ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಫ್ತಿ ಮಾತಿಗೆ ಗದ್ದಲ

ಸಂಸತ್ತಿನಲ್ಲಿ ಪ್ರತಿಪಕ್ಷ ತರಾಟೆ; ಅಂತರ ಕಾಯ್ದುಕೊಂಡ ಸರ್ಕಾರ
Last Updated 2 ಮಾರ್ಚ್ 2015, 19:35 IST
ಅಕ್ಷರ ಗಾತ್ರ

ನವದೆಹಲಿ/ಜಮ್ಮು (ಪಿಟಿಐ): ಜಮ್ಮು– ಕಾಶ್ಮೀರದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಲು  ಪಾಕಿಸ್ತಾನ ಸರ್ಕಾರ, ಉಗ್ರವಾದಿ ಸಂಘಟ­ನೆಗಳು ಹಾಗೂ ಹುರಿ­ಯತ್‌ ಕಾರಣ ಎಂದು ಮುಖ್ಯಮಂತ್ರಿ ಮುಫ್ತಿ ಮೊಹ­ಮ್ಮದ್‌ ಸಯೀದ್‌ ನೀಡಿದ್ದ ವಿವಾದಿತ ಹೇಳಿಕೆ ಸೋಮ­ವಾರ ಸಂಸತ್‌ನಲ್ಲಿ  ಭಾರಿ ಕೋಲಾಹಲ ಎಬ್ಬಿಸಿತು.

ಆದರೆ ಸಯೀದ್‌ ಹೇಳಿಕೆ ಕುರಿತಂತೆ  ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಅಂತರ ಕಾಯ್ದುಕೊಂಡಿವೆ. ‘ಇದು ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರವಲ್ಲ’ ಎಂದು ಗೃಹಸಚಿವ ರಾಜನಾಥ್‌ ಸಿಂಗ್‌ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದರು. ಈ ನಡುವೆ ಸಯೀದ್‌, ತಾವು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಎಂದಿದ್ದಾರೆ. ಇನ್ನೊಂದೆಡೆ ಅವರ ಪುತ್ರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಅಪ್ಪನ ಬೆಂಬಲಕ್ಕೆ ನಿಂತಿದ್ದಾರೆ. ‘ನನ್ನಪ್ಪ ಒಂದು ಹೇಳಿಕೆ ನೀಡಿ ಆ ಮೇಲೆ ಅದನ್ನು ಅಲ್ಲಗಳೆಯುವಂತಹ ವ್ಯಕ್ತಿ ಅಲ್ಲ’ ಎಂದು ಸಮರ್ಥಿಸಿಕೊಂಡಿದ್ದಾರೆ.

ರಾಮ್‌ಮಾಧವ್‌ ಅಸಮ್ಮತಿ: ಪಿಡಿಪಿ ಜತೆ ಮೈತ್ರಿಗೆ ಮುಖ್ಯ ಸಂಧಾನಕಾರರಾಗಿದ್ದ ರಾಮ್‌­ಮಾಧವ್‌್, ಸಯೀದ್‌್ ಹೇಳಿಕೆಗೆ ಅಸಮ್ಮತಿ ಸೂಚಿಸಿದ್ದಾರೆ. ‘ಕಾಶ್ಮೀರದಲ್ಲಿ ಶಾಂತಿಯುತ ಮತದಾನದ ಶ್ರೇಯ ಅಲ್ಲಿನ ಜನರು, ಚುನಾವಣಾ ಆಯೋಗ ಹಾಗೂ ಭದ್ರತಾ ಪಡೆಗೆ ಸಲ್ಲಬೇಕು’ ಎಂದಿದ್ದಾರೆ.

ಲೋಕಸಭೆ:  ಲೋಕಸಭೆಯಲ್ಲಿ ವಿರೋಧಪಕ್ಷಗಳು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿ­ಸಿದವು. ಸಯೀದ್‌ ಹೇಳಿಕೆಯ ವಿರುದ್ಧ ಖಂಡನಾ ನಿರ್ಣಯಕ್ಕೆ ಆಗ್ರಹಿಸಿದವು. ಕಾಂಗ್ರೆಸ್‌ನ ಕೆ.ಸಿ.ವೇಣುಗೋಪಾಲ್‌ ಮೊದಲು ವಿಷಯ ಪ್ರಸ್ತಾಪಿಸಿದರು.    ‘ಸಯೀದ್‌ ಈ ಹೇಳಿಕೆ ನೀಡಿದ ವೇಳೆ ಕಾಶ್ಮೀರದ ಉಪ­ಮುಖ್ಯ­ಮಂತ್ರಿ ಬಿಜೆ­ಪಿಯ ನಿರ್ಮಲ್‌ ಸಿಂಗ್‌ ಪಕ್ಕದ­ಲ್ಲಿಯೇ ಕುಳಿತಿ­ದ್ದರು. ಆದರೆ ಅವರು ಏನನ್ನೂ ಹೇಳಲಿಲ್ಲ’ ಎಂದು ಆಕ್ಷೇಪಿಸಿದರು.

‘ಸಯೀದ್‌ ಹೇಳಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರು­ವುದನ್ನು ನೋಡಿದರೆ ಆಘಾತ­ವಾ­ಗುತ್ತದೆ. ನಾವು ನಿರ್ಣಯವೊಂದನ್ನು ಅಂಗೀಕರಿಸಬೇಕು’ ಎಂದರು. ಪ್ರಧಾನಿ ಈ ಸಂಬಂಧ ಹೇಳಿಕೆ ನೀಡಬೇಕು ಎಂದು ವಿರೋಧಪಕ್ಷದ ಸದಸ್ಯರೆಲ್ಲ ಒತ್ತಾಯಿಸಿದರು.

ಕಾಶ್ಮೀರ­ದಲ್ಲಿ ಶಾಂತಿಯುತ ಚುನಾ­ವಣೆ ನಡೆಯಲು ಪಾಕ್‌ ಸರ್ಕಾರ, ಉಗ್ರರು ಹಾಗೂ ಹುರಿಯತ್‌ ಕಾರಣ ಎನ್ನುವ ತಮ್ಮ ಅಭಿಪ್ರಾಯವನ್ನು ಪ್ರಧಾನಿ ಮುಂದೆಯೂ ಹೇಳಿದ್ದಾಗಿ ಸಯೀದ್‌ ತಿಳಿಸಿದ್ದಾರೆ. ಆದ ಕಾರಣ ಮೋದಿ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜನಾಥ್‌ ಸಿಂಗ್‌, ‘ನಾನು ಈ ಬಗ್ಗೆ ಪ್ರಧಾನಿ ಹತ್ತಿರ ಮಾತನಾಡಿದ್ದೇನೆ. ಅವರ ಅನುಮತಿ ಮೇರೆಗೆ ಇಲ್ಲಿ ಹೇಳಿಕೆ ನೀಡಿದ್ದೇನೆ’ ಎಂದರು. ಸಯೀದ್‌ ತಮ್ಮ ಹೇಳಿಕೆ ಕುರಿತಾಗಿ ಪ್ರಧಾನಿ ಜತೆ ಮಾತನಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು. ಸಿಂಗ್‌  ಹೇಳಿಕೆಗೆ ಅಸಮಾಧಾನ ತಾಳಿದ ವಿರೋಧ­ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

‘ಕಡ್ಡಿ ಗುಡ್ಡ ಮಾಡಲಾಗಿದೆ’
ಕಾಶ್ಮೀರದಲ್ಲಿ ಪ್ರಜಾತಂತ್ರ ಗಟ್ಟಿಯಾಗಿದೆ ಎನ್ನುವುದನ್ನು  ಪಾಕಿಸ್ತಾನ ಹಾಗೂ ಹುರಿಯತ್‌ ಅರ್ಥಮಾಡಿ­ಕೊಂಡಿವೆ. ಕಾಶ್ಮೀರದ ಜನರ ಭವಿಷ್ಯವು ಮತ ಚಲಾವಣೆ ಮೇಲೆ ನಿಂತಿದೆಯೇ ಹೊರತು ಗುಂಡು ಅಥವಾ ಗ್ರೆನೇಡ್‌ಗಳ ಮೇಲೆ ಅಲ್ಲ ಎನ್ನು­ವುದು ಕೂಡ ಅವರಿಗೆ ಮನವರಿಕೆಯಾಗಿದೆ ಎಂದು ನಾನು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ. ಆದರೆ ಈ ಅಂಶವನ್ನು ಕಡೆಗಣಿಸಿ ವಿನಾಕಾರಣ ಕಡ್ಡಿಯನ್ನು ಗುಡ್ಡ ಮಾಡಲಾಗಿದೆ.
ಮುಫ್ತಿ ಮೊಹಮ್ಮದ್‌ ಸಯೀದ್‌, ಕಾಶ್ಮೀರ ಸಿ.ಎಂ

ಚುನಾವಣಾ ಆಯೋಗ, ಸೇನೆ, ಅರೆಸೇನಾ ಪಡೆ ಹಾಗೂ ರಾಜ್ಯದ ಜನರ ಸಹಕಾರ­ದಿಂ­ದ ಕಾಶ್ಮೀರ ದಲ್ಲಿ ಶಾಂತಿಯುತ ಮತ­ದಾನ ನಡೆಯಿತು –ರಾಜನಾಥ್‌ ಸಿಂಗ್‌, ಗೃಹ ಸಚಿವ

ಪಿಡಿಪಿಯ ಎಂಟು ಶಾಸಕರಿಂದ ಹೊಸ ವಿವಾದ
ಅಫ್ಜಲ್‌ ಅವಶೇಷಕ್ಕೆ ಬೇಡಿಕೆ

ಜಮ್ಮು: ಸಂಸತ್‌  ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿಸಲಾದ ಅಫ್ಜಲ್‌ ಗುರುವಿನ  ಅವ­ಶೇಷ ನೀಡು­ವಂತೆ  ಪಿಡಿಪಿ ಸೋಮವಾರ ಕೇಂದ್ರವನ್ನು  ಕೋರಿದೆ.

ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ ಪಿಡಿಪಿಯ ಎಂಟು ಶಾಸಕರು ಈ ಹೊಸ ಬೇಡಿಕೆ ಇಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅಫ್ಜಲ್‌ ಅವಶೇಷ ಹಿಂದಿರುಗಿಸುವ ತಮ್ಮ ಬೇಡಿಕೆಗೆ ಪಕ್ಷ ಬೆಂಬಲವಾಗಿ ನಿಂತಿದ್ದು, ಈ ವಿಷಯಕ್ಕೆ ಸಂಬಂಧಿಸಿ­ಕೇಂದ್ರದ ಮೇಲೆ ನಿರಂತರ ಒತ್ತಡ ಹೇರುವುದಾಗಿ ಹೇಳಿದೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸತ್‌ ಮೇಲಿನ ದಾಳಿ ನಡೆಸಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಫ್ಜಲ್‌ ಗುರುವನ್ನು 2013 ಫೆಬ್ರುವರಿ 9ರಂದು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸ­ಲಾಗಿತ್ತು. ಅಫ್ಜಲ್‌ ಗಲ್ಲು ಶಿಕ್ಷೆಯನ್ನು ಮೊದ­ಲಿನಿಂದಲೂ  ವಿರೋಧಿಸುತ್ತ ಬಂದಿ­ರುವ ಮತ್ತು ಆತನ ದೇಹದ ಅವಶೇಷಕ್ಕೆ ಒತ್ತಾ­ಯಿ­ಸುತ್ತಿರುವ  ಪಕ್ಷದ ನಿಲುವಿನಲ್ಲಿ ಬದ­ಲಾವಣೆ ಇಲ್ಲ ಎಂದು ಶಾಸಕರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT