ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೇನು?

ಅಕ್ಷರ ಗಾತ್ರ

ಈ ಹಿಂದೆ ಕುದುರೆಮುಖದಲ್ಲಿ ಅದಿರು ಗಣಿಗಾರಿಕೆ ನಡೆದಿತ್ತು, ನಡೆಸಲೇಬೇಕಾಗಿತ್ತು, ನಡೆಯಿತು. ಪರಿಸರ ಸೂಕ್ಷ್ಮ ಪ್ರದೇಶವಾದ ಇಲ್ಲಿ ಅದಕ್ಕೂ ಒಂದು ಮಿತಿ ಇತ್ತು, ಗಣಿಗಾರಿಕೆ ನಿಲ್ಲಿಸಲಾಯಿತು, ನಿಲ್ಲಿಸಲೇಬೇಕಿತ್ತು. ಸರಿ, ಆದರೆ ಈ ಪ್ರಶ್ನೆ ಇಲ್ಲಿಗೇ ನಿಲ್ಲುವುದಿಲ್ಲ. ಗಣಿಗಾರಿಕೆ ನಡೆಸುವಾಗ ಕೆಐಒಸಿಎಲ್‌ ಕಂಪೆನಿಯು ಅಗತ್ಯವಾದ ಎಲ್ಲ ಮೂಲ ಸೌಲಭ್ಯಗಳನ್ನೂ ಒದಗಿಸಿಕೊಂಡಿತು. ಒದಗಿಸಿಕೊಳ್ಳಲೇಬೇಕಿತ್ತು. ಅದು ರಸ್ತೆ ಸಂಪರ್ಕ ಜಾಲವೇ ಇರಬಹುದು, ಕೊಳವೆ ಮಾರ್ಗ ಇರಬಹುದು, ಅಣೆಕಟ್ಟೆ ಇರಬಹುದು, ಅಂತೆಯೇ ತನ್ನ ಉದ್ಯೋಗಿಗಳಿಗಾಗಿ ಸುಸಜ್ಜಿತ ಪಟ್ಟಣವನ್ನೂ ನಿರ್ಮಿಸಿತು.

ಕಂಪೆನಿ ಕಾರ್ಯನಿರ್ವಹಿಸುತ್ತಿದ್ದಾಗ ಸುಂದರ ನಗರಿಯೊಂದರ ತುಣುಕೊಂದರಂತೆ ನಳನಳಿಸುತ್ತಿದ್ದ ಕುದುರೆಮುಖ ಟೌನ್‌ಶಿಪ್‌ ಈಗ ಪಾಳುಬಿದ್ದು ಹಾಳು ಹಂಪಿಯಂತೆ ಭೇಟಿ ಕೊಟ್ಟವರ ಮನಕಲಕುತ್ತಿದೆ. ಪಾಳುಬಿದ್ದ ಕಟ್ಟಡಗಳು, ಮುಚ್ಚಿದ ಪೆಟ್ರೊಲ್‌ ಬಂಕ್‌, ಕಿತ್ತುಹೋಗುತ್ತಿರುವ ರಸ್ತೆ, ಬಿಕೋ ಎನ್ನುವ ಬೀದಿಗಳು, ಎಲ್ಲಕ್ಕಿಂತ ಮಿಗಿಲಾಗಿ ನಿರ್ವಹಣೆ ಇಲ್ಲದೆ ಸೊರಗುತ್ತಿರುವ ‘ನಂದನವನ’ ಎಂಬ ಉದ್ಯಾನ.

ಕಂಪೆನಿ ಉಳಿಸಿಹೋಗಿರುವ ಕೆಲವೇ ಮಂದಿ ದಿನಗೂಲಿ ನೌಕರರು ಇದನ್ನು ನಿರ್ವಹಿಸಲು ಹೆಣಗಾಡುತ್ತಿದ್ದು ಅವರ ಬದುಕೂ ಸುತ್ತಲಿನ ಹಳ್ಳಿಗರ ಬದುಕಿನಂತೆಯೇ ಅತಂತ್ರವಾಗಿದೆ. ಅಂತೆಯೇ ಇದು ಅಭಯಾರಣ್ಯದ ನಡುವಿನ ಜನವಸತಿಯ ತುಣುಕು ಆಗಿರುವುದರಿಂದ ಇಲಾಖೆಯವರ ಕಾಟ ಬೇರೆ.

ಪಟ್ಟಣ ವಶಪಡಿಸಿಕೊಂಡು ನಾಶಪಡಿಸಿ ಅಲ್ಲಿ ಅರಣ್ಯ ಮರುಸ್ಥಾಪಿಸಲು ಇಲಾಖೆ ಹವಣಿಸುತ್ತಿದೆ. ಆ ಕಾರಣದಿಂದಲೋ ಏನೋ ಹಿಂದೆಂದೂ ಇರದಿದ್ದ ಆನೆಗಳ ಕಾಟವೂ ಈಗ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಇಲ್ಲಿ ಇರುವ ಮೂಲ ಸೌಕರ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ಬಳಸಿಕೊಂಡು ಇತಿಮಿತಿಗಳೊಂದಿಗೆ ಪ್ರವಾಸೋದ್ಯಮವನ್ನೋ, ಗುಡಿಕೈಗಾರಿಕೆ ಯನ್ನೋ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಅತಂತ್ರವಾಗಿ ಚದುರಿಹೋಗಿರುವ ಇಲ್ಲಿನ ಕಾರ್ಮಿಕರನ್ನೂ, ಗ್ರಾಮಸ್ಥರನ್ನೂ ಒಗ್ಗೂಡಿಸಿ ಉದ್ಯೋಗ ನೀಡಿ ಈ ಸುಂದರ ಪಟ್ಟಣವನ್ನು ಉಳಿಸಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT