ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ನಿರೀಕ್ಷೆ ಮತ್ತು ಆಶಯ

Last Updated 28 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಮೀಸಲಾತಿಯ ಮೂಲ ಉದ್ದೇಶವಾದ ಸಮಾನತೆಯನ್ನು ವರ್ತಮಾನದ ಸನ್ನಿವೇಶದಲ್ಲಿ ಅವಲೋಕಿಸಬೇಕಾಗಿದೆ.

ಗುಜರಾತ್‌ನ ಪಟೇಲ್ ಸಮುದಾಯದ ಮೀಸಲಾತಿ ಚಳವಳಿಯು ಮೀಸಲಾತಿ ಕುರಿತಾದ ಹಲವು ಪ್ರಶ್ನೆ ಮತ್ತು ಆಯಾಮಗಳನ್ನು ಹೊರ ಜಗತ್ತಿಗೆ ತೋರ್ಪಡಿಸಿದೆ. ಅಭ್ಯುದಯ ರಾಜಕೀಯ ನೀತಿಯಿಂದ ಪ್ರಾರಂಭಿಸಿ ಇಂದಿನ ನವ-ಉದಾರವಾದಿ ರಾಜಕೀಯ ಚೌಕಟ್ಟಿನಲ್ಲಿ ಮೀಸಲಾತಿಯ ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಗಂಭೀರ ಚರ್ಚೆಯಿಂದ ರಾಜಕೀಯ ಪಕ್ಷಗಳು, ಮಾಧ್ಯಮ, ನಾಗರಿಕ ಸಮಾಜ ಉದ್ದೇಶಪೂರ್ವಕ ಅಂತರ ಕಾಯ್ದುಕೊಂಡು ಬಂದಿವೆ. ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಸಮಾನ ಅವಕಾಶದ ಸಾಮಾನ್ಯ ತತ್ವದಡಿಯಲ್ಲಿ ಮುನ್ನಡೆಯುವ ದಾರ್ಶನಿಕತೆ ಮೂಡಲೇ ಇಲ್ಲ.

ಬಹುತೇಕ ದೇಶಗಳು ವಿವಿಧ ಕಾಲಘಟ್ಟದಲ್ಲಿ ಸಾಂಸ್ಥಿಕ ವೈರುಧ್ಯ, ಸಾಮಾಜಿಕ ಅಸಮಾನತೆ,  ಶೋಷಣೆಗಳಂತಹ ಅಮಾನವೀಯ ಸಮಸ್ಯೆಗಳನ್ನು ಕಂಡಿರುವುದನ್ನು ಇತಿಹಾಸದಲ್ಲಿ ನೋಡಬಹುದಾಗಿದೆ. ಅಮೆರಿಕದಲ್ಲಿನ ಆಫ್ರಿಕನ್ನರು, ಭಾರತೀಯ ಅಮೆರಿಕನ್ನರು, ಯುರೋಪಿನ ಅಲೆಮಾರಿ ಜಿಪ್ಸಿಗಳು, ಆಸ್ಟ್ರೇಲಿಯಾದ ಮೂಲನಿವಾಸಿಗಳು, ಚೀನಾದಲ್ಲಿನ ಅಲ್ಪಸಂಖ್ಯಾತ ಹಾನ್ ಸಮುದಾಯ ಆಯಾ ದೇಶದಲ್ಲಿ ನಿರಂತರವಾಗಿ ಶೋಷಣೆಗೊಳಗಾದ ದುರ್ಬಲ ವರ್ಗಗಳಾಗಿವೆ. ಆದರೆ ಭಾರತದಲ್ಲಿ ವ್ಯಕ್ತಿ ಮತ್ತು ಸಮುದಾಯಗಳು ಅನುಭವಿಸುವ ಅಸಮಾನತೆಯ ಸ್ವರೂಪ ಭಿನ್ನವಾಗಿದೆ.

ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಬಡತನದ ಮಧ್ಯೆ ನಿಕಟ ಸಂಬಂಧವಿದೆ. ಇಲ್ಲಿ ಹುಟ್ಟಿದ ಮಗುವಿನ ಸಾಮಾಜಿಕ ಸ್ಥಾನಮಾನವನ್ನು ಆತ ಹುಟ್ಟಿದ ಜಾತಿ ಮತ್ತು ಕುಟುಂಬದ ಆರ್ಥಿಕ ಹಿನ್ನೆಲೆಯಲ್ಲಿ ನಿರ್ಧರಿಸಲಾಗುತ್ತದೆ. ಇವುಗಳ ಮುಂದೆ ಮಗುವಿನ ಬೌದ್ಧಿಕ, ಭೌತಿಕ ಮಟ್ಟ ಹಾಗೂ ಶ್ರಮ-ಸಾಮರ್ಥ್ಯ ಗೌಣವಾಗುತ್ತದೆ. ಈ ಅಸಮಾನತೆಯು ದೇಶದ ಬಹುಸಂಖ್ಯಾತರ ಪ್ರತಿಭೆಯನ್ನು ಚಿವುಟಿಹಾಕಿದೆ. ಅಷ್ಟು ಮಾತ್ರವಲ್ಲದೆ ಸಾಪೇಕ್ಷ ಬಡತನ ಮತ್ತು ಸಾಮಾಜಿಕ ಹಿಂದುಳಿಯುವಿಕೆಯನ್ನು ಸೃಷ್ಟಿಸಿದೆ. ಇವೆಲ್ಲ ಕಾರಣದಿಂದಾಗಿ ಅವಕಾಶಗಳ ಹಂಚಿಕೆ ಮತ್ತು ಬಳಕೆಗೆ ಜಾತಿಯನ್ನು ಮಾನದಂಡವಾಗಿರಿಸಲಾಗಿದೆ.

ಜಾತಿಯ ಮಾನದಂಡದೊಂದಿಗೆ ನೀಡಲಾದ ಮೀಸಲಾತಿಯು, ಜಾತಿಯೊಳಗಿನ ಸುಶಿಕ್ಷಿತ ಮತ್ತು ಮೇಲ್ವರ್ಗದ ಜನರಿಗೆ ಮಾತ್ರ ಸೀಮಿತವಾಗಿದೆ. ಕೆಲವು ಸುಶಿಕ್ಷಿತ ಕುಟುಂಬಗಳು ಹಲವು ತಲೆಮಾರಿನಿಂದ ಮೀಸಲಾತಿಯನ್ನು ನಿರಂತರವಾಗಿ ಅನುಭವಿಸುತ್ತಿರುವುದು ಇದಕ್ಕೆ ನಿದರ್ಶನ. ಇಂದು ಕೇಂದ್ರ ನಾಗರಿಕ ಸೇವೆಗಳಿಗೆ, ಪ್ರತಿಷ್ಠಿತ ಐಐಟಿ, ಐಐಎಂ, ರಾಷ್ಟ್ರೀಯ ಕಾನೂನು ಶಾಲೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಲ್ಲಿ ಬಹುತೇಕರು ಮೀಸಲಾತಿಯ ಮೂರನೇ ತಲೆಮಾರಿನ ಫಲಾನುಭವಿಗಳಾಗಿದ್ದಾರೆ.

ಇದು ಸಾಮಾಜಿಕತೆಯ ಏಕಮುಖ ಚಲನೆ ಮತ್ತು ಜಾತಿಯೊಳಗಿನ ಆಂತರಿಕ ಹೊರಗುಳಿಯುವಿಕೆಯನ್ನು ದೃಢಪಡಿಸುತ್ತದೆ. ಇದು ಆರು ದಶಕಗಳ ನಂತರವೂ ಮೀಸಲಾತಿ ಮಾನದಂಡ ಬಡತನವೋ ಅಥವಾ ಶ್ರೀಮಂತಿಕೆಯೋ?, ಶಿಕ್ಷಿತರಿಗೋ ಅಥವಾ ಅಶಿಕ್ಷಿತರಿಗೋ? ಎಂಬ ಕಟು ಜಿಜ್ಞಾಸೆಯನ್ನು ಹುಟ್ಟುಹಾಕಿದೆ. ಮೀಸಲಾತಿಯ ಮೂಲ ಉದ್ದೇಶವಾದ ಸಮಾನತೆಯನ್ನು ವರ್ತಮಾನದ ಸನ್ನಿವೇಶದಲ್ಲಿರಿಸಿ ಅವಲೋಕಿಸಬೇಕಾಗಿದೆ. ಈ ರೀತಿಯ ಅಸಮಾನ ಅವಕಾಶವು ಸಂಘರ್ಷಾತ್ಮಕ ಸನ್ನಿವೇಶಗಳನ್ನು ಸೃಷ್ಟಿ ಮಾಡುವುದಲ್ಲದೆ, ಅವಕಾಶ ವಂಚಿತ ಪರಿಶಿಷ್ಟ ಜಾತಿ– ಪಂಗಡ, ಹಿಂದುಳಿದ ವರ್ಗದ ಬಡ ಸಮೂಹವು ತಮ್ಮದೇ ಸಮುದಾಯದೊಳಗಿನ ಬಲಾಢ್ಯ ಗುಂಪಿನೊಂದಿಗೆ ಸ್ಪರ್ಧಿಸಲಾಗದೇ ವಿಮುಖರಾಗುವಂತೆ ಮಾಡುತ್ತಿವೆ.

ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಲ್ಲೂ ಶ್ರೇಣೀಕೃತ ವ್ಯವಸ್ಥೆಯಿದ್ದು, ಕೆಳಸ್ತರದ ಬಡ ಮತ್ತು ಅರೆಶಿಕ್ಷಿತ ವರ್ಗ ಮೀಸಲಾತಿಯ ಫಲವನ್ನು ಪಡೆದಲ್ಲಿ ಸ್ವ-ಸಮುದಾಯದ ಉನ್ನತ ವರ್ಗಗಳ ಕಣ್ಣು ಕೆಂಪಾಗಿ, ಅಸಮಾಧಾನದ ಹೊಗೆಯಾಡುತ್ತದೆ. ಇಂತಹ ಅಸಮಾಧಾನಗಳು ಬಹುತೇಕ ಸಂದರ್ಭಗಳಲ್ಲಿ ರಾಜಕೀಯ ಆಯಾಮ ಪಡೆಯುವುದುಂಟು. ಇತ್ತೀಚೆಗೆ ನಡೆದ ಗುಜ್ಜಾರ್ ಮತ್ತು ಮೀನಾ ಸಮುದಾಯದ ಮೀಸಲಾತಿ ಚಳವಳಿಗಳು ಇದಕ್ಕೆ ಸೂಕ್ತ ಉದಾಹರಣೆಗಳಾಗಿವೆ. ಭಾರತದ ಅಭಿವೃದ್ಧಿ ಹೊಂದಿದ ರಾಜ್ಯವೆಂಬ ಹಣೆಪಟ್ಟಿ ಹೊಂದಿರುವ ಗುಜರಾತ್‌ನ ಬಲಾಢ್ಯ ಪಟೇಲ್ ಸಮುದಾಯವು ಮೀಸಲಾತಿಯನ್ನು ರಾಷ್ಟ್ರೀಕರಣಗೊಳಿಸಿ ಎಂಬ ಬೇಡಿಕೆಯೊಂದಿಗೆ ಚಳವಳಿ ಹುಟ್ಟುಹಾಕಿದೆ.

ಮೀಸಲಾತಿಯ ಪ್ರಯೋಜನದ ಹರಿವು ಕೇವಲ ಕೆಲವು ಶಿಕ್ಷಿತ, ಸದೃಢ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ ಎಂಬುದು ಕಟು ಸತ್ಯ. ನೈಜ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳು ಮೀಸಲಾತಿಯ ಕೇಂದ್ರಬಿಂದುವಿನಿಂದ ಅತಿ ದೂರದಲ್ಲಿವೆ. ಇದರಿಂದ ಬಡವರ್ಗ ಅಸಮಾಧಾನದಿಂದ ಬೇಸತ್ತು, ಪ್ರಚಲಿತ ಮೀಸಲಾತಿ ವ್ಯವಸ್ಥೆಯನ್ನು ತಮಾಷೆ ಮಾಡುತ್ತಿದೆ. ಅಸ್ತಿತ್ವದಲ್ಲಿರುವ ಮೀಸಲಾತಿ ವ್ಯವಸ್ಥೆಯು ಶೂನ್ಯ ಫಲಿತಾಂಶ ನೀಡುತ್ತಿದ್ದು, ಜಾತಿಯೊಳಗೆ ಮತ್ತೊಂದು ದುರ್ಬಲ ವರ್ಗವನ್ನು ಸೃಷ್ಟಿಸಿದೆ. ಆದ್ದರಿಂದ ಮೀಸಲಾತಿ ಕುರಿತಂತೆ ರಾಷ್ಟ್ರವ್ಯಾಪಿಯಾಗಿ ರಚನಾತ್ಮಕ ಚರ್ಚೆಗಳು ನಡೆದು, ಅವಕಾಶಗಳು ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸಿಗಬೇಕಾಗಿದೆ. ಸಮಾನತೆ, ದಕ್ಷತೆ, ಸನ್ನಡತೆಯಿಂದ ಕೂಡಿದ ರಾಷ್ಟ್ರೀಕೃತ ಮೀಸಲಾತಿ ಜಾರಿಗೆ ಬರಬೇಕಾಗಿದೆ.

ಒಂದು ಬಾರಿ ಮೀಸಲಾತಿಯ ಅವಕಾಶವನ್ನು ಅನುಭವಿಸಿದವರು ಮುಕ್ತ ಮನಸ್ಸಿನಿಂದ ತಮ್ಮದೇ ಸಮುದಾಯದ ಇತರರಿಗೆ ಬಿಟ್ಟುಕೊಡಬೇಕಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯಾಡಳಿತದಲ್ಲಿ ಮೀಸಲಾತಿ ಅನ್ವಯ ಉದ್ಯೋಗಾವಕಾಶ ಪಡೆದ ಐಎಎಸ್, ಐಪಿಎಸ್ ಕೆಎಎಸ್ ಅಧಿಕಾರಿಗಳು, ಜನಪ್ರತಿನಿಧಿಗಳಾದ ಶಾಸಕ, ಸಂಸದರು ಹಾಗೂ ವೈದ್ಯರ ಮಕ್ಕಳಿಗೆ ಮೀಸಲಾತಿ ಅವಕಾಶವನ್ನು ನಿರಾಕರಿಸಬೇಕು. ಇಲ್ಲದಿದ್ದಲ್ಲಿ ಮೀಸಲಾತಿ ಬಡವರ ಪಾಲಿಗೆ ಕನಸಾಗಿಯೇ ಉಳಿಯಬಹುದು. ಹೀಗೆ ಮೀಸಲಾತಿಯನ್ನು ನಿರಾಕರಿಸಿದ್ದೇ ಆದಲ್ಲಿ ಶಿಕ್ಷಣ, ಉದ್ಯೋಗದ ಕ್ಷೇತ್ರಗಳು ಸಮಾನವಾಗಿ ಎಲ್ಲರಿಗೂ ತೆರೆದುಕೊಳ್ಳಲು ಸಾಧ್ಯವಿದೆ.

ಎರಡನೆಯದಾಗಿ, ಮೀಸಲಾತಿಗೆ ಒಳಪಡದ ಸಮೂಹಗಳ ಬಡ ಕುಟುಂಬಗಳ ಸಮಸ್ಯೆಗಳನ್ನು ಸರ್ಕಾರ ಪರಿಗಣಿಸಬೇಕು. ಮೂರನೆಯದಾಗಿ, ಯಾವುದೇ ವಿದ್ಯಾರ್ಥಿ ಬಡತನದ ಕಾರಣದಿಂದ ಉನ್ನತ ವಿದ್ಯಾಭ್ಯಾಸದ ಅವಕಾಶದಿಂದ ವಂಚಿತನಾಗಬಾರದು. ಇದಕ್ಕಾಗಿ ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು, ಜೊತೆಗೆ ವಿದ್ಯಾರ್ಥಿ ವೇತನ, ಶಿಷ್ಯ ವೇತನ ಮತ್ತು ಸ್ಮಾರ್ಟ್‌ ಲೋನ್‌ಗಳನ್ನು ಬಲಪಡಿಸಬೇಕು. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ಜಾತಿ, ಆರ್ಥಿಕ ಅಥವಾ ಸಾಮಾಜಿಕ ಹಿನ್ನೆಲೆಯ ಸಹಾಯವಿಲ್ಲದೆ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಖಾಸಗಿ ಕ್ಷೇತ್ರದಲ್ಲೂ ಸಮಾನ ಅವಕಾಶಕ್ಕಾಗಿ ಮೀಸಲಾತಿ ಜಾರಿಗೊಳಿಸಬೇಕು. ಹೀಗಾದಾಗ, ಮೀಸಲಾತಿ ಕುರಿತಂತೆ ಇರುವ ಅಸಮಾನತೆ, ಅಸಮಾಧಾನ, ದ್ವೇಷಗಳನ್ನು ನಿಯಂತ್ರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT