ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಅಭಿವ್ಯಕ್ತಿಗೆ ಎಂಟು ಕಂಟಕ

ಚಿಂತನೆಗೆ ಲಗಾಮು
Last Updated 14 ಆಗಸ್ಟ್ 2016, 18:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಕ್ಕೆ ಏನಾದರೂ ಅರ್ಥ ಇದೆ ಎಂದಾದರೆ ಅದು ಜನರು ಏನನ್ನು ಕೇಳಲು ಬಯಸುವುದಿಲ್ಲವೋ ಅದನ್ನು ಹೇಳುವ ಹಕ್ಕು.
-ಜಾರ್ಜ್ ಆರ್ವೆಲ್


ಭಾರತ 50-50 ಪ್ರಜಾತಂತ್ರ ಎಂದು ಕೆಲವು ವರ್ಷಗಳ ಹಿಂದೆ ನಾನು ಬಣ್ಣಿಸಿದ್ದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಜನರ ಮುಕ್ತ ಚಲನೆಯ ಅವಕಾಶಗಳಂತಹ ವಿಚಾರಗಳಲ್ಲಿ ಭಾರತ ಪ್ರಜಾತಾಂತ್ರಿಕವಾಗಿದೆ.

ಆದರೆ ಅಪರಾಧ ನ್ಯಾಯ ವ್ಯವಸ್ಥೆ ಬಹುತೇಕ ಕುಸಿದು ಬಿದ್ದಿದೆ ಮತ್ತು ಭಾರಿ ಪ್ರಮಾಣದ ರಾಜಕೀಯ ಭ್ರಷ್ಟಾಚಾರವನ್ನು ತೊಡೆದು ಹಾಕುವ ಸಾಮರ್ಥ್ಯವೇ ಇಲ್ಲ- ಇಂತಹ ವಿಚಾರಗಳಲ್ಲಿ ಭಾರತ ಆಂಶಿಕವಾಗಿ ಮಾತ್ರ ಪ್ರಜಾತಾಂತ್ರಿಕ.

ಪ್ರಜಾತಂತ್ರದ ಕೊರತೆ ಗಣನೀಯವಾಗಿರುವ ಒಂದು ಕ್ಷೇತ್ರ ಅಭಿವ್ಯಕ್ತಿ ಸ್ವಾತಂತ್ರ್ಯ. ಈ ದೇಶದಲ್ಲಿ ಬರಹಗಾರರು, ಕಲಾವಿದರು ಮತ್ತು ಸಿನಿಮಾ ನಿರ್ದೇಶಕರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂಬುದಕ್ಕೆ ಮಿತಿಗಳಿವೆ. ವಾಕ್ ಸ್ವಾತಂತ್ರ್ಯದ ಈ ಮಿತಿಗಳನ್ನು ವಿದ್ವಾಂಸರು ಮತ್ತು ಹೋರಾಟಗಾರರು ವಿಶ್ಲೇಷಿಸಿದ್ದಾರೆ ಮತ್ತು ಆ ಬಗ್ಗೆ ಮರುಗಿದ್ದಾರೆ. ಕಾನೂನಿನ ಕಣ್ಣಿನಿಂದಲೂ ಇಂತಹ ವಿಶ್ಲೇಷಣೆಗಳು ನಡೆದಿವೆ (ಗೌತಮ್ ಭಾಟಿಯಾ ಅವರ ‘ಅಫೆಂಡ್, ಶಾಕ್ ಆರ್ ಡಿಸ್ಟರ್ಬ್’ ಎಂಬ ಇತ್ತೀಚಿನ ಅಧ್ಯಯನವೂ ಇದರಲ್ಲಿ ಸೇರಿದೆ). ಈ ಪ್ರಬಂಧವು ಕಾನೂನಿನಿಂದ ಆರಂಭಗೊಂಡು, ಸಮಸ್ಯೆಯ ವಿಸ್ತೃತ ಸಾಮಾಜಿಕ ಆಯಾಮಗಳನ್ನು ಶೋಧಿಸುತ್ತದೆ. ಅಸಮರ್ಪಕ ಕಾನೂನುಗಳು ಮಾತ್ರವಲ್ಲ, ಸಾಮಾಜಿಕ ಶಕ್ತಿಗಳು, ಸೈದ್ಧಾಂತಿಕ ಪೂರ್ವಗ್ರಹಗಳು ಮತ್ತು ರಾಜಕೀಯ ಆಯ್ಕೆಗಳ ನಡುವಣ ಪರಸ್ಪರ ಹೆಣೆದುಕೊಳ್ಳುವಿಕೆ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತಡೆ ಒಡ್ಡಿವೆ.
ನನಗೆ ಗೊತ್ತಿರುವ ಪ್ರಕಾರ, ವಾಕ್ ಸ್ವಾತಂತ್ರ್ಯದ ನೈತಿಕ ಮತ್ತು ರಾಜಕೀಯ ಮಹತ್ವದ ಬಗ್ಗೆ ಮೊದಲ ಬಾರಿ ಪರಿಣಾಮಕಾರಿಯಾಗಿ ಬರೆದಾತ ಬರೂಚ್ ಸ್ಪಿನೋಜ. 1670ರಲ್ಲಿ ಅವರು ತಮ್ಮ ‘ಥಿಯೊಲಾಜಿಕಲ್-ಪೊಲಿಟಿಕಲ್ ಟ್ರೀಟೈಸ್‌’ನಲ್ಲಿ ಇದನ್ನು ವಿವರಿಸುತ್ತಾರೆ. ಸ್ಪಿನೋಜ ಹೀಗೆ ಹೇಳುತ್ತಾರೆ: ‘ಯಾವುದೇ ಒಬ್ಬ ವ್ಯಕ್ತಿ ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಚಿಂತಿಸುವ ಮತ್ತು ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ಸಹಜ ಹಕ್ಕು ಅಥವಾ ಸಾಮರ್ಥ್ಯವನ್ನು ಮತ್ತೊಬ್ಬ ವ್ಯಕ್ತಿಗೆ ವರ್ಗಾಯಿಸುವುದಕ್ಕೆ ಸಾಧ್ಯವಿಲ್ಲ ಮತ್ತು ಹಾಗೆ ಮಾಡುವಂತೆ ಆ ವ್ಯಕ್ತಿಯ ಒತ್ತಡಕ್ಕೆ ಒಳಗಾಗುವುದಕ್ಕೂ ಸಾಧ್ಯವಿಲ್ಲ. ಹಾಗಾಗಿಯೇ, ಮನಸನ್ನು ನಿಯಂತ್ರಿಸಲು ಬಯಸುವ ಸರ್ಕಾರವನ್ನು ದಮನಕಾರಿ ಎಂದು ಪರಿಗಣಿಸಲಾಗುತ್ತದೆ...’ ಅವರು ಹೀಗೆ ಮುಂದುವರಿಸುತ್ತಾರೆ: ‘ತಾವು ಚಿಂತಿಸುವುದನ್ನು ಮಾತನಾಡಲು ಮತ್ತು ಸಂವಹನ ನಡೆಸಲು ಜನರಿಗೆ ಅವಕಾಶ ನಿರಾಕರಿಸುವ ಸರ್ಕಾರ ಅತ್ಯಂತ ಹಿಂಸಾತ್ಮಕ ಸರ್ಕಾರವಾದರೆ, ಪ್ರತಿಯೊಬ್ಬರಿಗೂ ಈ ಸ್ವಾತಂತ್ರ್ಯವನ್ನು ನೀಡುವ ಸರ್ಕಾರ ಸೌಮ್ಯವಾದಿ ಸರ್ಕಾರವಾಗುತ್ತದೆ’.
ಇದು ಮನಮುಟ್ಟುವಂತಹ ಮತ್ತು ಅತ್ಯಂತ ಪ್ರಸ್ತುತವಾದ ವಾದ. ಆದರೆ ನಾವೊಂದು ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು: ವಾಕ್ ಸ್ವಾತಂತ್ರ್ಯಕ್ಕೆ ಸಮರ್ಥನೀಯವಾದ ಅಥವಾ ನ್ಯಾಯಯುತವಾದ ಮಿತಿಗಳಿವೆಯೇ? ಅಥವಾ, ಜನರು ತಮಗೆ ಬೇಕಾದ್ದನ್ನು ಹೇಳುವುದಕ್ಕೆ ಅವಕಾಶ ನೀಡಬೇಕೇ? ಹಾಗಾದರೆ, ದ್ವೇಷ ಭಾಷಣವನ್ನು ಏನು ಮಾಡಬೇಕು? ಜರ್ಮನಿಯ ಹಿಟ್ಲರ್‌ನ ಆರಾಧಕರ ಬಗ್ಗೆ ಏನು ಹೇಳಬೇಕು? ಭಾರತದಲ್ಲಿ ನಾಥೂರಾಮ್ ಗೋಡ್ಸೆಯ ಆರಾಧಕರ ಬಗ್ಗೆ ಏನು ಹೇಳುವುದು?
ಸ್ಪಿನೋಜ ಕೂಡ ಈ ಎಲ್ಲ ವಿಚಾರಗಳ ಬಗ್ಗೆ ಚಿಂತಿಸಿದ್ದರು. ನಾನು ಈಗಾಗಲೇ ಉಲ್ಲೇಖಿಸಿರುವ ಅವರ 1670ರ ಪುಸ್ತಕದಲ್ಲಿ, ಸರ್ಕಾರವು ಜನರಿಗೆ ಮುಕ್ತ ಅಭಿವ್ಯಕ್ತಿಯ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ. ಆದರೆ, ‘ಯಾವುದೇ ನಿರ್ಬಂಧ ಇಲ್ಲದ ವಾಕ್ ಸ್ವಾತಂತ್ರ್ಯವನ್ನು ಜನರಿಗೆ ನೀಡುವುದು ಅತ್ಯಂತ ಅಪಾಯಕಾರಿ. ಈ ಕಾರಣದಿಂದಲೇ ಸರ್ಕಾರದ ಸ್ಥಿರತೆಗೆ ಪೂರಕವಾದ ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಾವ ಪ್ರಮಾಣದಲ್ಲಿ ಈ ಸ್ವಾತಂತ್ರ್ಯವನ್ನು ನೀಡಬಹುದು ಮತ್ತು ನೀಡಬೇಕು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕು’. ಹೀಗೆ ಸ್ಪಿನೋಜ ಒಬ್ಬ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳನ್ನು ಗುರುತಿಸುತ್ತಾರೆ. ಉದಾಹರಣೆಗೆ, ಒಂದು ಭಾಷಣ, ಪುಸ್ತಕ, ಕಲಾಕೃತಿ ಅಥವಾ ಸಿನಿಮಾ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ, ರಕ್ತಪಾತಕ್ಕೆ ಮತ್ತು ಅರಾಜಕತೆಗೆ ಕಾರಣವಾಗಬಹುದು ಅಥವಾ ಪ್ರಚೋದನೆ ನೀಡಬಹುದು ಎಂದಾದರೆ, ಆ ಮೂಲಕ ಅದು ದೇಶದ ಉಳಿವು ಅಥವಾ ಏಕತೆಗೆ ಬೆದರಿಕೆ ಒಡ್ಡಬಹುದು ಎಂದಾದರೆ ಬಹುಶಃ ಅದನ್ನು ಮುಕ್ತವಾಗಿ ಪ್ರಸಾರ ಮಾಡಲು ಅವಕಾಶ ನೀಡಬಾರದು.
ಅಭಿವ್ಯಕ್ತಿ ಸ್ವಾತಂತ್ರ್ಯದ  ಮಿತಿಯ ಬಗ್ಗೆ ಸ್ಪಿನೋಜ ಅವರ ನಿಲುವುಗಳನ್ನು ಈ ಬಗ್ಗೆ ಮಹಾತ್ಮ ಗಾಂಧಿ ಹೊಂದಿದ್ದ ನಿಲುವುಗಳ ಜತೆ ಹೋಲಿಸಿ ನೋಡೋಣ.  1910ರಲ್ಲಿ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಲ್ಲಿದ್ದಾಗಲೇ ತಮ್ಮ ‘ಹಿಂದ್ ಸ್ವರಾಜ್’ ಪುಸ್ತಕ ಪ್ರಕಟಿಸಿದ್ದರು. ಮೂಲ ಗುಜರಾತಿ ಆವೃತ್ತಿಯನ್ನು ನತಾಲ್‌ನ ಫೀನಿಕ್ಸ್ ಸೆಟಲ್‌ಮೆಂಟ್ ಪ್ರಕಟಿಸಿತ್ತು. ಪುಸ್ತಕವನ್ನು ಕೆಲವರು ಭಾರತಕ್ಕೆ ಆಮದು ಮಾಡಿಕೊಳ್ಳಲು ಬಯಸಿದಾಗ ಬ್ರಿಟಿಷ್ ಇಂಡಿಯಾದ ಸರ್ಕಾರ ಪ್ರತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತು. ಅವರು ಓದಬಹುದಾದ ಭಾಷೆಗೆ (ಇಂಗ್ಲಿಷ್) ಪುಸ್ತಕವನ್ನು ಅನುವಾದ ಮಾಡಿದ ನಂತರ, ಪುಸ್ತಕವು ‘ಸ್ಪಷ್ಟವಾಗಿ ದೇಶದ್ರೋಹ’ ಎಂದು ಪರಿಗಣಿಸಿದ ಸರ್ಕಾರದ ಮುಖಂಡರು ಅದನ್ನು ನಿಷೇಧಿಸಿದರು.
ನಿಷೇಧದ ಬಗ್ಗೆ ತಿಳಿದಾಗ ಗಾಂಧಿ ಅವರು ಸರ್ಕಾರಕ್ಕೆ ಸುದೀರ್ಘವಾದ ಪತ್ರವೊಂದನ್ನು ಬರೆದು, ಇತರ ಎಲ್ಲ ಅಂಶಗಳ ಜತೆಗೆ ಇದು ಅಹಿಂಸೆಯ ಪ್ರತಿಪಾದನೆಯೂ ಹೌದು ಎಂದು ವಿವರಿಸಿದರು. (ಈ ಪತ್ರ ಗಾಂಧಿಯ ಕೃತಿ ಸಂಗ್ರಹದಲ್ಲಿ ಇಲ್ಲ. ಭಾರತದ ರಾಷ್ಟ್ರೀಯ ಪತ್ರಾಗಾರದಲ್ಲಿ ಇದೆ ಎಂಬ ಮಾಹಿತಿ ನೀಡಿದವರು ಇತಿಹಾಸಕಾರ ಎಸ್.ಆರ್. ಮೆಹ್ರೋತ್ರಾ). ‘ಪ್ರತಿ ವ್ಯಕ್ತಿಗೂ ಆತ ಆಯ್ಕೆ ಮಾಡಿಕೊಳ್ಳುವ ಅಭಿಪ್ರಾಯವನ್ನು ಹೊಂದುವ ಹಕ್ಕು ಇದೆ ಮತ್ತು ಅದರ ಅನುಷ್ಠಾನದಿಂದ ಎಲ್ಲಿವರೆಗೆ ಇತರರ ಮೇಲೆ ದೈಹಿಕ ಹಿಂಸೆ ಆಗುವುದಿಲ್ಲವೋ ಅಲ್ಲಿವರೆಗೆ ಅದನ್ನು ಅನುಷ್ಠಾನಗೊಳಿಸುವ ಹಕ್ಕು ಇದೆ ಎಂಬುದು ನನ್ನ ವಿನೀತವಾದ ಅಭಿಪ್ರಾಯ’ ಎಂದು ಗಾಂಧಿ ಪತ್ರದಲ್ಲಿ ಬರೆದಿದ್ದರು.
ಪ್ರಜಾಸತ್ತಾತ್ಮಕ ಸರ್ಕಾರವೊಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಯಾವ ಮಿತಿಗಳನ್ನು ಹೇರಬೇಕು ಎಂಬುದರ ವ್ಯಾಖ್ಯೆಯಾಗಿ ಈ ಹೇಳಿಕೆಯನ್ನು ಸ್ವಲ್ಪ ಬದಲಾವಣೆಯ ಜತೆಗೆ ಬಳಸಿಕೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ. ನಾವು ಲಿಂಗತ್ವ ಪೂರ್ವಗ್ರಹದ ಗಾಂಧಿಯ ಭಾಷೆಯಿಂದ ಆಚೆಗೆ ಚಿಂತಿಸಬೇಕು; ‘ಹಿಂಸೆ ಆಗುವುದಿಲ್ಲವೋ’ ಎಂಬುದಕ್ಕೆ ‘ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ’ ಎಂಬ ಅರ್ಥವನ್ನೂ ಗಾಂಧಿ ಧ್ವನಿಸಿದ್ದರು ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಹಾಗಾಗಿ ನಾವು ಹೀಗೆ ಹೇಳಬಹುದು: ‘ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಅವರು ಆಯ್ಕೆ ಮಾಡಿಕೊಳ್ಳುವ ಅಭಿಪ್ರಾಯವನ್ನು ಹೊಂದುವ ಹಕ್ಕು ಹೊಂದಿದ್ದು, ಅದು ಇತರರಿಗೆ ಎಲ್ಲಿವರೆಗೆ ದೈಹಿಕ ಹಿಂಸೆ ಉಂಟು ಮಾಡುವುದಿಲ್ಲ ಅಥವಾ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲವೋ ಅಲ್ಲಿವರೆಗೆ ಅದರ ಅನುಷ್ಠಾನದ ಹಕ್ಕನ್ನೂ ಹೊಂದಿರುತ್ತಾರೆ’.
ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡೇ ಸಮಕಾಲೀನ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಎಂಟು ಪ್ರಮುಖ ಬೆದರಿಕೆಗಳನ್ನು ವಿಶ್ಲೇಷಿಸೋಣ.


––––
1 ಪುರಾತನ ವಸಾಹತು ಕಾನೂನು
ಪುರಾತನ ವಸಾಹತು ಕಾಲದ ಕಾನೂನನ್ನು ಉಳಿಸಿಕೊಂಡಿರುವುದು ಮೊದಲ ಬೆದರಿಕೆ. ಕಲಾಕೃತಿ, ಸಿನಿಮಾಗಳು ಮತ್ತು ಪುಸ್ತಕಗಳನ್ನು ನಿಷೇಧಿಸಲು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳನ್ನು ವ್ಯಾಪಕವಾಗಿ ಬಳಕೆ (ಮತ್ತು ದುರ್ಬಳಕೆ) ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಸೆಕ್ಷನ್ 153 (‘ಗಲಭೆ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನೆ ನೀಡುವುದು’); ಸೆಕ್ಷನ್ 153ಎ (‘ಧರ್ಮ, ಜನಾಂಗ, ಹುಟ್ಟಿದ ಪ್ರದೇಶ, ನಿವಾಸ, ಭಾಷೆ ಇತ್ಯಾದಿ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ಶತ್ರುತ್ವಕ್ಕೆ ಪ್ರೋತ್ಸಾಹ ನೀಡುವುದು ಮತ್ತು ಸೌಹಾರ್ದದ ವಿರುದ್ಧ ಪೂರ್ವಗ್ರಹಪೀಡಿತ ಕೃತ್ಯಗಳು’); ಸೆಕ್ಷನ್ 295 (‘ಯಾವುದೇ ಧರ್ಮಕ್ಕೆ ಅವಮಾನ ಮಾಡುವ ಉದ್ದೇಶದಿಂದ ಧಾರ್ಮಿಕ ಸ್ಥಳವೊಂದನ್ನು ಹಾನಿಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು’); ಸೆಕ್ಷನ್ 295ಎ (‘ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲು ಉದ್ದೇಶಪೂರ್ವಕ ದುಷ್ಕೃತ್ಯ ಎಸಗುವುದು’); ಸೆಕ್ಷನ್ 298 (‘ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳಿಗೆ ಗಾಸಿಗೊಳಿಸಲು ಉದ್ದೇಶಪೂರ್ವಕವಾಗಿ ಏನನ್ನಾದರೂ ಹೇಳುವುದು’); ಸೆಕ್ಷನ್ 499 ಮತ್ತು 500- ವ್ಯಕ್ತಿಯೊಬ್ಬರ ‘ಹೆಸರು’ ಕೆಡಿಸುವುದಕ್ಕಾಗಿ ಮಾನನಷ್ಟ ಉಂಟು ಮಾಡುವುದು ಅಥವಾ ಹಾನಿ ಮಾಡುವುದು; ಸೆಕ್ಷನ್ 505 (‘ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು’); ಮತ್ತು ಅತಿ ಹೆಚ್ಚು ಅಪಾಯಕಾರಿಯಾದ ಸೆಕ್ಷನ್ 124ಎ, ದೇಶದ್ರೋಹದ ಸೆಕ್ಷನ್ (‘ಲಿಖಿತ ಅಥವಾ ಮೌಖಿಕ ಪದಗಳು, ಅಥವಾ ಸಂಕೇತಗಳು, ಅಥವಾ ಯಾವುದೇ ದೃಶ್ಯ ಅಥವಾ ಇತರ ಕೃತ್ಯಗಳ ಮೂಲಕ ಭಾರತದ ಕಾನೂನು ಪ್ರಕಾರ ಸ್ಥಾಪಿತವಾದ ಸರ್ಕಾರದ ವಿರುದ್ಧ ದ್ವೇಷ ಅಥವಾ ಅವಹೇಳನ ಅಥವಾ ಅಸಮಾಧಾನ ಉಂಟು ಮಾಡಲು ಯತ್ನಿಸುವುದಕ್ಕೆ ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಬಹುದು’).
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಹೇರಲು ಈ ಎಲ್ಲ ಸೆಕ್ಷನ್‌ಗಳು ನ್ಯಾಯಾಲಯಗಳಿಗೆ ಮತ್ತು ಸರ್ಕಾರಕ್ಕೆ ವ್ಯಾಪಕ ಅವಕಾಶಗಳನ್ನು ನೀಡುತ್ತವೆ. ವ್ಯಂಗ್ಯ ಏನೆಂದರೆ, ಈ ಎಲ್ಲ ಸೆಕ್ಷನ್‌ಗಳು ಇರುವ ಭಾರತೀಯ ದಂಡ ಸಂಹಿತೆಯನ್ನು ರಚಿಸಿದವನು ಥಾಮಸ್ ಬಾಬಿಂಗ್ಟನ್ ಮೆಕಾಲೆ. ಭಾರತದಲ್ಲಿ ಇಂಗ್ಲಿಷ್ ಭಾಷಾ ವಿದ್ಯಾಭ್ಯಾಸಕ್ಕೆ ಪ್ರೇರಣೆ ನೀಡಿದವನು ಕೂಡ ಇದೇ ಮೆಕಾಲೆ. ಸಾಮ್ರಾಜ್ಯವಾದಿ ಎಂಬ ಕಾರಣಕ್ಕೆ ಎಡಪಂಥೀಯ ದೇಶಭಕ್ತರಿಗೆ ಮೆಕಾಲೆ ಇಷ್ಟವಾಗುವುದಿಲ್ಲ; ಇಂಗ್ಲಿಷನ್ನು ಪ್ರೋತ್ಸಾಹಿಸುವ ಭರದಲ್ಲಿ ದೇಶಿ ಬೌದ್ಧಿಕ ಮತ್ತು ಸಾಹಿತ್ಯ ಪರಂಪರೆಯ ಬಗ್ಗೆ ಮೆಕಾಲೆಗೆ ಅಸಡ್ಡೆ ಇತ್ತು ಎಂಬ ಕಾರಣಕ್ಕೆ ಬಲಪಂಥೀಯ ದೇಶಭಕ್ತರು ಆತನನ್ನು ವಿರೋಧಿಸುತ್ತಾರೆ. ಇತರರಿಂದ ಬೇರ್ಪಟ್ಟು ಅನುಕೂಲಕರ ಸ್ಥಿತಿಯಲ್ಲಿರುವ, ಮುಖ್ಯವಾಗಿ ಇಂಗ್ಲಿಷ್‌ನಲ್ಲಿ ಬರೆಯುವ ಮತ್ತು ಪಾಶ್ಚಾತ್ಯ ಚಿಂತನೆ ಮತ್ತು ಪ್ರಭಾವಗಳಿಗೆ ಮುಕ್ತರಾಗಿರುವ ಚಿಂತಕರನ್ನು ಬಣ್ಣಿಸಲು ‘ಮೆಕಾಲೆ ಪುತ್ರ’ ಎಂಬ ನುಡಿಯನ್ನು ಕೂಡ ಹಿಂದುತ್ವ ಪ್ರತಿಪಾದಕರು ರೂಪಿಸಿದ್ದರು.
ಭಾರತದ ಎಡ ಮತ್ತು ಬಲಗಳೆರಡೂ ಮೆಕಾಲೆಯನ್ನು ವಿರೋಧಿಸುತ್ತವೆ. ಹಾಗಿದ್ದರೂ ಮೆಕಾಲೆ ರೂಪಿಸಿದ ಭಾರತೀಯ ದಂಡ ಸಂಹಿತೆಯನ್ನು ಸಿಪಿಎಂ ಮತ್ತು ಬಿಜೆಪಿಗಳೆರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದಾಗ, ಮತ್ತು ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಅತ್ಯುತ್ಸಾಹದಿಂದ ಬಳಸಿವೆ.
ಕಾಂಗ್ರೆಸ್ ಪಕ್ಷದ ಸರ್ಕಾರಗಳು ಕೂಡ ಐಪಿಸಿಯ ಈ ಸೆಕ್ಷನ್‌ಗಳನ್ನು ವ್ಯಾಪಕವಾಗಿ ಬಳಸಿಕೊಂಡಿವೆ. ಮಹಾತ್ಮ ಗಾಂಧಿ ಬಗ್ಗೆ ಗೌರವ ಇದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ ಮತ್ತು ಗಾಂಧಿ ಜೀವನಪರ್ಯಂತ ಕಾಂಗ್ರೆಸಿಗನಾಗಿಯೇ ಇದ್ದರು. ಅಸಲಿ ಅಥವಾ ಅತಿ ಶ್ರೇಷ್ಠ ಗಾಂಧಿ ಐಪಿಸಿಯ ದೇಶದ್ರೋಹ ವಿಧಿಯ ಸಂತ್ರಸ್ತರಾಗಿದ್ದರು ಎಂಬುದನ್ನು ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಕಾಂಗ್ರೆಸ್‌ಗೆ ಯಾರಾದರು ನೆನಪಿಸಬೇಕಿದೆ. 1910ರಲ್ಲಿ ಗಾಂಧೀಜಿ ಪುಸ್ತಕ ‘ಹಿಂದ್ ಸ್ವರಾಜ್’ ಹೇಗೆ ನಿಷೇಧಕ್ಕೊಳಗಾಯಿತು ಎಂಬುದನ್ನು ನಾನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಹನ್ನೆರಡು ವರ್ಷಗಳ ಬಳಿಕ, ಗಾಂಧಿ ಭಾರತಕ್ಕೆ ಹಿಂದಿರುಗಿದ ನಂತರ ಅವರು ಆರಂಭಿಸಿದ ಅಸಹಕಾರ ಚಳವಳಿಗೆ ಭಾರಿ ಜನಬೆಂಬಲ ವ್ಯಕ್ತವಾದಾಗ ಅವರನ್ನು ಬಂಧಿಸಲಾಯಿತು. ಈ ಜನ ಬೆಂಬಲದಿಂದ ಎದೆಗುಂದಿದ ಬ್ರಿಟಿಷರು ಗಾಂಧಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಲು ನಿರ್ಧರಿಸಿದರು. ‘ಯಂಗ್ ಇಂಡಿಯಾ' ನಿಯತಕಾಲಿಕದಲ್ಲಿ ಗಾಂಧಿ ಪ್ರಕಟಿಸಿದ ಲೇಖನಗಳಿಗಾಗಿ ಅವರ ವಿರುದ್ಧ ಐಪಿಸಿಯ 124ಎ ಸೆಕ್ಷನ್ ಅಡಿಯಲ್ಲಿ ‘ದೇಶದ್ರೋಹ’ ಪ್ರಕರಣ ದಾಖಲಿಸಲಾಯಿತು.
ಸರ್ಕಾರದ ನೀತಿಯ ಬಗ್ಗೆ ವಿಮರ್ಶಾತ್ಮಕ ಲೇಖನ ಬರೆದು ಬ್ರಿಟಿಷರಿಂದ ಜೈಲಿಗೆ ತಳ್ಳಿಸಿಕೊಂಡ ಮೊದಲ ವ್ಯಕ್ತಿಯೇನೂ ಅಲ್ಲ ಗಾಂಧಿ (ಅವರು ಕೊನೆಯವರೂ ಅಲ್ಲ). ಪ್ರಜಾಪ್ರಭುತ್ವ ಮತ್ತು ಮುಕ್ತ ಸರ್ಕಾರದಲ್ಲಿ ಈ ಕಾನೂನುಗಳಿಗೆ ಯಾವುದೇ ಅವಕಾಶ ಇಲ್ಲದಿರುವುದರಿಂದ ಸ್ವಾತಂತ್ರ್ಯಾನಂತರ ಈ ಕಾನೂನುಗಳು ರದ್ದಾಗುತ್ತವೆ ಎಂದು ಗಾಂಧಿ ಭಾವಿಸಿದ್ದರು. 1929ರಲ್ಲಿ ಗಾಂಧಿ ಅವರು ‘ಯಂಗ್ ಇಂಡಿಯಾ’ದಲ್ಲಿ ಸಂಚಲನ ಮೂಡಿಸುವಂತಹ ಸಂಪಾದಕೀಯ ಬರೆದು 124ಎ ಸೆಕ್ಷನ್ ರದ್ದತಿಗಾಗಿ ದೇಶವ್ಯಾಪಿ ಚಳವಳಿಗೆ ಕರೆ ನೀಡಿದ್ದರು. ‘ಈ ಸೆಕ್ಷನ್ ‘ಕಾನೂನು’ ಎಂಬ ಪದದ ಮೇಲೆ ಎಸಗಿದ ಅತ್ಯಾಚಾರ’ ಎಂದು ಹೇಳಿದ್ದ ಗಾಂಧಿ, ‘ನಾವು ಹಬ್ಬದ ಸಂಭ್ರಮದಲ್ಲಿರಲಿ, ಉಪವಾಸ ಮಾಡುತ್ತಿರಲಿ’ ಈ ಸೆಕ್ಷನ್ ತಲೆ ಮೇಲೆ ತೂಗುತ್ತಿರುತ್ತದೆ ಎಂದು ಬಣ್ಣಿಸಿದ್ದರು.
124ಎ ಸೆಕ್ಷನನ್ನು ‘ಖಡ್ಗದ ಬಲದಿಂದ ಸ್ಥಾಪಿಸಲಾಗಿದೆ, ನಿರಂಕುಶ ಆಡಳಿತಗಾರರ ಇಚ್ಛೆಗೆ ಅನುಸಾರ ನಮ್ಮ ಮೇಲೆ ಎರಗಲು ಸನ್ನದ್ಧವಾಗಿ ಇದನ್ನು ಇರಿಸಲಾಗಿದೆ. ಈ ಆಡಳಿತಗಾರರ ನೇಮಕದಲ್ಲಿ ಜನರ ಪಾತ್ರವೇ ಇಲ್ಲ’ ಎಂದು ಗಾಂಧಿ ವಿವರಿಸಿದ್ದರು. ‘ಈ ಕಾಯ್ದೆ ಮತ್ತು ಇಂತಹ ಇತರ ಕಾಯ್ದೆಗಳನ್ನು ರದ್ದು ಮಾಡುವುದು ಎಂದರೆ ಈಗ ಇರುವ ಸರ್ಕಾರದ ವ್ಯವಸ್ಥೆಯನ್ನು ರದ್ದುಪಡಿಸಿ ಸ್ವರಾಜ್ಯವನ್ನು ಪಡೆಯುವುದು. ಹಾಗಾಗಿ, ಈ ಸೆಕ್ಷನನ್ನು ರದ್ದುಪಡಿಸಲು ಬೇಕಾದ ಶಕ್ತಿ ಎಂದರೆ, ಸ್ವರಾಜ್ಯವನ್ನು ಪಡೆಯಲು ಬೇಕಿರುವ ಶಕ್ತಿ’ ಎಂದು ಗಾಂಧಿ ಹೇಳಿದ್ದರು.
ದುರಂತ ಎಂದರೆ, 1947ರ  ಆಗಸ್ಟ್‌ನಲ್ಲಿ ಭಾರತ ಸ್ವತಂತ್ರಗೊಂಡ ನಂತರ 124ಎ ಮತ್ತು ಇಂತಹ ಇತರ ಸೆಕ್ಷನ್‌ಗಳನ್ನು ನಾವು ಉಳಿಸಿಕೊಂಡದ್ದು ಮಾತ್ರವಲ್ಲದೆ, ಅವನ್ನು ಇನ್ನಷ್ಟು ಬಲಪಡಿಸಿದೆವು. ಏನೇ ಆದರೂ ಇದು ಹೀಗೆಯೇ ಆಗುತ್ತಿತ್ತು, ಯಾಕೆಂದರೆ, ಭಿನ್ನಮತವನ್ನು ದಮನ ಮಾಡಲು ಅಗಣಿತ ಅಧಿಕಾರ ನೀಡುವ ಕಾನೂನುಗಳನ್ನು ಸರ್ಕಾರಗಳು ಇಷ್ಟಪಡುತ್ತವೆ. ಆದರೆ, ಸ್ವಾತಂತ್ರ್ಯಾನಂತರ ತಕ್ಷಣದಲ್ಲಿ ನಡೆದ ಎರಡು ಘಟನೆಗಳು ಭಾರತದ ಅಸುರಕ್ಷತೆಯನ್ನು ಹೆಚ್ಚಿಸಿದವು.
ಮೊದಲನೆಯ ಘಟನೆ ಜನವರಿ 30ರಂದು ಮತಾಂಧನೊಬ್ಬನಿಂದ ಗಾಂಧೀಜಿ ಹತ್ಯೆ.  ಸ್ವ ಇಚ್ಛೆಯಿಂದ ಆತ ಗಾಂಧಿ ಅವರನ್ನು ಹತ್ಯೆ ಮಾಡಿದ ಎಂದು ತೋರಿಕೆಗೆ ಕಂಡರೂ ಅದು ಭಾರತವನ್ನು ‘ಹಿಂದೂ ಪಾಕಿಸ್ತಾನ’ವಾಗಿಸುವ ದೊಡ್ಡ ರಾಜಕೀಯ ಚಳವಳಿಯ ಭಾಗ. ಆರು ವಾರಗಳ ನಂತರ, ಕಲ್ಕತ್ತಾದಲ್ಲಿ ನಡೆದ ರಹಸ್ಯ ಸಮಾವೇಶದಲ್ಲಿ, ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಯುದ್ಧಕ್ಕೆ ಭಾರತೀಯ ಕಮ್ಯುನಿಸ್ಟ್ ಪಕ್ಷ ಕರೆ ನೀಡಿತು. ಹೀಗೆ, ಸ್ವತಂತ್ರ ಭಾರತದ ಆಗಷ್ಟೇ ಹುಟ್ಟಿದ ಹೊಸ ಸರ್ಕಾರ ಬಲಪಂಥೀಯ ತೀವ್ರವಾದ ಮತ್ತು ಎಡಪಂಥೀಯ ತೀವ್ರವಾದದ ಬೆದರಿಕೆಗೆ ಒಳಗಾಯಿತು. ಈ ಚಿಂತೆಗಳ ಜತೆಗೆ, ಆಹಾರದ ಕೊರತೆ, ದೇಶವಿಭಜನೆಯ ಲಕ್ಷಾಂತರ ನಿರಾಶ್ರಿತರಿಗೆ ಆಶ್ರಯ ಒದಗಿಸುವ ಸವಾಲು ಮತ್ತು ಪಾಕಿಸ್ತಾನದ ಜತೆಗೆ ಕಾಶ್ಮೀರಕ್ಕೆ ಸಂಬಂಧಿಸಿದ ಸಂಘರ್ಷಗಳೂ ಸೇರಿಕೊಂಡವು.
ಕೇಂದ್ರ ತನ್ನ ಆಧಿಪತ್ಯ ಸ್ಥಾಪಿಸುವುದು ಹೇಗೆ? ಇದು ಪ್ರಧಾನಿ ಜವಾಹರಲಾಲ್ ನೆಹರೂ, ಗೃಹ ಸಚಿವ ವಲ್ಲಭಭಾಯಿ ಪಟೇಲ್ ಮತ್ತು ಕಾನೂನು ಸಚಿವ ಬಿ.ಆರ್. ಅಂಬೇಡ್ಕರ್ ಅವರ ಮುಂದಿದ್ದ ಪ್ರಶ್ನೆ. ಎಡ ಮತ್ತು ಬಲ ಪಂಥದ ಹಿಂಸಾತ್ಮಕ ತೀವ್ರವಾದದ ವಿರುದ್ಧ ನಾಜೂಕಾಗಿದ್ದ ಕೇಂದ್ರವನ್ನು ಬಲಪಡಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖವಾಣಿ ‘ಆರ್ಗನೈಸರ್’ ಮತ್ತು ಕಮ್ಯುನಿಸ್ಟ್ ನಿಯತಕಾಲಿಕ ‘ಕ್ರಾಸ್‌ರೋಡ್ಸ್’ಗಳನ್ನು ನಿಷೇಧಿಸಲಾಯಿತು. ಈ ಪತ್ರಿಕೆಗಳ ಸಂಪಾದಕರು ಕೇಂದ್ರಕ್ಕೆ ಮನವಿ ಮಾಡಿದರು, ಮುಕ್ತ ಅಭಿವ್ಯಕ್ತಿಗೆ ಅವಕಾಶ ಇರಬೇಕು ಎಂದು ಅವರು ನಿಷೇಧವನ್ನು ನಿರ್ಲಕ್ಷಿಸಿದರು. ಆಗ ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿ ತಂದರು.
‘ಅಭಿವ್ಯಕ್ತಿ ಸ್ವಾತಂತ್ರ್ಯವು ಘನತೆ, ಅಥವಾ ನೈತಿಕತೆ ಅಥವಾ ಭದ್ರತೆಗೆ ಗಾಸಿ ಉಂಟು ಮಾಡಿದರೆ ಅಥವಾ ಸರ್ಕಾರವನ್ನು ಪದಚ್ಯುತಗೊಳಿಸಲು ಬಯಸಿದರೆ’ ಈ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಗೊಳಿಸುವ ಕಾನೂನು ರೂಪಿಸಲು ಸರ್ಕಾರಕ್ಕೆ ಅವಕಾಶ ಇದೆ ಎಂದು  ಸಂವಿಧಾನದ 19(2)ನೇ ವಿಧಿಯ ಮೂಲ ಪಠ್ಯ ಹೇಳುತ್ತಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಮೊದಲನೇ ತಿದ್ದುಪಡಿಯು ಇನ್ನಷ್ಟು ವಿಸ್ತರಿಸಿತು. 19(2) ಪರಿಷ್ಕೃತ ವಿಧಿಯು ಹೀಗೆ ಹೇಳುತ್ತದೆ: ‘ದೇಶದ ಭದ್ರತೆ, ವಿದೇಶಗಳ ಜತೆ ಸ್ನೇಹಮಯ ಸಂಬಂಧ, ಸಾರ್ವಜನಿಕ ಸುವ್ಯವಸ್ಥೆ (ಮತ್ತು) ಘನತೆ ಅಥವಾ ನೈತಿಕತೆಯ ಹಿತಾಸಕ್ತಿಗಾಗಿ’ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಕಾನೂನುಗಳನ್ನು ಸರ್ಕಾರ ರೂಪಿಸಬಹುದು.
ಮೊದಲನೇ ತಿದ್ದುಪಡಿಯಲ್ಲಿ ‘ವಿದೇಶಗಳ ಜತೆ ಸ್ನೇಹಮಯ ಸಂಬಂಧ’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಎಂಬ ಅಂಶಗಳನ್ನು ಸೇರಿಸಲಾಯಿತು. ಇದರಲ್ಲಿ ವಿಶೇಷವಾಗಿ ಎರಡನೇ ಅಂಶವನ್ನು ಅತ್ಯಂತ ವ್ಯಾಪಕವಾದ ರೀತಿಯಲ್ಲಿ ವಿವರಿಸಲು ಅವಕಾಶ ಇದೆ. ಯಾವುದೇ ಪುಸ್ತಕ ಅಥವಾ ಸಿನಿಮಾ ಅಥವಾ ಕಲಾಕೃತಿ ಕೆಲವು ಜನರ ಮನ ನೋಯಿಸಿದರೆ ಮತ್ತು ಅವರು ಬೀದಿಗಿಳಿದು ಪ್ರತಿಭಟನೆ ನಡೆಸಿದರೆ ಅದನ್ನು ‘ಸಾರ್ವಜನಿಕ ಸುವ್ಯವಸ್ಥೆ’ಗೆ ಬೆದರಿಕೆ ಎಂದು ಪರಿಗಣಿಸಬಹುದು. ಸಂವಿಧಾನದ ಮೂಲ ವಿಧಿಯಲ್ಲಿ ನಿಷ್ಫಲವಾದ 153, 153ಎ, 295, 295ಎ, 499, 500 ಮತ್ತು 505ನೇ ಸೆಕ್ಷನ್‌ಗಳಿಗೆ ಅವಕಾಶ ಇತ್ತು. ಇವು ‘ಸಾರ್ವಜನಿಕ ದುರ್ನಡತೆ’, ‘ಧಾರ್ಮಿಕ ಭಾವನೆಗಳಿಗೆ ಧಕ್ಕೆ’, ‘ಸ್ವೇಚ್ಛೆಯಿಂದ ಪ್ರಚೋದನೆ’, ‘ಹೆಸರು ಹಾಳು ಮಾಡುವುದು’ ಮುಂತಾದವುಗಳಿಗೆ ಸೀಮಿತವಾಗಿದ್ದು, ದೇಶಕ್ಕೆ ಬೆದರಿಕೆ ಎಂದು ಯಾವುದನ್ನೂ ಪರಿಗಣಿಸುವುದಿಲ್ಲ. ಆದರೆ, ಇವುಗಳನ್ನು ಕೂಡ ಸಂಪ್ರದಾಯವಾದಿ ನ್ಯಾಯಾಧೀಶ ಅಥವಾ ನ್ಯಾಯಾಂಗ ‘ಸಾರ್ವಜನಿಕ ಸುವ್ಯವಸ್ಥೆ’ಗೆ ಧಕ್ಕೆ ಎಂದು ಪರಿಗಣಿಸುವುದಕ್ಕೆ ಅವಕಾಶ ಇದೆ.
ಸ್ವತಂತ್ರ ಭಾರತದ ಅಸ್ತಿತ್ವವೇ ಅಪಾಯದಲ್ಲಿದ್ದಾಗ ನೆಹರೂ, ಪಟೇಲ್ ಮತ್ತು ಅಂಬೇಡ್ಕರ್ ಅವರು ಅಸಾಧಾರಣವಾದ ಕ್ರಮವನ್ನು ಕೈಗೊಂಡರು. ಹಿಂದಿನ ವಿಧಿಗೆ ಹೋಲಿಸಿದರೆ ಮೊದಲ ತಿದ್ದುಪಡಿಯು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪೂರಕವಾಗಿರಲಿಲ್ಲ. ಇದು ಸಂವಿಧಾನವು ರದ್ದುಪಡಿಸಲು ಅಥವಾ ತಳ್ಳಿ ಹಾಕಲು ಬಯಸಿದ್ದ ವಸಾಹತುಶಾಹಿ ಕಾನೂನಿನ ಅಧಿಕಾರವನ್ನು ಮರಳಿ ಸ್ಥಾಪಿಸಿತು. ಈ ತಿದ್ದುಪಡಿಯು ಭಿನ್ನಮತ ಮತ್ತು ಟೀಕೆಯನ್ನು ದಮನ ಮಾಡಲು ಸ್ವತಂತ್ರ ಭಾರತದ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿತು. ಆದರೆ ಇದರಿಂದ ಭಿನ್ನಮತ ಮತ್ತು ಟೀಕೆಯನ್ನು ರಕ್ಷಿಸುವ ನ್ಯಾಯಾಲಯಗಳ ಅಧಿಕಾರ ಕುಂಠಿತಗೊಂಡಿತು.
ವಸಾಹತೋತ್ತರ, ಪ್ರಜಾಸತ್ತಾತ್ಮಕ ಎಂದು ಹೇಳಲಾಗುವ ನಮ್ಮ ಯುಗದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ವಸಾಹತುಶಾಹಿ ಕಾನೂನುಗಳನ್ನು ಬಳಸಲಾಗಿದೆ (ಮತ್ತು ದುರ್ಬಳಕೆ ಮಾಡಲಾಗಿದೆ). ಈ ಮಧ್ಯೆ, ಸ್ವತಂತ್ರ ಭಾರತವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಇನ್ನಷ್ಟು ಕಾನೂನುಗಳನ್ನು ರೂಪಿಸಿದೆ. ಮೊದಲ ತಿದ್ದುಪಡಿ ಅಲ್ಲದೆ, ನಂತರ ಬಂದ ‘1971ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ’ಯನ್ನು ನೋಡೋಣ. ರಾಷ್ಟ್ರಧ್ವಜವನ್ನು ಆಸನದ ಮೆತ್ತೆಗೆ ಬಳಸಿದರೆ, ಮಣ್ಣಿಗೆ ಅಥವಾ ನೆಲಕ್ಕೆ ಬೀಳಿಸಿದರೆ ಅಥವಾ ನೀರಿನಲ್ಲಿ ಕೊಚ್ಚಿ ಹೋಗುವಂತೆ ಮಾಡಿದರೆ ಅಂಥವರಿಗೆ ಮೂರು ವರ್ಷಗಳವರೆಗೆ ಶಿಕ್ಷೆ ವಿಧಿಸುವುದಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ.
ರಾಷ್ಟ್ರಗೀತೆ ಹಾಡುವುದನ್ನು ತಡೆಯಲು ಯತ್ನಿಸುವುದಕ್ಕೂ ಇಂತಹುದೇ ದಂಡನೆ ಇದೆ. ಇಂತಹ ನಿರ್ಬಂಧಾತ್ಮಕ ಕಾನೂನುಗಳಿಗೆ ತೀರಾ ಇತ್ತೀಚಿನ ಉದಾಹರಣೆ 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಸೆಕ್ಷನ್. ಈ ಸೆಕ್ಷನ್ ಅಡಿಯಲ್ಲಿ, ಸುಮ್ಮನೆ (ಅಹಿಂಸಾತ್ಮಕವಾಗಿ) ರಾಜಕೀಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಕೂಡ ಜೈಲು ಶಿಕ್ಷೆಗೆ ಕಾರಣವಾಗಬಹುದು. (2015ರ ಮೇಯಲ್ಲಿ ಸುಪ್ರೀಂ ಕೋರ್ಟ್ ಈ ಸೆಕ್ಷನನ್ನು ರದ್ದುಪಡಿಸಿತು. ಆದರೆ ಅದಕ್ಕೂ ಮುಂಚೆ ಹಲವು ಕಲಾವಿದರು ಮತ್ತು ಲೇಖಕರನ್ನು ಈ ಸೆಕ್ಷನ್ ಬಳಸಿ ಜೈಲಿಗೆ ತಳ್ಳಲಾಗಿದೆ).
ಹಾಗಾಗಿಯೇ, ಪುರಾತನವಾದ ಕಾನೂನುಗಳು ಮತ್ತು ಸ್ಪಷ್ಟವಾಗಿ ಪ್ರಜಾತಂತ್ರ ವಿರೋಧಿ ಉದ್ದೇಶದ ಕಾನೂನುಗಳೇ ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮೊದಲ ಬೆದರಿಕೆಗಳಾಗಿವೆ.

2. ಅಸಮರ್ಪಕ ನ್ಯಾಯಾಂಗ

ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಇರುವ ಅಸಮರ್ಪಕತೆಗಳು ಎರಡನೇ ಬೆದರಿಕೆಯನ್ನು ರೂಪಿಸುತ್ತವೆ. ಸಿನಿಮಾಗಳು, ಪುಸ್ತಕಗಳು ಅಥವಾ ಕಲಾಕೃತಿಗಳ ಮೇಲೆ ನಿಷೇಧ ಹೇರಬೇಕು ಎಂಬ ಬಿಡಿ ದೂರುಗಳು ಸಲ್ಲಿಕೆಯಾದಾಗ ಅಂಥವುಗಳನ್ನು ಪುರಸ್ಕರಿಸಲು ನಮ್ಮ ಕೆಳ ಹಂತದ ನ್ಯಾಯಾಲಯಗಳು ಅತಿ ಆತುರ ಮತ್ತು ಅತಿ ಉತ್ಸಾಹ ತೋರುತ್ತವೆ. ಇಂತಹ ದೂರುಗಳು ಕ್ಷುಲ್ಲಕವಾಗಿರುತ್ತವೆ ಅಥವಾ ಅವುಗಳಲ್ಲಿ ಯಾವುದೇ ಸತ್ಯ ಇರುವುದಿಲ್ಲ ಅಥವಾ ಅವುಗಳು ರಾಜಕೀಯ ಪ್ರೇರಿತವಾಗಿರುತ್ತವೆ. ಹೀಗೆ ಸಲ್ಲಿಕೆಯಾಗುವ ದೂರುಗಳಲ್ಲಿ ಬಹುಶಃ ಶೇ 99.9ರಷ್ಟು  ವಜಾಗೊಳಿಸುವುದಕ್ಕಷ್ಟೇ ಅರ್ಹವಾಗಿರುತ್ತವೆ. ಆದರೆ ಹಾಗೆ ಮಾಡಲಾಗುವುದಿಲ್ಲ, ಯಾಕೆ? ಅದಕ್ಕೆ ಒಂದು ಕಾರಣ, ಲೇಖಕರು, ಕಲಾವಿದರು, ನಟರು, ರಾಜಕಾರಣಿಗಳು ಮತ್ತು ಕ್ರೀಡಾಪಟುಗಳ ಹಾಗೆಯೇ ನ್ಯಾಯಾಧೀಶರು ಕೂಡ ತಮ್ಮ ಹೆಸರು ಪತ್ರಿಕೆಗಳಲ್ಲಿ ಬರುವುದನ್ನು ಬಯಸುತ್ತಾರೆ. ಇದಲ್ಲದೆ, ಇತರ ಹೆಚ್ಚು ಗಟ್ಟಿಯಾದ ಪರಿಗಣನೆಗಳೂ ಇವೆ. ಅವುಗಳೆಂದರೆ, ಭೌತಿಕ ಹಿತಾಸಕ್ತಿ ಮತ್ತು/ಅಥವಾ ಸೈದ್ಧಾಂತಿಕ ಅಸಹಿಷ್ಣುತೆ.
ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಕೆಲವೊಮ್ಮೆ ಲೇಖಕರು ಮತ್ತು ಕಲಾವಿದರ ಹಕ್ಕುಗಳ ಬಗ್ಗೆ ಹೆಚ್ಚು ಸಹಾನುಭೂತಿ ವ್ಯಕ್ತಪಡಿಸುತ್ತವೆ. ಆದರೆ ಕೆಳ ನ್ಯಾಯಾಲಯವೊಂದು ನಿಷೇಧ ಅಥವಾ ತಡೆಯಾಜ್ಞೆ ನೀಡಿದ್ದರೆ ನ್ಯಾಯಾಂಗ ಪ್ರಕ್ರಿಯೆಯ ಜಡತೆಯಿಂದಾಗಿ ಅದನ್ನು ತೆರವುಗೊಳಿಸಲು ವರ್ಷಗಳು, ಅಥವಾ ಕೆಲವೊಮ್ಮೆ ದಶಕಗಳೇ ಬೇಕಾಗುತ್ತವೆ. ಕೆಲವೇ ಕಲಾವಿದರು ಅಥವಾ ಪ್ರಕಾಶಕರಿಗೆ ಮಾತ್ರ ಇಷ್ಟೊಂದು ದೀರ್ಘ ಹೋರಾಟ ನಡೆಸುವುದಕ್ಕೆ ಬೇಕಾದ ಸಂಪನ್ಮೂಲ ಅಥವಾ ಶಕ್ತಿ ಇರುತ್ತದೆ. ಅಜ್ಞಾನಿ ಅಥವಾ ಪ್ರಚಾರಪ್ರೇಮಿ ನ್ಯಾಯಾಧೀಶರಿಗೆ ಪೂರಕವಾಗಿ ಕೆಲಸ ಮಾಡುವ ದುರುದ್ದೇಶಪೂರಿತ ದೂರುದಾರರು ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಮತ್ತೊಂದು ಗಂಭೀರ ಬೆದರಿಕೆಯಾಗಿದ್ದಾರೆ.

3. ಅಸ್ಮಿತಾವಾದಿ ರಾಜಕಾರಣ
ಹೆಚ್ಚುತ್ತಲೇ ಇರುವ  ಅಸ್ಮಿತಾವಾದಿ ರಾಜಕಾರಣ (ಐಡೆಂಟಿಟಿ ಪಾಲಿಟಿಕ್ಸ್) ಇನ್ನೊಂದು ಬೆದರಿಕೆಯಾಗಿದೆ. ಒಂದು ಪುಸ್ತಕ ಅಥವಾ ಕಲಾಕೃತಿ ಅಥವಾ ಒಂದು ಸಿನಿಮಾವನ್ನು ನಿಷೇಧಿಸುವುದು ಬಹಳ ಸುಲಭ. ಒಂದು ಸಮುದಾಯ ಅಥವಾ ಯಾವುದೇ ಸಮುದಾಯ ತನ್ನ ಭಾವನೆಗಳಿಗೆ ಅಥವಾ ಯಾವುದೋ ಒಂದು ಭಾವನೆಗೆ ಗಾಸಿಯಾಗಿದೆ ಎಂದು ದೂರು ನೀಡಬಹುದು. ಮಂಡಲ್ ಮತ್ತು ಅಯೋಧ್ಯೆ ಚಳವಳಿಗಳು ಆರಂಭಗೊಂಡ 1990ರ ದಶಕದ ಆರಂಭಿಕ ವರ್ಷಗಳಲ್ಲಿ ಮೊದಲನೆಯದು ಜಾತಿ ಅಸ್ಮಿತೆಯ  ರಾಜಕಾರಣ ಮತ್ತು ಎರಡನೆಯದು ಧಾರ್ಮಿಕ ಅಸ್ಮಿತೆಯ  ರಾಜಕಾರಣಗಳಾಗಿದ್ದವು. ಆ ಸಂದರ್ಭದಲ್ಲಿ ಇತಿಹಾಸಕಾರ ಧರ್ಮ ಕುಮಾರ್ ಅವರು ‘ನಾವು ಕುಂದುಕೊರತೆಗಳನ್ನು ಸಂಗ್ರಹಿಸುವ ದೇಶವಾಗಿ ಮಾರ್ಪಟ್ಟಿದ್ದೇವೆ’ ಎಂದು ನನ್ನಲ್ಲಿ ಹೇಳಿದ್ದರು. ವಾಸ್ತವದಲ್ಲಿ, ನಾವು ಭಾರತೀಯರು ಕುಂದುಕೊರತೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಅದಕ್ಕೆ ಪ್ರಚಾರ ನೀಡುತ್ತೇವೆ ಹಾಗೂ ಇತರರ ಮೇಲೆ ಹೇರುತ್ತವೆ. ಇದು ಕೂಡ ಮುಕ್ತ ಅಭಿವ್ಯಕ್ತಿಯ ಕುತ್ತಿಗೆ ಹಿಸುಕುತ್ತದೆ.
ಮಂಡಲ್ ಮತ್ತು ಅಯೋಧ್ಯೆ ಚಳವಳಿಗಳ ನಂತರ ಅಸ್ಮಿತಾವಾದಿ ರಾಜಕಾರಣದ ಪ್ರಭಾವ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಲೇ ಸಾಗಿದೆ. ಇದು ಭಾರತೀಯ ಸಮಾಜದ ಮೇಲೆ ಸಂಕೀರ್ಣ ರೀತಿಯ ಪ್ರಭಾವ ಉಂಟು ಮಾಡಿದೆ. ಹಿಂದೆ ವಿದ್ವಾಂಸರು ನಿರ್ಲಕ್ಷಿಸಿದ್ದ ವರ್ಗವನ್ನು ಕೇಂದ್ರ ಸ್ಥಾನಕ್ಕೆ ತರುವಂತಹ ಕೆಲವು ಪ್ರಯೋಜನಗಳು ಆಗಿವೆ. ಆದರೆ, ಅಸ್ಮಿತಾವಾದ ರಾಜಕಾರಣದ ಪ್ರಭಾವ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಏಕರೂಪವಾಗಿ ನಕಾರಾತ್ಮಕವೇ ಆಗಿದೆ. ಪ್ರತಿ ಪ್ರದೇಶ, ಜಾತಿ ಅಥವಾ ಸಮುದಾಯದ ಸಂಕೇತಗಳು ಅದರ ಬಗ್ಗೆ ಅಭಿಮಾನ ಇರುವ ಅಥವಾ ಅದನ್ನು ಆರಾಧಿಸುವವರಿಗೆ ದೋಷರಹಿತವಾಗಿರುತ್ತವೆ ಮತ್ತು ಟೀಕೆಗಳಿಗೆ ಅತೀತವಾದುದಾಗಿರುತ್ತವೆ.
1988ರಲ್ಲಿ ಸಲ್ಮಾನ್ ರಶ್ದಿ ಅವರ ‘ದ ಸಟಾನಿಕ್ ವರ್ಸಸ್’ ಕೃತಿಯ ಮೇಲಿನ ನಿಷೇಧ ಇದನ್ನು ಸ್ಪಷ್ಟಪಡಿಸುತ್ತದೆ. ಮೌಲ್ವಿಗಳು ನೀಡಿದ ದೂರು ಆ ಪುಸ್ತಕವನ್ನು ನೋಡಿಯೇ ಇಲ್ಲದಿದ್ದ ಮತ್ತು ಎಂದೂ ಓದುವ ಸಂಭವ ಇಲ್ಲದ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಲು ಕಾರಣವಾಯಿತು. ಈ ಪ್ರತಿಭಟನೆಗೆ ಆಗಿನ ಭಾರತ ಸರ್ಕಾರ ದಿಗಿಲಿನಿಂದ ಪ್ರತಿಕ್ರಿಯೆ ನೀಡಿತು. ಆಧುನಿಕ ಮನಸ್ಥಿತಿಯ ಪ್ರಧಾನಿ ರಾಜೀವ್ ಗಾಂಧಿ ದುರ್ಬಲರಾಗಿದ್ದರು ಮತ್ತು ಅವರಿಗೆ ಕೆಟ್ಟ ಸಲಹೆಗಳನ್ನು ನೀಡಲಾಯಿತು. ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿತ್ತು.  ಭಾರತದ ಸಾಮಾನ್ಯ ಮುಸ್ಲಿಮರ ಮತ ಚಲಾವಣೆ ಮೇಲೆ ಮೌಲ್ವಿಗಳು ಹೊಂದಿರುವ ಪ್ರಭಾವದ ಬಗ್ಗೆ ರಾಜೀವ್ ಗಾಂಧಿ ಅವರ ಅಂದಾಜು ಉತ್ಪ್ರೇಕ್ಷಿತವಾದುದಾಗಿತ್ತು (ಅವರಿಗಿಂತ ಹಿಂದೆಯೂ ನಂತರವೂ ಕಾಂಗ್ರೆಸ್ ಮುಖಂಡರು ಇದೇ ರೀತಿ ಅಂದಾಜಿಸಿದ್ದಾರೆ). ಭಾರತದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಛಿದ್ರಗೊಳಿಸುವ ಹೊಡೆತದ ರೀತಿಯಲ್ಲಿ ಭಾರತ ಸರ್ಕಾರ ಪುಸ್ತಕವನ್ನು ನಿಷೇಧಿಸಿತು. ಇರಾನ್ ಸರ್ಕಾರ ನಿಷೇಧ ಹೇರುವ ಮೊದಲೇ ಭಾರತದಲ್ಲಿ ಪುಸ್ತಕವನ್ನು ನಿಷೇಧಿಸಲಾಯಿತು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT