ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಪ್ಪು ಮುಟ್ಟದ ಶಾರೀರದ ನಾದ ವೈಭವ

ಆಲಾಪ
Last Updated 25 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಂಗೀತದಲ್ಲಿ ಪರಂಪರೆ ಎಂಬುದು ಒಂದು ಮನೆತನ ಮಟ್ಟಿಗೆ ಬೆಳೆದು, ನಂತರ ಅದರ ಹೊಸ್ತಿಲನ್ನು ದಾಟಿ ಶಿಷ್ಯಬಳಗದ ಮೂಲಕ ವಿಶ್ವವ್ಯಾಪಿಯಾಗಿದೆ. ಒಬ್ಬ ಕಲಾವಿದ ತಾವು ಕಲಿತ ಸಂಗೀತವನ್ನು ಮನೆ ಮಕ್ಕಳಿಗೆ ಹಾಗೂ ಹೊರಗಿನ ಮಕ್ಕಳಿಗೆ ಕಲಿಸಿ ಗುರುವಾಗುತ್ತಾನೆ. ಇನ್ನು ಕಲಿತ ಮಕ್ಕಳು, ತಾವು ಕಲಿತುದನ್ನು ಪ್ರದರ್ಶಿಸಿದ ಕೂಡಲೇ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಬೇರೆಯವರಿಗೂ ಹೇಳಿಕೊಡುತ್ತಾ, ತನ್ಮೂಲಕ ಮುಂದಿನ ಪೀಳಿಗೆಗೆ ತಮ್ಮ ಸಂಗೀತದ ಪರಂಪರೆಯನ್ನು ವಿಸ್ತರಿಸಿಬೇಕು. ಬೆಳೆಸಬೇಕು. ಅಂದಾಗ ಕಲಿಸಿದವರಿಗೂ, ಅವರು ಕಲಿತದ್ದಕ್ಕೂ ಸಾರ್ಥಕಭಾವ ಮೂಡುವುದು.

ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂ. ಪರಮೇಶ್ವರ್ ಹೆಗಡೆಯವರು, ತಮ್ಮ ರಾಜಗುರು ಸ್ಮೃತಿಯ ವತಿಯಿಂದ ಗುರು ಹಾಗೂ ಶಿಷ್ಯರನ್ನು ಒಂದೇ ವೇದಿಕೆಯಲ್ಲಿ ಹಾಡಲು ಅನುವು ಮಾಡಿಕೊಡುವ ಕಾರ್ಯವನ್ನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಗುಲ್ಬರ್ಗಾದ ಪಂಡಿತ್ ಫಕೀರೇಶ ಕಣವಿ ಹಾಗೂ ಅವರ ಮಕ್ಕಳಾದ ಕುಮಾರ್ ಕಣವಿ, ಮಾಲಾಶ್ರೀ ಕಣವಿ ಈ ಬಾರಿಯ ‘ಪರಂಪರಾ’ ವೇದಿಕೆಯಲ್ಲಿ ಸಂಗೀತವನ್ನು ಪ್ರಸ್ತುತಪಡಿಸಿದರು. ಕಳೆದ ಶನಿವಾರ ಮಲ್ಲೇಶ್ವರಂನ ಕೆನರಾ ಯೂನಿಯನ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕುಮಾರ್ ಹಾಗೂ ಮಾಲಾಶ್ರೀ ಕಣವಿ ಇಬ್ಬರೂ ತಂದೆಯ ಗರಡಿಯಲ್ಲಿ ಗ್ವಾಲಿಯರ್ ಪಲಕುಗಳನ್ನು ಕಲಿತವರು. ಜೊತೆಗೆ ಸಂಗೀತದಲ್ಲಿಯೇ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. 

ಮೊದಲಿಗೆ ಕುಮಾರ್ ಕಣವಿ ಅವರಿಂದ ಕಾರ್ಯಕ್ರಮ ಆರಂಭವಾಯಿತು. ಮಧುವಂತಿ ರಾಗವನ್ನು (ತೋಡಿ ಥಾಟ್) ಆರಿಸಿಕೊಂಡಿದ್ದ ಅವರು ಒಂದೆರೆಡು ನಿಮಿಷಗಳ ಆಲಾಪ್ ಹಾಡಿ, ನಂತರ ವಿಲಂಬಿತ್ ತೀನ್ ತಾಳದಲ್ಲಿ ‘ತುಮ್ ಬಿನ ಮೋರಾ...’ ಎಂಬ ಖಯಾಲ್ ಹಾಡಿದರು. ನಂತರ ಧೃತ್ ತಾಳದಲ್ಲಿ ‘ಶಾಮ ಮೋರೆ ಮಂದಿರ ಆಯೋ...’ ಎಂಬ ಮತ್ತೊಂದು ಬಂದಿಶ್‌ನ ಹಾಡುಗಾರಿಕೆಯನ್ನು ಆರಂಭಿಸಿದರು. ಶ್ಯಾಮನಿಗೆ ಕಾಯುವ ರಾಧೆಯ ಮೊರೆತದ ಧ್ವನಿ, ಕರುಣಾ ಹಾಗೂ ಪ್ರೇಮ ರಸದ ಮಿಶ್ರಭಾವದಲ್ಲಿ ಮೂಡಿ ಬರುತ್ತಿದ್ದ ಬಂದಿಶ್‌ನ ಸಾಲುಗಳ ಹಾಗೂ ಆಲಾಪ್ ಸರ್ಗಂಗಳ ಹಾಡುಗಾರಿಕೆ ಶ್ರೋತೃಗಳನ್ನು ಭಾವದ ತೊಟ್ಟಿಲಲ್ಲಿ ತೂಗುವಂತೆ ಮಾಡಿತು. ಅದೇ ಭಾವದ ಎಳೆಯನ್ನು ಹಿಡಿದುಕೊಂಡು ಕೊನೆಗೆ ಧೃತ್ ತೀನ್‌ತಾಳದಲ್ಲಿ ಉದಾರೀ...
ಉದಾರೀ... ತರಾನವನ್ನು ಹಾಡಿದರು

 ಅದು, ಮೆಲ್ಲಗೆ ಸಾಗುತ್ತಿದ್ದ ಸಂಗೀತ ಪಯಣದ ವೇಗ ಹೆಚ್ಚಿ, ರಾಗದ ರಸವನ್ನು ಸ್ಫುಟವಾಗಿ ಕೇಳುಗರ ಅನುಭವಕ್ಕೆ ಒದಗಿಸುವಂತಿತ್ತು. ಕೊನೆಗೆ ಮಹಿಪತಿ ದಾಸರು ಬರೆದಿರುವ ‘ಸಕಲವೆನಗೆ ನೀ ಶ್ರೀಹರಿಯೇ...’ ಎಂಬ ದಾಸವಾಣಿಯನ್ನು ಹಾಡಿದರು.

ನಂತರ ಮಾಲಾಶ್ರೀ ಕಣವಿ ಗಾಯನ ಆರಂಭವಾಯಿತು. ಪೂರಿಯಾ ಧನಶ್ರೀ (ಥಾಟ್ ಪೂರ್ವಿ) ರಾಗದಿಂದ ಗಾಯನವನ್ನು ಆರಂಭಿಸಿದ ಮೂರು ನಿಮಿಷಗಳ ಕಾಲ ಆಲಾಪ್ ಹಾಡಿದರು. ನಂತರ ‘ಪ್ರಭುರೇ ಕರತಾರ...’ ಎಂಬ ಬಂದಿಶ್‌ನಲ್ಲಿ ಪೂರಿಯಾ ಧನಶ್ರೀ ರಾಗದ ಸ್ವರಗಳ ಗಂಧವನ್ನು ತೀಡುತ್ತಾ- ಹಾಡುತ್ತಾ ಹೋದರು. ಗಂಭೀರ ಭಾವದಲ್ಲಿ ಭಕ್ತಿಸಾರದ ಅಭಿವ್ಯಕ್ತಿಯಾಗುತ್ತಿದ್ದ ಪರಿ ಸಭಾಂಗಣಕ್ಕೂ ಅದೇ ಗಾಂಭೀರ್ಯವನ್ನು ಹರಡಿತ್ತು. ವಿಶಿಷ್ಟವಾದ ಅವರ ಕಂಠಸಿರಿ ಗಾಯನಕ್ಕೆ ಪುಷ್ಠಿ ನೀಡುತ್ತಿತ್ತು. ನಿಧಾನಗತಿಯಿಂದ ಆಲಾಪ್ ಹಾಡುವಿಕೆಯಿಂದ ಹಿಡಿದು ವೇಗವಾಗಿ ಸರ್ಗಂಗಳನ್ನು ಹಾಡುವಲ್ಲಿಯೂ ಅದೇ ಸರಳ ಸ್ಥಿರತೆ... ನಂತರ ಧೃತ್ ತೀನ್‌ತಾಳದಲ್ಲಿ ಪ್ರಸಿದ್ಧ ‘ಪಾಯಲಿಯಾ ಝಣಕಾರ ಮೋರೆ...’ ಬಂದಿಶ್ ಹಾಡಿದರು

ನಿರರ್ಗಳವಾಗಿ ಹಾಗೂ ಪುಂಖಾನುಪುಂಖವಾಗಿ ಹಾಡುತ್ತಿದ್ದ ಸರ್ಗಂಗಳು, ಗಮಕ-ಪಲಕುಗಳ ಅಲೆಯಲ್ಲಿ ಮೂಡುತ್ತಿದ್ದ ಆಲಾಪ್‌ಗಳು ಶ್ರೋತೃಗಳ ಮೊಗದಲ್ಲಿನ ಮೆಚ್ಚುಗೆಯ ನಗೆಗೆ ಕಾರಣವಾಗಿತ್ತು. ವಿಶಿಷ್ಟ ಕಂಠಸಾರ ಹಾಗೂ ಗಾಯನ ಶೈಲಿಯಿಂದ ಇಡೀ ಸಭಾಂಗಣವನ್ನು ಹಿಡಿದಿಟ್ಟುಕೊಂಡಿದ್ದರು. ಕೊನೆಗೆ ‘ಸರ್ವಾತ್ಮಕಾ... ಸರ್ವೇಶ್ವರಾ...’ ಎಂಬ ಮರಾಠಿ ಗೀತೆಯೊಂದನ್ನು ಹಾಡಿ ಗಾಯನವನ್ನು ಮುಗಿಸಿದರು. ಈಗಾಗಲೇ ಹಿಂದೂಸ್ತಾನಿ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮಾಲಾಶ್ರೀ ಸಂಗೀತದಲ್ಲೇ ಕೃಷಿ ಮಾಡುತ್ತಿರುವ ಪ್ರತಿಭೆ. ಜೊತೆಗೆ ಸಂಗೀತದಲ್ಲಿಯೇ ಪಿ.ಎಚ್.ಡಿ ಕೂಡ ಮಾಡುತ್ತಿದ್ದಾರೆ. 

ಮುಪ್ಪು ಮುಟ್ಟದ ಶಾರೀರ
ಶಿಷ್ಯರ ಗಾಯನದ ನಂತರ ಗುರು-ತಂದೆ ಪಂ. ಫಕೀರೇಶ ಕಣವಿ ಅವರ ಗಾಯನ. ಶಿವರಂಜಿನಿ ರಾಗವನ್ನು (ಥಾಟ್ ಕಾಫಿ) ಆರಿಸಿಕೊಂಡಿದ್ದ ಅವರು ಆಲಾಪ್ ಗಾಯನದ ಮೂಲಕ ರಾಗದ ಛಾಯೆಯನ್ನು ಹರಡಿದ ಝಪ್ ತಾಳದಲ್ಲಿ ಬಂದಿಶ್‌ನ ಗಾಯನವನ್ನು ಆರಂಭಿಸಿದರು. ನಂತರ ವಿಲಂಬಿತ್ ತೀನ್‌ತಾಳದಲ್ಲಿ ‘ಬೋಲೆ ಅತರಿಯಾ ಸಖಿ ಕಗವಾ...’ ಎಂಬ ಖಯಾಲ್ ಹಾಡಿದರು. ಶಿವರಂಜನಿಯ ಕರುಣಾ ಅಥವಾ ಶೋಕ ಭಾವದ ನಯವಾದ ಪ್ರಸ್ತುತಿ ಶ್ರೋತೃಗಳಲ್ಲೂ ಅದೇ ಭಾವದಲ್ಲಿ ತೇಲುವಂತೆ ಮಾಡಿತ್ತು. ಕೊನೆಯಲ್ಲಿ ‘ನೀವು ಬಂದ ಕಾರ್ಯಕ್ಕೆ ನಾವು ಬಂದಿವಯ್ಯ..’ ಎಂಬ ಬಸವಣ್ಣನ ವಚನವನ್ನು ಹಾಡಿದರು. ಶರೀರಕ್ಕೆ ವಯಸ್ಸಿನ ಮುಪ್ಪು ತಟ್ಟಿದ್ದರೂ ಹಾಡುವಾಗ ಶಾರೀರದ್ದು ಮಾತ್ರ ಅದೇ ಘನತೆ. ತಬಲಾದಲ್ಲಿ ಫಕಿರೇಶ ಕಣವಿ ಅವರ ಮತ್ತೊಬ್ಬ ಮಗ ಪಂಚಾಕ್ಷರಿ ಕಣವಿ ಹಾಗೂ ಹಾರ್ಮೋನಿಯಂನಲ್ಲಿ ಮಧುಸೂದನ್ ಭಟ್ ಸಹಕರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT