ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ಪುಸ್ತಕ ಸಂಸ್ಕೃತಿಯ ಪರ್ವ ಕಾಲ

Last Updated 1 ಅಕ್ಟೋಬರ್ 2014, 19:50 IST
ಅಕ್ಷರ ಗಾತ್ರ

ಇದು ಮುದ್ರಿತ ಮತ್ತು ಅಂತರ್ಜಾಲ ಪುಸ್ತಕಗಳ ಸಂಘರ್ಷದ ಕಾಲ. ಬೆರಳ ತುದಿಯ ಚಲನೆಯಲ್ಲಿ ಉಚಿತ ಮಾಹಿತಿ ವಿಶ್ವಕೋಶವೇ ತೆರೆದುಕೊಳ್ಳುವಾಗ ಹಣ ಕೊಟ್ಟು ಪುಸ್ತಕಗಳನ್ನು ಯಾರು ಕೊಳ್ಳುತ್ತಾರೆ? ಅಂತರ್ಜಾಲದಲ್ಲಿ ಲಭ್ಯವಿರುವ ಉಚಿತ ಮಾಹಿತಿ ಹಂಚಿಕೆ ಎನ್ನುವುದು ಮುದ್ರಿತ ಪುಸ್ತಕೋದ್ಯಮದಲ್ಲಿಯೂ ಒಂದು ಸಂಸ್ಕೃತಿಯಾಗಿ ಬೆಳೆಯಬೇಕು ಎನ್ನುವ ಆಶಯದಿಂದ ‘ಮಿತ್ರ ಮಾಧ್ಯಮ ಟ್ರಸ್ಟ್‌’ ಆರಂಭಿಸಿರುವ ಅಭಿಯಾನ ‘ಉಚಿತ ಪುಸ್ತಕ ಸಂಸ್ಕೃತಿ’. ‘ಮಾರಾಟಕ್ಕಾಗಿ, ಲಾಭಕ್ಕಾಗಿಯೇ ಪುಸ್ತಕಗಳನ್ನು ಮುದ್ರಿಸಬೇಕು ಎಂಬ ಮಾರುಕಟ್ಟೆ ಚೌಕಟ್ಟನ್ನು ಮೀರಬೇಕು. ಅತೀ ಕಡಿಮೆ ಖರ್ಚಿನಲ್ಲಿ ಪುಸ್ತಕಗಳನ್ನು ಮುದ್ರಿಸಿ ಅವಶ್ಯಕತೆ ಇರುವವರಿಗೆ ದೊರಕಿಸಿಕೊಡಬೇಕು ಎಂಬುದೇ ನಮ್ಮ ಉದ್ದೇಶ’ ಎನ್ನುತ್ತಾರೆ ಮಿತ್ರ ಮಾಧ್ಯಮದ ಟ್ರಸ್ಟಿ ಬೇಳೂರು ಸುದರ್ಶನ.

ಮೊದಲ ಪುಸ್ತಕ
ಪ್ರಾಯೋಜಕರ ಸಹಾಯದಿಂದ ಪುಸ್ತಕವನ್ನು ಮುದ್ರಿಸಿ ಅರ್ಹ ಓದುಗರಿಗೆ ಉಚಿತವಾಗಿ ಹಂಚುವ ಈ ಅಭಿಯಾನದ ಮೊದಲ ಪ್ರಕಟಣೆ ‘ಕಂಪ್ಯೂಟರ್‌ ಮತ್ತು ಕನ್ನಡ’. ಇತ್ತೀಚೆಗೆ ಇದನ್ನು ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು. 2012ರಲ್ಲಿ ಸುರಾನಾ ಕಾಲೇಜು ತನ್ನ ಪದವಿ ವಿದ್ಯಾರ್ಥಿಗಳಿಗಾಗಿ ‘ಕಂಪ್ಯೂಟರಿನಲ್ಲಿ ಕನ್ನಡ ಬಳಕೆ’ ಕುರಿತಂತೆ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕತೆ ಏರ್ಪಡಿಸಿತ್ತು. ಅಲ್ಲಿ ನೀಡಲಾದ ಉಪನ್ಯಾಸಗಳನ್ನೇ ಸಂಪಾದಿಸಿ ಈ ಪುಸ್ತಕ ಪ್ರಕಟಿಸಲಾಗಿದೆ. 84 ಪುಟದ ಈ ಪುಸ್ತಕದಲ್ಲಿ ಕಂಪ್ಯೂಟರ್‌ನಲ್ಲಿ ಕನ್ನಡ ಬಳಸಲು ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾಗುವಂತಹ ಮಾಹಿತಿಯನ್ನು ನಿಡಲಾಗಿದೆ. ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ, ಕನ್ನಡ ಮತ್ತು ಡಿಟಿಪಿ, ಅಂತರ್ಜಾಲ ಮತ್ತು ಕನ್ನಡ, ಮುಕ್ತ/ಸ್ವತಂತ್ರ ತಂತ್ರಾಂಶ ಚಳವಳಿ, ಯುನಿಕೋಡ್‌: ಏಕೆ? ಹೇಗೆ? ಈ ವಿಷಯಗಳ ಬಗ್ಗೆ ಐದು ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಡಾ. ಎ. ಸತ್ಯನಾರಾಯಣ, ಬೇಳೂರು ಸುದರ್ಶನ, ಟಿ.ಜಿ. ಶ್ರೀನಿಧಿ, ಓಂ. ಶ್ರೀವಪ್ರಕಾಶ, ಡಾ. ಯು.ಬಿ. ಪವನಜ ಹೀಗೆ ಐವರ ವಿಭಿನ್ನ ಲೇಖಕರು ಐದು ಅಧ್ಯಾಯಗಳನ್ನು ಬರೆದಿದ್ದಾರೆ.

‘ಇಂದಿನ ವಿಶ್ವವಿದ್ಯಾಲಯದ ಕಂಪ್ಯೂಟರ್‌ ಕುರಿತ ಕನ್ನಡ ಪಠ್ಯಪುಸ್ತಕಗಳೆಲ್ಲ ಔಟ್‌ ಡೇಟೆಡ್‌ ಆಗಿವೆ. ಅಲ್ಲದೇ ಅನೇಕ ತಪ್ಪು ಮಾಹಿತಿಗಳಿಂದ ಕೂಡಿದೆ. ಕಂಪ್ಯೂಟರ್‌ ಇಂದಿನ ಎಲ್ಲರ ಅವಶ್ಯಕತೆ. ಕಂಪ್ಯೂಟರ್‌ನಲ್ಲಿ ಕನ್ನಡ ಹೇಗೆ, ಎಷ್ಟರ ಮಟ್ಟಿಗೆ ಬಳಸಬಹುದು ಎಂಬ ಪಕ್ಷಿನೋಟ ಈ ಪುಸ್ತಕದಲ್ಲಿದೆ. ಇದೊಂದು ಪರ್ಯಾಯ ಪಠ್ಯ ಪುಸ್ತಿಕೆ. ಆದರೆ ಪಠ್ಯ ಪುಸ್ತಕದ ಶಾಸ್ತ್ರೀಯ ಚೌಕಟ್ಟನ್ನು ಮೀರಿರುವುದು ಇದರ ವಿಶೇಷ’ ಎಂದು ವಿವರಿಸುತ್ತಾರೆ ಬೇಳೂರು ಸುದರ್ಶನ.

ಅರ್ಹ ಓದುಗರಿಗಷ್ಟೇ ವಿತರಣೆ
ಉಚಿತವಾಗಿ ವಿತರಿಸಲೆಂದೇ ಈ ಪುಸ್ತಕಗಳನ್ನು ಮುದ್ರಿಸಿದ್ದರೂ ಯಾರೆಂದರೆ ಅವರಿಗೆ ಕೊಟ್ಟುಬಿಡುವುದಿಲ್ಲ. ಬೇಡಿಕೆ ಸಲ್ಲಿಸಿದವರಿಗೆ ನಿಜವಾಗಿಯೂ ಆ ಪುಸ್ತಕ ಅವಶ್ಯಕವಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಂಡೇ ವಿತರಿಸಲಾಗುತ್ತದೆ. ಅಲ್ಲದೇ ಪ್ರತಿಯೊಂದು ಪುಸ್ತಕ ಪಡೆದ ವ್ಯಕ್ತಿ, ಸಂಪರ್ಕ ದಾಖಲೆಗಳನ್ನೂ ಇರಿಸಲಾಗುತ್ತದೆ. ಉಚಿತ ಪುಸ್ತಕ ಅಭಿಯಾನ ಎಂಬುದು ರಾಮನವಮಿಯ ದಿನ ಪಾನಕ ವಿತರಣೆಯಂತಾಗಬಾರದು. ಅರ್ಹ ಓದುಗರಿಗೆ ತಲುಪುವ ಜವಾಬ್ದಾರಿಯುತ ಹಂಚಿಕೆಯಾಗ ಬೇಕು ಎಂಬುದು ಇದರ ಹಿಂದಿನ ಉದ್ದೇಶ.‌  

ಅಂತರ್ಜಾಲದಲ್ಲಿಯೂ ಲಭ್ಯ
‘ಕಂಪ್ಯೂಟರ್‌ ಮತ್ತು ಕನ್ನಡ’ ಪುಸ್ತಕ ಕೇವಲ ಮುದ್ರಿತ ರೂಪದಲ್ಲಿಯಷ್ಟೇ ಅಲ್ಲದೇ ಅಂತರ್ಜಾಲ ಅವತರಣಿ ಕೆಯೂ ಉಚಿತವಾಗಿ ಲಭ್ಯವಿದೆ.  ‌http://www.freebookculture.com ಜಾಲತಾಣಕ್ಕೆ ಭೇಟಿ ನೀಡಿ ಈ ಪುಸ್ತಕವನ್ನು ನೇರವಾಗಿ ಇಲ್ಲವೇ ಡೌನ್‌ಲೋಡ್‌ ಮಾಡಿಕೊಂಡು ಓದಬಹುದು.

 ಕಂಪ್ಯೂಟರ್‌ನಲ್ಲಿ ಕನ್ನಡ ಬಳಕೆ ಬಗ್ಗೆ ಮಾಹಿತಿ ಇರುವ ಈ ಪುಸ್ತಕವನ್ನು ಅಂಧರಿಗೆ ದೊರಕಿಸಿಕೊಡಬೇಕು ಎಂಬ ಬೇಡಿಕೆಯೂ ಬಂದಿದೆಯಂತೆ. ಆದ್ದರಿಂದ ಈಗಾಗಲೇ ಈ ಪುಸ್ತಕದ ಅಂತರ್ಜಾಲ ಬ್ರೈಲ್‌ ಅವತರಣಿಕೆಯನ್ನು ಟಿ.ಜಿ ಶ್ರೀನಿಧಿ ಸಿದ್ಧಪಡಿಸುತ್ತಿದ್ದಾರೆ. ಯುನಿಕೋಡ್‌ಗೆ ಬದಲಾಯಿಸಿದ ಮೇಲೆ text speech ಎಂಬ ತಂತ್ರಾಂಶದ ಸಹಾಯದಿಂದ ಅಂಧರೂ ಈ ಪುಸ್ತಕವನ್ನು ಓದಬಹುದು. ಈ ಪುಸ್ತಕವನ್ನು ‘ಕ್ರಿಯೇಟಿವ್‌ ಕಾಮನ್ಸ್‌’ ಲೈಸೆನ್ಸ್‌ನ ಅಡಿಯಲ್ಲಿ ಪ್ರಕಟಿಸಲಾಗಿದೆ. ಇದರ ಪ್ರಕಾರ ಮಿತ್ರ ಮಾಧ್ಯಮದವರಷ್ಟೇ ಅಲ್ಲದೇ ಯಾರು ಬೇಕಾದರೂ ಈ ಪುಸ್ತಕವನ್ನು ಯಥಾವತ್ತಾಗಿ ಇಂಥದ್ದೇ ಉದ್ದೇಶಗಳಿಗೆ ಹೀಗೆಯೇ ಮುದ್ರಿಸಿ ಉಚಿತವಾಗಿ ಹಂಚಬಹುದಾಗಿದೆ.

‘ಕಂಪ್ಯೂಟರಿನಲ್ಲಿ ಕನ್ನಡ ಎನ್ನುವುದು ಈಗ ಕೌತುಕದ ಸಂಗತಿಯೇನಲ್ಲ. ಆ ಕ್ಷೇತ್ರದ ಸಾಧ್ಯತೆಗಳ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ ಅಷ್ಟೆ. ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಯಾವುದೇ ಅಡೆತಡೆಗಳಿರಬಾರದೆಂಬ ಉದ್ದೇಶದಿಂದ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಇದನ್ನು ಅಂತರ್ಜಾಲದಲ್ಲೂ ಮುಕ್ತವಾಗಿ ಹಂಚಿಕೊಂಡಿದ್ದೇವೆ. ಇದು ಜನರಿಗೆ ಉಪಯುಕ್ತವಾದರೆ ಇಂತಹವೇ ಇನ್ನೂ ಹಲವು ಪ್ರಯೋಗಗಳಿಗೆ ಸ್ಫೂರ್ತಿ ದೊರಕಿದಂತಾಗುತ್ತದೆ’.
  – ಟಿ. ಜಿ. ಶ್ರೀನಿಧಿ.

ಪ್ರಾಯೋಜಕರ ಹುಡುಕಾಟ
‘ಉಚಿತ ಪುಸ್ತಕ ಸಂಸ್ಕೃತಿ’ ಅಭಿಯಾನದ ಮೊದಲ ಪುಸ್ತಕಕ್ಕೆ ₨ 25,000 ವೆಚ್ಚ ತಗುಲಿದೆ. ಈ ಹಣವನ್ನು ಮಿತ್ರ ಮಾಧ್ಯಮ ಮತ್ತು ಸುರಾನಾ ಕಾಲೇಜಿನವರೇ ಭರಿಸಿದ್ದಾರೆ. ಅಲ್ಲದೇ ಮೊದಲ ಆವೃತ್ತಿಯ 1000 ಪ್ರತಿಗಳಲ್ಲಿ ಸುರಾನಾ ಕಾಲೇಜು ತನ್ನ ವಿದ್ಯಾರ್ಥಿಗಳಿ ಗಾಗಿ 500 ಪ್ರತಿಗಳನ್ನು ತೆಗೆದುಕೊಂಡಿದೆ. ‘ಪುಸ್ತಕಕ್ಕಾಗಿ ಈಗಾಗಲೇ ಅನೇಕ ಕಡೆಗಳಿಂದ ಬೇಡಿಕೆ ಬಂದಿದೆ. ಬಳ್ಳಾರಿ ಕಾಲೇಜೊಂದು 50 ಪ್ರತಿಗಳಿಗಾಗಿ ಬೇಡಿಕೆ ಸಲ್ಲಿಸಿದೆ. ಸಾಧ್ಯವಾದಷ್ಟೂ ಎಲ್ಲ ಅರ್ಹರಿಗೂ ಪುಸ್ತಕ ಮುಟ್ಟಿಸಬೇಕು ಎಂಬ ಆಶಯ ನಮ್ಮದು’ ಎನ್ನುವ ಮಿತ್ರ ಮಾಧ್ಯಮ ಈ ಪುಸ್ತಕದ ಕನಿಷ್ಠ 10,000 ಪ್ರತಿಗಳನ್ನಾದರೂ ಮುದ್ರಿಸಿ ಹಂಚಬೇಕು ಎಂಬ ಗುರಿಯನ್ನು ಹೊಂದಿದೆ. ‘ಮತ್ತಷ್ಟು ಮುದ್ರಣಕ್ಕಾಗಿ ಪ್ರಾಯೋಜಕರನ್ನು ಹುಡುಕುತ್ತಿದ್ದೇವೆ. ಹೆಚ್ಚಾಗಿ ಅರ್ಬನ್‌ ಬ್ಯಾಂಕ್‌ಗಳು, ಕನ್ನಡದ ಬಗ್ಗೆ ಆಸಕ್ತಿ ಇರುವ ಐಟಿ ಸಂಸ್ಥೆಗಳು, ವೃತ್ತಿಪರ ಸಮುದಾಯಗಳು, ಕಾರ್ಪೊರೇಟ್ ಕಂಪೆನಿಗಳನ್ನು, ಸಾಮಾಜಿಕ ಸಂಸ್ಥೆಗಳನ್ನು  ಸಂಪರ್ಕಿಸುತ್ತಿದ್ದೇವೆ’ ಎನ್ನುತ್ತಾರೆ ಸುದರ್ಶನ.

ಕಂಪ್ಯೂಟರ್ ಜ್ಞಾನವಿರುವ ಯಾರೇ ಆದರೂ ಈ ಪುಸ್ತಕವನ್ನು ಓದಿ ತಾವೂ ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಬಳಸುವ ಪ್ರಯತ್ನ ಆರಂಭಿಸಬಹುದು. ಉಚಿತ ಕನ್ನಡ ಲಿಪಿತಂತ್ರಾಂಶಗಳಿಂದಿಡಿದು ಇತ್ತೀಚಿನ ಯುನಿಕೋಡ್ ಮಾನಕದ ತಂತ್ರಾಂಶಗಳವರೆಗೂ ದೊರೆಯುವ ಕನ್ನಡ ತಂತ್ರಾಂಶಗಳ ಕುರಿತ ಮಾಹಿತಿ ಇದರಲ್ಲಿದೆ. ಕನ್ನಡ ಟೈಪಿಂಗ್ ಕಲಿಕೆಯಿಂದ ಆರಂಭಿಸಿ, ಅಂತರ್ಜಾಲದಲ್ಲಿ ನಿರ್ವಹಿಸುವ ಎಲ್ಲ ಕೆಲಸಗಳನ್ನು ಕನ್ನಡದಲ್ಲಿಯೇ ಮಾಡಬಹು ದಾದ ವ್ಯವಸ್ಥೆ ರೂಪಿಸಿಕೊಳ್ಳುವ ಆರಂಭಿಕ ಮಾಹಿತಿಗಳು ಈ ಪುಸ್ತಕದಲ್ಲಿದೆ
ಡಾ.ಎ.ಸತ್ಯನಾರಾಯಣ.

ಆದರೆ ಪ್ರಾಯೋಜನೆ ಮಾಡುತ್ತೇವೆ ಎಂದು ಮುಂದೆ ಬರುವ ಎಲ್ಲರಿಂದಲೂ ಹಣ ತೆಗೆದುಕೊಳ್ಳಬಾರದು. ಹಣ ತೆಗೆದುಕೊಳ್ಳುವುದಕ್ಕೂ ಮುನ್ನ ಪ್ರಾಯೋಜಕರ ಹಿನ್ನೆಲೆಯನ್ನೂ ಅರಿತುಕೊಳ್ಳಬೇಕು ಎಂಬ ಎಚ್ಚರವೂ ಇವರಿಗಿದೆ. ‘ಕಂಪ್ಯೂಟರ್‌ ಮತ್ತು ಕನ್ನಡ’ ಎಂಬ ಪುಸ್ತಕ ಪೂರ್ತಿ ಉಚಿತವೇ ಆಗಿದ್ದರೂ ಇದರ ಮೇಲೆ ಬೆಲೆ ₨ 20 ಎಂದು ಮುದ್ರಿಸಲಾಗಿದೆ. ತಾವೇ ಇಷ್ಟಪಟ್ಟು ಕೊಟ್ಟರೆ ಆ ಹಣವನ್ನು ಪಡೆದುಕೊಂಡು ಪುಸ್ತಕದ ಮುಂದಿನ ಮುದ್ರಣಕ್ಕೆ ಬಳಸಿಕೊಳ್ಳಲಾಗುತ್ತದೆ.

ಇದು ಆರಂಭವಷ್ಟೆ
ಇದು ‘ಉಚಿತ ಪುಸ್ತಕ ಸಂಸ್ಕೃತಿ’ ಅಭಿಯಾನದ ಮೊದಲ ಹೆಜ್ಜೆಯಷ್ಟೇ. ಇಂಥದ್ದೇ ಹಲವು ಹೆಜ್ಜೆಗಳನ್ನು ಸೇರಿಸಿ ಹೊಸ ಮಾರ್ಗವನ್ನೇ ರೂಪಿಸಬೇಕು ಎಂಬ ಹಂಬಲ ಮಿತ್ರ ಮಾಧ್ಯಮಕ್ಕಿದೆ. ‘ಕತೆ–ಕಾದಂಬರಿಗಳಂತಹ ಸೃಜನಶೀಲ ಕೃತಿಗಳನ್ನು ಖಂಡಿತ ಪ್ರಕಟಿಸುವುದಿಲ್ಲ’ ಎಂದು ಖಚಿತವಾಗಿ ಹೇಳುವ ಇವರಿಗೆ ಮುಂದೆಯೂ ಮಾಹಿತಿಯುಕ್ತ, ಶಿಕ್ಷಣ ಕೇಂದ್ರಿತ ಪುಸ್ತಕಗಳನ್ನು ಮುದ್ರಿಸಿ ಹಂಚುವ ಯೋಜನೆಯಿದೆ. ಸದ್ಯಕ್ಕೆ ಇಂಧನ ಸಮಸ್ಯೆಯ ಕುರಿತು ಸಾಮಾಜಿಕ ಜಾಗೃತಿ ಮೂಡಿಸುವ ಪುಸ್ತಕವೊಂದರ ಪ್ರಕಾಶನಕ್ಕೆ ಸಿದ್ಧತೆಯೂ ನಡೆಯುತ್ತಿದೆ. ಉಪಯುಕ್ತ ಮಾಹಿತಿಗಳು ಎಲ್ಲರಿಗೂ ಸುಲಭವಾಗಿ ತಲುಪಬೇಕು ಎಂಬ ಸದುದ್ದೇಶದಿಂದ ಕಾರ್ಯನಿರತವಾಗಿರುವ ಮಿತ್ರ ಮಾಧ್ಯಮದ ಈ ಪ್ರಯತ್ನ ಒಂದು ಸಂಪ್ರದಾಯವಾಗಿ ಬೆಳೆಯಬೇಕಾಗಿರುವುದು ಇಂದಿನ ಕಾಲದ ಅಗತ್ಯವೂ ಹೌದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT