ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಮಧುಚಂದ್ರ

Last Updated 3 ಜುಲೈ 2015, 19:30 IST
ಅಕ್ಷರ ಗಾತ್ರ

ಆಕಾಶವನ್ನೆಲ್ಲಾ ಆವರಿಸಿದ ಕಾರ್ಮೋಡ. ಮಿಂಚು, ಗುಡುಗು, ಸಿಡಿಲು, ರೊಂಯ್ಯನೆ ಬೀಸುವ ಗಾಳಿಯೊಂದಿಗೆ ಧೋ ಎಂದು ಸುರಿಯುವ ಮಳೆ. ಇದು ಮುಂಗಾರು ಮಳೆಗಾಲದಲ್ಲಿ ಕಾಣುವ ದೃಶ್ಯಾವಳಿ. ಎಲ್ಲೆಡೆ ಮಳೆಯದ್ದೇ ಕಾರುಬಾರು. ಈ ಸಂದರ್ಭದಲ್ಲಿ ನವ ದಂಪತಿಗಳಿಗೆ ಮಳೆಗಾಲದ ಮಧುಚಂದ್ರ ಕಾಡುವುದಿಲ್ಲವೇ?

ಜೂನ್‌ ಮೊದಲ ವಾರದಲ್ಲಿಯೇ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಿದೆ. ಆ ಮೂಲಕ ದೇಶದಾದ್ಯಂತ ನಾಲ್ಕು ತಿಂಗಳ ಪಯಣಕ್ಕೆ  ಮುನ್ನುಡಿ ಬರೆದಿದೆ. ಈಗಾಗಲೇ ರಾಜ್ಯದ ಮಲೆನಾಡು ಭಾಗದಲ್ಲೂ ಮುಂಗಾರು ಬಿರುಸುಗೊಂಡಿದೆ. ಚಳಿ ಹಾಗೂ ಬೇಸಿಗೆ ಕಾಲದಲ್ಲೇ ಹೆಚ್ಚಾಗಿ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದ ನವ ವಿವಾಹಿತರೀಗ ಮಳೆ ಗಾಲದಲ್ಲೂ  ಮಧುಚಂದ್ರಕ್ಕೆ ಮುಂದಾಗುತ್ತಿದ್ದಾರೆ.  ಮುಂಗಾರು ಮಳೆಯ ಹನಿಗಳನ್ನು ಕಣ್ತುಂಬಿ ಕೊಳ್ಳುವ ಜೊತೆಗೆ ಮಳೆಗಾಲದ ಮಧುಚಂದ್ರವನ್ನು ಆನಂದಿಸುತ್ತಿದ್ದಾರೆ.

ಹೆಚ್ಚು ಮಳೆ ಬೀಳುವ ಪ್ರವಾಸಿ ತಾಣಗಳಲ್ಲೀಗ ಆಫ್‌ ಸೀಜನ್‌. ಅವರವರ ಬಜೆಟ್‌ಗೆ ಹೊಂದುವಂಥ ರೆಸ್ಟೋರೆಂಟ್‌, ರೆಸಾರ್ಟ್‌ ಹಾಗೂ ಹೋಟೆಲ್‌ ರೂಮುಗಳು ಬಾಡಿಗೆಗೆ ಸಿಗುತ್ತವೆ. ಕೆಲವು ಹೋಟೆಲ್‌ಗಳು ಮಾನ್ಸೂನ್‌ ರಿಯಾಯ್ತಿಯನ್ನೂ  ಘೋಷಿಸಿವೆ. ಅಲ್ಲದೇ ಪ್ಯಾಕೇಜ್‌ ಟೂರ್‌ ವ್ಯವಸ್ಥೆಯೂ ಹಲವು ಟ್ರಾವೆಲ್‌ ಏಜೆನ್ಸಿಗಳಲ್ಲಿದೆ. ಇತ್ತೀಚೆಗೆ ವಿಮಾನ ಪ್ರಯಾಣ ದರದಲ್ಲೂ ರಿಯಾಯ್ತಿ ಲಭ್ಯವಿದೆ. ಹಾಗಾಗಿ ಮುಂಚಿತವಾಗಿಯೇ ವಿಮಾನ ಟಿಕೆಟ್‌ ಕಾಯ್ದಿರಿಸುವುದು ಸಾಮಾನ್ಯವಾಗಿದೆ. 

ವಿಪರೀತ ಮಳೆ ಬರುವುದರಿಂದ ಪ್ರವಾಸಿ ತಾಣಗಳನ್ನು ನೋಡಲಾಗದು ಎಂದು ಬಹಳಷ್ಟು ಮಂದಿ ಮಧುಚಂದ್ರ ಪ್ರವಾಸ ಮುಂದೂಡ ಬಹುದು, ಆದರೆ ಮಳೆಯ ಸೊಬಗನ್ನು ನೋಡಲು ಇದೇ ಸರಿಯಾದ ಸಮಯ ಎನ್ನುವ ಜೋಡಿಗಳಿಗೂ ಕೊರತೆಯಿಲ್ಲ.

ಮಳೆಗಾಲವಾದ್ದರಿಂದ ಒಂದಿಷ್ಟು ಮುಂಜಾಗ್ರತೆ ವಹಿಸಿ ಪ್ರವಾಸಕ್ಕೆ ಹೊರಟರೆ ಒಳ್ಳೆಯದು. ನೀವು ಹೋಗುವ ಪ್ರವಾಸಿ ತಾಣಗಳ ಹೋಟೆಲ್‌, ಟ್ಯಾಕ್ಸಿಯನ್ನು ಮುಂಗಡವಾಗಿ ಬುಕ್‌ ಮಾಡಿದರೆ ಇನ್ನೂ ಒಳ್ಳೆಯದು. ಅದಕ್ಕಾಗಿ ಅಂತರ್ಜಾಲ, ಆಯಾ ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ನೆರವು ಪಡೆಯಬಹುದು. ಪ್ಯಾಕೇಜ್‌ ಟೂರ್‌ ಆದರಂತೂ ಇವುಗಳ ಚಿಂತೆ ಇಲ್ಲದೆ ನಿರಾತಂಕವಾಗಿ ಪ್ರವಾಸದ ಮಜಾ ಅನುಭವಿಸಬಹುದು.

ಬಟ್ಟಲಿನ ಹಬೆಯಂತೆ ಬೆಟ್ಟಸಾಲುಗಳನ್ನು ಆವರಿಸಿದ ಮಂಜು. ಮುಗಿಲಲ್ಲಿ ಆಗಾಗ ನಗುವ ನೇಸರ, ಚುಮುಚುಮು ಚಳಿಗಾಳಿಯೊಂದಿಗೆ ಮಳೆ ಹನಿಗಳ ಸಿಂಚನ. ಜೊತೆಯಲ್ಲಿ ಕೈಹಿಡಿದ ಅರ್ಧಾಂಗಿ... ಮಳೆಗಾಲದ ಮಧುಚಂದ್ರಕ್ಕೆ  ಮತ್ತಿನ್ನೇನು ಬೇಕು?

ರಮಣೀಯ ಕೇರಳ
ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಕೇರಳ. ಆದರೆ ಜೂನ್‌ನಿಂದ ಆಗಸ್ಟ್‌ವರೆಗೂ ಇಲ್ಲಿ ಮಾನ್ಸೂನ್‌ ಮಳೆಯ ಹಬ್ಬರವಿರುತ್ತದೆ. ಮಳೆ ಆಸ್ವಾದಿಸಬೇಕೆಂಬ ವಾಂಛೆ ಇರುವವರು ಈ ಸಮಯದಲ್ಲೇ ಮಳೆಯ ಸೊಬಗು ಕಣ್ತುಂಬಿಕೊಳ್ಳಬಹುದು. ಮುನ್ನಾರ್‌ನ ಮೋಹಕ ಬೆಟ್ಟಸಾಲುಗಳು, ಚುಂಬಕದಂಥ ಜಲಪಾತಗಳೂ ಇಲ್ಲಿವೆ. ವಿಹಾರಕ್ಕೆ ಹೇಳಿ ಮಾಡಿಸಿದಂತ ಅಲೆಪ್ಪಿಯ ಹಿನ್ನೀರಿನ ತಾಣಗಳಂತೂ ಪ್ರವಾಸಿಗರಿಗೆ ಅತ್ಯಂತ ಪ್ರಿಯವಾಗಲಿವೆ. ಅಲ್ಲದೇ ನೆಯ್ಯಾರ್, ತೆಕ್ಕಡಿ, ವೈನಾಡು, ಕುಮಾರಕಂ ಗಮನಸೆಳೆಯುತ್ತವೆ.

ಇವು ನಿಮ್ಮ ಜೊತೆಗಿರಲಿ
ಮಳೆಗಾಲವಾದ್ದರಿಂದ ಛತ್ರಿ, ಜರ್ಕಿನ್‌, ಬಳಸಿ ಎಸೆಯುವಂಥ ಬಟ್ಟೆಗಳನ್ನು ಮರೆಯದೇ ತೆಗೆದುಕೊಂಡು ಹೋಗಿ. ಪ್ರಯಾಣದ ಅಲರ್ಜಿ ಇದ್ದರೆ ಮುಂಜಾಗ್ರತೆಗಾಗಿ ವಾಂತಿ ನಿಲ್ಲುವ ಮಾತ್ರೆ, ಶೀತವಾದರೆ ವಿಕ್ಸ್‌, ಕೋಲ್ಡ್‌ ಸಿರಪ್‌, ಜ್ವರದ ಔಷಧ, ಹೊಟ್ಟೆನೋವು, ಬೇಧಿಗೆ ಔಷಧ ಇಟ್ಟುಕೊಳ್ಳುವುದನ್ನು ಮರೆಯಬಾರದು. ಮೊಬೈಲ್‌, ಐಪ್ಯಾಡ್‌ ಚಾರ್ಜರ್‌ಗಳನ್ನು ಕೊಂಡೊಯ್ಯಬೇಕು. 

ಎಚ್ಚರ ತಪ್ಪದಿರಿ..
ಪ್ರವಾಸಿ ಸ್ಥಳಗಳಲ್ಲಿ ಅಪಾಯಕಾರಿ ಮಾರ್ಗಗಳಿರುತ್ತವೆ. ಕಡಿದಾದ ರಸ್ತೆ, ಪ್ರಪಾತ.. ಹೀಗೆ ನೀವು ಹೋಗುವ ಕಡೆ ಎಚ್ಚರ ತಪ್ಪಬೇಡಿ. ಜಲಪಾತ ನೋಡುವಾಗ ಬಂಡೆಗಳ ಮೇಲೆ ಎಚ್ಚರಿಕೆಯಿಂದ ನಡೆಯಿರಿ. ಮಳೆಯಿಂದ ಪಾಚಿಗಟ್ಟಿರುತ್ತವೆ.  ಮಳೆಗಾಲದಲ್ಲಿ ಜಿಗಣೆ (ಲೀಚ್) ಕಾಟವಿರುತ್ತದೆ. ಹಾಗಾಗಿ ತಂಬಾಕನ್ನು ಕಾಲಿಗೆ ಉಜ್ಜಿಕೊಳ್ಳಿ.  ಉದ್ದ ಬೂಟುಗಳನ್ನು ಧರಿಸಿ. ಪ್ರವಾಸಿ ತಾಣಗಳ ಬಗ್ಗೆ ಗೈಡ್‌ಗಳಿಂದ ಮಾರ್ಗದರ್ಶನ ಪಡೆದುಕೊಳ್ಳಿ. ನೀರಿನಲ್ಲಿ ಆಟವಾಡುವಾಗ ಜಾಗೃತರಾಗಿರಿ.

ಕೆ.ಎಂ.ಸತೀಶ್‌ ಬೆಳ್ಳಕ್ಕಿ
ಮಳೆಗಾಲದಲ್ಲಿ ಮಧುಚಂದ್ರ ಎಂಬ ಎರಡು ಪದಗಳೇ ಮನಸ್ಸಿನಲ್ಲಿ ಪುಳಕದ ಮಳೆ ಸುರಿಸುತ್ತವೆ. ಹೊಸ ದಂಪತಿ ತಮ್ಮ ವೈವಾಹಿಕ ಜೀವನವನ್ನು ಅದ್ಭುತವಾಗಿ ಆರಂಭಿಸಲು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಕೆಲವೊಂದಿಷ್ಟು ದಿನ ಏಕಾಂತವಾಗಿರಲು ಬಯಸುತ್ತಾರೆ. ಅದಕ್ಕೆ ನೆರವಾಗುವುದೇ ಮಧುಚಂದ್ರ. ಏಪ್ರಿಲ್‌, ಮೇ, ಜೂನ್‌ನಲ್ಲಿ ಮದುವೆಯಾದವರಿಗೆ ಮಧುಚಂದ್ರ ಮಧುರ ನೆನಪನ್ನು ಕಟ್ಟಿಕೊಡುತ್ತದೆ.

ಈ ಸಮಯದಲ್ಲಿ ಹೊಸ ಜೋಡಿಗಳ ಪ್ರಣಯಕ್ಕೆ ಮಳೆಯ ಹಾಜರಿಯೂ ಲಭಿಸುವುದರಿಂದ ಅವರ ಮಧುಚಂದ್ರಕ್ಕೆ ಮತ್ತಷ್ಟು ಉತ್ಕಟತೆಯ ರುಜು ಬೀಳುತ್ತದೆ. ಹಸಿರು ನಳನಳಿಸುವ, ಜಲಪಾತಗಳು ಧುಮ್ಮಿಕ್ಕುವ ಸ್ಥಳಗಳಲ್ಲಿ ಶೃಂಗಾರ ಭಾವ ದಂಡಿಯಾಗಿ ಉಕ್ಕುತ್ತದೆ ಎಂಬ ಕಾರಣಕ್ಕೇ ಹೊಸ ಜೋಡಿಗಳು ಮಧುಚಂದ್ರಕ್ಕೆ ಪ್ರಾಕೃತಿಕವಾಗಿ ಸಂಪದ್ಭರಿತವಾಗಿರುವ ಸ್ಥಳಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

‘ನೇರವಾಗಿ ಶೃಂಗಾರ ವರ್ಣಿಸುವುದು ರಸಿಕರ ಲಕ್ಷಣವಲ್ಲ. ಶರೀರದ ಅಂಗಗಳನ್ನು ಮೋಹ ಉಕ್ಕುವಂತೆ, ಪ್ರೀತಿ ಹುಟ್ಟುವಂತೆ ಪರೋಕ್ಷವಾಗಿ ವರ್ಣಿಸುವುದೂ ಸುಲಭವಲ್ಲ’ ಎಂಬ ಮಾತುಜನಜನಿತ. ಮಧುಚಂದ್ರ ಈ ಎರಡು ವಿಷಯಕ್ಕೂ ಸುಸಂದರ್ಭ ಕಲ್ಪಿಸಿಕೊಡುತ್ತದೆ. ಹನಿಮೂನ್‌ನಲ್ಲಿ ಸಂಗಾತಿಯ ಸೌಂದರ್ಯ ಸವಿಯುವುದರ ಜೊತೆಗೆ ಅಂದಚೆಂದವನ್ನು ತುಸು ಪೋಲಿತನದಿಂದ ವರ್ಣಿಸಿ ಖುಷಿಪಡಬಹುದು.

ಹೊಸ ಜೋಡಿಗಳಲ್ಲಿ ಪ್ರಣಯ ಭಾವ ಉದ್ದೀಪಿಸುವ ತಾಣಗಳು ಸಾಕಷ್ಟಿವೆ. ಮಧುಚಂದ್ರಕ್ಕೆ ಮಡಿಕೇರಿ ಬೆಸ್ಟ್‌ ಜಾಗ. ಮಳೆಗಾಲದಲ್ಲಿ ಹೋದರೆ ಇನ್ನೂ ಚೆಂದ. ಸಕಲೇಶಪುರ, ಚಿಕ್ಕಮಗಳೂರು, ಮೈಸೂರು, ಕಾರವಾರ ಕೂಡ ಹನಿಮೂನ್‌ಗೆ  ಹೇಳಿಮಾಡಿಸಿದಂತಹ ಸ್ಥಳಗಳು.

ಕೊಡಗಿನಲ್ಲಿ ಮಧುಚಂದ್ರದ ಕ್ಷಣಗಳನ್ನು ಮೊಗೆಮೊಗೆದು ಕುಡಿಯಬಹುದು. ದುಬಾರೆ ಅಥವಾ ಪುಷ್ಪಗಿರಿ ರಿಸರ್ವ್‌ ಫಾರೆಸ್ಟ್‌ ಅತ್ಯುತ್ತಮ ಜಾಗಗಳು. ಈ ಎರಡು ಸ್ಥಳಗಳು ಹನಿಮೂನ್‌ನ ಕೀಲಿಕೈಗಳಿದ್ದಂತೆ. ಇನ್ನು, ಮಡಿಕೇರಿ ಮಂಜಿನಲ್ಲಿ ಧುಮ್ಮಿಕ್ಕುವ ಅಬ್ಬಿ ಫಾಲ್ಸ್, ಇರುಪ್ಪು ಫಾಲ್ಸ್‌, ಮಲ್ಹಳ್ಳಿ ಫಾಲ್ಸ್‌ನ ನೀರಿನ ನಿನಾದವನ್ನು  ಕೇಳುತ್ತ, ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ರೊಮ್ಯಾನ್ಸ್‌ ಮಾಡಬಹುದು. ಕಡಲ ಕಿನಾರೆಗಳಲ್ಲಿ ತುಂಡುಡುಗೆ ಧರಿಸಿ, ಅಲೆಗೆ ಮೈಯೊಡ್ಡಿದಾಗ ಸಿಗುವಷ್ಟೇ ಖುಷಿ ಈ ಸ್ಥಳಗಲ್ಲೂ ಸಿಕ್ಕುತ್ತದೆ. 

ಪ್ರಣಯದ ಜೊತೆಗೆ ಸಾಹಸಕ್ರೀಡೆ ಹಾಗೂ ವನ್ಯಜೀವಿ ವೀಕ್ಷಣೆಯನ್ನು ಇಷ್ಟಪಡುವ ಜೋಡಿಗೆ ಕೂರ್ಗ್‌ ಅದ್ಭುತ ತಾಣ. ಪ್ರಾಕೃತಿಕ ಸೌಂದರ್ಯ ತುಂಬಿ ತುಳುಕುವ ಬ್ರಹ್ಮಗಿರಿ, ತಲಕಾವೇರಿ ರಿಸರ್ವ್‌ ಫಾರೆಸ್ಟ್‌, ನಾಗರಹೊಳೆ ಪಾರ್ಕ್‌, ಕಾವೇರಿ ನಿಸರ್ಗಧಾಮಗಳು ಹೊಸ ಜೋಡಿಗೆ ರೋಚಕ ಅನುಭವ ನೀಡುತ್ತವೆ. ಹಸಿರು ತುಂಬಿದ ಕಾಡಿನಲ್ಲಿ ಸಫಾರಿ ಮಾಡುತ್ತಾ ಖುಷಿಪಡಬಹುದು.

ಹಾಗೆಯೇ, ವನ್ಯ ಮೃಗಗಳನ್ನು ನೋಡಿ ಬೆಚ್ಚಿಬಿದ್ದಂತೆ ನಟಿಸುತ್ತ, ಸಂಗಾತಿಯನ್ನು ಅಪ್ಪಿಕೊಳ್ಳುವ ಖುಷಿಯನ್ನೂ ಇಲ್ಲಿ ಧಾರಾಳವಾಗಿ ಅನುಭವಿಸಬಹುದಾಗಿದೆ. ಹನಿಮೂನ್‌ ಜೊತೆಗೆ ಭಕ್ತಿ ಪ್ರವಾಸ ಮಾಡುವ ಇಚ್ಛೆ ಇದ್ದವರಿಗೂ ಕೂರ್ಗ್‌ ಹೊಂದಿಕೆಯಾಗುತ್ತದೆ. ಇಲ್ಲಿನ ಪಡಿ ಇಗ್ಗುತ್ತಪ್ಪ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ, ಭಾಗಮಂಡಲಕ್ಕೆ ಭೇಟಿ ಇತ್ತು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಹಾಗೆಯೇ ಬೈಲುಕೊಪ್ಪಕ್ಕೆ ಭೇಟಿ ನೀಡಬಹುದು.

ಮಡಿಕೇರಿಯಲ್ಲಿ ಲೆಕ್ಕವಿಲ್ಲದಷ್ಟು ಬೆಟ್ಟಗಳ ಸಾಲು ಮತ್ತು ಪರ್ವತಗಳಿವೆ. ಮಂಡಲ್‌ಪಟ್ಟಿ ಇಲ್ಲಿನ ಪ್ರಮುಖ ಹಿಲ್‌ಸ್ಟೇಷನ್‌. ಕಾಫಿ ತೋಟದೊಳಗೆ ಕೈ ಹಿಡಿದು ಅಡ್ಡಾಡುತ್ತ, ಚಿಗುರೆಲೆಗಳ ಮಧ್ಯೆ ದುಂಬಿಗಳಂತೆ ನಿಂತು ಸೆಲ್ಫಿ ತೆಗೆದುಕೊಳ್ಳಬಹುದು. ಸೋಮವಾರಪೇಟೆ ಇಲ್ಲಿನ ಮತ್ತೊಂದು ಅದ್ಭುತ ತಾಣ. ಬೀಳೂರು ಗಾಲ್ಫ್‌ ಕ್ಲಬ್‌ ಇರುವುದು ಇಲ್ಲಿಯೇ.

ಚೋಮಮಲೆ ಇಲ್ಲಿನ ಮತ್ತೊಂದು ಹಿಲ್‌ಸ್ಟೇಷನ್‌. ಈ ಮೂರು ಕೂರ್ಗ್‌ನಲ್ಲಿ  ನೋಡಲೇ ಬೇಕಾದ ಸ್ಥಳಗಳು. ಹಾಗೆಯೇ, ಹಾರಂಗಿ ಜಲಾಶಯದ ಸೊಬಗನ್ನೂ ಇಲ್ಲಿ ಕಣ್ತುಂಬಿ ಕೊಳ್ಳಬಹುದು. ಜಲಾಶಯದ ಬಳಿ ಸಂಗಾತಿಯೊಂದಿಗೆ ಮೋಜಿನಾಟದ ಖುಷಿ ಅನುಭವಿಸಬಹುದು. ನೆಹರೂ ಮಂಟಪ, ಕೋಟೆ ನೋಡದೆ ಬಂದರೆ ಅವರ ಹನಿಮೂನ್‌  ಪೂರ್ಣಗೊಳ್ಳುವುದಿಲ್ಲ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT