ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದುಲಕ್ಷಿ ಕೊಲೆ; ಪತಿಯೇ ಆರೋಪಿ

Last Updated 29 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ ಬಳಿಯ ಶಂಕರನಗರದಲ್ಲಿ ನಡೆದಿದ್ದ ಮುದ್ದುಲಕ್ಷ್ಮಿ (56) ಕೊಲೆ ಪ್ರಕರಣವನ್ನು ಘಟನೆ ನಡೆದ ಕೆಲವೇ ತಾಸುಗಳಲ್ಲಿ ಭೇದಿಸಿರುವ ಉತ್ತರ ವಿಭಾಗದ ಪೊಲೀಸರು, ಮೃತರ ಪತಿ ತಿಮ್ಮಯ್ಯ (62) ಅವರನ್ನು ಬಂಧಿಸಿದ್ದಾರೆ.

‘ಮಳೆಯಿಂದಾಗಿ ಮಹಡಿಯಲ್ಲಿ ನೀರು ನಿಂತಿದೆ. ಅದನ್ನು ನೋಡಿಕೊಂಡು ಬರೋಣ ಬಾ ಎಂದು ಪತ್ನಿಯನ್ನು ಮಹಡಿಗೆ ಕರೆದೊಯ್ದಿದ್ದ ಆರೋಪಿ ತಿಮ್ಮಯ್ಯ, ಅಲ್ಲಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾರೆ’ ಎಂದು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪಿ.ಹರಿಶೇಖರನ್‌ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುದ್ದುಲಕ್ಷ್ಮಿ ಅವರನ್ನು ಸೋಮವಾರ ರಾತ್ರಿಯೇ ಕೊಲೆ ಮಾಡಿದ್ದ ತಿಮ್ಮಯ್ಯ, ನಂತರ ಪತ್ನಿಯ ಮೈಮೇಲಿದ್ದ ಒಡವೆಗಳನ್ನು ತೆಗೆದುಕೊಂಡು ಶವ­ವನ್ನು ಮೋರಿ ಪಕ್ಕಕ್ಕೆ ಎಳೆದು ಹಾಕಿದ್ದರು. ಅಲ್ಲದೆ, ಮೃತದೇಹದ ಮೇಲೆ ಬಟ್ಟೆ ಹೊದಿಸಿ, ಮನೆಗೆ ಹೋಗಿ ಮಲಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಎಂದಿನಂತೆ ಬುಧವಾರ ಬೆಳಿಗ್ಗೆ 5.30ಕ್ಕೆ ನಂದಿನಿ ಲೇ­ಔಟ್‌ ಠಾಣೆಯ ಹಿಂಭಾಗದಲ್ಲಿ­ರುವ ಉದ್ಯಾನಕ್ಕೆ ತೆರಳಿದ ತಿಮ್ಮಯ್ಯ, ಪತ್ನಿಯಿಂದ ತೆಗೆದು­ಕೊಂಡಿದ್ದ ಒಡವೆಗಳನ್ನು ಅಲ್ಲೆ ಎಸೆದಿದ್ದರು. ಅರ್ಧ ತಾಸಿನ ನಂತರ ಮನೆಗೆ ಹಿಂದಿ­ರು­ಗಿದ ಅವರು, ಪತ್ನಿಯ ಶವದ ಮುಂದೆ ನಿಂತು ಕೂಗಿಕೊಂಡಿ­ದ್ದರು. ಅವರ ಚೀರಾಟ ಕೇಳಿ ಸ್ಥಳಕ್ಕೆ ಬಂದ ನೆರೆಮನೆ­ಯವರ ಮುಂದೆ ರೋದಿಸುವ ನಾಟಕವಾಡಿದ್ದರು.

ಬಳಿಕ ತಾವೇ ಪೊಲೀಸರಿಗೆ ಕರೆ ಮಾಡಿ, ‘ಹಾಲು ತರಲು ಸಮೀಪದ ಅಂಗಡಿಗೆ ಹೋಗುತ್ತಿದ್ದ ಪತ್ನಿ ಮೇಲೆ ಸರಗಳ್ಳರು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ನಂತರ ಚಿನ್ನದ ಸರ, ಓಲೆ ಮತ್ತು ನಾಲ್ಕು ಬಳೆಗಳನ್ನು ದೋಚಿದ್ದಾರೆ’ ಎಂದು ಹೇಳಿದ್ದರು. ಸ್ಥಳ ಪರಿಶೀಲನೆ ನಡೆಸಿದ ಹಿರಿಯ ಅಧಿಕಾರಿಗಳು, ಪ್ರಕರಣದ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

‘ಮುದ್ದುಲಕ್ಷ್ಮಿ ಅವರ ತಲೆಗೆ ಮಚ್ಚಿನ ಏಟು ಬಿದ್ದಿರಲಿಲ್ಲ. ಬದಲಾಗಿ ಅವರ ತಲೆ ಹೋಳಾಗಿತ್ತು. ಮೈಮೇಲೆ ತರಚಿದ ಗಾಯಗಳಾಗಿದ್ದು,  ಕೈ–ಕಾಲುಗಳ ಮೂಳೆಗಳು ಮುರಿದಿದ್ದವು. ಎದೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿತ್ತು.  ಅಲ್ಲದೆ, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಊಟ ಮಾಡಿದ ಎರಡು ತಾಸಿನ ನಂತರ ಮುದ್ದುಲಕ್ಷ್ಮಿ ಅವರ ಸಾವು ಸಂಭವಿಸಿದೆ ಎಂದು ವರದಿ ನೀಡಿದರು. ಹೀಗಾಗಿ ರಾತ್ರಿಯೇ ಅವರ ಕೊಲೆ ನಡೆದಿದೆ ಎಂಬುದು ಖಾತ್ರಿಯಾಯಿತು. ಜತೆಗೆ ಪತಿಯ ಮೇಲೆ ಅನುಮಾನ ದಟ್ಟವಾಯಿತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ಅಂತ್ಯಸಂಸ್ಕಾರ ಮುಗಿದ ಬಳಿಕ ತಿಮ್ಮಯ್ಯ ಅವ­ರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸ­ಲಾಯಿತು. ಆಗ, ‘ಕೌಟುಂಬಿಕ ಕಲಹದ ಕಾರಣಕ್ಕೆ ನಾನೇ ಪತ್ನಿಯನ್ನು ಕೊಲೆ ಮಾಡಿದೆ’ ಎಂದು ಹೇಳಿಕೆ ಕೊಟ್ಟರು. ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್‌, ಎಸಿಪಿ ಸಾರಾ ಫಾತಿಮಾ, ಇನ್‌ಸ್ಪೆಕ್ಟರ್‌ಗಳಾದ ಕೆ.ವಿ.ಶ್ರೀಧರ, ನಾಗರಾಜ್, ರಮೇಶ್ ಕುಮಾರ್ ಹಾಗೂ ಸಿಬ್ಬಂದಿ ತಂಡ ಪ್ರಕರಣ ಭೇದಿಸಿದೆ.

‘ಏಳೆಂಟು ವರ್ಷಗಳಿಂದ ನಮ್ಮ ನಡುವೆ ಬಿರುಕು ಉಂಟಾಗಿತ್ತು. ಮಗಳ ಮದುವೆ ನಂತರ ಮಾತುಕತೆ ಕೂಡ ಅಪರೂಪವಾಗಿತ್ತು. ನಿವೃತ್ತಿ ನಂತರ ಬಂದಿದ್ದ ಪಿಂಚಣಿ ಹಣವನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಪತ್ನಿ, ಲೈಂಗಿಕ ಕ್ರಿಯೆಯಲ್ಲೂ ನಿರಾಸಕ್ತಿ ತೋರಿಸುತ್ತಿದ್ದಳು. ಹೀಗಾಗಿ ಒಂದೇ ಮನೆಯಲ್ಲಿದ್ದರೂ, ಪ್ರತ್ಯೇಕ ಬದುಕು ನಡೆಸುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು’ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ.

ಆರೋಪಿ ತಿಮ್ಮಯ್ಯ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನಿವೃತ್ತ ನೌಕರರಾಗಿದ್ದರು.ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್‌, ಎಸಿಪಿ ಸಾರಾ ಫಾತಿಮಾ, ಇನ್‌ಸ್ಪೆಕ್ಟರ್‌ಗಳಾದ ಕೆ.ವಿ.ಶ್ರೀಧರ, ನಾಗರಾಜ್, ರಮೇಶ್ ಕುಮಾರ್ ಹಾಗೂ ಸಿಬ್ಬಂದಿ ತಂಡ ಪ್ರಕರಣ ಭೇದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT