ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳುಗಿ ಎದ್ದ ಗ್ರಾಮ!

Last Updated 25 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಇದು ಹುಲ್ಕೋಡು ಗ್ರಾಮ. ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ಇಲ್ಲಿ 8 ಕುಟುಂಬಗಳಿವೆ. ಇವರೆಲ್ಲ ಶ್ರೀಮಂತರಲ್ಲ. ಗುಂಟೆ ಲೆಕ್ಕದಲ್ಲಿ ಅಡಿಕೆ ತೋಟವಿಟ್ಟು ಕೊಂಡು ಬದುಕು ಕಟ್ಟಿಕೊಂಡವರು. ಈ ಕುಟುಂಬ ಗಳೆಲ್ಲವೂ ಶರಾವತಿ ಸಂತ್ರಸ್ತ ಕುಟುಂಬಗಳು. ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಮನೆ ಮಠ ಕಳೆದುಕೊಂಡು ಊರು ಬಿಟ್ಟು ಬಂದವರು.

ಮೊದಲು ಹಿರೇಭಾಸ್ಕರ ಡ್ಯಾಂ ನಂತರ ಲಿಂಗನಮಕ್ಕಿ ಡ್ಯಾಂ ನಿರ್ಮಾಣದಿಂದಾಗಿ ಇವರು ಸಂತ್ರಸ್ತರಾಗಿ ಈ ಗ್ರಾಮಕ್ಕೆ ಬಂದವರು.
ಜುಲೈ 2013 ರಂದು ಈ ಊರಲ್ಲಿ ಆತಂಕ, ತಲ್ಲಣ ಆರಂಭಗೊಂಡಿತು. ಕಳೆದ ವರ್ಷ ಜುಲೈ ಆರಂಭದಿಂದಲೂ ವಿಪರೀತ ಮಳೆ ಬಿದ್ದಿತ್ತು. ಮಳೆಗಾಲದ ಆ ದಿನದಲ್ಲಿ ಈ ಗ್ರಾಮದ ಪ್ರತಿ ಕುಟುಂಬದ ಮನೆ ಗೋಡೆಗಳು, ನೆಲ, ಜಾನುವಾರು ಕೊಟ್ಟಿಗೆ ಎಲ್ಲವೂ ಬಿರುಕು ಬಿಡಲಾರಂಭಿಸಿದವು. ಹೀಗೆ ಬಿಡುತ್ತಿದ್ದ ಬಿರುಕು ದಿನದಿನಕ್ಕೂ ವಿಸ್ತಾರಗೊಳ್ಳುತ್ತಿತ್ತು.

ಆ ರಾತ್ರಿಗಳನ್ನು ಮನೆಯೊಳಗೆ ಕಳೆಯುವುದಕ್ಕೂ ಆತಂಕ, ತಲ್ಲಣ ಆರಂಭವಾಗಿತ್ತು. ನಿದ್ದೆ ಬಾರದ ರಾತ್ರಿಗಳು ಆರಂಭಗೊಂಡಿದ್ದವು. ಮನೆಯೊಳಗಿದ್ದರೆ ಕ್ಷಣಕ್ಷಣಕ್ಕೂ ಮನದಲ್ಲಿ ದುಗುಡ ನಗಾರಿ ಬಾರಿಸುತ್ತಿತ್ತು. ಕೈಯಲ್ಲಿ ಜೀವ ಹಿಡಿದು ದಿನ ಕಳೆಯುವ ಸ್ಥಿತಿ ನಿರ್ಮಾಣವಾಗಿತ್ತು. ಮುಂದೇನಾಗುತ್ತೋ ಎಂಬ ಭಯ ಇಡೀ ಗ್ರಾಮವನ್ನಾವರಿಸಿಕೊಂಡಿತ್ತು! ನಿಂತ ನೆಲವೇ ಬಿರಿಯುತ್ತಿದ್ದುದರಿಂದ ವಾಸಿಸುವುದೆಲ್ಲಿ? ಎಂಬ ಪ್ರಶ್ನೆ ಇವರನ್ನು ಕಾಡಲಾರಂಭಿಸಿತು. ಕೊನೆಗೆ ಗ್ರಾಮದ ಜನರು ರಾತ್ರಿ ವಾಸಿಸಲು ಗ್ರಾಮದಲ್ಲಿರುವ ದೇವಸ್ಥಾನವನ್ನು ಆಶ್ರಯಿಸಿಕೊಂಡರು.

ಇಂಥ ಆತಂಕ, ತಲ್ಲಣ ಕಂಡ ಗ್ರಾಮಕ್ಕೆ ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು, ವಿಜ್ಞಾನಿಗಳು ಬಂದು ಪರಿಸ್ಥಿತಿ ಅವಲೋಕಿಸಿದರು. ಈ ಎಲ್ಲ ಮನೆಗಳನ್ನು ಸ್ಥಳಾಂತರ ಮಾಡುವುದೊಂದೇ ಪರಿಹಾರ ಎಂಬ ಅಂತಿಮ ತೀರ್ಮಾನ ಕೈಗೊಳ್ಳಲಾಯಿತು.
ಹೀಗೆ ಮುಳುಗಡೆ ಸಂತ್ರಸ್ತ ಕುಟುಂಬ ಸದಸ್ಯರು ತಮ್ಮ ವೇದನೆಯನ್ನು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಅರಿಕೆ ಮಾಡಿಕೊಂಡರು.

ಇದರ ಪರಿಣಾಮವಾಗಿ ಕೆಲ ದಿನಗಳ ನಂತರ ಹುಲ್ಕೋಡು ಗ್ರಾಮಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ಈ ಕುಟುಂಬಗಳಿಗೆ ಅಭಯ ನೀಡಿದರು. ಬಡ ಕುಟುಂಬದ ಆತಂಕಕ್ಕೆ ಸ್ಪಂದಿಸಿದ ಸ್ವಾಮೀಜಿಯವರು, ಎಲ್ಲ ಕುಟುಂಬಗಳಿಗೆ ಹೊಸದಾಗಿ ಮನೆ ನಿರ್ಮಿಸಿಕೊಡುವ ಇಚ್ಛಾಶಕ್ತಿ ಪ್ರದರ್ಶಿಸಿದರು. ಮಠದ ಧರ್ಮಚಕ್ರ ಟ್ರಸ್ಟ್ ಸಹಾಯನಿಧಿ ಯೋಜನೆಯಡಿ ‘ಶುಭಾಶ್ರಯ’ ಮನೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಯೋಜನೆಯಡಿ ಮನೆ ನಿರ್ಮಿಸಲು ಅದೇ ಗ್ರಾಮದ ಮತ್ತೊಂದು ಕಡೆ ಅಗತ್ಯವಾದ ಸ್ಥಳವನ್ನು ಶಾಸಕರಾದ ಕಾಗೋಡು ತಿಮ್ಮಪ್ಪನವರು ಸರ್ಕಾರದಿಂದ ಒದಗಿಸಿದರು.

ಉದ್ದೇಶಿತ ಮನೆ ನಿರ್ಮಾಣದ ಜಾಗವನ್ನು ಮಠದ ಮಂಡಲ ವ್ಯಾಪ್ತಿಯ 400ಕ್ಕೂ ಹೆಚ್ಚು ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಛ ಮಾಡಿಕೊಟ್ಟರು. 2013ರ ಅಕ್ಟೋಬರ್‌ನಲ್ಲಿ ಮನೆ ನಿರ್ಮಾಣದ ಕೆಲಸ ಆರಂಭಗೊಂಡಿತು. ಪ್ರತಿ ಮನೆಗೂ ಸುಮಾರು 8 ಲಕ್ಷ ರೂಪಾಯಿ ವೆಚ್ಚ ಮಾಡಿ ವಾಸಯೋಗ್ಯ ಮನೆಯಾಗಿ ರೂಪಿಸಲಾಯಿತು.

ಒಟ್ಟು ಎಂಟು ಕುಟುಂಬದಲ್ಲಿ ಒಬ್ಬರು ಮಾತ್ರ ತಾವೇ ಮನೆ ನಿರ್ಮಿಸಿಕೊಳ್ಳುವುದಾಗಿ ಹೇಳಿದ್ದರಿಂದ ಏಳು ಮನೆಗಳನ್ನು ಮಠದ ಧರ್ಮಚಕ್ರ ಟ್ರಸ್ಟ್ ನಡಿ ನಿರ್ಮಿಸಲಾಗಿದೆ. ಈ ಮನೆಗಳ ನಿರ್ಮಾಣದಲ್ಲಿ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕತೃ ಭೀಮೇಶ್ವರ ಜೋಶಿಯವರೂ ಸಹಾಯ ಹಸ್ತ ನೀಡಿದ್ದಾರೆ. ಒಟ್ಟು 56 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಿದ್ದು, ಮಠ ಮಾನವೀಯ ಮಿಡಿತಕ್ಕೆ ಮುನ್ನುಡಿ ಬರೆದಿದೆ. ಹೀಗೆ ಹುಲ್ಕೋಡು ಗ್ರಾಮ ಅಲ್ಲಿ ಮುಳುಗಿ ಮತ್ತೆ ಇಲ್ಲಿ ಎದ್ದು ನಿಂತಿದೆ. !

ಇದೇ ಜುಲೈ ಒಂದರಂದು ಕರ್ನಾಟಕ ಸರ್ಕಾರ ಮತ್ತು ಧರ್ಮಚಕ್ರ ಟ್ರಸ್ಟ್ ಸಹಾಯನಿಧಿಯಡಿ ಹುಲ್ಕೋಡು ‘ಶುಭಾಶ್ರಯ’ ಯೋಜನೆ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಲಾಯಿತು. ಫಲಾನುಭವಿಗಳಿಗೆ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು. ಇನ್ನು ಅಶುಭಕ್ಕೆ ಅವಕಾಶವಿಲ್ಲ ಎಂಬ ಕಾರಣಕ್ಕೆ ‘ಶುಭಾಶ್ರಯ’ ಎಂದು ಮನೆಗೆ ನಾಮಕರಣ ಮಾಡಲಾಗಿದೆ ಎಂದು ಶ್ರೀಗಳು ಹರಸಿದರು. 

ಈಗ ಏಳು ಮನೆಗಳ ಹೊಸ ಹುಲ್ಕೋಡು ಗ್ರಾಮ ತಲೆ ಎತ್ತಿ ನಿಂತಿದೆ. ಸುತ್ತಲ ಹಸಿರು ವನರಾಶಿ ಗ್ರಾಮದ ಶೋಭೆಯನ್ನು ಹೆಚ್ಚಿಸಿದೆ. ಅಂತೂ ಮತ್ತೆ ಮತ್ತೆ ಮುಳುಗಿ ಎದ್ದ ಗ್ರಾಮಸ್ಥರಿಗೆ ಈಗ ಆತಂಕ ದೂರವಾಗಿದೆ. ಸಮಾಜ ಮತ್ತು ಸರ್ಕಾರ ಮನಸ್ಸು ಮಾಡಿದರೆ ಹೇಗೆ ಜೀವಪರ, ಜನಪರವಾಗಿ ಕರ್ತವ್ಯ ಮಾಡಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT