ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಧತೆಗೆ ಕ್ರೌರ್ಯದ ಪರದೆ

ಮಕ್ಕಳು ಮತ್ತು ಅಪರಾಧ
Last Updated 15 ಮೇ 2015, 19:30 IST
ಅಕ್ಷರ ಗಾತ್ರ

ಬಾಲಾರೋಪಿಗಳ ವಯಸ್ಸಿನ ಬಗ್ಗೆ ದೇಶದಲ್ಲಿ ಈಗ ಚರ್ಚೆ ನಡೆಯುತ್ತಿದೆ. ದೆಹಲಿಯ ಸಾಮೂಹಿಕ ಅತ್ಯಾಚಾರ- ಕೊಲೆ ಪ್ರಕರಣದಲ್ಲಿ ಒಬ್ಬ ಬಾಲಕ ಇದ್ದದ್ದು ಮತ್ತು ಆ ಗುಂಪಿನಲ್ಲಿ ಇದ್ದವರಲ್ಲಿ ಆತ ಎಲ್ಲರಿಗಿಂತ ಹೆಚ್ಚು ಕ್ರೌರ್ಯದಿಂದ ವರ್ತಿಸಿದ್ದು, ಈಗಾಗಲೇ ವಿವಾದಿತ ವಿಷಯವಾಗಿದ್ದ ‘ಯಾರು ಬಾಲಾರೋಪಿ’ ಎಂಬ ಬಗೆಗಿನ ಚರ್ಚೆಯನ್ನು ಮತ್ತಷ್ಟು ಬಲವಾಗಿಸಿದೆ. 

ಬಾಲಾರೋಪಿಗಳ ವಯಸ್ಸಿನ ಮಿತಿ, ಅವರು ಮಾಡುವ ಅಪರಾಧದ ರೀತಿಗಳು ಮತ್ತು ಕ್ರೌರ್ಯ ಚರ್ಚಾರ್ಹ ವಿಷಯಗಳೇ. ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ (ಎನ್‌ಸಿಆರ್‌ಬಿ) 2013ರ ಅಂಕಿ-ಅಂಶಗಳ ಪ್ರಕಾರ, 16ರ ವಯಸ್ಸಿನ ಮಕ್ಕಳು ಶೇ 2.4ರಷ್ಟು ಲೈಂಗಿಕ ಅಪರಾಧಗಳನ್ನು ಎಸಗಿದ್ದರೆ, ಉಳಿದ ಎಲ್ಲ ವಯಸ್ಸಿನ ಮಕ್ಕಳು ಶೇ 3.4ರಷ್ಟು ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ. 2002ರಿಂದ 2012ರವರೆಗೆ ಬಾಲಕರಿಂದ ನಡೆದ ಅತ್ಯಾಚಾರದ ಪ್ರಕರಣಗಳಲ್ಲಿ ಶೇ 143ರಷ್ಟು ಏರಿಕೆ ಕಂಡು ಬಂದಿದೆ.

ಈ ಗಮನಾರ್ಹ ಏರಿಕೆಯನ್ನು ಅಲಕ್ಷಿಸುವುದಾಗಲಿ, ವಿಶ್ಲೇಷಿಸದೆ ಇರುವುದಾಗಲಿ, ಚರ್ಚೆ ಮಾಡದೆ ಸುಮ್ಮನಿರುವುದಾಗಲಿ ಸಾಧ್ಯವಾಗದ ಮಾತು.  ಸಹಜವಾಗಿ ಮುಂದಿನ ಪ್ರಶ್ನೆ ಯಾವುದೆಂದರೆ, ಬಾಲಕರ  ಅಪರಾಧದ ತೀವ್ರತೆಗೂ ಅವರ ವಯಸ್ಸಿಗೂ ಸಂಬಂಧ ಕಲ್ಪಿಸಬೇಕೇ, ಬೇಡವೇ ಎಂಬುದು. 

17 ವರ್ಷದ ಹುಡುಗ ಕೊಲೆ / ಅತ್ಯಾಚಾರವನ್ನು ಮಾಡಿಯೂ ಯಾವ ಶಿಕ್ಷೆಯೂ ಇಲ್ಲದೆ ಪಾರಾಗಬೇಕೆ?  ಈಗಿರುವ ಕಾನೂನಿನ ಪ್ರಕಾರ, 18 ವರ್ಷಗಳ ನಂತರ ವೀಕ್ಷಣಾ ಗೃಹಗಳಲ್ಲಿ (Observation home) ಬಾಲಾರೋಪಿಗಳನ್ನು ಇಡುವ ಹಾಗಿಲ್ಲ.  ಹಾಗೆಯೇ ಸೆರೆಮನೆಯಲ್ಲಿ 18 ವರ್ಷಗಳ ಕೆಳಗಿನವರು ಇರುವ ಹಾಗಿಲ್ಲ.  ಅಂದರೆ ದೆಹಲಿ ಪ್ರಕರಣದ ಬಾಲಕ ಕೆಲವು ತಿಂಗಳುಗಳಲ್ಲಿ ಹಾಯಾಗಿ ಹೊರಬರುತ್ತಾನೆ! ಬಾಲಾರೋಪಿಗಳ ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಯಾರೇ ಆಗಲಿ, ಅತ್ಯಾಚಾರ-ಕೊಲೆಗಳಂಥ ಹೇಯ ಕೃತ್ಯಗಳಿಗೆ ತುತ್ತಾದ ವ್ಯಕ್ತಿಗಳ ಮಾನವ ಹಕ್ಕುಗಳ ಬಗ್ಗೆಯೂ ಮಾತನಾಡಲೇಬೇಕಾಗುತ್ತದೆ.

ಆದರೆ ಮಕ್ಕಳ `ಅಪರಾಧ ‘ತೇಲುವ ಮಂಜುಗಡ್ಡೆ’ಯ ತುದಿ ಅಷ್ಟೇ.  ಅಂದರೆ ಈ ಸಮಸ್ಯೆಯ ಒಂದು ಅಂಶ ಮಾತ್ರ.  ಮಂಜುಗಡ್ಡೆಯ ದೊಡ್ಡ ಪಾಲು ನೀರಿನ ಕೆಳಗೆ ಅಡಗಿರುವ ಹಾಗೆ ಈ ಸಮಸ್ಯೆಗೆ ಬಹು ಆಯಾಮಗಳಿವೆ. ವೈಜ್ಞಾನಿಕ, ಮನೋಸಾಮಾಜಿಕ ಮತ್ತು ಭಾವನಾತ್ಮಕ ದೃಷ್ಟಿಕೋನಗಳಿಂದ ಈ ಸಮಸ್ಯೆಯನ್ನು ನೋಡಬೇಕಾಗುತ್ತದೆ.

ಬಾಲ್ಯದ ಪ್ರತಿ ನಡವಳಿಕೆಗೂ ಅದರ ಸಂವಾದಿಯಾದ ಜೈವಿಕ ಬೆಳವಣಿಗೆ, ಅಂದರೆ ಮೆದುಳಿನಲ್ಲಿ ಬದಲಾವಣೆಯನ್ನು ಗುರುತಿಸಬಹುದು. ಹದಿಹರೆಯಕ್ಕೆ ಕಾಲಿರಿಸಿದಾಗ ಈ ಬದಲಾವಣೆಗಳು ಇನ್ನಷ್ಟು ಕ್ಲಿಷ್ಟವಾಗುತ್ತವೆ. ಬಾಲ್ಯ ಮತ್ತು ಹದಿಹರೆಯ ಸಾಂಸ್ಕೃತಿಕ,  ಸಾಮಾಜಿಕ ಪ್ರಕ್ರಿಯೆಗಳಿಗೂ ಸಂಬಂಧಿಸಿದ ಹಂತಗಳು.  ಹಾಗಾಗಿ ಒಂದು ಸ್ಪಷ್ಟ ಆರಂಭ ಅಥವಾ ಅಂತ್ಯ ಇವೆರಡೂ ಕೇವಲ ದೈಹಿಕ ಮೈಲುಗಲ್ಲುಗಳಿಗೆ ಸಂಬಂಧಿಸಿದ್ದಲ್ಲ. ಅದರಲ್ಲಿಯೂ ಹದಿಹರೆಯವು ಬಾಲ್ಯ ಮತ್ತು ಹರೆಯದ ನಡುವಿನ ಹಂತ ಎಂದುಕೊಂಡರೂ ಕೆಲವು ವಿಷಯಗಳಲ್ಲಿ ಹುಡುಗ ‘ದೊಡ್ಡವನು’ ಎನಿಸಿದರೆ ಮತ್ತೆ ಕೆಲವಕ್ಕೆ ‘ಚಿಕ್ಕವನು’ ಎನಿಸಿಕೊಳ್ಳುತ್ತಾನೆ.  ಅಮೆರಿಕದ ಬಾಲಕಿಯೊಬ್ಬಳು ಹೇಳುವಂತೆ, ಹದಿಹರೆಯವು`ಸಿನಿಮಾಕ್ಕೆ ದೊಡ್ಡವರಷ್ಟೇ ದುಡ್ಡು ತೆರಬೇಕಾದ, ಆದರೆ `ದೊಡ್ಡವರ ಸಿನಿಮಾಗಳನ್ನು ನೋಡಲಾಗದ ವಯಸ್ಸು!’

ಬೌದ್ಧಿಕ- ಭಾವನಾತ್ಮಕ ಪ್ರಬುದ್ಧತೆ ಬರದ ವಯಸ್ಸು ಎಂದೇ ಹದಿಹರೆಯವನ್ನು ಪರಿಗಣಿಸಲಾಗುತ್ತದೆ.  ಇಂದಿಗೂ ರೋಗ ನಿಯಂತ್ರಣ ಕೇಂದ್ರದಂಥ (ಸಿಡಿಸಿ)  ಸಂಸ್ಥೆಗಳು ಹದಿಹರೆಯವನ್ನು 10ರಿಂದ 24ರವರೆಗಿನ ವಯಸ್ಸು ಎಂದೇ ವ್ಯಾಖ್ಯಾನಿಸುತ್ತವೆ!
ಹಾಗಿದ್ದರೆ ಯಾವ ವಯಸ್ಸಿನಲ್ಲಿ ನಾವು ‘ನಿರ್ಧಾರ ತೆಗೆದುಕೊಳ್ಳುವ’ ಸಾಮರ್ಥ್ಯ ಹೊಂದುತ್ತೇವೆ? ದುರದೃಷ್ಟದ ಸಂಗತಿಯೆಂದರೆ, ಮಾನವನ ಮೆದುಳಿನ ಬಗ್ಗೆ ಅಪಾರವಾಗಿ ನಡೆದಿರುವ, ನಡೆಯುತ್ತಿರುವ ಸಂಶೋಧನೆಗಳು ಈ ಬಗ್ಗೆ ಇನ್ನೂ ಖಚಿತವಾದ ಉತ್ತರವನ್ನು ನೀಡಿಲ್ಲ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಇದು ಬಹು ಮುಖ್ಯವಾದ ಪ್ರಶ್ನೆ.  ವಾಹನ ಚಲಾಯಿಸುವುದಾಗಲಿ, ಮದ್ಯ ಖರೀದಿಸುವುದಾಗಲಿ, ಚುನಾವಣೆಯಲ್ಲಿ ಮತ ಹಾಕುವುದಾಗಲಿ, ಮದುವೆಯಾಗುವುದಾಗಲಿ ಇವೆಲ್ಲವೂ ದೈಹಿಕ ವಯಸ್ಸಿನ ಮೇಲೇ ನಿರ್ಧಾರವಾಗುತ್ತವೆ.

ಕೌಟುಂಬಿಕ ವಾತಾವರಣ, ವಿದ್ಯಾಭ್ಯಾಸ ಮತ್ತು ಸಹವಾಸ ಹದಿಹರೆಯದಲ್ಲಿ ‘ನಿರ್ಣಾಯಕ ಸಾಮರ್ಥ್ಯ’ವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ಸಂಶೋಧನೆಗಳು ನಿರೂಪಿಸಿವೆ. ಈ ಸಾಮರ್ಥ್ಯ ಮೆದುಳಿನ ಮುಮ್ಮೆದುಳು (pre frontal   cortex) ಭಾಗದ ಬೆಳವಣಿಗೆಯ ಮೇಲೆ ಅವಲಂಬಿಸಿರುತ್ತದೆ. ಬೌದ್ಧಿಕ ಸಾಮರ್ಥ್ಯ, ಸರಿಯಾದ ಸಾಮಾಜಿಕ ನಡವಳಿಕೆ ಮತ್ತು ವ್ಯಕ್ತಿತ್ವವನ್ನು ಈ ಭಾಗ ನಿಯಂತ್ರಿಸುತ್ತದೆ. ಈವರೆಗೆ ನಡೆದಿರುವ ಹಲವು ಅಧ್ಯಯನಗಳು ಆರೋಗ್ಯವಂತ ಹದಿಹರೆಯದವರಲ್ಲಿ ಮೆದುಳಿನ ಈ ಭಾಗದ ಬೆಳವಣಿಗೆ ಸುಗಮವಾಗಿರುವುದನ್ನೂ, ಅದೇ ಭಾವನಾತ್ಮಕ ಅಸ್ವಸ್ಥತೆ, ಶಾಲೆಗಳಲ್ಲಿ, ಕೌಟುಂಬಿಕ ವಾತಾವರಣದಲ್ಲಿ ತೊಂದರೆಯಿರುವ ಮಕ್ಕಳಲ್ಲಿ ಇದರ ಕಾರ್ಯಕ್ಷಮತೆಯಲ್ಲಿ ಸಮಸ್ಯೆ ಇರುವುದನ್ನೂ ಗುರುತಿಸಿವೆ.

ಮೇಲೆ ವಿವರಿಸಿದ ಪ್ರತಿ ಅಂಶವೂ ಮಕ್ಕಳ ನಡವಳಿಕೆಯ ಸಮಸ್ಯೆಗಳಲ್ಲಿ ಮನೋವೈದ್ಯಕೀಯ ಜಗತ್ತಿನಲ್ಲಿ ಪ್ರತಿನಿತ್ಯ ಅನುಭವಕ್ಕೆ ಬರುವಂಥವು.  ಅವು ಕಾನೂನಿನ ‘ಗಂಭೀರ’ ಅಪರಾಧಗಳ ಪರಿಧಿಗೆ ಬರುವುದಿಲ್ಲವಾದ್ದರಿಂದ ಚರ್ಚೆಯಾಗಲಾರವು, ಅಷ್ಟೆ! ಉದಾಹರಣೆಗೆ ನಡವಳಿಕೆ ಸಮಸ್ಯೆಯಿಂದ ನರಳುವ ಮಕ್ಕಳನ್ನು ತಂದೆ-ತಾಯಿ ಬಹಳಷ್ಟು ಸಲ ಮನೋವೈದ್ಯರ ಬಳಿ ಕರೆದುಕೊಂಡು ಬರುವುದು ‘ಇವನು ತುಂಬಾ ಕೆಟ್ಟ ಹುಡುಗ, ಕದಿಯುತ್ತಾನೆ, ಸುಳ್ಳು ಹೇಳುತ್ತಾನೆ, ಶಾಲೆಗೆ ಹೋಗುವುದಿಲ್ಲ’ ಎಂದೇ. ಹೊಡೆದು, ಎಲ್ಲ ವಿಧದ ಶಿಕ್ಷೆಗಳನ್ನೂ ನೀಡಿ ಕೊನೆಗೆ ಕರೆತರುವುದು ವೈದ್ಯರ ಬಳಿ! ಇದಕ್ಕೆ ಬಲವಾದ ವೈಜ್ಞಾನಿಕ ಆಧಾರವಿರುವ, ಅಂತರರಾಷ್ಟ್ರೀಯ ರೋಗ ವರ್ಗೀಕರಣದಲ್ಲಿ (International classification of diseases - ICD-10) 'conduct disorder' ಎಂಬ ಹೆಸರಿದೆ ಎಂಬುದೇ ಸಾಮಾನ್ಯ ಜನರಿಗಿರಲಿ ಮನೋವೈದ್ಯರನ್ನು ಹೊರತುಪಡಿಸಿ, ಇತರ ವೈದ್ಯರಿಗೂ ಗೊತ್ತಿಲ್ಲ!

ಕುತೂಹಲಕಾರಿ ಅಂಶವೆಂದರೆ conduct disorder ಇರುವ ಮಕ್ಕಳು ‘ಬಾಲಾಪರಾಧಿ’ಗಳಾಗುವ, ಮುಂದೆ ದೊಡ್ಡವರಾಗಿ ‘ಅಪರಾಧಿ’ಗಳಾಗುವ ಸಾಧ್ಯತೆ ಹೆಚ್ಚು. ಈ ಮಕ್ಕಳಿಗೆ ಇರುವ ವರ್ತನಾ ಚಿಕಿತ್ಸೆ/ ಕೌಟುಂಬಿಕ ಚಿಕಿತ್ಸೆ/ಸಾಧ್ಯವಿರುವಲ್ಲಿ ಔಷಧಿಗಳನ್ನು ನೀಡುವ ಮನೋವೈದ್ಯರ ಸಂಖ್ಯೆ, ಕೊಡಿಸಲು ಸಿದ್ಧವಿರುವ ಪೋಷಕರು, ಚಿಕಿತ್ಸೆಯನ್ನು ಮುಂದುವರಿಸುವ ಪೋಷಕರು ಮತ್ತು ಮಕ್ಕಳು, ಉಚಿತ ಸೌಲಭ್ಯ- ಸೇವೆಗಳು ಎಲ್ಲವೂ ಭಾರತದಲ್ಲಿ ಅತೃಪ್ತಿಕರವೇ. ಹೀಗಿರುವಾಗ ಯಾವುದೇ ಕಾನೂನುಗಳನ್ನು ಬದಲಿಸುವಾಗ, ತಿದ್ದುಪಡಿ ಮಾಡುವಾಗ ಈ ಎಲ್ಲ ವೈಜ್ಞಾನಿಕ ಅಂಶಗಳ ಅರಿವೂ ಅತ್ಯಗತ್ಯ.

ಇನ್ನೊಂದು ಆಯಾಮವೆಂದರೆ ಬದಲಾಗುತ್ತಿರುವ ಸಾಮಾಜಿಕ ಸ್ಥಿತಿ. ಟಿ.ವಿ/ ಅಂತರ್ಜಾಲ/ ಮೊಬೈಲ್ ಫೋನ್‌ಗಳು  ಇಂದಿನ ಹದಿಹರೆಯದ ಮನಸ್ಸುಗಳನ್ನು ಅಕಾಲಿಕ ಲೈಂಗಿಕ ಪ್ರಬುದ್ಧತೆ, ಚಂಚಲತೆಯತ್ತ ತಿರುಗಿಸಿರುವುದು ಸತ್ಯ. ಕ್ರೌರ್ಯದ ಬಗೆಗಿನ ವರದಿಗಳು, ವಿಡಿಯೊ  ದೃಶ್ಯಾವಳಿಗಳು ಇಂದು ಕ್ಷಣ ಮಾತ್ರದಲ್ಲಿ ವಿಶ್ವದಾದ್ಯಂತ ಹರಡುತ್ತವೆ. ಹದಿಹರೆಯದವರೂ ಸೇರಿ ಎಲ್ಲ ಮಕ್ಕಳೂ ಇದನ್ನು ನೋಡುವುದಕ್ಕೆ ನಿರ್ಬಂಧಗಳನ್ನು ಹೇರಲು ಯಾವುದೇ ಕಾನೂನಿಗೂ ಸಾಧ್ಯವಾಗಿಲ್ಲ.  ಇದರ ಪರಿಣಾಮಗಳು ಎರಡು. ಒಂದು, ಅವುಗಳನ್ನು ಅನುಕರಿಸುವ, ಅನುಸರಿಸುವ ಅಪಾಯ. ಎರಡು, ಕ್ರೌರ್ಯದ ಬಗ್ಗೆ ಮಕ್ಕಳ ಸೂಕ್ಷ್ಮ ಮನೋಭಾವವೇ ಮಾಯವಾಗುವುದು.  ಕಣ್ಣಮುಂದೆಯೇ ಕೊಲೆಯಾದರೂ, ‘ಅಯ್ಯೋ’ ಎನಿಸದಿರುವುದು, ‘ಅಬ್ಬಾ’ ಎನ್ನದಿರುವುದು. 

ಗುಡಗಾಂವ್‌ನ ಶಾಲೆಯೊಂದರಲ್ಲಿ ಎಂಟನೇ ತರಗತಿಯ ಇಬ್ಬರು ಹುಡುಗರು ಸಹಪಾಠಿಯೊಬ್ಬನನ್ನು ಪರವಾನಗಿ ಇದ್ದ ಪಿಸ್ತೂಲಿನಿಂದ ಗುಂಡಿಟ್ಟು ಕೊಂದಾಗ, ಕೊಲೆಯಾದ ಹುಡುಗ ಮತ್ತವನ   ಪೋಷಕರಿಗಾಗಿ ಮರುಗಬೇಕೋ ಅಥವಾ ಈ ರೀತಿ ಬೆಳೆದುಬಂದು, 13ನೇ ವಯಸ್ಸಿನಲ್ಲೇ ಕೊಲೆಗಾರರಾದ, ದ್ವೇಷದ ಮನಸ್ಥಿತಿಯಿಂದ ಹಿಂದೆ ಮುಂದೆ ಯೋಚಿಸದೆ ದುಡುಕುವ ಹುಡುಗರಿಗೆ ಚಿಕಿತ್ಸೆ ನೀಡಬೇಕೇ ಅಥವಾ ಶಿಕ್ಷೆಗೆ ಒಳಪಡಿಸಬೇಕೇ ಎಂಬ ಗೊಂದಲ ಮೂಡುವುದು.

ಮೇಲಿನ ಚರ್ಚೆಯಿಂದ, ಇಂದಿನ ಮಕ್ಕಳ ಮೇಲೆ ಪ್ರಭಾವ ಬೀರುವ ಅಂಶಗಳು ಬಹಳಷ್ಟಿರುವುದು ಸ್ಪಷ್ಟವಾಗುತ್ತದೆ. ಸಮಾಜದ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯ ಮಗುವಿನಿಂದ ಮಗುವಿಗೆ ಬೇರೆಯಾಗಿರುತ್ತದೆ. ಹೆಚ್ಚಿನವರು ನಿಭಾಯಿಸಿದರೆ ಕೆಲವರು ನಿಯಮಗಳನ್ನು ಮುರಿಯುತ್ತಾರೆ, ಹಿಂದು-ಮುಂದು ಯೋಚಿಸದೆ ತಪ್ಪೆಸಗುತ್ತಾರೆ.

ಹದಿಹರೆಯದವರಲ್ಲಿ ಏರುತ್ತಿರುವ ಆತ್ಮಹತ್ಯೆಗಳನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಅರ್ಧ ಶತಮಾನದ ಹಿಂದೆ 14-15 ವರ್ಷಗಳಿಗೆ ಋತುಮತಿಯರಾಗುತ್ತಿದ್ದ  ಹೆಣ್ಣು ಮಕ್ಕಳು ಈಗ 12-13ರ ವಯಸ್ಸಿಗೇ ದೊಡ್ಡವರಾಗುತ್ತಿದ್ದಾರೆ. ಅದರರ್ಥ ರಸದೂತ ಹಾರ್ಮೋನ್‌ಗಳ ಬದಲಾವಣೆ ದೇಹದಲ್ಲಿ ಬೇಗ ಬರಲಾರಂಭಿಸಿದೆ. ನಮ್ಮ ತಲೆಮಾರಿಗೆ ಹೋಲಿಸಿದರೆ ಲೈಂಗಿಕತೆಯ ಜ್ಞಾನ ಹಲವು ಮೂಲಗಳಿಂದ ಕೆಲವೊಮ್ಮೆ ಸರಿಯಾಗಿ, ಬಹಳಷ್ಟು ಸಲ ತಪ್ಪಾಗಿ ಹರಿದು ಬಂದು ಮಕ್ಕಳ ಮೇಲೆ ಹೊಸ ಒತ್ತಡ,  ಪ್ರೇಮ ಪ್ರಕರಣಗಳು, ಹದಿಹರೆಯದ ಗರ್ಭಧಾರಣೆ, ಅಪ್ರಾಪ್ತ ವಯಸ್ಕ ಮದುವೆಗಳಿಗೆ ಕಾರಣವಾಗುತ್ತಿದೆ.

ದೇಶದ ಸಂವಿಧಾನದಲ್ಲಿ ಹಲವು ಕಾನೂನುಗಳಿವೆ.  ಆದರೆ ಇವುಗಳಲ್ಲಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗದೆ, ಅಪರಾಧಿಗಳಲ್ಲದವರಿಗೆ ಶಿಕ್ಷೆ ಆಗುವ ಅಪಾಯವಿದೆ. ಕಾನೂನು ಎಷ್ಟೇ ಬಲವಾಗಿದ್ದರೂ ಅದನ್ನು ಪಾಲಿಸಬೇಕಾದ ನಾಗರಿಕರು ವೈಯಕ್ತಿಕವಾಗಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ, ಅಪರಾಧದ ಬೇರನ್ನು ಕಿತ್ತೊಗೆಯುವತ್ತ ಮನಸ್ಸು ಮಾಡದಿದ್ದರೆ ಕಾನೂನು ವ್ಯರ್ಥ ಪ್ರಯತ್ನವೇ ಸರಿ.  ಈ ಅಂಶ ಬಾಲಾರೋಪಿಗಳ  ವಯಸ್ಸಿನ ವಿಷಯಕ್ಕೂ ವಿಶೇಷವಾಗಿ ಅನ್ವಯಿಸುತ್ತದೆ.

ಮಕ್ಕಳ ಮನಸ್ಸು ಮುಗ್ಧತೆಯನ್ನೇ ಕಳೆದುಕೊಳ್ಳುತ್ತಿರುವ, ಬಾಲ್ಯವೇ ಇಲ್ಲವಾಗುತ್ತಿರುವ ಈ ಸಂದರ್ಭದಲ್ಲಿ ಬಾಲಾರೋಪಿಯ ವಯಸ್ಸು 16 ಅಥವಾ 18 ಎಂದು ವಿಧಿಸುವ  ಮಿತಿ ವಿಶೇಷವಾದ ಬದಲಾವಣೆಯನ್ನೇನೂ ಉಂಟು ಮಾಡಲಾರದು.  ಯುವತಿಯೊಬ್ಬಳು ಅತ್ಯಾಚಾರಕ್ಕೆ ಒಳಗಾದ ನೋವು, ಆ ನೋವಿನಿಂದ ಜನರಲ್ಲಿ ಉಂಟಾದ ಆವೇಶ ಈ ಚರ್ಚೆಯನ್ನು ಹುಟ್ಟುಹಾಕಿರುವುದು ಸ್ವಾಗತಾರ್ಹ. 

ಆದರೆ ಕೇವಲ ಆವೇಶದ ಭರದಲ್ಲಿ ವಯಸ್ಸಿನ ಮಿತಿ ನಿರ್ಧರಿಸುವ ಬದಲು, ಈ ಸಮಸ್ಯೆಯ ಎಲ್ಲ ಆಯಾಮಗಳನ್ನೂ ನೋಡಿ, ಪ್ರತಿ ವ್ಯಕ್ತಿಗೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರುವ ಬಗ್ಗೆ ಚಿಂತನೆ ನಡೆಯಬೇಕಿದೆ. 

ಎಲ್ಲಕ್ಕಿಂತ ಹೆಚ್ಚಾಗಿ ಚರ್ಚೆಯನ್ನು ಕಾನೂನಿಗೆ ಸೀಮಿತಗೊಳಿಸದೆ, ಬಾಲಾರೋಪಿಯನ್ನು ಆ ಮನಃಸ್ಥಿತಿಯಿಂದ ಹೊರತರುವ,  ಪುನರ್‌ಸಾಮಾಜೀಕರಣಗೊಳಿಸುವ ಮತ್ತು ಯಾವುದೇ ಮಕ್ಕಳು ಅಪರಾಧ ಎಸಗದಂತೆ  ಬೆಂಬಲ ನೀಡುವ ಸಾಮಾಜಿಕ ವ್ಯವಸ್ಥೆಯ ಪುನರುತ್ಥಾನ ನಮ್ಮ ಅಂತಿಮ ಗುರಿಯಾಗಬೇಕಿದೆ.
(ಲೇಖಕಿ ಮನೋವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT