಪ್ಫರ್ ತಿಂದರೆ ಸಾಯುವ ಸಾಧ್ಯತೆಯಿದೆ. ಜಪಾನಿನಲ್ಲಿ ಕುಶಲ ಬಾಣಸಿಗರು ಪಪ್ಫರ್ ಮೀನನ್ನು ಹೋಲುವ ಇನ್ನೊಂದು ಮೀನಿನ ಭಾಗಗಳನ್ನು ಬಳಸಿ ವಿಶೇಷ ಖಾದ್ಯ ತಯಾರಿಸುತ್ತಾರೆ. ವಿಶೇಷ ರುಚಿ ಬರಲು, ಒಂದು ನಿರ್ದಿಷ್ಟ ಪ್ರಮಾಣದಲ್ಲಿ ವಿಷದ ಅಂಗವನ್ನು  ಉಪಯೋಗಿಸುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT