ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಗಳ ಬದಲು?

ಉತ್ತರಪ್ರದೇಶ ಸೇರಿ 10 ಪಿಸಿಸಿ ಅಧ್ಯಕ್ಷರಿಗೂ ಕೊಕ್
Last Updated 21 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆ­ಯಲ್ಲಿನ ಕಳಪೆ ಫಲಿತಾಂಶದಿಂದ  ಕಂಗಾಲಾಗಿರುವ ಕಾಂಗ್ರೆಸ್‌ ಹೈಕಮಾಂಡ್‌, ಪಕ್ಷಕ್ಕೆ ಪುನಶ್ಚೇತನ
ನೀಡಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗುವುದಕ್ಕಾಗಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಬದಲಾವಣೆಯ ಸುಳಿವು ನೀಡಿದೆ.

ಜತೆಗೆ, ಪಕ್ಷದ ಪುನರ್‌ ಸಂಘಟನೆ ಮತ್ತು ಬಲವರ್ಧನೆಗಾಗಿ  ಉತ್ತರ ಪ್ರದೇಶ ಸೇರಿದಂತೆ ಹತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಸಿಸಿ) ಅಧ್ಯಕ್ಷರ ಬದಲಾವಣೆಗೆ  ಗಂಭೀರ ಚಿಂತನೆ ನಡೆಸಿದೆ ಎಂದೂ ಹೇಳಲಾಗಿದೆ.

ಅಸ್ಸಾಂ, ಮಹಾರಾಷ್ಟ್ರ ಹಾಗೂ ಹರಿಯಾಣ  ಮುಖ್ಯಮಂತ್ರಿಗಳ ಬದಲಾವಣೆಗೆ ಪಕ್ಷದ ವಲಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಮಹಾರಾಷ್ಟ್ರದಲ್ಲಿ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಅವರನ್ನು ಹಾಗೂ ಅಸ್ಸಾಂನಲ್ಲಿ ಭುಗಿಲೆದ್ದ ಭಿನ್ನಮತ ಶಮನಗೊಳಿಸಲು ಮುಖ್ಯಮಂತ್ರಿ ತರುಣ್‌ ಗೊಗೋಯ್‌ ಅವರನ್ನು ತಕ್ಷಣಕ್ಕೆ ಬದಲಾಯಿಸುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.  ಆದರೆ, ಮುಖ್ಯಮಂತ್ರಿಗಳ ಬದಲಾವಣೆ ಸುದ್ದಿಯನ್ನು ಕಾಂಗ್ರೆಸ್‌ ಬಲವಾಗಿ ನಿರಾಕರಿಸಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಹರಿಯಾಣದ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್‌ ಚವಾಣ್‌ ಶುಕ್ರವಾರ ಕಾಂಗ್ರೆಸ್‌ ಮುಖಂಡರ ಜತೆ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. 

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌, ಪಕ್ಷದ ಮಹಾರಾಷ್ಟ್ರ ಉಸ್ತುವಾರಿ ಎ.ಕೆ. ಆಂಟನಿ ಅವರನ್ನು  ಚವಾಣ್‌ ಮತ್ತು ಹೂಡಾ ಪ್ರತ್ಯೇಕವಾಗಿ ಭೇಟಿಯಾದರು. ಶುಕ್ರವಾರ ದಿನವಿಡೀ ತುರುಸಿನ ರಾಜಕೀಯ ಬೆಳವಣಿಗೆಗಳು ನಡೆದಿದ್ದು,  ಮಾತುಕತೆಯ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.

ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರಾದ ಶಿವಾಜಿರಾವ್‌ ದೇಶಮುಖ್‌ ಹಾಗೂ ಶಿವಾಜಿರಾವ್‌ ಮೇಘೆ ಕೂಡ ಸೋನಿಯಾ ಹಾಗೂ ಆಂಟನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕಾಂಗ್ರೆಸ್‌ ಮಿತ್ರಪಕ್ಷ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರನ್ನು ಗುರುವಾರ ರಾತ್ರಿ ಆಂಟನಿ ಮತ್ತು ಅಹ್ಮದ್ ಪಟೇಲ್‌ ಭೇಟಿಯಾಗಿ ಮುಖ್ಯಮಂತ್ರಿ ಬದಲಾವಣೆ ಸಾಧಕ– ಬಾಧಕಗಳನ್ನು ಚರ್ಚಿಸಿದರು.

ಸುಶೀಲ್‌ ಕುಮಾರ್‌ ಶಿಂಧೆ, ಸಚಿವರಾದ ಬಾಳಾಸಾಹೇಬ್‌ ಥೋರಟ್‌, ರಾಧಾಕೃಷ್ಣ ವಿಖೆ ಪಾಟೀಲ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿವೆ.
ಹೂಡಾ ಬದಲಾವಣೆಗೆ ಪಕ್ಷದ ಒಂದು ಗುಂಪು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದೆ. ಆದರೆ, ವರ್ಷಾಂತ್ಯದಲ್ಲಿ ಹರಿಯಾಣ ವಿಧಾನಸಭೆಗೆ  ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ನಾಯಕತ್ವ  ಬದಲಾವಣೆ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬುದು ಈ ಗುಂಪಿನ ವಾದವಾಗಿದೆ.

ಕೇಂದ್ರದ ಮಾಜಿ ಸಚಿವೆ ಕುಮಾರಿ ಶೆಲ್ಜಾ ಅವರೂ ಹೂಡಾ  ವಿರುದ್ಧ ಧ್ವನಿ ಎತ್ತಿದ್ದು, ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಹೂಡಾ ಅವರನ್ನು ಕೆಳಗಿಳಿಸಿದರೆ ಅವರ ಸ್ಥಾನ ತುಂಬುವ ಪರ್ಯಾಯ ನಾಯಕರು ಪಕ್ಷದಲ್ಲಿ ಇಲ್ಲ. ಇದು ಅವರಿಗೆ ವರದಾನವಾಗಿದೆ. ಹೀಗಾಗಿ ಸದ್ಯಕ್ಕೆ ಅವರು ತಲೆದಂಡದಿಂದ ಬಚಾವ್‌ ಆಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ವಿಧಾನಸಭೆ ಅವಧಿ
ಅಸ್ಸಾಂ ವಿಧಾನಸಭಾ ಚುನಾವಣೆ 2016ರಲ್ಲಿ ನಡೆಯಲಿದ್ದು,  ಹರಿಯಾಣ ವಿಧಾನಸಭೆ ಅವಧಿ ಇದೇ ಅಕ್ಟೋಬರ್‌ನಲ್ಲಿ ಹಾಗೂ ಮಹಾರಾಷ್ಟ್ರ ವಿಧಾನಸಭೆ ಅವಧಿ ಡಿಸೆಂಬರ್‌ನಲ್ಲಿ ಅಂತ್ಯಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT