ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿದ ಹಡಗು: 4 ಸಾವು, 300 ಮಂದಿ ಕಣ್ಮರೆ

Last Updated 16 ಏಪ್ರಿಲ್ 2014, 15:54 IST
ಅಕ್ಷರ ಗಾತ್ರ

ಸಿಯೋಲ್ (ಎಪಿ/ ಎಎಫ್ ಪಿ): ಬಹುತೇಕ ಹೈಸ್ಕೂಲ್ ಮಕ್ಕಳು ಸೇರಿದಂತೆ 459 ಮಂದಿಯನ್ನು ಹೊತ್ತೊಯ್ಯುತ್ತಿದ್ದ ದಕ್ಷಿಣ ಕೊರಿಯಾದ ಹಡಗೊಂಡು ಸಮುದ್ರ ಮಧ್ಯದಲ್ಲಿ ಪಲ್ಟಿಯಾಗಿ ಮುಳುಗಿದ ಪರಿಣಾಮವಾಗಿ ನಾಲ್ಕು ಮಂದಿ ಮೃತರಾಗಿ ಸುಮಾರು 300ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.

ಹಡಗಿನೊಳಗೆ ಸಿಲುಕಿಕೊಂಡವರು ಅಥವಾ ಸಮುದ್ರಕ್ಕೆ ಬಿದ್ದು ಅಸು ನೀಗಿದವರ ಸಂಖ್ಯೆ ಏರುವ ಭಯ ಹೆಚ್ಚಿದ್ದು, 1993ರಿಂದೀಚೆಗಿನ ಕೊರಿಯಾದ ಹಡಗು ದುರಂತಗಳಲ್ಲೇ ಇದು ಭೀಕರ ದುರಂತವೆನಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.

1993ರಲ್ಲಿ ಸಂಭವಿಸಿದ್ದು ಹಡಗು ದುರಂತದಲ್ಲಿ 293 ಜನ ಮೃತರಾದದ್ದು ಅತೀ ಹೆಚ್ಚಿನ ಸಾವು ಎಂದು ಪರಿಗಣಿಸಲಾಗಿತ್ತು.

ಹತ್ತಾರು ದೋಣಿಗಳು ಮತ್ತು ಹೆಲಿಕಾಪ್ಟರ್ ಗಳು ನಿರಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ಕನಿಷ್ಠ 4 ಮಂದಿ ಮೃತರಾಗಿರುವುದು ಹಾಗೂ 55 ಮಂದಿ ಗಾಯಗೊಂಡಿರುವುದು ದೃಢ ಪಟ್ಟಿದೆ.

ದುರಂತದಲ್ಲಿ ಸಿಲುಕಿ ಬದುಕಿ ಉಳಿದರುವ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಲಿಮ್ ಹ್ಯುವಾಂಗ್ - ಮಿನ್ ಅವರು ವೈಟಿ ಎನ್ ಟೆಲಿವಿಷನ್ ವಾಹಿನಿಗೆ ತಿಳಿಸಿರುವ ಪ್ರಕಾರ ಅವರು ಇತರ ಸಹಪಾಠಿಗಳೊಂದಿಗೆ ಜೀವ ರಕ್ಷಕ ಜಾಕೆಟ್ ಗಳನ್ನು ತೊಟ್ಟುಕೊಂಡು ಸಮುದ್ರಕ್ಕೆ ನೆಗೆದು ಈಜಿಕೊಂಡು ಸಮೀಪದ ಜೀವ ರಕ್ಷಕ ದೋಣಿ ಏರಿ ಪಾರಾಗಿದ್ದಾರೆ.

'ಹಡಗು ಅಲುಗಾಡುತ್ತಾ ಮುಳುಗುತ್ತಿದ್ದಂತೆಯೇ ನಾವು ಸಮುದ್ರಕ್ಕೆ ಜಿಗಿದೆವು. ಆಗ ಕೆಲವರಿಗೆ ಗಾಯಗಳಾಗಿ ರಕ್ತ ಸೋರಿತು. ಸಮುದ್ರದ ನೀರು ಚಳಿಯಿಂದ ಮರಗಟ್ಟಿಸುವಂತಿತ್ತು. ಆದರೆ ಬದುಕಬೇಕೆಂಬ ಆಸೆಯಿಂದ ಸಮುದ್ರಕ್ಕೆ ನೆಗೆದೇ ಬಿಟ್ಟೆವು' ಎಂದು ಈ ವಿದ್ಯಾರ್ಥಿ ಹೇಳಿದರು.

ಪಲ್ಟಿ ಹೊಡೆದು ಒಂದು ಕಡೆಗೆ ವಾಲುತ್ತಾ ಕ್ರಮೇಣ ಮುಳುಗಿದ ಹಡಗು, ಹಡಗಿನಿಂದ ಸಮುದ್ರಕ್ಕೆ ಜಿಗಿದು ಜೀವ ರಕ್ಷಕ ದೋಣಿಗಳತ್ತ ಸಾಗಲು ಹರಸಾಹಸ ಪಡುತ್ತಿದ್ದ ಪ್ರಯಾಣಿಕರು, ಸಮುದ್ರಕ್ಕೆ ಬಿದ್ದವರ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದ ದೋಣಿಗಳ ಹಾಗೂ ಹೆಲಿಕಾಪ್ಟರ್ ಸಿಬ್ಬಂದಿಯ ಯತ್ನಗಳನ್ನು ಸ್ಥಳೀಯ ಟೆಲಿವಿಷನ್ ಚಾನೆಲ್ ಗಳು ಪ್ರಸಾರ ಮಾಡಿದವು.

ಕನಿಷ್ಠ 87 ದೋಣಿಗಳು ಮತ್ತು 18 ವಿಮಾನಗಳು ಹಡಗು ಮುಳುಗಿದ ಸ್ಥಳದಲ್ಲಿ ಸುತ್ತಾಡುತ್ತಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಹಡಗಿನಲ್ಲಿ ಇದ್ದ ಬಹುತೇಕ ಪ್ರಯಾಣಿಕರು ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದು ರಜಾಕಾಲದ ಪ್ರವಾಸ ಹೊರಟಿದ್ದರು.

'ಈವರೆಗೆ 368 ಮಂದಿಯನ್ನು ರಕ್ಷಿಸಲಾಗಿದೆ' ಎಂದು ಭದ್ರತೆ ಮತ್ತು ಸಾರ್ವಜನಿಕ ಆಡಳಿತ ಉಪಸಚಿವ ಲೀ ಗ್ಯೊಂಗ್-ಓಗ್ ಸಿಯೋಲ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮುಂಜಾನೆ 9 ಗಂಟೆಗೆ ಹಡಗಿನಿಂದ ಅಪಾಯದ ಸಂಕೇತಗಳು ಬರತೊಡಗಿದ್ದು ಈ ಸಂಕೇತಗಳ ಆಗಮನದ ಎರಡು ಗಂಟೆಗಳ ಒಳಗಾಗಿ ಹಡಗು ಪಲ್ಟಿಯಾದದ್ದರಿಂದ ಕಣ್ಮರೆಯಾಗಿರುವ ಮಂದಿಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ.

ಹಡಗಿನೊಳಕ್ಕೆ ನೀರು ನುಗ್ಗಿ ಅದು ಮುಳುಗುತ್ತಿದ್ದಾಗ ಭಯಗ್ರಸ್ತ ಪ್ರಯಾಣಿಕರು ಜೀವರಕ್ಷಕ ಜಾಕೆಟ್ ಗಳನ್ನು ಧರಿಸಿಕೊಂಡು ಪುಟ್ಟ ದೋಣಿಗಳಿಗೆ ಏರಲು ಧಾವಂತ ಪಡುತ್ತಿದ್ದ ದೃಶ್ಯದ ವೈಮಾನಿಕ ಚಿತ್ರಗಳನ್ನು 'ಡ್ರಮಾಟಿಕ್' ಟೆಲಿವಿಷನ್' ಪ್ರಸಾರ ಮಾಡಿತು.

ಭಯಗ್ರಸ್ತ ಪ್ರಯಾಣಿಕರಲ್ಲಿ ಕೆಲವರು ಹಡಗಿನ ಬದಿಯಲ್ಲಿ ಸಮುದ್ರದ ನೀರಿನತ್ತ ಜಾರುತ್ತಿದ್ದ ದೃಶ್ಯ ಹಾಗೂ ರಕ್ಷಣಾ ತಂಡದ ಸಿಬ್ಬಂದಿ ಪುಟ್ಟ ಮೀನುಗಾರಿಕಾ ದೋಣಿಗಳನ್ನು ರಕ್ಷಣೆಗಾಗಿ ಅವರತ್ತ ತಳ್ಳಿ ಬಿಡುತ್ತಿದ್ದ ದೃಶ್ಯಗಳೂ ಟೆಲಿವಿಷನ್ ವಾಹಿನಿಯಲ್ಲಿ ಪ್ರಸಾರಗೊಂಡವು.

ದಕ್ಷಿಣದ ಜನಪ್ರಿಯ ದ್ವೀಪ ವಿಶ್ರಾಂತಿಧಾಮ ಜೆಜು ಕಡೆಗೆ ಹೊರಟಿದ್ದ ಹಡಗಿನ 459 ಪ್ರಯಾಣಿಕರಲ್ಲಿ 324 ಮಂದಿ ವಿದ್ಯಾರ್ಥಿಗಳು ಹಾಗೂ 14 ಮಂದಿ ಶಿಕ್ಷಕರು ಸಿಯೋಲ್ ನ ದಕ್ಷಿಣದ ಅನ್ಸಾನ್ ಹೈಸ್ಕೂಲಿನಿಂದ ಬಂದವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT