ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿಡುವುದರಲ್ಲಿ ಅರ್ಥವಿಲ್ಲ

Last Updated 20 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಚೀನಾ ವಿರುದ್ಧ 1962ರ ಯುದ್ಧದಲ್ಲಿ ಭಾರತ ಅನುಭವಿಸಿದ ಹೀನಾಯ ಸೋಲಿನ ಕಾರಣಗಳೇನು ಎಂಬ ಬಗ್ಗೆ ಬೆಳಕು ಚೆಲ್ಲುವ ಲೆ.ಜ. ಹೆಂಡರ್‌ಸನ್‌ ಬ್ರೂಕ್‌್ಸ ಮತ್ತು ಬ್ರಿಗೇಡಿಯರ್‌ ಪಿ.ಎಸ್‌. ಭಗತ್‌ ಸಮಿತಿ ವರದಿಯನ್ನು ಕೇಂದ್ರದ ಇದುವರೆಗಿನ ಎಲ್ಲ ಸರ್ಕಾರಗಳು ಇಷ್ಟು ವರ್ಷಗಳಿಂದಲೂ ಮುಚ್ಚಿಡುತ್ತಲೇ ಬಂದಿವೆ. ಆದರೆ ಈಚೆಗೆ ಈ ವರದಿಯ ಕೆಲ ಭಾಗಗಳನ್ನು ಆಸ್ಟ್ರೇಲಿಯದ ಪತ್ರಕರ್ತ ನೆವಿಲೆ ಮ್ಯಾಕ್‌್ಸವೆಲ್‌ ಅವರು  ತಮ್ಮ ಅಂತರ್ಜಾಲ ತಾಣದಲ್ಲಿ (ವೆಬ್‌ಸೈಟ್‌) ಪ್ರಕಟಿಸಿದ್ದರು.

ಆದರೆ  ಆ ಪುಟಗಳು ತೆರೆದು­ಕೊಳ್ಳ­ದಂತೆ ಕಡಿವಾಣ ಹಾಕಲಾಗಿದ್ದು ಭಾರತದಲ್ಲೆಲ್ಲೂ ಅದನ್ನು ತೆರೆದು ಓದಲು ಸಾಧ್ಯವಿಲ್ಲದಂತಾಗಿದೆ. ಇದು ಈಗಿನ ಸರ್ಕಾರದ್ದೇ ಕೆಲಸ. ಏಕೆಂದರೆ ಸರ್ಕಾರವನ್ನು ಬಿಟ್ಟು ಬೇರೆ ಯಾರಿಗೂ ಹೀಗೆ ವೆಬ್‌ಸೈಟ್‌ ಮೇಲೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ವಿಶೇಷವಾಗಿ ನೆಹರೂ– ಗಾಂಧಿ ಕುಟುಂಬಕ್ಕೆ ವರದಿಯಿಂದ ಮುಜುಗರ ಆಗಬಹುದು ಎಂಬ ಭಯ  ಅಧಿಕಾರದಲ್ಲಿ ಇರುವವರಿಗೆ ಕಾಡುತ್ತಿರ­ಬಹುದು. ಮುಕ್ತ ಮಾಹಿತಿಯ ಈ ಯುಗದಲ್ಲಿ ಸರ್ಕಾರದ ಇಂಥ ನಡವಳಿಕೆ ತೀರಾ ಅಸಂಬದ್ಧ.
62ರ ಯುದ್ಧ ನಡೆದಾಗ ಪ್ರಧಾನಿಯಾಗಿದ್ದವರು ಜವಾಹರಲಾಲ್‌ ನೆಹರೂ.

ಆಗ ಸಾಕಷ್ಟು ಪೂರ್ವಸಿದ್ಧತೆ ಇಲ್ಲದೆ ಯುದ್ಧ ಸಾರಿ ಸೇನೆಗೆ ಸೂಕ್ತ ಮಾರ್ಗ­ದರ್ಶನ, ಶಸ್ತ್ರಾಸ್ತ್ರಗಳನ್ನು ಒದಗಿಸದೇ ಇದ್ದ ಪರಿಣಾಮವಾಗಿ ಅಪಾರ ಸಾವು ನೋವಿನ ಜತೆ ಬಹಳಷ್ಟು ಭೂಮಿಯನ್ನು ನಾವು ಕಳೆದುಕೊಳ್ಳಬೇಕಾಯಿತು. ಸೋಲಿನ ಹೊಣೆಯನ್ನು ಆಗಿನ ರಕ್ಷಣಾ ಸಚಿವ ವಿ.ಕೆ. ಕೃಷ್ಣಮೆನನ್‌ ತಲೆಗೆ ಕಟ್ಟಿ ಅಧಿಕಾರದಿಂದ ಇಳಿಸಲಾಯಿತು. ನಂತರ ಆ ಸ್ಥಾನಕ್ಕೇರಿದ ವೈ.ಬಿ. ಚವಾಣ್‌ ಅವರು ಸೇನೆಗೆ ನೀಡಿದ ಸೂಚನೆಯಂತೆ ರಚನೆಯಾಗಿದ್ದೇ ಬ್ರೂಕ್‌್ಸ ಮತ್ತು ಭಗತ್‌ ಸಮಿತಿ. ಆಸ್ಟ್ರೇಲಿಯದ ಪೌರರಾದರೂ ಭಾರತೀಯ ಸೇನಾ ಸೇವೆಯನ್ನು ಆಯ್ದುಕೊಂಡ ಬ್ರೂಕ್‌್ಸ ಮತ್ತು ಸಾಹಸಿ ಸೇನಾಧಿಕಾರಿ ಭಗತ್‌ ಅವರು ಕೊಟ್ಟ ವರದಿಯಲ್ಲಿ, ನೆಹರೂ ಅವರ ನೀತಿಯಲ್ಲಿ ಲೋಪ ಮತ್ತು ವೈಫಲ್ಯಗಳ ಉಲ್ಲೇಖವೂ ಇದೆ ಎಂದು ಹೇಳಲಾಗುತ್ತಿದೆ.

ವರದಿಯಲ್ಲಿ ಅತ್ಯಂತ ಸೂಕ್ಷ್ಮವಾದ ಮಾಹಿತಿಗಳು ಅಡಗಿರುವುದರಿಂದ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂಬುದು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರ ಪಟ್ಟು. ಆದರೆ ನೆವಿಲೆ ಅವರ ಪ್ರಕಾರ ಇದೊಂದು ಹುರುಳಿಲ್ಲದ ವಾದ. ಈಗಿನ ಸನ್ನಿವೇಶಕ್ಕೆ ಸರಿ ಹೊಂದುವ ಸೇನಾ ತಂತ್ರಗಾರಿಕೆ ಮತ್ತು ಸಮರ ಸಿದ್ಧತೆಗಳಿಗೆ ಸಹಾಯ­ವಾಗುವ ಯಾವ ಅಂಶಗಳೂ ವರದಿಯಲ್ಲಿ ಇಲ್ಲ ಎಂಬುದು ಅವರ ಪ್ರತಿ­ಪಾದನೆ. ಹಾಗೆ ನೋಡಿದರೆ, ಹಿಂದಿನ ತಪ್ಪುಗಳಿಂದ ಪಾಠ ಕಲಿತು ರಣತಂತ್ರ­ವನ್ನು ಸರಿಪಡಿಸಿಕೊಳ್ಳಲು ಈ ವರದಿ ನಮಗೊಂದು ಒಳ್ಳೆಯ ಮಾಹಿತಿ ಭಂಡಾರವಾಗಬಲ್ಲದು.

ನಿಯಮಗಳ ಪ್ರಕಾರ ಯಾವುದೇ ವರದಿಯ ಗೋಪ್ಯತೆ 30 ವರ್ಷಗಳ ನಂತರ ತಾನಾಗಿಯೇ ರದ್ದಾಗಬೇಕು. ಆ ನಂತರ ಅದು ಸಾರ್ವಜನಿಕರಿಗೆಲ್ಲ ಲಭ್ಯವಾಗಬಹುದಾದ ದಾಖಲೆ. ಆದರೆ 62ರ ಯುದ್ಧದ ಸೋಲಿನ ಕುರಿತ ವರದಿಗೆ ಮಾತ್ರ ಏಕೆ ನಿಯಮ ಅನ್ವಯವಾಗುವುದಿಲ್ಲ ಎಂಬುದನ್ನು ತಿಳಿ­ಯಲು ಬಹಳ ಬುದ್ಧಿವಂತಿಕೆಯೇನೂ ಬೇಕಿಲ್ಲ.  ಕಾಂಗ್ರೆಸ್ಸನ್ನು ನಿಯಂತ್ರಿಸುತ್ತಿ­ರುವ ಕುಟುಂಬವನ್ನು ಮೆಚ್ಚಿಸುವುದು  ಮುಖ್ಯವಾಗಿರುವುದರಿಂದಲೇ ವರದಿ­ಯನ್ನು ಗೋಪ್ಯವಾಗಿ ಇಡಲಾಗಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿದಂತೆ ಕಾಂಗ್ರೆಸ್ಸೇತರ ಸರ್ಕಾರಗಳೂ ಇದನ್ನು ಬಹಿರಂಗ ಮಾಡುವ ಗೋಜಿಗೆ ಹೋಗಲಿಲ್ಲ.

ಈಗ ಅದರಲ್ಲಿ ರಾಜಕೀಯ ಬೆರೆಸುವ ಯತ್ನ ಸರಿ­ಯಲ್ಲ. ನೆಹರೂ ಅವರಂಥ ಉನ್ನತ ವ್ಯಕ್ತಿತ್ವದ ನಾಯಕನ ಮೇಲಿಟ್ಟಿರುವ ಗೌರವಾದರಗಳನ್ನು  ಒಂದು ಯುದ್ಧದ  ಸೋಲಿನ ನೆಪದಲ್ಲಿ ಕಡೆಗಣಿಸು­ವಷ್ಟು ಅಪ್ರಬುದ್ಧರೇನಲ್ಲ ಭಾರತೀಯರು. 62ರ ಸೋಲಿನ  ಕಹಿ ನೆನಪನ್ನು ಜನ ಮರೆತಿದ್ದಾರೆ. ಆದರೆ ಸರ್ಕಾರಕ್ಕೆ ಮಾತ್ರ ಅದರಿಂದ ಹೊರಬರಲು ಸಾಧ್ಯವೇ ಇಲ್ಲವೇನೋ? ಈಗಲಾದರೂ ಸರ್ಕಾರಕ್ಕೆ ವಿವೇಕ ಮೂಡಿ ವರದಿ ಬಹಿರಂಗಪಡಿಸಬೇಕು. ಈ ವರದಿಯುಳ್ಳ ವೆಬ್‌ಸೈಟ್‌ ಮೇಲಿನ ನಿರ್ಬಂಧ ತೆಗೆದು ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT