ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಅಸಹನೆ,ಆತ್ಮವಂಚನೆ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ ವಿಷಯದ ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ ಹೀಗೆ ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.

ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ ಸಮಸ್ಯೆಗೆ ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು. ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ ಈ ರೀತಿ ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.

ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ, ಬಡತನಕ್ಕೂ ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ ಜೀವಂತವಾಗಿರುವ ಜಾತಿ ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು.

ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ ವರ್ಗದಡಿ ಬರುವ ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಹಿಂದೆ ನಮ್ಮ ಹಿರಿಯರು ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು ಎನ್ನುವ ಧಾಟಿಯಲ್ಲಿ ಅಳಲು ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ ಇರುವವರೆಗೂ ಜಾತಿ ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ ಕಾರಣಎಂಬ ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.

ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು ಸಾಧ್ಯವೇನೊ? ಬಾಳ ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ ಒತ್ತಡವಿಲ್ಲದಿದ್ದರೂ ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ ಸರಳ ಪ್ರಶ್ನೆ ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು ಪ್ರಬಲವಾಗಿದೆ ಎಂಬುದು ಮನದಟ್ಟಾಗುತ್ತದೆ.
ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಅನಾಯಾಸವಾಗಿ ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು. ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ ಸೀಟು ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು ದಕ್ಕುವುದಿಲ್ಲ. ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ ಮೀಸಲಾತಿಯೇ ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ ಕೋಟಾದೆಡೆಗೆ ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು ತೀವ್ರವಾಗಿರುವುದಿಲ್ಲ.

ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ ಹೆಚ್ಚಳ, ಸರ್ಕಾರಿ ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ ಮನ್ನಣೆ ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಆದರೂ ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು ಏನನ್ನು ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?


ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ ಕಿತ್ತೊಗೆಯಬೇಕು ಅಥವಾ ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು ಹೊಂದಿದ್ದಾರೆ. ಮೀಸಲಾತಿ ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ ಮನ್ನಣೆ ಎಂಬ ಗ್ರಹಿಕೆ ಪ್ರಬಲವಾಗಿಯೇ ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ‘ರೆಫರೆನ್ಸ್’ ಕೂಡ ಒಂದು ರೀತಿಯ ಮೀಸಲಾತಿಯೇ ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? ಮಿಕ್ಕೆಲ್ಲ ಅರ್ಹತೆಗಳಿಗಿಂತಲೂ ಉದ್ಯೋಗ ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ ಬಂದಿಲ್ಲವೇ? ಈ ‘ರೆಫರೆನ್ಸ್’ ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ ಮುಂದಿಟ್ಟುಕೊಂಡು ನೋಡಿದರೂ ಖಾಸಗಿ ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ ಬರಬೇಕೆಂಬ ಕೂಗು ಏಕೆ ಪ್ರಬಲವಾಗುತ್ತಿದೆ ಎಂಬುದು  ಅರಿವಾಗುತ್ತದೆ.

ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ ಎಂಬುದು ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ ಇರುವುದೇ? ಮೀಸಲಾತಿ ದೊರೆತರೂ ಅದು ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ ಎತ್ತುವ ಕೆಲ ಪ್ರಬಲ ಜಾತಿಯವರು ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡು ತಮ್ಮದೇ ಸಮುದಾಯದ ಅರ್ಹರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?


ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ ಮನೋಭಾವ ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ ತೋರುತ್ತಿರುವುದು ವಿಪರ್ಯಾಸ. ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ ಹೊರಹೊಮ್ಮದೆ ಇರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT