ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಹೋರಾಟದ ಅಭಿಪ್ರಾಯಗಳು

Last Updated 4 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಅರ್ಥಹೀನ ಬೇಡಿಕೆ
ಅಸ್ಪೃಶ್ಯತೆ ಕಾರಣದಿಂದ ಹಿಂದುಳಿದಿದ್ದವರನ್ನು ಮುಖ್ಯವಾಹಿನಿಗೆ ಕರೆತರುವ ಉದ್ದೇಶದಿಂದ ಜಾರಿಗೆ ತಂದ ಮೀಸಲಾತಿಯನ್ನು ಪ್ರಬಲರೂ ಕೇಳುತ್ತಿರುವುದು ಅರ್ಥಹೀನ. ಸಾಮಾಜಿಕವಾಗಿ ಯಾವ ಕೊರತೆಗಳನ್ನೂ ಎದುರಿಸದವರು ಮೀಸಲಾತಿ ಕೇಳುವುದು ಸಾಮಾಜಿಕ ಅನ್ಯಾಯವೇ ಸರಿ.

ಇಂತಹ ಬೇಡಿಕೆಯ ಹಿಂದೆ ಇರುವುದು ಜಿದ್ದು ಮಾತ್ರ. ಬೇರೆಯವರಿಗೆ ಮೀಸಲಾತಿ ಇದೆಯಲ್ಲಾ ನಮಗೂ ಇರಲಿ ಎಂಬುದು ಎಷ್ಟು ಸರಿ? ಇದರಿಂದ ಸಾಮಾಜಿಕ ಅಸಮಾನತೆ ಮತ್ತು ಜಾತೀಯತೆ ಹೋಗಲಾಡಿಸಲು ತೊಡಕಾಗುತ್ತದೆ.

ಪ್ರಬಲ ಜಾತಿಗಳು ಮೀಸಲಾತಿ ಕೇಳಲು ಬಡತನವನ್ನು ಮುಂದೊಡ್ಡುತ್ತಿವೆ. ಬ್ರಾಹ್ಮಣರಲ್ಲಿ, ಲಿಂಗಾಯತರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ಇಂತಹ ಸಂದರ್ಭದಲ್ಲೆಲ್ಲ ಏಳುತ್ತದೆ. ಸರ್ಕಾರಿ ಕಚೇರಿಯಲ್ಲಿ ಜವಾನನಾಗಿರುವ ಒಬ್ಬ ಬ್ರಾಹ್ಮಣ ವ್ಯಕ್ತಿಗೆ ದೊರಕುವ ಉಪಚಾರವೇ ಬೇರೆ. ಅದೇ ಕಚೇರಿಯಲ್ಲಿ ಅದೇ ಹುದ್ದೆಯಲ್ಲಿರುವ ಹಿಂದುಳಿದ ಸಮುದಾಯದ ವ್ಯಕ್ತಿಗೆ ಸಿಗುವ ಉಪಚಾರವೇ ಬೇರೆ.

ಸಾಮಾಜಿಕವಾಗಿ ಪ್ರಬಲರಾಗಿರುವವರು ಆರ್ಥಿಕವಾಗಿ ಹಿಂದುಳಿದಿದ್ದರೆ, ಅದನ್ನು ದುಡಿಮೆಯ ಮೂಲಕ ಪರಿಹರಿಸಿಕೊಳ್ಳಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡುವ ಕರ್ತವ್ಯ ಸರ್ಕಾರದ್ದು. ಆರ್ಥಿಕವಾಗಿ ಹಿಂದುಳಿದಿರುವವರು ನೆರವಿಗೆ ಯಾಚಿಸುವುದರಲ್ಲಿ ತಪ್ಪಿಲ್ಲ. ಆದರೆ ಎಲ್ಲರೂ ಮೀಸಲಾತಿಯನ್ನು ಬೇಡಬಾರದು.
ಬಿ.ಟಿ.ಲಲಿತಾ ನಾಯಕ್, ಹೋರಾಟಗಾರ್ತಿ

******

ಆರ್ಥಿಕ ಸ್ಥಿತಿಗತಿ ಮಾನದಂಡವಲ್ಲ
ಪ್ರಬಲ ವರ್ಗಗಳು ಮೀಸಲಾತಿಗೆ ಬೇಡಿಕೆ ಇಡುವುದು ತಪ್ಪು. ಹಿಂದುಳಿದ ಜಾತಿಯವರು ಅನ್ಯ ಜಾತಿಯವರೊಡನೆ ಸಮಾನತೆ ಸಾಧಿಸಬೇಕೆಂಬ ಮಹತ್ವದ ಉದ್ದೇಶ ಮೀಸಲಾತಿಯ ಹಿಂದಿದೆ. ಈ ಪರಿಕಲ್ಪನೆ ಜಾರಿಗೆ ಬಂದದ್ದೇ ಜಾತಿ ಆಧಾರಿತವಾಗಿ. ಅದಕ್ಕಾಗಿ ಅವರಿಗೆ ಈ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಹೀಗಾಗಿ ಮೀಸಲಾತಿಯು ಜಾತಿ ಜಾತಿಗಳ ನಡುವಿನ ಅಸಮಾನತೆ ನಿವಾರಿಸುವ ಕಾರ್ಯಕ್ರಮ.

ಪ್ರಬಲ ಜಾತಿಗಳಿಗೆ ಮೀಸಲಾತಿ ಕೊಟ್ಟರೆ ನಿಜವಾಗಿಯೂ ಅದನ್ನು ಪಡೆಯಬೇಕಾದವರಿಗೆ ಈ ಸೌಲಭ್ಯ ತಪ್ಪಿ ಹೋಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ,  ಮೀಸಲಾತಿಯು ಆರ್ಥಿಕವಾಗಿ ಹಿಂದುಳಿದವರ ಸಲುವಾಗಿ ನೀಡುವ ಸೌಲಭ್ಯ ಅಲ್ಲವೇ ಅಲ್ಲ. ಹಾಗೊಂದು ವೇಳೆ ಅಂತಹ ಉದ್ದೇಶ ಇಟ್ಟುಕೊಂಡು ಮೀಸಲಾತಿ ಸೌಲಭ್ಯ ಕಲ್ಪಿಸಿದ್ದರೆ ಮೇಲ್ಜಾತಿಯ ಬಡವರು ಅದನ್ನು ಕಬಳಿಸುತ್ತಿದ್ದರೇ ಹೊರತು, ಕೆಳ ಜಾತಿಯ ಬಡವರು ಆ ಸೌಲಭ್ಯದಿಂದ ವಂಚಿತರಾಗುತ್ತಿದ್ದರು. ಆದ್ದರಿಂದ ಮೀಸಲಾತಿಗೆ ಆರ್ಥಿಕ ಸ್ಥಿತಿಗತಿ ಮಾನದಂಡ ಅಲ್ಲ.

ಆರ್ಥಿಕವಾಗಿ ಹಿಂದುಳಿದಿದ್ದರೆ ಬಡತನ ನಿವಾರಣೆಗಾಗಿಯೇ ಸಾಕಷ್ಟು ಕಾರ್ಯಕ್ರಮಗಳಿವೆ. ಉದಾಹರಣೆಗೆ, ಉದ್ಯೋಗ ಖಾತರಿ ಯೋಜನೆಯಡಿ ಯಾರಾದರೂ ಅರ್ಜಿ ಹಾಕಿದರೆ ಅಲ್ಲಿ ಜಾತಿ ನೋಡುವುದಿಲ್ಲ, ಬಡವರಷ್ಟೇ ಹೆಚ್ಚಾಗಿ ಅರ್ಜಿ ಹಾಕುತ್ತಾರೆ. ಅವರು ಮೇಲ್ಜಾತಿಯ ಬಡವರಾಗಿದ್ದರೂ ಅವರಿಗೆ ಕೆಲಸ ಸಿಗುತ್ತದೆ.
ಬಾಪು ಹೆದ್ದೂರಶೆಟ್ಟಿ, ಸಮಾಜವಾದಿ ಚಿಂತಕ

*******

ಬಲ ಪ್ರದರ್ಶನದ ರಾಜಕಾರಣ
ಮಠಮಾನ್ಯಗಳನ್ನು ಕಟ್ಟಿಕೊಂಡಿರುವ, ಸಾಮಾಜಿಕ, ರಾಜಕೀಯ ಅಭಿಪ್ರಾಯವನ್ನು ರೂಪಿಸುವಷ್ಟು ಪ್ರಬಲವಾಗಿರುವ ಸಮುದಾಯಗಳೂ ಮೀಸಲಾತಿ ಕೇಳುತ್ತಿರುವುದು ಬಲಪ್ರದರ್ಶನ ರಾಜಕಾರಣದ ಪ್ರತಿಫಲನ ಅಷ್ಟೆ. ಇದೊಂದು ರೀತಿ ಹಿಂದುಳಿಯಲು ನಡೆಸುತ್ತಿರುವ ಪೈಪೋಟಿ.

ಮೀಸಲಾತಿ ಪರಿಕಲ್ಪನೆ ಬಂದದ್ದೇ ಸಾಮಾಜಿಕವಾಗಿ, ಆರ್ಥಿಕವಾಗಿ ಬಹಳ ಹಿಂದುಳಿದವರು, ಶತಮಾನಗಳಿಂದ ಶೋಷಣೆಗೆ ಒಳಗಾದವರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ. ಅದೂ 10 ವರ್ಷಕ್ಕೊಮ್ಮೆ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಬೇಕು ಎಂಬ ನಿರ್ದೇಶನದ ಮೇರೆಗೆ. 10 ವರ್ಷಕ್ಕೊಮ್ಮೆ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸುತ್ತಾ ಬಂದಿದ್ದರೆ ಈ ಸಮಸ್ಯೆ ಈಗ ತಲೆದೋರುತ್ತಿರಲಿಲ್ಲ. ಯಾವ ಸಮುದಾಯಗಳು ಎಷ್ಟಿವೆ, ಅವುಗಳ ಸಾಮಾಜಿಕ ಸ್ಥಿತಿಗತಿಯೇನು ಎಂಬುದನ್ನು ಪರಿಗಣಿಸಿ ಮೀಸಲಾತಿ ನೀಡಬೇಕು.

ಅಂತಹ ಪ್ರಯತ್ನ ನಡೆದಿಲ್ಲ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಹೊರತುಪಡಿಸಿ ಇತರ ಸಮುದಾಯಗಳಿಗೆ ಮೀಸಲಾತಿ ನೀಡುವಾಗೆಲ್ಲ ಯಾವ ಅಂಕಿಅಂಶವನ್ನೂ ಪರಿಗಣಿಸಿಲ್ಲ. ಸ್ವಾತಂತ್ರ್ಯಾ ನಂತರದ ಎಲ್ಲ ಸರ್ಕಾರಗಳೂ ಇದೇ ಕೆಲಸ ಮಾಡಿವೆ.  ಸಮುದಾಯವೊಂದಕ್ಕೆ ಮೀಸಲಾತಿ ನೀಡುವಲ್ಲಿ ಮತ್ತು ಮೀಸಲಾತಿ ನಿರಾಕರಿಸುವಲ್ಲಿ ಸರ್ಕಾರಕ್ಕೆ ಇಂತಹ ಅಂಕಿಅಂಶಗಳ ಆಧಾರ ಅವಶ್ಯಕ.

ಇದ್ಯಾವುದನ್ನೂ ಪರಿಗಣಿಸದೆ ಒತ್ತಡ ಹೇರಿದವರಿಗೆ ಮೀಸಲಾತಿ ನೀಡುತ್ತಾ ಬಂದಿರುವುದೇ ಇಂದಿನ ಸಮಸ್ಯೆಗೆ ಕಾರಣ. ಜತೆಗೆ ಒಂದು ರಾಜ್ಯದಲ್ಲಿ ಹಿಂದುಳಿದವರು ಎನಿಸಿಕೊಂಡವರು ಮತ್ತೊಂದು ರಾಜ್ಯದಲ್ಲಿ ಪ್ರಬಲರಾಗಿರುತ್ತಾರೆ. ಕೆಲವೊಮ್ಮೆ ದುರ್ಬಲರಾಗಿದ್ದರೂ ಮೀಸಲಾತಿ ಪಟ್ಟಿಯಿಂದ ಹೊರಗುಳಿದಿರುವ ಪರಿಸ್ಥಿತಿಯೂ ಇದೆ. ನಮ್ಮ ದೇಶದಲ್ಲಿ ಇಂತಹ ವೈರುಧ್ಯಗಳು ಸಾಕಷ್ಟಿವೆ. ಇವುಗಳನ್ನು ಹೋಗಲಾಡಿಸಿ ವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಿಸುವುದೇ ಇದಕ್ಕೆ ಪರಿಹಾರ.
ಬಿ.ಎಲ್.ಶಂಕರ್, ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT