ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಆತ್ಮಾವಲೋಕನ ಮಾಡಲಿ

Last Updated 20 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್‌ ಅಧಿಕಾರದ ಚುಕ್ಕಾಣಿ ಹಿಡಿಯುವ ವಾತಾವರಣ ನಿರ್ಮಾಣವಾಗಬೇಕು. ಈ ದಿಸೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಹಾಗೂ ಶಾಸಕರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಸಿ.ಕೆ. ಜಾಫರ್‌ ಷರೀಫ್‌ ಕಿವಿಮಾತು ಹೇಳಿದರು.
ನಗರದಲ್ಲಿ ಬುಧವಾರ ನಡೆದ ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕುರಿತ ‘ಪ್ರಬುದ್ಧ’   ಕೃತಿ (ಲೇಖಕ– ಆನಂದ ಕುಮಾರ್‌) ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಎಲ್ಲೆಡೆ ಕಾಂಗ್ರೆಸ್‌ ದುರ್ಬಲ ಆಗಿದ್ದಾಗ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತೆ ಗೆದ್ದು ಬಂದಿದ್ದು ಉಂಟು. ಈಗಲೂ ದೇಶದಾದ್ಯಂತ ಅಂತಹ ವಾತಾವರಣ ಇದೆ. ಮತ್ತೆ ರಾಜ್ಯ ಮಾದರಿಯಾಗಬೇಕು. ಪಕ್ಷವನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ದಲಿತ ಮುಖ್ಯಮಂತ್ರಿ ಕೂಗು ಮುನ್ನೆಲೆಗೆ: ‘ಬೇರೆ ಪಕ್ಷದಲ್ಲಿ ಇದ್ದವರು ಕಾಂಗ್ರೆಸ್‌ಗೆ ಸೇರಿ ಮುಖ್ಯಮಂತ್ರಿ ಯಾಗಿದ್ದಾರೆ. ಕಾಂಗ್ರೆಸ್‌ನವರೇ ಏಕೆ ಮುಖ್ಯಮಂತ್ರಿಯಾಗಬಾರದು’ ಎಂದು ಕಟುವಾಗಿ ಪ್ರಶ್ನಿಸಿದ ಷರೀಫ್‌, ‘ಈ ಮಾತನ್ನು ಹೇಳಿದರೆ ನಾನು ಕೆಟ್ಟವನು ಆಗುತ್ತೇನೆ. ಆದರೆ, ನಾನು ಯಾರಿಗೂ ಹೆದರುವುದಿಲ್ಲ. ನನಗೆ ಸರ್ಕಾರದಿಂದ ಏನೂ ಆಗಬೇಕಿಲ್ಲ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಹಾಗೂ ಡಾ.ಜಿ. ಪರಮೇಶ್ವರ ಅವರಿಗೆ ಅನುಭವ ಹಾಗೂ ಅರ್ಹತೆ ಎರಡೂ ಇವೆ. ಮನಸ್ಸಿಗೆ ತುಂಬ ವ್ಯಸನ ಆಗುತ್ತಿದೆ. ತುಳಿತಕ್ಕೆ ಒಳಗಾದ ದಲಿತ ಸಮಾಜಕ್ಕೆ ಸ್ಥಾನಮಾನ ಸಿಗಬೇಕು. ಈ ಮಾತನ್ನು ಹೇಳಿದರೆ ಕೆಲವರಿಗೆ ಗಾಬರಿ ಹಾಗೂ ಆತಂಕ ಆಗುತ್ತದೆ. ಅದಕ್ಕೆ ನಾನೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಹುದ್ದೆ ಯಾರ ಆಸ್ತಿಯೂ ಅಲ್ಲ’ ಎಂದು ಅವರು ವಿಶ್ಲೇಷಿಸಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಮಾತನಾಡಿ, ‘ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಅನೇಕ ಸಂದರ್ಭಗಳಲ್ಲಿ ಅವರಿಗೆ ಅವಕಾಶ ತಪ್ಪಿ ಹೋಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT