ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರಿದು ಬಿದ್ದ ಎಡ ಬಲದ ದ್ವಂದ್ವ

ಸಂವಾದ ಕಾರ್ಯಕ್ರಮದಲ್ಲಿ ರಂಗಕರ್ಮಿ ಪ್ರಸನ್ನ ಅಭಿಮತ
Last Updated 3 ಅಕ್ಟೋಬರ್ 2015, 19:49 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಹಿಂದೆ ಇದ್ದ  ಎಡ, ಬಲ ಎಂಬ ದ್ವಂದ್ವ ಇವತ್ತು ಮುರಿದು ಬೀಳುತ್ತಿವೆ. ಇದು 21ನೇ ಶತಮಾನದ ಬಹುದೊಡ್ಡ ಸಂಗತಿಯಾಗಿದೆ.  ಈ ಅಂಶವನ್ನು ಮನಗಂಡು  ನಮ್ಮೆಲ್ಲ ಚಳವಳಿಗಳನ್ನು ಕಟ್ಟೋಣ. ಆ ಚಳವಳಿಗಳು ಯಶಸ್ವಿಯಾಗುತ್ತವೆ’ ಎಂದು ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ಸಮುದಾಯ ಸಂಘಟನೆ ಶನಿವಾರ ಆಯೋಜಿಸಿದ್ದ ‘ಶತಮಾನದ ಕನವರಿಕೆ: ಕನ್ನಡ ನೆಲದಲ್ಲಿ ಗಾಂಧಿ – ನಿರಂತರ ಗಾಂಧಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಎಲ್ಲಾ ಕಡೆಗಳಿಂದ ಜನರು  ಧರ್ಮವನ್ನು ಹೊಸ ಅರ್ಥದಲ್ಲಿ ನೋಡುವ ಹಾಗೂ ವೈಚಾರಿಕತೆ ಮತ್ತು ಶ್ರಮದ ಬದುಕು ಸೇರಿಸುವ ಕಡೆಗೆ  ಸಾಗುತ್ತಿದ್ದಾರೆ’ ಎಂದು ಹೇಳಿದರು.

‘ನಾವು ಕೂಡ ಮತ್ತೆ ಗಾಂಧೀಜಿ ರೀತಿಯಲ್ಲಿ ಅನುಭವ, ಸಂಸ್ಕೃತಿ ಜನ್ಯವಾದ ರಾಜಕೀಯವನ್ನು ಮಾಡೋಣ. ಸಂಸ್ಕೃತಿ ಜನ್ಯ ರಾಜಕೀಯವೆಂದರೆ ಬಲಪಂಥಿಯ ರಾಜಕೀಯ ಎನ್ನುವ ಹೆದರಿಕೆ ಅನಗತ್ಯ. ಬಲಪಂಥ ಒಡೆಯುತ್ತಿದೆ. ಇದನ್ನು ನಾವು ಒಂದು ಶುಭ ಸಂಗತಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ನಟರಾಜ್ ಹುಳಿಯಾರ್ ಮಾತನಾಡಿ, ‘ಸಾಧಾರಣ ವ್ಯಕ್ತಿಗಳು ನಾಯಕರಾಗುವ ಪವಾಡವನ್ನು ಗಾಂಧೀಜಿ ನಮ್ಮೆದುರು ತೋರಿಸಿಕೊಟ್ಟರು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

‘ಚಿಂತನೆ ಮತ್ತು ಕ್ರಿಯೆಯನ್ನು ಬೆಸೆಯುವ ಕ್ರಮ ಗಾಂಧೀಜಿ ಅವರಲ್ಲಿತ್ತು. ಅವರನ್ನು ಪ್ರಗತಿಪರರು, ಸಂಪ್ರದಾಯವಾದಿಗಳು ಮತ್ತು ಸನಾತನಿಗಳು ವಿರೋಧಿಸುತ್ತಿದ್ದರು ಎಂದರೆ ಅವರ ಸಂಕೀರ್ಣ ವ್ಯಕ್ತಿತ್ವ ಅರಿವಾಗುತ್ತದೆ’ ಎಂದು ಹೇಳಿದರು.

ಅಂಕಣಕಾರ ಪೃಥ್ವಿ ದತ್ತಚಂದ್ರ ಶೋಭಿ ಮಾತನಾಡಿ, ‘ನ್ಯಾಯವಾದಿಯಾಗಿ ಗಾಂಧೀಜಿ ಕಾನೂನು ಭಂಗದ ನೈತಿಕತೆಯ ಬಗ್ಗೆ ಚಿಂತಿಸುತ್ತ, ಅದರ ಕಾರ್ಯಕ್ರಮವನ್ನು ರೂಪಿಸುವ ಕೆಲಸ ಮಾಡುತ್ತಲೇ  ಅಸಹಕಾರ ಚಳವಳಿ ನಡೆಸಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT