ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ರಕರಿಗೂ ಕೊಡಿ

ಅಕ್ಷರ ಗಾತ್ರ

ಅಂತರ್ಜಾಲದ ನೆರವಿನಿಂದ ಇ–ಬುಕ್‌ ವ್ಯವಸ್ಥೆಯಿಂದ ನಮಗೆ ಬೇಕಾದ ಪುಸ್ತಕಗಳನ್ನು ನೋಡುವ, ಓದುವ ಅವಕಾಶ ಪ್ರಾಪ್ತವಾಗಿದ್ದರೂ ಕಣ್ಣಿಂದ ನೋಡಿ, ಕೈಯಿಂದ ಮುಟ್ಟಿ, ಇಚ್ಛಾನುಸಾರವಾಗಿ ಪುಸ್ತಕ ಓದುವ ಸಂಸ್ಕೃತಿ ಜನಪ್ರಿಯತೆ ಕಳೆದುಕೊಂಡಿಲ್ಲ. ಆದ್ದರಿಂದ ಲೇಖಕ, ಹಸ್ತಪ್ರತಿಯನ್ನು ಪ್ರಕಾಶಕನ ಕೈಗೆ ತಲುಪಿಸಬೇಕು ಅಥವಾ ಪ್ರಕಾಶಕನೇ ಹಸ್ತಪ್ರತಿಯನ್ನು ಲೇಖಕನಿಂದ ಪಡೆಯಬೇಕು. ಅದನ್ನು ಪ್ರಕಟಿಸುವ ಬಗೆಗೆ, ಅದರ ರೂಪುರೇಷೆಯ ಬಗೆಗೆ ಅಂದಾಜು ಪಟ್ಟಿ ಸಿದ್ಧಪಡಿಸಬೇಕು. ಕಲಾವಿದರ ನೆರವು ಪಡೆಯಬೇಕು. ಅಂತಿಮವಾಗಿ ಮುದ್ರಣಾಲಯಕ್ಕೆ ಒಪ್ಪಿಸಬೇಕು. ಮುದ್ರಣದ ನಂತರವೇ ಪುಸ್ತಕ ಮಾರುಕಟ್ಟೆಗೆ ತಲುಪಬೇಕು. ಲೇಖಕ– ಪ್ರಕಾಶಕ– ಕಲಾವಿದ– ಮುದ್ರಕ ಎನ್ನುವ ಈ ನಾಲ್ಕು ಹಂತಗಳಲ್ಲಿ ಪರಸ್ಪರ ಸಹಕಾರ ಇಲ್ಲದಿದ್ದಲ್ಲಿ ಅಥವಾ ಯಾವ ಹಂತದಲ್ಲಿ ಏನೇ ಎಡವಟ್ಟಾದರೂ ಒಬ್ಬರಲ್ಲ ಒಬ್ಬರು ಕಷ್ಟ– ನಿಷ್ಠುರಗಳಿಗೆ ಗುರಿಯಾಗಬೇಕಾಗುತ್ತದೆ.

ಕನ್ನಡ ಪುಸ್ತಕೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾದ ಕನ್ನಡ ಪುಸ್ತಕ ಪ್ರಾಧಿಕಾರ ಈ ಅಂಶಗಳನ್ನೆಲ್ಲ ಮನಗಂಡು, ಅತ್ಯುತ್ತಮ ಪ್ರಕಾಶಕರನ್ನು ಗುರುತಿಸಿ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ. ಇತ್ತೀಚಿನ  ವರ್ಷಗಳಲ್ಲಿ ಪುಸ್ತಕವನ್ನು ಆಕರ್ಷಕವಾಗಿ ಸಿದ್ಧಪಡಿಸುವಲ್ಲಿ ಕಲಾವಿದರ ಪಾತ್ರವೂ ಇರುತ್ತದೆಂದು ಮನಗಂಡು, ಅವರಿಗೂ ಪ್ರಶಸ್ತಿ ನೀಡುವ ಪರಿಪಾಠವನ್ನು ಆರಂಭಿಸಿದೆ. ಇದು ಮೆಚ್ಚಬೇಕಾದ ಸಂಗತಿಯೇ.

ಅನೇಕ ಸಂದರ್ಭಗಳಲ್ಲಿ ಪುಸ್ತಕವನ್ನು ಪ್ರಕಾಶನಗೊಳಿಸಲು ಬೇಕಾದ ಬಂಡವಾಳದ ಜೊತೆಗೆ ಉದ್ಯಮದಲ್ಲಿ ಚೆನ್ನಾಗಿ ಬೆಳೆಯಬೇಕೆನ್ನುವ ಉತ್ಸಾಹವನ್ನು ಮಾತ್ರ ಹೊಂದಿರುವ ಪ್ರಕಾಶಕರಿಗೆ ಪುಸ್ತಕವನ್ನು ಆಕರ್ಷಕವಾಗಿ ಸಿದ್ಧಪಡಿಸಬೇಕೆನ್ನುವ ಆಲೋಚನೆಯೇ ಇರುವುದಿಲ್ಲ. ಅಂಥ ಸಂದರ್ಭಗಳಲ್ಲಿ ಪ್ರಕಾಶಕರ ನೆರವಿಗೆ ಬರುವವರು ಮುದ್ರಕರೇ. ಕನ್ನಡದ ಹೆಸರಾಂತ ಪ್ರಕಾಶನ ಸಂಸ್ಥೆಗಳ ಪ್ರಕಾಶಕರ ವಿಚಾರದಲ್ಲೂ ಈ ಮಾತು ನಿಜ.

ಇಂಥ ಮುದ್ರಣಾಲಯಕ್ಕೆ ಪುಸ್ತಕ ಒಪ್ಪಿಸಿಬಿಟ್ಟರೆ, ಇವತ್ತಿನ ಸಂದರ್ಭಕ್ಕೆ ಅದನ್ನು ಎಷ್ಟು ಅಚ್ಚುಕಟ್ಟಾಗಿ, ಸುಂದರವಾಗಿ ರೂಪಿಸಿ ಮುದ್ರಿಸಿಕೊಡಬಹುದೋ ಹಾಗೆ ಮಾಡಿಕೊಡುತ್ತಾರೆ ಎನ್ನುವ ಭರವಸೆ ಇರಿಸಿಕೊಂಡು ಪ್ರಕಾಶಕರು ನಿಶ್ಚಿಂತರಾಗಿರುತ್ತಾರೆ. ಕೆಲವು ಮುದ್ರಕರಂತೂ ಪುಸ್ತಕದ ಸೌಂದರ್ಯ ಎದ್ದು ಕಾಣುವಂತಾಗಲು ಯಾವ ಬಗೆಯ ವಿನ್ಯಾಸವಾದರೆ ಒಳ್ಳೆಯದು, ಚಿತ್ರಗಳು ಹೇಗೆ ಬರಬೇಕು ಎನ್ನುವ ಸೂಚನೆಯನ್ನು ಚಿತ್ರ ಕಲಾವಿದರಿಗೆ ಕೊಡುವಷ್ಟು ಸೂಕ್ಷ್ಮಜ್ಞರೂ ತಜ್ಞರೂ ಆಗಿರುತ್ತಾರೆ. ಈ ವಾಸ್ತವಾಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ಪುಸ್ತಕ ಸೊಗಸಿನಲ್ಲಿ ಮುದ್ರಕರ ಪಾತ್ರವೂ ಇರುವುದನ್ನು ಮನಗಂಡು ಪುಸ್ತಕ ಪ್ರಾಧಿಕಾರವು ಪ್ರಕಾಶಕರು ಮತ್ತು ಚಿತ್ರಕಲಾವಿದರಂತೆಯೇ ಮುದ್ರಕರಿಗೂ ಪ್ರಶಸ್ತಿ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT