ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀರಾ–ಮಾಧವನಿಗೆ ಕಲ್ಯಾಣ?

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆಸ್ತಿ–ಅಂತಸ್ತು, ಜಾತಿ–ಸಂಪ್ರದಾಯಗಳ ಸುಳಿಯಲ್ಲಿ ಸಿಲುಕಿರುವ ಪ್ರೇಮಿಗಳಾದ ಮೀರಾ–ಮಾಧವ ಹಸೆಮಣೆ ಏರುವರೇ? ಮದುವೆ ತಪ್ಪಿಸಲು ಕೊನೆಯ ಕ್ಷಣದಲ್ಲಿ ನಡೆಯುವ ಹುನ್ನಾರಗಳು ಗೆಲ್ಲುವವೇ? ಕಂಕಣ ಕೂಡಿದರೂ ಅವರ ಬದುಕು ಹಸನಾಗುವುದೇ?
ಹೀಗೆ ಪ್ರತಿ ಸಂಚಿಕೆಗೂ ಮುಂದೇನು ಎಂದು ಕಿರುತೆರೆಯ ಪ್ರೇಕ್ಷಕರನ್ನು ತೀವ್ರ ಕುತೂಹಲಕ್ಕೆ ದೂಡಿರುವುದು ಸುವರ್ಣ ವಾಹಿನಿಯ ‘ಮೀರಾಮಾಧವ’ ಧಾರಾವಾಹಿ. ಸಾಮಾನ್ಯವಾಗಿ ಅಂತರ್ಜಾತಿ ಮತ್ತು ಅಂತಸ್ತಿನ ವಿಷಯವೇ ಪ್ರೇಮವಿವಾಹಗಳಿಗೆ ಅಡ್ಡಿಯಾಗುವುದು.

ಈ ನಿತ್ಯ ಸತ್ಯಕ್ಕೆ ಕೌಟುಂಬಿಕ ವಿಷಯಗಳನ್ನು ಸೇರಿಸಿರುವ ಕಥೆ ಈ ಧಾರಾವಾಹಿಯದು. ಮದುವೆಯ ಕುತೂಹಲಕ್ಕೆ ಶೀಘ್ರ ತೆರೆ ಕಾಣಿಸಿ, ಮತ್ತೊಂದು ಆಯಾಮದಲ್ಲಿ ಧಾರಾವಾಹಿಯನ್ನು ನಿರೂಪಿಸುವ ಉದ್ದೇಶ ವಾಹಿನಿಯದು.

ಈ ಮದುವೆ ನಡೆಯುವುದೇ? ಇಲ್ಲವೇ? ಎನ್ನುವ ಪ್ರೇಕ್ಷಕನ ಮನದ ಕಗ್ಗಂಟಿಗೆ ಮೇ 1ರಂದು ಉತ್ತರ ಸಿಗಲಿದೆ. ಅಂದು ಸಂಜೆ 4.30–8.30 ಮತ್ತು 10ರಿಂದ11ಗಂಟೆಗೆ ಪ್ರಸಾರವಾಗುವ ವಿಶೇಷ ಸಂಚಿಕೆಗಳು ಪ್ರೇಕ್ಷಕನಿಗೆ ಉತ್ತರ ನೀಡುತ್ತವೆ. ಈ ಸಂಚಿಕೆಗಳು ವಿಶೇಷವಾಗಿ ರೂಪಿತವಾಗಿದ್ದು ಇಲ್ಲಿ ಸುವರ್ಣವಾಹಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಮುಖ್ಯ ಕಲಾವಿದರೂ ಕಾಣಿಸಿಕೊ ಳ್ಳಲಿದ್ದಾರೆ.

‘ಮೀರಾ ಮಾಧವ ಧಾರಾವಾಹಿಯನ್ನು ಸ್ವಲ್ಪ ಪ್ರಯೋಗಾತ್ಮಕ ಯೋಚನೆಯಲ್ಲಿ ಮಾಡಿದ್ದೇವೆ. ಕಿರುತೆರೆಯ ಡ್ರಾಮಾಗೆ ಇದು ಹೊರತಾಗಿದೆ. ಹುಡುಗ ಹುಡುಗಿ ಪ್ರೇಮಿಸಿ ಮನೆ ಬಿಟ್ಟು ಓಡಿ ಹೋಗುವುದು, ಆನಂತರ ಅವರು ಮತ್ತು ಆ ಕುಟುಂಬಗಳ ಕಥೇ ಏನಾಯಿತು, ಅಂತಸ್ತಿನ ಜತೆಗೆ ಸಂಪ್ರದಾಯಗಳೂ ಯಾವ ರೀತಿ ಪ್ರೇಮಿಗಳನ್ನು ಕಾಡುತ್ತವೆ ಎನ್ನುವುದನ್ನು ಹೇಳುತ್ತಿದ್ದೇವೆ. ಮೀರಾಳ ಅಪ್ಪ ನೋಡುವವರಿಗೆ ವಿಲನ್‌ ಆಗಿ ಕಾಣಿಸಬಹದು. ಆದರೆ ಮಗಳ ಬಗ್ಗೆ ಆತನ ತುಡಿತವೇನು’ ಎನ್ನುವುದನ್ನು ತೋರಿಸಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ವಾಹಿನಿಯ ಧಾರಾವಾಹಿ ವಿಭಾಗದ ಮುಖ್ಯಸ್ಥ ಸುಧೀಂದ್ರ ಭಾರದ್ವಾಜ್. ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಸಹ ಆ ಸಂಚಿಕೆಯಲ್ಲಿ ಬಂದು ಹೋಗುವ ಸುಳಿವನ್ನು ಅವರು ಬಿಟ್ಟುಕೊಡುತ್ತಾರೆ.

ಹಿಂದಿ ಕಿರುತೆಯಲ್ಲಿ ಕೆಲಸ ಮಾಡಿರುವ ಪ್ರೀತಂ ಶೆಟ್ಟಿ ಈ ಧಾರಾವಾಹಿಯ ನಿರ್ದೇಶಕರು. ಜನರು ತಮ್ಮನ್ನು ಎಲ್ಲಿಯವರೆಗೆ ಸ್ವೀಕರಿಸುತ್ತಾರೋ ಅಲ್ಲಿಯವರೆಗೂ ಕುತೂಹಲವನ್ನು ಉಳಿಸಿಕೊಂಡು ಹೋಗುವ ವಿಶ್ವಾಸ ಅವರದು. 

ಶ್ರೀಮಂತರ ಮನೆಯ ಹುಡುಗಿ ಮೀರಾ ಪಾತ್ರದಲ್ಲಿರುವ ಕಾವ್ಯಗೌಡ ಅವರಿಗೆ ಚಾಲೆಂಜ್ ಎನ್ನಿಸಿದ್ದು ಅಳುವ ದೃಶ್ಯಗಳು. ‘ನಾನು ಅಳುವ ಹುಡುಗಿ ಅಲ್ಲ. ಆದರೆ ಇಲ್ಲಿ ಅಪಾರ ಕಣ್ಣೀರು ಸುರಿಸಬೇಕು’ ಎಂದು ನಗುತ್ತಾರೆ. ಮಾಧವನಾಗಿ ಕಾಣಿಸಿಕೊಂಡಿರುವ ಶೈನ್‌ಶೆಟ್ಟಿ, ಈ ಧಾರಾವಾಹಿ ತಮ್ಮ ಸಿನಿಮಾ ಬದುಕಿಗೂ ಹಾದಿಯಾಗಿರುವುದಕ್ಕೆ ಮತ್ತು ಜನಮನ್ನಣೆ ಸಿಕ್ಕಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT