ಭುವನೇಶ್ವರ (ಪಿಟಿಐ): ಮೋದಿ ಅಲೆ ಹೊರತಾಗಿಯೂ ಬಿಜು ಜನತಾದಳವನ್ನು (ಬಿಜೆಡಿ)ಭಾರಿ ಬಹುಮತದೊಂದಿಗೆ ಒಡಿಶಾದಲ್ಲಿ ಮರಳಿ ಅಧಿಕಾರಕ್ಕೆ ತಂದ ನವೀನ್ ಪಟ್ನಾಯಕ್ ನಾಲ್ಕನೇ ಬಾರಿ ಒಡಿಶಾದ ಮುಖ್ಯಮಂತ್ರಿಯಾಗಿ ಬುಧವಾರ ಪದಗ್ರಹಣ ಮಾಡಿದರು.
ಸತತ ನಾಲ್ಕು ಅವಧಿಗೆ ಒಡಿಶಾ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೊದಲ ವ್ಯಕ್ತಿ ಎಂಬ ಹೊಸ ದಾಖಲೆ ಬರೆದ ನವೀನ್ ಮೂರು ಸಲ ಮುಖ್ಯಮಂತ್ರಿಯಾಗಿದ್ದ ತಮ್ಮ ತಂದೆ ಬಿಜು ಪಟ್ನಾಯಕ್ ಅವರ ದಾಖಲೆ ಮುರಿದ್ದಾರೆ.
ಮೊದಲ ಬಾರಿಗೆ 2000ನೇ ಇಸ್ವಿಯ ಮೇ 5ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಿಜು ಪಟ್ನಾಯಕ್ ಹೊರತು ಪಡಿಸಿದರೆ ಡಾ.ಹರೇಕೃಷ್ಣಾ ಮಹತಾಬ್ ಮತ್ತು ಜೆ.ಬಿ. ಪಟ್ನಾಯಕ್ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು.
ಜ್ಯೋತಿ ಬಸು ದಾಖಲೆ ಮುರಿಯಲಿರುವ ಚಾಮ್ಲಿಂಗ್
ಗ್ಯಾಂಗ್ಟಕ್ (ಪಿಟಿಐ): ಸಿಕ್ಕಿಂನ ಮುಖ್ಯಮಂತ್ರಿಯಾಗಿ ಪವನ್ ಕುಮಾರ್ ಚಾಮ್ಲಿಂಗ್ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದು, ಐದನೇ ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಅತಿ ದೀರ್ಘ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿರುವ ದಿವಂಗತ ಜ್ಯೋತಿ ಬಸು ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ.
1977ರಿಂದ 2000 ರವರೆಗೆ ಸತತ 23 ವರ್ಷ ಜ್ಯೋತಿ ಬಸು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಚಾಮ್ಲಿಂಗ್ ಮುಖ್ಯಮಂತ್ರಿಯಾಗಿ ಈ ಅವಧಿಯನ್ನು ಪೂರ್ಣಗೊಳಿಸಿದಲ್ಲಿ ಬಸು ದಾಖಲೆ ಮುರಿಯುತ್ತಾರೆ.