ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖಾಮುಖಿಯಾದ ಕಾಡು- ಉದ್ಯಾನದ ಹುಲಿ

ಬನ್ನೇರುಘಟ್ಟ: ಬೆದೆಗೆ ಬಂದ ಹೆಣ್ಣು ಹುಲಿ ಕೂಡಲು ಬಂದ ಕಾಡು ಹುಲಿ
Last Updated 21 ಜುಲೈ 2016, 2:19 IST
ಅಕ್ಷರ ಗಾತ್ರ

ಆನೇಕಲ್‌: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಹೆಣ್ಣು ಹುಲಿಯನ್ನು ಹುಡುಕಿಕೊಂಡು ಕಾಡಿನಿಂದ ಬಂದಿರುವ ಗಂಡು ಹುಲಿಯೊಂದು ಬನ್ನೇರುಘಟ್ಟದ ಹುಲಿಧಾಮದ ಬಳಿ ಪ್ರತ್ಯಕ್ಷವಾಗಿ ತಂತಿಬೇಲಿಯನ್ನು ದಾಟಿ ಬೆದೆಗೆ ಬಂದಿರುವ ಹೆಣ್ಣು ಹುಲಿಯನ್ನು ಕೂಡಿಕೊಳ್ಳಲು ಸಾಹಸ ನಡೆಸಿದ ಘಟನೆ ಬುಧವಾರ ನಡೆದಿದೆ. 

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯದಿಂದ ಜೈವಿಕ ಉದ್ಯಾನದತ್ತ ಈ ಹುಲಿ ಬಂದಿದೆ. ಒಂದೂವರೆ ವರ್ಷದ ಹಿಂದೆ ಜೈವಿಕ ಉದ್ಯಾನದ ಪರಿಮಿತಿಯಲ್ಲಿ ಕಾಣಿಸಿಕೊಂಡಿದ್ದ ಹುಲಿ, ನಂತರ ತಿಂಗಳ ಹಿಂದೆ ಉದ್ಯಾನದ ಸಮೀಪವೇ ಕಂಡು ಬಂದಿತ್ತು. ಉದ್ಯಾನದ ಸಫಾರಿಯಲ್ಲಿರುವ ಹುಲಿಗಳಲ್ಲಿ ಯಾವುದಾದರೂ ಹೆಣ್ಣು ಹುಲಿ ಬೆದೆಗೆ ಬಂದಿರುವ ಸುಳಿವು ಸಿಕ್ಕರೆ ಸಾಕು, ವಾಸನೆ ಮೂಲಕ ಪತ್ತೆ ಹಚ್ಚಿ ಈ ಗಂಡುಹುಲಿ ಇಲ್ಲಿಗೆ ಬರುತ್ತಿದೆ ಎನ್ನಲಾಗಿದೆ.

ಕಳೆದ ತಿಂಗಳು ಇಲ್ಲಿ ಪ್ರತ್ಯಕ್ಷಗೊಂಡಿದ್ದ ಹುಲಿಯನ್ನು ಉದ್ಯಾನದ ಸಫಾರಿಗೆ ಭೇಟಿ ನೀಡಿದ್ದ ಪ್ರವಾಸಿಗರು ಫೋಟೋ ತೆಗೆದಿದ್ದರು. ಬುಧವಾರ ಸಹ ಪ್ರವಾಸಿಗರ ಕಣ್ಣಿಗೆ ಹುಲಿ ಕಂಡಿದೆ. ಕಾಡಿನಿಂದ ಬಂದಿರುವ ಗಂಡು ಹುಲಿ ಸಫಾರಿಯಲ್ಲಿರುವ ಹುಲಿಯ ಮೇಲೆ ದಾಳಿಗೆ ಯತ್ನಿಸಿದೆ.

ಮಧ್ಯೆ ತಂತಿ   ಬೇಲಿ ಇದ್ದುದರಿಂದ ಕಾಡು ಹುಲಿಯ ಉಗುರಿನ ಏಟು ಉದ್ಯಾನದ ಹುಲಿಗೆ ತಾಗಿಲ್ಲ. ಕೆಲಕಾಲ ಎರಡು ಪರಸ್ಪರ ಘರ್ಜನೆ ನಡೆಸಿ ಆರ್ಭಟಿಸಿವೆ. ನಂತರ ಕಾಡುಹುಲಿ ಕಾಡಿನತ್ತ ತೆರಳಿದೆ.

ಇದು ಸೂಕ್ತ ಕಾಲ
ಮುಂಗಾರು ಮಳೆಗಾಲ ಹುಲಿಗಳ ಸಮ್ಮಿಲನಕ್ಕೆ ಸೂಕ್ತ ಕಾಲ ಎನ್ನಲಾಗಿದೆ. ಹಾಗಾಗಿ ಗಂಡು ಮತ್ತು ಹೆಣ್ಣು ಹುಲಿ ಪರಸ್ಪರ ಒಂದಾಗಲು ಈ ಸಮಯದಲ್ಲಿ ಇಚ್ಛಿಸುತ್ತವೆ. ಹೆಣ್ಣು ಹುಲಿಯಿಂದ ಬಿಡುಗಡೆಯಾಗುವ ಸ್ರವ ಗಂಡು ಹುಲಿಯನ್ನು ಆಕರ್ಷಿಸುತ್ತದೆ. ಜತೆಯಿಲ್ಲದೆ ಕಾಡಲ್ಲಿ ಒಂಟಿಯಾಗಿ ಅಲೆಯುತ್ತಿರುವ ಈ ಗಂಡು ಹುಲಿ ಸಂಗಾತಿಯನ್ನು ಅರಸುತ್ತಿದೆ ಎನ್ನಿಸುತ್ತದೆ. ಸಂಗಾತಿಯನ್ನು ಸೇರಿಕೊಳ್ಳಲು ಪ್ರಯತ್ನ ನಡೆಸಿದೆ ಎಂದು ಉದ್ಯಾನದ ವೈದ್ಯರು ಅಭಿ ಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT