ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗೀಲಾರದ ಮಾತಿನ ಕತಿ

Last Updated 31 ಜನವರಿ 2015, 19:30 IST
ಅಕ್ಷರ ಗಾತ್ರ

‘ಎಷ್ಟು ಮಾತಾಡ್ತಿ..? ವಟಾವಟಾವಟಾ... ರಾತ್ರಿ ಬಾರಾ ಆಗೇದ... ಮಲ್ಕೋಬಾರ್ದ?’ ನನ್ನಮ್ಮ ನಾ ಎರಡನೆತ್ತೆ ಮೂರನೆತ್ತೆ ಇರೂಮುಂದ ಬೈತಿದ್ರು. ಬರೋಬ್ಬರಿ ಅರ್ಧರಾತ್ರಿ ಕಳದ್ರೂ ನನ್ನ ಮಾತು ಮುಗೀತಿರಲಿಲ್ಲ. ಯಾಕಂದ್ರ ಇಡೀ ದಿನ ನನ್ನಮ್ಮ ನಂಗ ಸಿಗ್ತಿರಲಿಲ್ಲ. ಅಮ್ಮನೂ ಸಾಲೀಗೆ ಹೋಗಿ ಪಾಠ ಮಾಡಿ ಬರ್ತಿದ್ಲು.

ಈಗ ಕಾಲಚಕ್ರ ತಿರುಗೇದ. ನಾನೂ ಅಮ್ಮ ಆಗೇನಿ. ನನಗೂ ಮಗಳದಾಳ. ಅಕೀನೂ ಅಷ್ಟೇ ಮಾತಾಡ್ತಾಳ... ಕಣ್ರೆಪ್ಪಿ ಗಲ್ಲಕ್ಕ ಆನಕೊಳ್ಳುವ ಮುಂದ ನಾನೂ ಅದನ್ನೇ ಹೇಳ್ತೀನಿ...
ಅಯ್ಯ... ಇದೇನು ಹೊಸಾದು? ಹೆಣ್ಮಕ್ಕಳಂದ್ರ ಮಾತಾಡದೇ ಇರ್ತಾರೇನು? ಮಾತಾಡೂದಕ್ಕೇ ಹೆಣ್ಮಕ್ಕಳು ಅಂತಾರ ಅಂತ ಮೂಗು ಮುರುದು ಹೇಳೋರೇ ಹೆಚ್ಚು.
ಆದ್ರ ಭಾಳ ಮಂದಿಗೆ ಗೊತ್ತಿಲ್ಲ... ಎಲ್ಲಾ ಹೆಣ್ಮಕ್ಕಳ ಮನಸಿನೊಳಗೂ ಒಂದಷ್ಟು ಹೇಳಲಾರದ ಮಾತಿರತಾವ. ಯಾರ ಮುಂದ ಎಷ್ಟು ಹೇಳಬೇಕೋ ಅಷ್ಟನ್ನೇ ಹೇಳಿ ಸುಮ್ನಾಗ್ತಾರ...

ಅಯ್ಯ ಶಿವನೇ... ಇಷ್ಟೆಲ್ಲಾ ಮಾತಾಡಿನೂ ಇನ್ನಾ ಮಾತಿರ್ತಾವ ಅಂತೀರೆಲ್ಲ ಅಂತ ಹುಬ್ಬು ಗಂಟು ಹಾಕ್ಕೊಂಡು ಓದುಬ್ಯಾಡ್ರಿ. ಜರಾ ದಮ್‌ ಹಿಡೀರಿ... ಈ ಮಾತಿನ ಮಜಕೂರ ಹೇಳ್ತೀನಿ.
ಹೆಣ್ಮಕ್ಕಳು ಎಷ್ಟೇ ಮಾತಾಡಿದ್ರೂ ಒಳಗಿನ ಮಾತು ಒಳಗೇ ಉಳೀತಾವ. ಕೆಲವೊಂದು ಮಾತು ಅಪ್ಪ ಅಮ್ಮಗ ಹೇಳಾಕೇ ಹೋಗೂದಿಲ್ಲ. ಅವರೆಲ್ಲಿ ತ್ರಾಸ ಮಾಡ್ಕೊಂತಾರ ಅಂತ. ಈ ವಯಸ್ಸಿನಾಗ ಅವರಿಗೆಲ್ಲಿ ಚಿಂತೀ ಹಚ್ಚೂನು ಅಂತ ಬಾಯಿ ಬಿಗ್ಕೊಂಡು ಸುಮ್ನ ತಾಳ್ಕೊಂಡು ಬಿಡ್ತಾರ.

ತಮಗ ತ್ರಾಸ ಆದ್ರೂ ತುಟಿ ಕಚ್ಚಿ ಒಳಗೊಳಗೆ ಬಿಕ್ಕಳಿಕಿ ನುಂಗ್ತಾರ. ಮಕ್ಕಳಿಗೆ ಗೊತ್ತಾಗಿ ಅವೆಲ್ಲಿ ತಪ್ಪು ತಿಳ್ಕೋತಾವೋ ಅಂತ. ಬಾಯಿಬಿಟ್ರ ಎಲ್ಲಿ ಮನೀಶಾಂತಿ ಕದಡಿ, ಮೌನದ ಕಣಿವಿಯೊಳಗ ಎಲ್ಲಾ ಮಾತೂ ಹುಗುದು ಹೋಗ್ತಾವ ಅನ್ನೂ ಅಂಜಕಿಗೆ ತುಟಿಗೆ ತುಟಿ ಅಂಟಸ್ಕೊಂಡು ಬಿಡ್ತಾರ. ಅವು ನಗಾಕೂ ಹಿಗ್ಗೂದಿಲ್ಲ. ಮನಿ ಮರ್ಯಾದಿ ವಿಷಯ ಬಂದ್ರಂತೂ ಇಡೀ ಮಾತೆನ್ನೂ ಮಾತಿನ ಕೋಣಿಗೆ ಗಂವ್ವೆನ್ನುವ ಕತ್ಲ ಕವೀತೈತಿ. ಕತ್ಲಾಗ ಹೊರ ಬರಲಾರದ ಮಾತು, ಕಣ್ಣೀರಾಗಿ ಗಲ್ಲ ನೆನಸ್ತೈತಿ. ಇಷ್ಟೆಲ್ಲ ಮಾತು ಬತ್ತಿ ಹೋಗಾಕ ಕಾರಣಗಳಾದ್ರೂ ಏನು? ಒಂದು ತಿರಸ್ಕಾರದ ಅವಮಾನ ಆದ್ರ.... ಇನ್ನೊಂದು ಅನುಮಾನದ ಶೂಲ.

ಇವೆರಡೂ ನಮ್ಮೊಳಗನ್ನ, ಹೊರಗನ್ನ ಇಡಿ ಇಡಿಯಾಗಿ ತಿಂದು ಹಾಕ್ತಾವ. ಹಂಗಾದಾಗ ಒತ್ತಡದ ಸುರಂಗ ಬಾಯಿ ತೆರಕೊಂಡು ನಮ್ಮನ್ನ ಒಳಗೊಳಗ ಎಳೀತದ. ಆಳಕ್ಕಿಳಿದಷ್ಟೂ ಒಂಟಿತನ ಹೆಚ್ಚಾಗ್ತದ... ಅದು ನಮ್ಮನ್ನ ತಿನ್ನಾಕ ಸುರು ಮಾಡ್ತದ. ಅವಾಗ ಮತ್ತ ಮಾತಿನ ಆಸರೆಯ ಕಡ್ಡಿ ಹಿಡೀತೀವಿ.

ಯಾರಿಗೆ ಗೊತ್ತು? ಯಾರ ಬಾಯಿಂದ ಯಾವ ಕ್ಷಣದೊಳಗ ನಮಗ ಭರವಸೆ ಅನ್ನುವ ಹುಲ್ಲುಕಡ್ಡಿ ಸಿಗ್ತದ ಅಂತ..!
ಇಷ್ಟಾದರೂ ಎಲ್ಲಾ ಮನಸಿನ ಮಾತಿಗೂ ಶಬ್ದದ ಆಸರೆ ಸಿಗೂದಿಲ್ಲ. ಕೆಲವು ಹುಬ್ಬಿನ ಗಂಟಿನೊಳಗ ಬುತ್ತಿ ಕಟ್ಗೊಂಡ್ರ, ಇನ್ನಷ್ಟು ಕಣ್ಣಂಚಿನ ನೀರಿನೊಳಗ ತುಳಕಾಕ ತುದಿಗಾಲನಾಗ ನಿಂತಿರ್ತಾವ. ಇನ್ನಷ್ಟು ಅವಡುಗಚ್ಚಿದ ತುಟಿಯೊಳಗ ನಾಲಗಿ ಮ್ಯಾಲೆ ನರಳಾಡ್ತಾವ.
ಎಲ್ಲಾರೂ ಹೇಳ್ತಾರ... ಏನರೆ ಅನ್ನಿಸಿದ್ರ ಮಾತಾಡಬೇಕು. ಮಾತಾಡಿದ್ರ ಮನಸು ಹಗುರ ಆಗ್ತದ ಅಂತ. ಆದ್ರ ಹೆಣ್ಮಕ್ಕಳ ಮನಸು ಸದಾ ಒಂದು ಎಚ್ಚರದೊಳಗ ಇರ್ತದ... ಭಾಳ ಮಾತಾಡಿ ನಾವೇ ಹಗುರಾದ್ವಿ ಅಂದ್ರ...?

ಇಂಥಾ ಅಂಜಕಿ, ಹಿಂಜರಕಿನೂ ಮೀರಿ ಯಾರರೆ ತಮ್ಮ ಮಾತು ಹೇಳ್ತಿದ್ರಂದ್ರ ಅದಕ್ಕ ಕಿವಿಯಾಗಬೇಕು. ಯಾಕಂದ್ರ ಕೆಲವೊಮ್ಮೆ ನಮ್‌ ಕಿವಿ ಕೇಳಿ ಸುಮ್ನಾಗೂದಿಲ್ಲ. ನಾಲಗಿಗೆ ಕಳಸಿ ಬಿಡ್ತಾವ. ಮತ್ತದು ಪಾಪ... ಆಚಾರ ಇಲ್ಲದ ನಾಲಗೆ... ಎಲ್ಲಾರ ಹತ್ರ ಮಾತಾಡಾಕ ಸುರು ಮಾಡ್ತದ. ಅಷ್ಟೇ ಆದ್ರ ಕಡಿಮಿ ಹಾನಿ ಆಗಬಹುದು. ತನಗ ಬೇಕಾದ ರುಚಿಯೆಲ್ಲ ಸೇರಿಸಿ ಮಾತಿನ ಸವಿ ಉಣ್ಣಸ್ತದ.... ಇಂಥೋರ ಮುಂದ ಮನಸಲ್ಲ, ವ್ಯಕ್ತಿತ್ವನೇ ಹಗುರಾಗಿ ಹೋಗ್ತದ.

ನಮ್ಮನಿ ಮಗ್ಗಲಕ ಜಿಯಾ ಮುಲ್ತಾನಿ ಅಂತಿದ್ರು. ನನ್ನ ಪಾಲಿನ ಯಶೋದೆ ಅವರು. ಅವರು ಯವಾಗಲೂ ಒಂದೇ ಮಾತು ಹೇಳ್ತಿದ್ರು. ‘ಕಮ್‌ ಬೋಲೊ, ಧೀರೆ ಬೋಲೊ, ಮೀಠಾ ಬೋಲೊ. ವರ್ನಾ ಮತ್‌ ಬೋಲೊ’... ಈ ಮಂತ್ರ ಅವಾಗವಾಗ ನೆನಪು ಆಗ್ತಿರ್ತದ. ಯಾಕಂದ್ರ ಕೆಲವೊಮ್ಮೆ ಎಲ್ಲಾ ಮರತು ಬೋಲೊಬೋಲೊ ನಡುವಿನ ಗೆರೀನೆ ಮರತು ಹೋಗಿರ್ತದ.

ಮಾತಿಗೆ ಬಂದಾಗ ಹಿಂಗೊಂದು ಮಾತು ಹೇಳೇಬಿಡ್ತೀನಿ... ಲಂಗುಲಗಾಮಿಲ್ದೆ ಮಾತಾಡೋರ ಮಾತಿಗೆ ತಲಿ ಕೆಡಿಸಿಕೊಳ್ಳೋರು ಭಾಳ ಮಂದಿ. ನಾನು, ನೀವು ಎಲ್ಲಾರೂ ಇದೇ ಸಾಲಿಗೆ ಬರ್ತೀವಿ. ಆದ್ರ ಏನಂದ್ರು ಅನ್ನೂದಕ್ಕಿಂತ ಯಾರು ಅಂದ್ರು ಅನ್ನೂದು ಭಾಳ ಮಹತ್ವದ್ದು. ಅದಕ್ಕಿಂತ ಯಾಕಂದ್ರು ಅನ್ನೂದೂ... ಮಾತು ಕೇಳಿ ಸುಮ್ನಾಗಬೇಕು. ಹೇಳದ ಮಾತಿನ ಬೆನ್ನ ಹತ್ತಬೇಕು. ಅವಾಗ ನಾವು ನಾವೇ ಆಗೂದು ಸುಲಭ ಆಗ್ತದ.

ಸಾಕಾತು ನೋಡ್ರಿ... ಬರೇ ಮಾತಿನ ಬಗ್ಗೆ ಹೇಳಿ ಹೇಳಿ... ಮೊಮ್ಮಾನ ಮಂತ್ರ ನೆನಪಾತು. ಈಗೊಂದಿಷ್ಟು ಸವಿಮಾತಿನ ಸಿಹಿಮಾತಿನ ಸುದ್ದಿಗೆ ಹೋಗೂನು. ಮಧುಮೇಹಿಗಳಿಗೂ ಇಲ್ಲಿ ವಿನಾಯ್ತಿ ಐತ್ರಿ. ಇವನ್ನು ಮಾತ್ರ ಬೇಕಾದಷ್ಟು ಸವೀಬಹುದು.
ನಮ್ಮನಿ ಹತ್ರ ಸರ್ದಾರ್ಜಿ ಒಬ್ರಿದ್ರು. ಅವರು ಎಲ್ಲಾದಕ್ಕೂ ‘ಛೊಲೊ ಆತು ಛೊಲೊ ಆತು, ನೀವು ಹೇಳೂದು ಅಗ್ದಿ ಖರೇ ಅದ’ ಅಂತಿದ್ರು. (ಅಚ್ಛೀ ಬಾತ್‌ ಹೈ, ಸಚ್ಚೀ ಬಾತ್‌ ಹೈ)

ಹಂಗಾಗಿ ಅವರ ಹತ್ರ ಸುದ್ದಿ ಹೇಳೋರು ಭಾಳ ಮಂದಿ. ಯಾರನ್ನೂ ಅಲ್ಲಗಳೀತಿರಲಿಲ್ಲ. ಭಾಳಷ್ಟು ಜಗಳ ಅವರ ಹತ್ರ ಬಗೀಹರೀತಿದ್ವು. ಒಮ್ಮೆ ಓಣ್ಯಾನ ಎಲ್ಲಾರೂ ಕೂಡಿದಾಗ ಈ ‘ಅಚ್ಛೀ, ಸಚ್ಚೀ ಬಾತಿನ’ ಮಾತು ಬಂತು. ಅವಾಗ ಅವರು ಹೇಳಿದ್ರು. ‘ಎದುರಿನಂವಾ ತಾನ ಖರೆ ಅಂದ್ಕೊಂಡ ಮಾತಾಡೂಮುಂದ ಏನೂ ಅನ್ನಬಾರದು. ಅಂವಾ ಶಾಂತ ಆದಾಗ ತಾನೇ ತಿಳಿ ಆಗ್ತಾನ. ತನ್ನ ತಿಳಿವು ತನಗೇ ದೊಡ್ದು. ನಾವು ಮಾತಾಡಿ ಹಗರ ಯಾಕ ಆಗಬೇಕು?’

ಆದ್ರ ಈಗ ನೋಡ್ರಿ ನಮಗ ಮಾತಾಡಾಕ ವ್ಯಾಳೀನೆ ಇರಲಾರ್ದಹಂಗ ಆಗೇದ. ಮೊದಲಾದ್ರ ಚಾ ಬಿಸ್ಕೀಟ್‌ ಜೋಡಿ ಮಾತಿಗೆ ಕುಂದರ್ತಿದ್ವಿ. ಮಾತಿಗೆ ಕುಂತಾಗರೆ ಚಾದ ಜೋಡಿ ಚೂಡಾ ಮೆಲ್ತಿದ್ವಿ.

ಚಾ ಕುಡಿಯೂ ಸುದ್ದಿ ಹೇಳೂ ಮುಂದ ನಮ್ಮಜ್ಜನ ಮಾತು ಹೇಳದೇ ಇದ್ರ ಮಾತು ಪೂರಾನೇ ಆಗೂದಿಲ್ಲ ನೋಡ್ರಿ... ಯಾರರೆ ಬಂದಾಗ ‘ಜರಾ ಚಾ ಮಾಡ್ರೆವಾ... ’ ಅಂದ್ರ ಅಷ್ಟೆ ಒಲಿ ಹೊತ್ತಸಬೇಕಿತ್ತು. ‘ಚಾ ಮಾಡ್ತೀರೇನು?’ ಅಂದ್ರ, ‘ಹಾಲಿದ್ರ ಚಾ ಮಾಡ್ರಿ’  ಅಂದ್ರ ‘ಹಾಲಿಲ್ಲಜ್ಜ...’ ಅನ್ನೂ ಉತ್ರಾ  ಕೊಡಬೇಕಿತ್ತು. ಇಂಥಾ ಸೂಕ್ಷ್ಮದೊಳಗ ಸಂದೇಶ ರವಾನಿ ಆಗ್ತಿದ್ದು... ಉಪಚಾರ ಮಾಡಬೇಕೋ ಬ್ಯಾಡೋ ಅಂತ. ಈಗ ಸೂಕ್ಷ್ಮ ಸನ್ನಿ ಎಲ್ಲಾ ಮಾಯ ಆಗ್ಯಾವ. ಒಂದೇ ಮನ್ಯಾಗ ಇದ್ರೂ ಎಸ್‌ಎಂಎಸ್‌ ಮಾಡ್ಕೊಂತ ಇರ್ತೀವಿ...
ರಾತ್ರಿ ಬಾರಾ ಆದಾಗ ಕಣ್ಣೆವಿ ಗಲ್ಲಕ್ಕ ಹತ್ತೂಮುಂದಿನ ಮಾತು ಬಂತಲ್ಲ, ಅದಕ್ಕೇ... ಮಾತಿಗೆ... ಇಷ್ಟೆಲ್ಲ ಹೇಳಬೇಕಾತು ನೋಡ್ರಿ... ಮುಗೀಲಾರದ ಮಾತಿವು... ಆದ್ರೂ ಮುಗಸೂನಂತ! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT