ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯವಾಹಿನಿಯಲ್ಲಿ ಸಹಜ ಮಗುವಾಗಿ...

Last Updated 31 ಜುಲೈ 2015, 19:45 IST
ಅಕ್ಷರ ಗಾತ್ರ

ಹದಿಮೂರು ವರ್ಷಗಳ ಹಿಂದೆ, ನನ್ನ ಮೂರು ತಿಂಗಳ ಮಗಳಿಗೆ ‘ಸುಶ್ರಾವ್ಯ’ ಎಂದು ನಾಮಕರಣ ಮಾಡಿದಾಗ, ಸ್ವಲ್ಪ ಕ್ಲಿಷ್ಟವೆನಿಸುವ ಈ ಹೆಸರನ್ನು ಮುಂದೆ ಅವಳಿಗೆ ಉಚ್ಛರಿಸಲು ತೊಡಕಾಗ ಬಹುದೆಂಬ ಪರಿಕಲ್ಪನೆಯೂ ನನಗಿರಲಿಲ್ಲ. ಸುಶ್ರಾವ್ಯಳಿಗೆ ಆರು ತಿಂಗಳಾದಾಗ, ಅವಳ ಬೆಳವಣಿಗೆಯಲ್ಲಿನ ವ್ಯತ್ಯಾಸವನ್ನು ಗಮನಿಸಿ, ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ, ಅವಳಲ್ಲಿ ಕ್ರೋಮೋಸೋಮ್ ವ್ಯತ್ಯಯವಿರುವುದು ಬೆಳಕಿಗೆ ಬಂದಿತು.

ಎಲ್ಲದರಲ್ಲೂ ಹೆಚ್ಚು ಬೇಕೆನ್ನುವ ಮನುಷ್ಯನಿಗೆ, ದೇಹದ ಪ್ರತೀ ಜೀವಕಣದಲ್ಲೂ ಇರುವ ಹಾಗೂ ಅವನ ವ್ಯಕ್ತಿತ್ವಕ್ಕೇ ಕಾರಣೀ ಭೂತವಾದ 46 ಕ್ರೋಮೋಸೋಮ್ (23 ಜೊತೆ)ಗಳಲ್ಲಿ ಆಕಸ್ಮಿಕವಾಗಿ ಒಂದು ಅಧಿಕವಾದರೆ, ಅದು ಬದಲಾಯಿಸಲು ಸಾಧ್ಯವಿಲ್ಲದ ಭಾರೀ ಏರುಪೇರಿಗೆ ಕಾರಣವಾಗುತ್ತದೆ. ಇದರಿಂದ ಉಂಟಾಗುವ ಸ್ಥಿತಿಯೇ ಡೌನ್ ಸಿಂಡ್ರೋಮ್. ನಮ್ಮ ಮಗಳ ಈ ಸ್ಥಿತಿ ನಮಗೆ ಆರಂಭದಲ್ಲಿ ಆತೀವ ಆತಂಕ ತಂದೊಡ್ಡಿತು. ಯಾರಿಗೂ ಕೇಡೆಣಿಸದ ನಮಗೇ ಏಕೆ ಹೀಗಾಯಿತೆಂದು ಪರಿತಪಿಸು ವಂತಾಯಿತು.

ಬರುವುದನೆಲ್ಲಾ ಧೈರ್ಯವಾಗಿ ಎದುರಿಸಬೇಕು ಎಂದು ಧನಾತ್ಮಕವಾಗಿ ಯೋಚಿಸುತ್ತಿದ್ದಾಗ ನನ್ನ ನೆರವಿಗೆ ಬಂದಿದ್ದು, ಡಿ.ವಿ.ಜಿ. ಅವರ ‘ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು? ಅರೆಬೆಳಕು ಧರೆಯೊಳು ಎಂದೊರಲಿ ಸುಖವೇನು? ಇರುವ ಕಣ್ಣಿರುವ ಬೆಳಕಿನಿಂದಾನಿತ ನೋಡಿ ಪರಿಕಿಸಿದೊಡದು ಲಾಭ –ಮಂಕುತಿಮ್ಮ’ ಎಂಬ ಕಗ್ಗದ ಸಾಲುಗಳು.

ಇಂತಹ ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಗಳು ನಿಧಾನ ವಾಗಿರುತ್ತವೆ, ಸೂಕ್ತ ತರಬೇತಿ ನೀಡುವುದರ ಮೂಲಕ ಅವರನ್ನು ಮುಖ್ಯವಾಹಿನಿಗೆ ತರಬಹುದೆಂಬ ತಜ್ಞವೈದ್ಯರ ಸಲಹೆಯ ಮೇರೆಗೆ ನಾನು ಹಾಗೂ ನನ್ನ ಪತ್ನಿ ರೇಖಾ ದೃಢ ಮನಸ್ಸಿನಿಂದ ಸಹಜ ಮಕ್ಕಳಂತೆಯೇ ಸುಶ್ರಾವ್ಯಳನ್ನು ಪೋಷಿಸಲಾರಂಭಿಸಿದೆವು. ಸುಶ್ರಾವ್ಯಳ ಬಾಲ್ಯದ ತುಂಟತನ, ಆಟಪಾಠಗಳು ನಮಗೆ ಸಂತೋಷವನ್ನೇ ತಂದವು. ಹೆಸರಿಗೆ ತಕ್ಕಂತೆ ಸಂಗೀತಪ್ರಿಯಳಾದ ಸುಶ್ರಾವ್ಯ ಭಾವಗೀತೆಗಳ ಪ್ರಿಯೆ.

‘ಆಕಾಶದ ನೀಲಿಯಲ್ಲಿ’, ‘ಅಮ್ಮಾ ನಿನ್ನ ಎದೆಯಾಳದಲ್ಲಿ’ ಮುಂತಾದ ಹಾಡುಗಳನ್ನು ಅವಳದೇ ಆದ ಧಾಟಿಯಲ್ಲಿ ಹಾಡುತ್ತಿದ್ದಳು. ನಿಷ್ಕಲ್ಮಶ ಪ್ರೀತಿಯ ಈ ಮುಗ್ಧೆ ಬಹುಬೇಗ ಎಲ್ಲರ ಮೆಚ್ಚುಗೆ ಗಳಿಸಿಬಿಡುತ್ತಿದ್ದಳು ಹಾಗೂ ಒಡನಾಡಿದವರ ಮನದಲ್ಲಿ ಮರೆಯಲಾರದ ಛಾಪನ್ನು ಒತ್ತಿ ಬಿಡುತ್ತಿದ್ದಳು. ಅವಳ ಮಾತಿನಲ್ಲಿ ಉಂಟಾಗುವ ತೊಡಕಿಗೆ ಮೈಸೂರಿನ ವಾಕ್‌ಶ್ರವಣ ಸಂಸ್ಥೆಯಲ್ಲಿ ತೋರಿಸಿ, ಅಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಅನುಸರಿಸಿದೆವು.

ಇದು ಅವಳಿಗೆ ಸರಳವಾಕ್ಯಗಳನ್ನು ರಚಿಸಿ ಸಂವಹನ ಮಾಡಲು ನೆರವಾಯಿತು. ದಾವಣಗೆರೆಯ ವಿಶೇಷಮಕ್ಕಳ ತಜ್ಞ ಡಾ.ಕುಲಕರ್ಣಿ ಅವರು ‘ಅವಳನ್ನು ನೀವು ವಿಶೇಷ ಮಕ್ಕಳ ಶಾಲೆಗೆ ಸೇರಿಸುವುದರ ಬದಲು, ನೀವಿರುವ ಚಿಕ್ಕ ಊರಿನಲ್ಲೇ ಸಹಜ ಮಕ್ಕಳ ಶಾಲೆಯಲ್ಲೇ ಓದಿಸಿ’ ಎಂದು ಸಲಹೆ ನೀಡಿದರು. ಅದರಂತೆ ನಮ್ಮ ಆತ್ಮೀಯರು ನಡೆಸುವ ಹೊಸದುರ್ಗದ ಕಾನ್ವೆಂಟ್ ಶಾಲೆಯೊಂದಕ್ಕೆ ದಾಖಲಾದ ಸುಶ್ರಾವ್ಯ, ತನ್ನ ಶಾಲಾ ಜೀವನವನ್ನು ಅತ್ಯಂತ ಸಹಜವಾಗಿ ಸ್ವೀಕರಿಸಿದಳು.

ಆತ್ಮೀಯ ಪ್ರೀತಿ ತೋರಿಸುವ ಸಹಪಾಠಿ ಮಕ್ಕಳು, ವಿಶೇಷ ಕಾಳಜಿ ತೋರಿಸುವ ಆಡಳಿತ ಮಂಡಳಿ, ತಾಳ್ಮೆಯಿಂದ ಕಲಿಸುವ ಶಿಕ್ಷಕ-ಶಿಕ್ಷಕಿಯರು ಸುಶ್ರಾವ್ಯಳಿಗೆ ದೊರೆತಿದ್ದು ನಮ್ಮ ಪುಣ್ಯವೆಂದೇ ಹೇಳಬೇಕು. ಈಗ ಎಲ್ಲಾ ಮಕ್ಕಳಂತೆಯೇ ಕನ್ನಡ, ಇಂಗ್ಲಿಷ್, ಹಿಂದಿ  ಓದಿ ಬರೆಯಬಲ್ಲ ಸುಶ್ರಾವ್ಯಳ ಈ ಸಾಧನೆಯ ಹಿಂದಿರುವ ಶಕ್ತಿ ಅವಳ ತಾಯಿ ರೇಖಾ.

ಇದಕ್ಕಾಗಿಯೇ ವಿಶೇಷ ಮಕ್ಕಳ ತರಬೇತಿ ಕುರಿತಾದ ಸ್ನಾತಕೋತ್ತರ ಡಿಪ್ಲ್ಲೊಮಾ ಕೂಡಾ ಪಡೆದ ರೇಖಾ, ಸುಶ್ರಾವ್ಯಳಿಗೆ ಪ್ರತಿನಿತ್ಯ ಪ್ರಶಿಕ್ಷಣ ನೀಡುತ್ತಾಳೆ. ಅವಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತುಂಬು ಆಸ್ಥೆಯಿಂದ ತೊಡಗಿಸುತ್ತಾಳೆ. ಹೀಗಾಗಿ ಸುಶ್ರಾವ್ಯ ಪ್ರತಿವರ್ಷ ಶಾಲಾ ವಾರ್ಷಿಕೋತ್ಸವದ ನೃತ್ಯ, ಛದ್ಮವೇಷ ಸ್ಪರ್ಧೆ, ರಸಪ್ರಶ್ನೆ, ವಿಜ್ಙಾನ ವಸ್ತುಪ್ರದರ್ಶನ ಮುಂತಾದವುಗಳಲ್ಲಿ ಭಾಗವಹಿಸಿ  ಬಹುಮಾನ ಗಳಿಸುತ್ತಾಳೆ, ಎಲ್ಲರ ಮೆಚ್ಚುಗೆಗೆ ಪಾತ್ರಳಾಗುತ್ತಾಳೆ.

ಮಕ್ಕಳು ‘ಇವರು ಸುಶ್ರಾವ್ಯಳ ತಂದೆ’ ಎಂದು ಗುರುತಿಸಿದಾಗ ನನಗೆ ಹೆಮ್ಮೆಯಾಗುತ್ತದೆ. ಸಹಜ ಮಕ್ಕಳ ಶಾಲೆಯಲ್ಲಿ, ಅತ್ಯಂತ ಸಹಜಳಾಗಿ ಮುಖ್ಯವಾಹಿನಿಯಲ್ಲಿ ಬೆರೆತಿರುವುದೇ ಸುಶ್ರಾವ್ಯಳ ಸಾಧನೆ. ಡೌನ್‌ಸಿಂಡ್ರೋಮ್‌ಅನ್ನೇ ಡೌನ್ ಮಾಡಿದ ಉಡುಪಿಯ ಸಾಧಕಿ ಮಾಳವಿಕಾಳಂತೆ, ಮುಖ್ಯವಾಹಿನಿಯಲ್ಲೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳಲ್ಲಿ ಪಾಸು ಮಾಡಿಸಿ ಅವಳ ಕಾಲ ಮೇಲೆ ನಿಲ್ಲುವಂಥ ಸ್ವಾವಲಂಬಿಯಾಗಿಸುವುದೇ ನಮ್ಮ ಮುಂದಿರುವ ಗುರಿ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT