ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜುಗರ ತರುವ ಮೂತ್ರ ಸಮಸ್ಯೆ

Last Updated 27 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಜೋರಾಗಿ ಕೆಮ್ಮಿದಾಗ ಅಥವಾ ಗಹಗಹಿಸಿ ನಕ್ಕಾಗ ಸ್ವಲ್ಪ ಮೂತ್ರ ಹೊರಗೊಸರಿ ಮುಜುಗರ ತರುತ್ತಿದೆಯೇ? ಅದೂ ಹೆಚ್ಚಾಗಿ ಮಹಿಳೆಯರಲ್ಲಿ? ನಿಮಗೆ ‘ಇನ್ಕಾಂಟಿನೆನ್ಸ್ (ಅನಿಯಂತ್ರಿತ ಸ್ರಾವ)’ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ಗುದ ಭಾಗದಲ್ಲೂ ಈ ತೊಂದರೆ ಬರಬಹುದು ಆದರೆ ಹೆಚ್ಚಾಗಿ ಮೂತ್ರವಹಸ್ರೋತಸ್ಸಿನಲ್ಲಿ ಕಾಣುತ್ತದೆ.

ಈ ತೊಂದರೆಯಲ್ಲಿ ಮೂತ್ರವನ್ನು ಹತ್ತಿಕ್ಕಲಾರದಷ್ಟು ಕಷ್ಟವಾಗಿ ಒಡನೆ ಮೂತ್ರ ತೊಟ್ಟಿಕ್ಕಿ ಹೊರಬೀಳುತ್ತದೆ. ಇದು ಹೆಚ್ಚಾಗಿ ಮಹಿಳೆಯರಲ್ಲಿ ಮತ್ತು ವಯಸ್ಸಾದ ಗಂಡಸರಲ್ಲಿ ಕಾಣುವ ತೊಂದರೆ. ಅಕಾಲಿಕ ಮೂತ್ರಸ್ರಾವದಿಂದ ಅತೀವ ಮುಜುಗರವನ್ನುಂಟು ಮಾಡುವ ತೊಂದರೆಯಿದು.

ಇದರ ಬಗ್ಗೆ ತಿಳಿಯುವ ಮುನ್ನ ಮೂತ್ರವಿಸರ್ಜನೆಯ ಪ್ರಕ್ರಿಯೆ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ಮೂತ್ರಕೋಶದಲ್ಲಿ ಮೂತ್ರ ಉತ್ಪತ್ತಿಯಾದೊಡನೆ ದೇಹದಿಂದ ಹೊರಬರುವುದಿಲ್ಲ. ಒಂದು ನಿರ್ದಿಷ್ಟ ಪ್ರಮಾಣ ತಲುಪುವವರೆಗೆ (300-400ಮಿ.ಲಿ) ಅದು ಮೂತ್ರಬಸ್ತಿಯಲ್ಲಿ (ಬ್ಲ್ಯಾಡರ್) ಶೇಖರಣೆಗೊಂಡು ನಿರ್ದಿಷ್ಟ ಅವಧಿಯಲ್ಲಿ ಹೊರಹಾಕುತ್ತದೆ. ಇದು ಹೊರಗೆ ಹೋಗದಂತೆ ಬಸ್ತಿಯ ಸ್ನಾಯುಗಳು ಹಾಗೂ ಸ್ಫಿಂಕ್ಟರ್‌ಗಳು ತಡೆಯುತ್ತವೆ.

ಇವುಗಳ ಬಿಗಿತ ಸಡಿಲವಾದಾಗ ಮೂತ್ರ ವಿಸರ್ಜನೆಯಾಗುತ್ತದೆ. ಇವುಗಳು ತಮ್ಮ ಕೆಲಸ ನಿರ್ವಹಿಸುವಲ್ಲಿ ಸ್ನಾಯುಗಳು, ನರತಂತುಗಳು ಸಹಾಯ ಮಾಡುತ್ತವೆ. ಬಸ್ತಿಯು ತುಂಬಿದೆ ಎಂಬ ಸಂದೇಶ ನರಗಳಿಂದ ಬೆನ್ನು ಹುರಿಯ ಮೂಲಕ ಮಿದುಳಿಗೆ ತಲುಪಿ ಅಲ್ಲಿಂದ ಮೂತ್ರವಿಸರ್ಜನೆಯ ಆದೇಶದ ಸಂದೇಶವನ್ನು ಪುನ: ನರಗಳು ಸಂಬಂಧಪಟ್ಟ ಸ್ನಾಯುಗಳಿಗೆ ನೀಡಿ ಅವುಗಳು ಸಡಿಲಗೊಳ್ಳುವಂತೆ ಮಾಡುತ್ತದೆ.

ಒಟ್ಟಿನಲ್ಲಿ ಬಸ್ತಿಯ ಒಳಭಾಗದ ಸ್ನಾಯುಗಳು ಹಿಂಡುವುದು, ಸ್ಫಿಂಕ್ಟರ್ ಸಡಿಲವಾಗುವುದು, ನರಗಳಿಂದಾಗಿ ವಿಸರ್ಜಿಸಬೇಕೆನಿಸುವುದು ಇವೆಲ್ಲ ಸುಸೂತ್ರವಾಗಿ ನಡೆದಾಗ ಮೂತ್ರವಿಸರ್ಜನೆ ಸುಗಮವಾಗಿರುತ್ತದೆ. ಯಾವ ಹಂತದಲ್ಲಿ ತೊಂದರೆಯುಂಟಾದರೂ ಈ ಕಾರ್ಯದಲ್ಲಿ ಎಡವಟ್ಟಾಗಬಹುದು. ಅವುಗಳಲ್ಲಿ ಒಂದು, ಎಲ್ಲೆಂದರಲ್ಲಿ ಅಕಾಲಿಕ ಮೂತ್ರ ತೊಟ್ಟಿಕ್ಕುವ ತೊಂದರೆ. ಕೂಡಲೇ ಮೂತ್ರ ವಿಸರ್ಜಿಸಬೇಕೆಂಬ ಅನಿಸಿಕೆಯಾಗಿ ಮೂತ್ರ ಹೊರಗೊಸರುವುದು.

ಇನ್ಕಾಂಟಿನೆನ್ಸ್ (ಅನಿಯಂತ್ರತೆ) ನಾಲ್ಕು ವಿಧದಲ್ಲಿವೆ.
* ಅತಿ ಒತ್ತಡದಿಂದ (ಸ್ಟ್ರೆಸ್) * ಅತಿ ಪ್ರೇರಣೆ (ಹೋಗಬೇಕೆನಿಸುವುದು) (ಅರ್ಜ್)
* ತುಂಬಿ ಹರಿಯುವುದು (ಓವರ್‌ ಫ್ಲೋ) * ಮಾನಸಿಕ/ಇನ್ನಿತರ ರೋಗ (ಫ಼ಂಕ್ಷನಲ್)

ಸ್ಟ್ರೆಸ್: ಎಂದರೆ ಇಲ್ಲಿ ಮಾನಸಿಕ ಒತ್ತಡ ಅಲ್ಲ. ಬದಲಿಗೆ ಬಸ್ತಿಯ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಬೀಳುವ ಸಂದರ್ಭ. ಸ್ಟ್ರೆಸ್ ಇನ್ಕಾಂಟಿನೆನ್ಸ್‌ನಲ್ಲಿ ಕಿಬ್ಬೊಟ್ಟೆಯಲ್ಲಿ ಹೆಚ್ಚಿದ ಒತ್ತಡ ಶ್ರೋಣಿಯ (ಪೆಲ್ವಿಸ್) ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಹೇರಿ ಮೂತ್ರ ಒಸರುವಂತೆ ಮಾಡುತ್ತದೆ. ಇದು ಅತಿಯಾದ ವ್ಯಾಯಾಮ ಮಾಡುವಾಗ, ಭಾರ ಎತ್ತುವಾಗ, ಜೋರಾಗಿ ಕೆಮ್ಮಿದಾಗ, ಜೋರಾಗಿ ನಕ್ಕಾಗ, ಸೀನುವಾಗ ಕಾಣಬಹುದು. ಮುಖ್ಯಕಾರಣ ಗರ್ಭಧಾರಣೆ, ಹೆರಿಗೆ, ನಿಷ್ಕ್ರಿಯತೆ ಇತ್ಯಾದಿಗಳಿಂದ ಶ್ರೋಣಿಯ ಸ್ನಾಯುಗಳು ದುರ್ಬಲವಾಗುವುದು. ಅತಿಯಾದ ಬೊಜ್ಜು, ಪ್ರೋಸ್ಟೇಟ್ ಸರ್ಜರಿ, ಕೆಲವು ಔಷಧಿಗಳಿಂದಲೂ ಹೀಗಾಗಬಹುದು.

ಅರ್ಜ್: ಇನ್ಕಾಂಟಿನೆನ್ಸ್‌ನಲ್ಲಿ ಮೂತ್ರವಿಸರ್ಜನೆಯ ಅತೀವ ಅಗತ್ಯ ಆಗಾಗ್ಗೆ ಕಂಡುಬರುತ್ತದೆ. ಶೌಚಾಲಯಕ್ಕೆ ಹೋಗುವುದರೊಳಗೆ ಮೂತ್ರ ಒಸರಿ ಹೊರಬರುತ್ತದೆ. ಇದನ್ನು ‘ಓವರ್ಯಾಕ್ಟಿವ್ ಬ್ಲ್ಯಾಡರ್’ ಎಂದೂ ಹೇಳುತ್ತಾರೆ. ಇದು ಹೆಚ್ಚಾಗಿ ಮೂತ್ರಬಸ್ತಿಯ ನರದೌರ್ಬಲ್ಯ, ಮೆದುಳಿನ ನರತೊಂದರೆಗಳು, ಅಥವಾ ಬಸ್ತಿಯ ಸ್ನಾಯುಗಳ ತೊಂದರೆಯಿಂದ ಉಂಟಾಗುತ್ತದೆ. ಪಾರ್ಕಿನ್ಸನ್ಸ್, ಮಧುಮೇಹ, ಲಕ್ವ ಮುಂತಾದ ನರಸಂಬಂಧೀ ತೊಂದರೆಗಳಲ್ಲಿ ಇದು ಕಾಣಿಸಬಹುದು.

ಬಸ್ತಿಯ ಸೋಂಕು, ಕಲ್ಲು ಅಥವಾ ಕೆಲವು ಔಷಧಿಗಳಿಂದಲೂ ಬರಬಹುದು. ಹೆಚ್ಚಿನ ಹೆಂಗಸರಲ್ಲಿ ಮೇಲಿನ ಎರಡೂ ತೊಂದರೆಗಳೂ ಇರುವ ಸಾಧ್ಯತೆಯಿವೆ. (ಓವರ್‌ ಫ್ಲೋ) ಪೂರ್ಣ ಹಾಗೂ ಸೂಕ್ತ ಪ್ರಮಾಣ ಹಾಗೂ ಸಮಯದಲ್ಲಿ ಖಾಲಿಮಾಡಲು ಅಶಕ್ತವಾಗಿರುತ್ತದೆ. ತುಂಬಿ ತುಳುಕುವ ಪ್ರಕ್ರಿಯೆಯಿರುತ್ತದೆ. ಇದು ಹೆಚ್ಚಾಗಿ ಗಂಡಸರಲ್ಲಿರುತ್ತದೆ. ಇದು ಬಸ್ತಿಯ ಸ್ನಾಯುಗಳ ದೌರ್ಬಲ್ಯ, ಪ್ರೋಸ್ಟೇಟ್ ಹಿಗ್ಗಿ, ಗಡ್ಡೆ ಅಥವಾ ಮೂತ್ರದ್ವಾರದ ಅಡಚಣೆಯಲ್ಲಿ, ಮಲಬದ್ಧತೆಯಲ್ಲಿ ಕಾಣುವ ಸಾಧ್ಯತೆಯಿದೆ. ಕೊನೆಯದಾಗಿ ಸಂಧಿವಾತ, ಮಧುಮೇಹದಲ್ಲಿನ ನರದೌರ್ಬಲ್ಯ, ಮಂದಬುದ್ಧಿ, ಮರೆಗುಳಿತನ ಮುಂತಾದುವುಗಳಲ್ಲಿ ಶೌಚಾಲಯಕ್ಕೆ ಹೋಗುವ ಮೊದಲೇ ಮೂತ್ರ ಹೊರಬರುವ ಸಾಧ್ಯತೆಯಿದೆ.

ಚಿಕಿತ್ಸೆ: ಮಾನಸಿಕ ಸ್ಥೈರ್ಯ ಮತ್ತು ಧೈರ್ಯ ತುಂಬುವುದರ ಜೊತೆಗೆ, ಬೇರಾವ ರೋಗಗಳಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕೆಲವು ವ್ಯಾಯಾಮಗಳು ಮತ್ತು ದಿನನಿತ್ಯದ ಕ್ರಮಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.  ಒತ್ತಡದ ಅನಿಯಂತ್ರತೆಯಲ್ಲಿ (ಸ್ಟ್ರೆಸ್) ಶ್ರೋಣಿಯ ಸ್ನಾಯುಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಬಹಳ ಮುಖ್ಯ.

ನಡಿಗೆ, ಓಡುವುದು, ಈಜುವುದು, ಸೈಕ್ಲಿಂಗ್, ಯೋಗ ಇತ್ಯಾದಿಗಳಿಂದ ಉದರ ಮತ್ತು ಶ್ರೋಣಿಯ ಸ್ನಾಯುಗಳು ಬಲಯುತವಾಗಿರುತ್ತದೆ. ಅಲ್ಲದೇ ‘ಕೇಜೆಲ್’ ತಂತ್ರಗಳನ್ನು ಅಭ್ಯಸಿಸುವುದು ತುಂಬಾ ಮುಖ್ಯ. ಇದನ್ನು ಪ್ರಸವಿಸಿದ ಮಹಿಳೆಯರು ತಪ್ಪದೇ ಮಾಡಬೇಕು. ಅಲ್ಲದೇ ರಜೋನಿವೃತ್ತಿ (ಮೆನೊಪಾಸ್) ಸಮಯದಲ್ಲೂ ಪಾಲಿಸುತ್ತಿದ್ದಲ್ಲಿ ಈ ತೊಂದರೆ ಕಡಿಮೆಯಾಗುತ್ತದೆ.

ಇದನ್ನು ಮಾಡುವ ಬಗೆ ಹೀಗಿದೆ: ಮೂತ್ರ ಹೋಗುತ್ತಿರುವುದನ್ನು ತಡೆಹಿಡಿಯುವಂತೆ ಶ್ರೋಣಿಯ ಭಾಗವನ್ನು ಹತ್ತು ಸೆಕಂಡುಗಳಷ್ಟು ಕಾಲ ಒಳಗೆ ಬಿಗಿಯಾಗಿ ಹಿಡಿದುಕೊಳ್ಳಿ. ನಂತರ 10 ಸೆಕಂಡು ಸಡಿಲಗೊಳಿಸಿ. ಶ್ವಾಸಕ್ರಿಯೆ ಸಾಮಾನ್ಯವಾಗಿರಲಿ. ಈ ಪ್ರಕ್ರಿಯೆಯನ್ನು 20-30 ಸಲ ಪುನರಾವರ್ತಿಸಿ. ಈ ರೀತಿ ದಿವಸದಲ್ಲಿ 3-4 ಬಾರಿ ಮಾಡಿ. ತೊಂದರೆ ಹೆಚ್ಚಿದ್ದಲ್ಲಿ ಪ್ರತಿ ಬಾರಿ ಮೂತ್ರ ವಿಸರ್ಜಿಸುವಾಗಲೂ ಇದನ್ನು ಮಾಡಬಹುದು. ಇವುಗಳಿಂದಲೂ ಸಹಾಯವಾಗದಿದ್ದಲ್ಲಿ ಪೆಸರಿಗಳು, ಶಸ್ತ್ರಚಿಕಿತ್ಸೆಯ ಮೊರೆಹೋಗಬೇಕಾಗುತ್ತದೆ. ಅತಿಯಾದ ಪ್ರೇರೇಪಿತ ಸ್ರಾವಗಳಲ್ಲೂ ಈ ವ್ಯಾಯಾಮಗಳು ಸಹಕಾರಿ. ಆದರೆ ಇಲ್ಲಿ ಮೂಲಕಾರಣವನ್ನು ಅರಿತು ಚಿಕಿತ್ಸೆ ತೆಗೆದುಕೊಳ್ಳಬೇಕು.

ಉದಾ: ನರಸಂಬಂಧಿ, ಇತ್ಯಾದಿ. ಮೂತ್ರಬಸ್ತಿಯು ಪೂರ್ಣವಾಗಿ ತುಂಬದಿದ್ದರೂ ಹೋಗಬೇಕೆನಿಸುವಂತೆ ಬಸ್ತಿಯಲ್ಲಿ ಹಿಗ್ಗು-ಕುಗ್ಗುವಿಕೆ ನಡೆಯುತ್ತದೆ. ವ್ಯಾಯಾಮದೊಂದಿಗೆ ವಿಸರ್ಜನಾವೇಳೆಯ ಪಟ್ಟಿ ತಯಾರಿಸಿಕೊಂಡು ನಿಗ್ರಹವಿಧಿಗಳನ್ನು (ರೀಟ್ರೈನಿಂಗ್) ಪಾಲಿಸಬೇಕು. ಹಾಗೂ ವಾಸಿಯಾಗದಿದ್ದಲ್ಲಿ, ನರಸಂಬಂಧಿ ಹಾಗೂ ಸ್ನಾಯುಸಂಬಂಧಿ ಔಷಧಿಗಳ ಅಗತ್ಯವಿರುತ್ತದೆ.

ಕೆಳಗೆ ಹೇಳಿದ ಅಂಶಗಳನ್ನು ಗಮನದಲ್ಲಿಡಬೇಕು
* ಕೇಫೀನ್ (ಕಾಫಿ, ಟೀ, ಕೆಫೇನ್ ಸೇರಿಸಿದ ಪಾನೀಯಗಳು), ಮದ್ಯಸೇವನೆ ಮಿತಗೊಳಿಸಬೇಕು. ಇವು ಬಸ್ತಿಯನ್ನು ಹೆಚ್ಚು ಚುರುಕುಗೊಳಿಸಿ ಆಗಾಗ್ಗೆ ಮೂತ್ರ ವಿಸರ್ಜಿಸಬೇಕೆಂಬ ಅನಿಸಿಕೆಯನ್ನು ಹೆಚ್ಚಿಸುತ್ತದೆ.
* ಕೃತಕ ಸಕ್ಕರೆಯಂಶವಿರುವ (ಆಸ್ಪಾರ್ಟೇಮ್, ಸ್ಯಾಕರಿನ್ ಇತ್ಯಾದಿ) ಆಹಾರದಿಂದ ದೂರವಿರಿ.
* ಬೊಜ್ಜು ಇಳಿಸಿ. ಅತಿಯಾದ ಬೊಜ್ಜು, ವಿಶೇಷತಃ ಹೊಟ್ಟೆಯ ಸುತ್ತ ಇರುವ ಮೇದಸ್ಸು ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ.
* ಅತಿಯಾಗಿ ನೀರು/ಸೋಡಾ/ದ್ರವಪದಾರ್ಥಗಳ ಸೇವನೆಯಿದ್ದಲ್ಲಿ ಮಿತಗೊಳಿಸಿ. ದಿನಕ್ಕೆ 3 ಲೀಟರಿಗಿಂತ ನೀರು/ದ್ರವಪದಾರ್ಥ ಹೆಚ್ಚು ಬೇಡ.
* ವಯಸ್ಸಾದವರಲ್ಲಿ ಡೈಪರ್ ಬಳಕೆ ಸೂಕ್ತ.
* ಮಾನಸಿಕ ಒತ್ತಡವೂ ಕಡಿಮೆಯಿರಲಿ
ಶತಾವರಿ, ಅಶ್ವಗಂಧಾ, ನೆಲ್ಲಿಕಾಯಿ, ವಿಟಮಿನ್ ‘ಸಿ’ ಮತ್ತು ‘ಬಿ’ ಹೊಂದಿರುವ ಆಹಾರಗಳು ನರಸಂಬಂಧಿ ತೊಂದರೆಯಲ್ಲಿ ಉಪಯುಕ್ತ. ಬಸ್ತಿಯುರಿಯೂತ ಶಾಮಕ ಔಷಧಿಗಳು, ಸೋಂಕುನಿವಾರಕ ಔಷಧಿಗಳು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT