ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮದರಂಗಿ!

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಸುಕು ಮಸುಕು ಬೆಳಕಿನ ಬಾರ್‌ನಲ್ಲಿ ಎರಡು ಮೇಜುಗಳು. ಒಂದನೇ ಮೇಜಿನ ಎದುರು ವ್ಯಕ್ತಿಯೊಬ್ಬನ ಪಕ್ಕದಲ್ಲಿ ಕುಳಿತು ಪಾನೀಯ ಹೀರುವುದರಲ್ಲಿ ತಲ್ಲೀನರಾದ ಲಲನೆಯರು. ಮತ್ತೊಂದು ಮೇಜಿನ ಸುತ್ತ ಕುಳಿತು, ಲಲನೆಯರತ್ತ ನೋಡಿ ಕಿಚಾಯಿಸುವಂತೆ ವರ್ತಿಸುವ ಪುರುಷರ ದಂಡು.

ಇದು ನಿಜವಾದ ಬಾರ್‌ನಲ್ಲಿ ಕಂಡ ದೃಶ್ಯ ಅಲ್ಲ. ರಾಮು ಎಂಟರ್‌ಪ್ರೈಸಸ್ ವತಿಯಿಂದ ನಿರ್ಮಾಣವಾಗುತ್ತಿತುವ ‘ಮುಂಬೈ’ ಚಿತ್ರದ ಚಿತ್ರೀಕರಣದ ಸೆಟ್‌ನಲ್ಲಿ ಕಂಡ ದೃಶ್ಯ. ಎಸ್.ಆರ್. ರಮೇಶ್ ನಿರ್ದೇಶನದ ‘ಮುಂಬೈ’ಗೆ ಬೆಂಗಳೂರಿನ ಹೊರವಲಯದಲ್ಲಿರುವ ಜಿಎನ್‌ಆರ್ ಸ್ಟುಡಿಯೊದಲ್ಲಿ ನಡೆಯುತ್ತಿರುವ ಚಿತ್ರೀಕರಣದ ಸಂದರ್ಭವದು. ಚಿಕ್ಕ ವಯಸ್ಸಿನಲ್ಲೇ ಕುಡಿತದ ಚಟಕ್ಕೆ ಬೀಳುವ ಹುಡುಗನಿಗೆ ನಾಯಕ ಬುದ್ಧಿವಾದ ಹೇಳುವ ದೃಶ್ಯದ ಚಿತ್ರೀಕರಣ ಅಲ್ಲಿ ನಡೆಯುತ್ತಿತ್ತು.

ಮುಂಬೈನಲ್ಲಿ ಬಿಚ್ಚಿಕೊಳ್ಳುವ ಕಥೆ; ಅಲ್ಲೇ ಬೆಳೆದು ಅಲ್ಲಿಯೇ ಕೊನೆಗೊಳ್ಳಲಿದೆ. ನಡುನಡುವೆ ಬೆಂಗಳೂರಿನ ಪ್ರಸಂಗಗಳೂ ಬರಲಿವೆ. ಶೇ ೬೦ರಷ್ಟು ಮುಂಬೈನಲ್ಲಿ ಹಾಗೂ ಉಳಿದ ಭಾಗ ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಮುಂಬೈನ ಹಿನ್ನೆಲೆ ಹೆಚ್ಚಿರುವುದರಿಂದಲೇ ಶೀರ್ಷಿಕೆ ಕೂಡ ‘ಮುಂಬೈ’ ಎಂದೇ ಇಡಲಾಗಿದೆ.

‘ಬೆಂಗಳೂರಿನ ಬಾರ್‌ ಒಂದರಲ್ಲಿ ಕೆಲಸ ಮಾಡುವ ನಾಯಕನಿಗೆ ಪ್ರೇಮಾಂಕುರವಾಗುತ್ತದೆ. ಆದರೆ ಆತ ಅನಿವಾರ್ಯವಾಗಿ ಮುಂಬೈಗೆ ಹೋಗಬೇಕಾಗುತ್ತದೆ. ಅಲ್ಲಿ ಅವನ ಜೀವನದಲ್ಲಿ ಏನೆಲ್ಲ ನಡೆಯುತ್ತದೆ ಎಂಬುದೇ ಚಿತ್ರದ ಕಥೆ. ಸಿನಿಮಾದಲ್ಲಿ ಸಾಕಷ್ಟು ಹಿಂದಿ ಡೈಲಾಗ್‌ಗಳು ಇರಲಿವೆ. ಇದು ಪಕ್ಕಾ ಆ್ಯಾಕ್ಷನ್ ಓರಿಯೆಂಟೆಡ್ ಚಿತ್ರ’ ಎಂದರು ನಿರ್ದೇಶಕ ರಮೇಶ್.

ಮದರಂಗಿ ಕೃಷ್ಣ ‘ಮುಂಬೈ’ ಚಿತ್ರದ ನಾಯಕ, ಚಿಂಗಾರಿಯಲ್ಲಿ ಸಹಪಾತ್ರಧಾರಿಯಾಗಿದ್ದ ತೇಜುಶ್ರೀ ನಾಯಕಿ. ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ತೇಜುಶ್ರೀಯನ್ನು ಚಿತ್ರಕ್ಕೆ ಒಪ್ಪಿಸುವುದೇ ನಿರ್ಮಾಪಕ ರಾಮು ಅವರಿಗೆ ಸಾಹಸದ ಕೆಲಸವಾಗಿತ್ತಂತೆ. ಇದುವರೆಗೆ ಮಾಧುರ್‍ಯ ಪ್ರಧಾನ ಗೀತೆಗಳನ್ನೇ ಹೆಚ್ಚು ನೀಡುತ್ತಿದ್ದ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರ ಬತ್ತಳಿಕೆಯಿಂದ ಬರಲಿರುವ ಮಾಸ್ ಹಾಡುಗಳನ್ನು ಈ ಚಿತ್ರದ ಮೂಲಕ ಕೇಳಬಹುದಾಗಿದೆ.

ಡ್ಯಾನಿ ಮಾಸ್ಟರ್ ಆ್ಯಕ್ಷನ್ ದೃಶ್ಯಗಳನ್ನು ನಿರ್ದೇಶಿಸಲಿದ್ದಾರೆ. ಮಲ್ಲಿಕಾರ್ಜುನ್ ಅವರ ಸಂಭಾಷಣೆ ರಸಗವಳದಂತೆ ಮನರಂಜಿಸುವ ನಿರೀಕ್ಷೆ ನಿರ್ದೇಶಕರದ್ದು. ಆಶೀಷ್ ವಿದ್ಯಾರ್ಥಿ, ರಂಗಾಯಣ ರಘು, ಬುಲೆಟ್ ಪ್ರಕಾಶ್, ಕೋಟೆ ಪ್ರಭಾಕರ್, ಸ್ವಯಂವರ ಚಂದ್ರು ಹೀಗೆ ನಟರ ದಂಡೇ ಚಿತ್ರದಲ್ಲಿದೆ. ಜಯಂತ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಎಸ್‌.ಆರ್. ರಮೇಶ್, ಸಂತೋಷ್ ಅವರ ಲೇಖನಿಯಿಂದ ಗೀತೆಗಳು ಮೂಡಿಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT