ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತು ‘ಸುವರ್ಣ ಕಾಲ’

Last Updated 16 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆ ನೆನಪುಗಳು ಮಾಸಿಲ್ಲ. ಹಳ್ಳಿಗಳಲ್ಲಿ ಎಚ್‌ಎಂಟಿ ವಾಚ್‌ ಕಟ್ಟಿದವರಲ್ಲಿ ಅದನ್ನು ನೋಡಲು ಮುಗಿ ಬೀಳುತ್ತಿದ್ದರು. ಇಂತಹ ‘ಸುವರ್ಣಯುಗ’ ದಾಟಿ ಬಂದ ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆ ಎರಡನೇ ತಲೆಮಾರು ನೋಡಲಾಗದೇ ಇನ್ನು ಕೆಲವೇ ದಿನಗಳಲ್ಲಿ ಗತಕಾಲದ ನೆನಪು ಬಿಟ್ಟು ಬಾಗಿಲು ಮುಚ್ಚುತ್ತಿದೆ.
ಈ ಕೈ ಗಡಿಯಾರದ ಜತೆ ನೆನಪಿನ ಸಂಬಂಧಗಳಿವೆ. ಮೊದಲ ಸಂಬಳದಲ್ಲಿ ವಾಚ್‌ಕೊಂಡ, ಅಳಿಯನಿಗೆ ಉಡುಗೊರೆಯಾಗಿ ಕೊಟ್ಟ ದಿನದ ನೆನಪು ಮರೆಯಲು ಸಾಧ್ಯವೇ ಇಲ್ಲ. 

ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಜಪಾನ್‌ ಭೇಟಿಗೆ ಹೋದಾಗ ಅಲ್ಲಿನ ಸಿಟಿಜನ್‌ ವಾಚ್‌ ಕಾರ್ಖಾನೆ ನೋಡಿ ನಮ್ಮ ದೇಶದಲ್ಲೂ ಇಂಥದೊಂದು ವಾಚ್‌ ಕಾರ್ಖಾನೆ ಬೇಕೆಂದು ಬಯಸಿ, ಬಯಸಿ ಎಚ್ಎಂಟಿ ಆರಂಭಿಸಿದರು. ೧೯೬೧ರಲ್ಲಿ ಬೆಂಗಳೂರಿನ ಎಚ್‌ಎಂಟಿ ಕಾರ್ಖಾನೆಯಲ್ಲಿ ಮೊತ್ತಮೊದಲಿಗೆ ಜಪಾನ್‌ ಸಹಭಾಗಿತ್ವದಲ್ಲಿ ವಾಚ್‌ ಘಟಕ ಆರಂಭಗೊಂಡಿತು.

 

ದೇಶದ ಐದು ಘಟಕಗಳಲ್ಲಿ ಈಗಿರುವ ಕಾರ್ಮಿಕರ ಸಂಖ್ಯೆ– ೧೦೪೦

ಆಸ್ತಿ ಮಾರಾಟದಿಂದ ಬರುವ ಹಣ–  ₨೨೮೦೦ ಕೋಟಿ
ಸರ್ಕಾರಕ್ಕೆ ಕೊಡಬೇಕಾದ ಸಾಲ–  ₨೨೪೦೦ ಕೋಟಿ

ಕಾರ್ಮಿಕರಿಗೆ ಉಳಿಯುವ ಹಣ– ₨೪೦೦ ಕೋಟಿ

ವಾಚ್‌ಗಳಿಗೆ ಬೇಡಿಕೆ ಹೆಚ್ಚಿದ ಕಾರಣ ಅಲ್ಲಿಯೇ ಎರಡನೇ ಘಟಕ ತೆರೆಯಲಾಯಿತು. ನಂತರ ಜಮ್ಮು ಕಾಶ್ಮೀರದಲ್ಲಿ ಮೂರನೇ ಘಟಕ ಆರಂಭಿಸಲಾಯಿತು. ತುಮಕೂರಿನಲ್ಲಿ ಆಗಿನ ಸಂಸದ ಕೆ.ಲಕ್ಕಪ್ಪ ಅವರ ಪರಿಶ್ರಮ, ಪ್ರಧಾನಿ ಇಂದಿರಾಗಾಂಧಿ ಅವರ ಕನಸಿನ ಕೂಸಾಗಿ ೧೯೭೯ರಲ್ಲಿ ನಾಲ್ಕನೇ ಘಟಕವಾಗಿ ಸ್ಥಾಪಿಸಲಾಯಿತು. ತುಮಕೂರು ಘಟಕದ ಕೆಲಸ, ಕಾರ್ಯವೈಖರಿ, ಲಾಭಕ್ಕೆ ಮಾರುಹೋಗಿ ಉತ್ತರಾಂಚಲದ ರಾಣಿಬಾಗ್‌ನಲ್ಲಿ ಐದನೇ ಘಟಕವನ್ನು ಆಗಿನ ಕೈಗಾರಿಕಾ ಸಚಿವ ಎನ್‌.ಡಿ.ತಿವಾರಿ ತೆರೆಯಲು ಕಾರಣವಾದರು. ಈಗ ಈ ಐದು ಘಟಕಗಳು ನಷ್ಟದಲ್ಲಿದ್ದು ಎಲ್ಲವೂ ಒಮ್ಮೆಗೆ ಮುಚ್ಚಲು ಕೇಂದ್ರ ಸರ್ಕಾರ ಅಡಿ ಹೆಜ್ಜೆ ಇಟ್ಟಿದೆ.

ತುಮಕೂರು ಎಚ್‌ಎಂಟಿ ವಾಚ್‌ ಫ್ಯಾಕ್ಟರಿಯ ವಾಚ್ ಗಳು ದೇಶ, ವಿದೇಶದಲ್ಲಿ ಪ್ರಸಿದ್ಧವಾಗಿದ್ದವು. ಇಲ್ಲಿ ಉತ್ಪಾದಿಸುತ್ತಿದ್ದ ಮ್ಯೆಕಾನಿಕಲ್‌ ತಂತ್ರಜ್ಞಾನದ (ಕೀ ಕೊಡುವ) ಪೈಲಟ್‌, ಜನತಾ, ವಿಜಯ್‌, ಆಶಾ, ಸೋನಾ, ಕೊಹಿನೂರ್‌ ವಾಚ್‌ ಕೊಳ್ಳಲು ಶೋರೂಂಗಳಲ್ಲಿ ಜನ ಕ್ಯೂ ನಿಲ್ಲುತ್ತಿದ್ದ ಕಾಲವೂ ಇತ್ತು. ೧೯೮೦ರ ಸುಮಾರಿನಲ್ಲಿ ಸಂಗಂ, ಉತ್ಸವ್‌, ಎಲಿಗೆನ್ಸ್, ಇವಾನ್‌ ವಾಚ್‌ಗಳನ್ನು ವಾರಗಟ್ಟಲೆ ಕಾದು ಖರೀದಿಸಿದವರೂ ಇದ್ದಾರೆ. ವರ್ಷಕ್ಕೆ ೨೦ರಿಂದ ೩೦ ಲಕ್ಷ ವಾಚ್‌ಗಳನ್ನು ಇದೊಂದೇ ಘಟಕ ತಯಾರಿಸುತ್ತಿತ್ತು. ಗಡಿಯಾರ ಎಂದರೆ ಅದು ಎಚ್‌ಎಂಟಿ ಎಂಬ ಭಾವನೆ ಜನಮನದಲ್ಲಿತ್ತು.

ಕೈಕೊಟ್ಟ ಆರ್ಥಿಕ ನೀತಿಗಳು
ಜಪಾನ್‌ ಹೊರತುಪಡಿಸಿ ವಿಶ್ವದ ಬಹುತೇಕ ದೇಶಗಳಿಗೆ ಎಚ್‌ಎಂಟಿ ವಾರ್ಚ್ ರಫ್ತು ಆಗುತ್ತಿತ್ತು ಎಂದರೆ ಈಗ ಯಾರೂ ನಂಬುವುದಿಲ್ಲ. ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಂಪೆನಿಗೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳೇ ಮುಳುಗು ನೀರಾಯಿತು. ೧೯೯೧ರಲ್ಲಿ ದೇಶ ಗ್ಯಾಟ್‌ (ಜಿಎಟಿಟಿ: ಜನರಲ್‌ ಅಗ್ರೀಮೆಂಟ್‌ ಆನ್‌ ಟಾರಿಫ್ಸ್‌ ಆ್ಯಂಡ್‌ ಟ್ರೇಡ್‌) ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ನೆಹರೂ ಮತ್ತು ಇಂದಿರಾ ಅವರ ಕನಸಿಗೆ ಮೊದಲ ಕೊಡಲಿ ಪೆಟ್ಟು ನೀಡಿತು. ಅಲ್ಲಿಂದೀಚೆಗೆ ಎಚ್‌ಎಂಟಿ ಸಾವಿನ ಹೆಜ್ಜೆ  ಹಾಕಿತು.

ಖಾಸಗೀಕರಣಕ್ಕೆ ದೇಶ ತೆರೆದುಕೊಂಡ ಕಾರಣ ಎಲ್ಲಡೆಯೂ ಖಾಸಗಿ ಕಂಪೆನಿಗಳಿಗೆ ಮಣೆ ಹಾಕಲಾಯಿತು. ಪರಿಣಾಮ, ಟೈಟಾನ್‌ ಖಾಸಗಿ ವಾಚ್‌ ಕಂಪೆನಿ ಸಹಿತ ಹಲವು ಮಾರುಕಟ್ಟೆ ಪ್ರವೇಶಿಸಿದವು. ಎಚ್‌ಎಂಟಿಯಲ್ಲಿದ್ದ ನುರಿತ, ಉನ್ನತ ಹುದ್ದೆಯಲ್ಲಿದ್ದ ಸಾಕಷ್ಟು ಮಂದಿ ಹೆಚ್ಚು ಸಂಬಳದ ಆಕರ್ಷಣೆಗೆ ಒಳಗಾಗಿ ಖಾಸಗಿ ಕಂಪೆನಿಗಳತ್ತ ಮುಖ ಮಾಡಿದರು. ಮಾನವ ಸಂಪನ್ಮೂಲದ ಕೊರತೆ, ಹೊಸ ಸವಾಲುಗಳಿಗೆ ಸಿದ್ಧತೆ ಮಾಡಿಕೊಳ್ಳದ ‘ಸರ್ಕಾರಿ ಆಲಸ್ಯ’ದ ಕಾರಣ ಎಚ್‌ಎಂಟಿ ಎಂಬ ನಾಡದೋಣಿ ಕಣ್ಣೆದುರು ನಡುನೀರಿನಲ್ಲಿ ಮುಳುಗತೊಡಗಿತು.

ಗ್ಯಾಟ್‌ ಒಪ್ಪಂದ ಮುಳುಗುತ್ತಿದ್ದ ದೋಣಿಗೆ ಮತ್ತೊಂದು ಕಲ್ಲು ಹಾಕಿತು. ವಾಚ್‌ಗಳಿಗೆ ಬೇಕಾದ ಮಾಡ್ಯೂಲ್‌ಗಳನ್ನು ಹೊರ ದೇಶಗಳಿಂದ ಅಮದು ಮಾಡಿಕೊಳ್ಳಲು ಖಾಸಗಿ ವಾಚ್‌ ಕಂಪೆನಿಗಳಿಗೆ ಅವಕಾಶ ನೀಡಿದ ಸರ್ಕಾರ ಎಚ್‌ಎಂಟಿಗೆ ನೀಡಲಿಲ್ಲ. ಕೇವಲ ₨೪೦ರಿಂದ ₨೪೫ಕ್ಕೆ ಸಿಗುತ್ತಿದ್ದ ಮಾಡ್ಯೂಲ್‌ ತಯಾರಿಸಲು ಎಚ್‌ಎಂಟಿ ₨೧೦೦ರಿಂದ ₨೧೨೫ ವ್ಯಯಿಸುತ್ತಿತ್ತು.

ಇದೇ ವೇಳೆ ಕಡಿಮೆ ಬೆಲೆಯಲ್ಲಿ ಮಾಡ್ಯೂಲ್‌ ತರಿಸಿಕೊಂಡ ಖಾಸಗಿ ಕಂಪೆನಿಗಳು ಮಾರುಕಟ್ಟೆಯಲ್ಲಿ ದರ ಸಮರ ಸಾರಿದವು. ಆದರೆ ಎಚ್‌ಎಂಟಿಗೆ ಸಾಧ್ಯ ಆಗಲಿಲ್ಲ. ಮಾರುಕಟ್ಟೆಯಲ್ಲಿ ಅಸ್ತಿತ್ವ ಕಳೆದುಕೊಂಡ ಬಳಿಕ ಕೇಂದ್ರ ಸರ್ಕಾರ ಮಾಡ್ಯೂಲ್‌ ಅಮದು ಮಾಡಿಕೊಳ್ಳಲು ಎಚ್‌ಎಂಟಿಗೂ ಅನುಮತಿ ನೀಡಿದರೂ ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು.

ಖಾಸಗಿ ಕಂಪೆನಿಗಳ ಮಾರುಕಟ್ಟೆ ತಂತ್ರಗಳಿಗೆ ಬದಲಿ ತಂತ್ರ ರೂಪಿಸುವಲ್ಲೂ ಈ ಸಾರ್ವಜನಿಕ ಉದ್ದಿಮೆ ಸೋತಿತು. ಇಲ್ಲವೇ ಸೋಲುವಂತ ನೀತಿ ಕೈಗೊಳ್ಳಲಾಯಿತು. ೨೦ ವಾಚ್‌ ಮಾರಿದರೆ ಒಂದು ವಾಚ್‌ ಉಚಿತ ಎಂಬ ಖಾಸಗಿ ಕಂಪೆನಿಗಳ ಮಾರುಕಟ್ಟೆ ತಂತ್ರದ ಮುಂದೆ ಎಚ್‌ಎಂಟಿ ನೆಲಕಚ್ಚತೊಡಗಿತು. ಸೌದಿ ಅರೇಬಿಯಾ ದೇಶದಲ್ಲಿ ಮಳಿಗೆ ತೆರೆದರೂ ಅದು ಪ್ರಯೋಜನಕ್ಕೆ ಬರಲಿಲ್ಲ.

ಫ್ಯಾಕ್ಟರಿಯ ಐದು ಘಟಕಗಳಲ್ಲಿ ೧೦ ಸಾವಿರ ಕಾರ್ಮಿಕರು ದುಡಿಯುತ್ತಿದ್ದರು. ತುಮಕೂರು ಘಟಕವೊಂದರಲ್ಲೇ ಎರಡು ಸಾವಿರ ಕಾರ್ಮಿಕರಿದ್ದರು.  ೨೦೦೫ರವರೆಗೂ ಈ ಘಟಕ ವಾರ್ಷಿಕ ₨೩೦ ಕೋಟಿವರೆಗೂ ವಹಿವಾಟು ನಡೆಸಿದ ದಾಖಲೆ ಇದೆ. ಆರಂಭದಿಂದ ಇಲ್ಲಿಯವರೆಗೆ ₨೧೮೦೦ ಕೋಟಿಗೂ ಹೆಚ್ಚು ವಹಿವಾಟು ನಡೆಸಲಾಗಿದೆ. ಈ ಘಟಕದ ಲಾಭವನ್ನು ನಷ್ಟದಲ್ಲಿದ್ದ ರಾಣಿಭಾಗ್ ಘಟಕ, ಮೆಷಿನ್‌ ಟೂಲ್ಸ್, ಲ್ಯಾಂಪ್ಸ್‌  ಉಳಿಸಲು ಬಳಸಲಾಯಿತು. ಈಗ ಎಲ್ಲರೂ ಸೇರಿ ಮುಳುಗುತ್ತಿದ್ದೇವೆ ಎನ್ನುತ್ತಿದ್ದಾರೆ ಇಲ್ಲಿನ ಕಾರ್ಮಿಕರು.

೨೦೦೦ನೇ ಇಸವಿಯಲ್ಲಿ ಎಚ್‌ಎಂಟಿ ಉಳಿಸುವ ಮೊದಲ ಹೆಜ್ಜೆಯಾಗಿ ಎಚ್‌ಎಂಟಿ ಉದ್ದಿಮೆಯನ್ನು ಬೇರೆ ಬೇರೆ ಭಾಗಗಳಾಗಿ ವಿಂಗಡಿಸಲಾಯಿತು. ಟ್ರ್ಯಾಕ್ಟರ್ಸ್, ಮೆಷಿನ್‌ ಟೂಲ್ಸ್, ಲ್ಯಾಂಪ್ಸ್‌ , ವಾಚ್‌ಗಳನ್ನು ಬೇರೆ ಬೇರೆ ಮಾಡಲಾಯಿತು. ಇದು ಕೂಡ ತಪ್ಪು ಹೆಜ್ಜೆಯೇ ಆಗಿತ್ತು ಎಂದು ಈಗ ಹೇಳಲಾಗುತ್ತಿದೆ.

ಒಂದೆಡೆ ಖಾಸಗೀಕರಣ ಪರ ನೀತಿ ಜಾರಿಗೊಳಿಸುತ್ತಾ, ಇನ್ನೊಂದೆಡೆ ಖಾಸಗಿಗೆ ಸವಾಲು ಒಡ್ಡಲು ಅನುಕೂಲವಾಗುವಂತೆ ಸಾರ್ವಜನಿಕ ಉದ್ದಿಮೆಗಳ ನೀತಿ ಬದಲಿಸಿ ಕೊಳ್ಳದ ಕೇಂದ್ರ ಸರ್ಕಾರದ ನೀತಿ ಕೆಟ್ಟ ಪರಿಣಾಮ ಬೀರಿದೆ.  ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್‌) ಜಾರಿಗೆ ತರಲಾಯಿತು. ಒಂದು ಸಲ ಪುನಶ್ಚೇತನಕ್ಕಾಗಿ ಸುಮಾರು ₨೯೦೦ ಕೋಟಿ ಹಣ ನೀಡಲಾಯಿತು.

ಕಂಪೆನಿ ಪುನಶ್ಚೇತನ, ಮಾರುಕಟ್ಟೆ ಸುಧಾರಣೆ, ಹೊಸ ಮಾನವ ಸಂಪನ್ಮೂಲಕ್ಕೆ  ಬಳಸದೇ ಈ ಹಣವನ್ನು ಸಂಬಳ, ವಿಆರ್‌ಎಸ್‌ ನೀಡಲು, ಸಾಲ ತೀರಿಸಲು ಬಳಸಲಾಯಿತು. ದುಡಿಯುವ ಬಂಡವಾಳ ಕೊಡಿ ಎಂಬ ಕಾರ್ಮಿಕರ ಕೂಗನ್ನು ಕೇಳಲೇ ಇಲ್ಲ. ಇಂಥ ನೀತಿಗಳೇ ದೇಶ,ವಿದೇಶದಲ್ಲಿ ಹೆಸರುವಾಸಿಯಾದ ಸಾರ್ವಜನಿಕ ಉದ್ದಿಮೆಯೊಂದು ಒಂದೇ ತಲೆಮಾರಿನಲ್ಲಿ ಕಣ್ಮುಚ್ಚುವಂತೆ ಮಾಡಿವೆ.

‘ವಿಆರ್‌ಎಸ್‌ ಬಯಸುವರಿಗೆ  ಪರಿಷ್ಕೃತ ವೇತನದಂತೆ ಸೌಲಭ್ಯ ನೀಡಲಿ. ಇಲ್ಲಿರುವ ಕಾರ್ಮಿಕರು ಗ್ರಾಮೀಣ ಪ್ರದೇಶದಿಂದ ಬಂದವರು. ಇದನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತುಮಕೂರಿಗೆ ಎಚ್‌ಎಎಲ್‌ ಘಟಕ ಮಂಜೂರಾಗಿದ್ದು, ಆ ಘಟಕದ ಜತೆ ವಿಲೀನ ಮಾಡುವತ್ತ ಚಿಂತಿಸಲಿ’ ಎನ್ನುತ್ತಾರೆ ತುಮಕೂರು ವಾಚ್‌ ಫ್ಯಾಕ್ಟರಿ ಕಾರ್ಮಿಕರ ಸಂಘದ ಕಾರ್ಯದರ್ಶಿ ಸತ್ಯನಾರಾಯಣ್‌, ಸಂಘಟನಾ ಕಾರ್ಯದರ್ಶಿ ಪಾಯೇಶ್‌ ಕುಮಾರ್‌.

ಪರ್ಯಾಯವೂ ಇದೆ...
ಆಧುನಿಕ ಟ್ರೆಂಡ್‌ ಆಗಿರುವ ಸ್ಮಾರ್ಟ್ ವಾಚ್‌ಗಳತ್ತ ಆ್ಯಪಲ್‌, ಸೋನಿ, ಸ್ಯಾಮ್‌ಸಂಗ್‌ನಂತಹ ಖಾಸಗಿ ಕಂಪೆನಿಗಳು ಮುಖ ಮಾಡಿವೆ. ಇದೇ ತಂತ್ರಜ್ಞಾನ ಬಳಸಿ ಎಚ್‌ಎಂಟಿ ಪುನಶ್ಚೇತನಗೊಳಿಸಲು ದಾರಿ ಇದೆ. ಆದರೆ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೇ ಎಂಬುದು ಮೂಲ ಪ್ರಶ್ನೆಯಾಗಿದೆ.

ತುಮಕೂರು ಫ್ಯಾಕ್ಟರಿಯಲ್ಲಿ ಈಗಲೂ ಉತ್ಪಾದಿಸುತ್ತಿರುವ ಸಂಗಂ, ಉತ್ಸವ್‌, ಎಲಿಗೆನ್ಸ್ ವಾಚ್‌ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಉಳಿದ ನಾಲ್ಕು ಘಟಕಗಳನ್ನು ಮುಚ್ಚಿ ಈ ಒಂದು ಘಟಕವಾದರೂ ಉಳಿಸಿಕೊಳ್ಳಬಹುದಾಗಿದೆ. ಎಚ್‌ಎಂಟಿ ಉಳಿಸಲು ಅದು ಗಳಿಸಿರುವ ಬ್ರಾಂಡ್‌ ಒಂದೇ ಸಾಕು.

ದೇಶದಲ್ಲಿ ಪ್ರತಿ ವರ್ಷ ೯೦ ಲಕ್ಷ ವಾಚ್‌ಗೆ ಬೇಡಿಕೆ ಇದೆ. ಎಚ್‌ಎಂಟಿ ಕೇವಲ ೧೨ ಲಕ್ಷ ವಾಚ್‌ ಮಾರಿದರೂ ಕಾರ್ಖಾನೆ ಲಾಭಗಳಿಸಬಹುದು ಎನ್ನುತ್ತಾರೆ ಇಲ್ಲಿನ ಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT