ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳಿನ ಹಾದಿಯಲ್ಲಿ ಹೂವಿನ ಫಲ...

Last Updated 18 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಪಲ್ಲವಿ ಪಟೌಡಿ
ಕಠಿಣ ಪರಿಶ್ರಮದ ಮೂಲಕ ಯಶಸ್ಸನ್ನು ಸಿದ್ಧಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಮಧ್ಯಪ್ರದೇಶದ  ಪಲ್ಲವಿ ಪಟೌಡಿ ಅವರ ಸಾಧನೆಯ ಕಥೆ ಇದು. ಪಲ್ಲವಿ ಕಟ್ಟಿದ ಸಿದ್ಧ ಉಡುಪುಗಳ ಆನ್‌ಲೈನ್‌ ಮಾರುಕಟ್ಟೆ ಕಂಪೆನಿ ‘ಯಲ್ಲೊಫ್ಯಾಶನ್‌’ (yellowfashion) ಮುಂಬೈನಲ್ಲಿ ಜನಪ್ರಿಯವಾಗಿದೆ. ವಿಶೇಷವಾಗಿ ಮಹಿಳೆಯರ ಉಡುಪುಗಳನ್ನು ಇಲ್ಲಿ ಹೆಚ್ಚಾಗಿ ಮಾರಾಟ ಮಾಡಲಾಗುತ್ತದೆ. ವಿವಿಧ ವಿನ್ಯಾಸದ ಸೀರೆಗಳು ಮತ್ತು ಕುಪ್ಪಸಗಳು ಇಂದು ಹೆಚ್ಚಾಗಿ ಮಾರಾಟವಾಗುತ್ತಿವೆ.

ಪಲ್ಲವಿ ಹುಟ್ಟಿದ್ದು ಬಡ ಕುಟುಂಬದಲ್ಲಿ. ತಂದೆ ಸೈಕಲ್‌ ಶಾಪ್‌ ಇಟ್ಟುಕೊಂಡಿದ್ದರು. ಕಷ್ಟದಲ್ಲೇಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪಲ್ಲವಿ ಯಶಸ್ವಿ ಉದ್ಯಮಿಯಾಗಬೇಕು ಎಂದು ಕನಸು ಕಂಡವರು. ಪೋಷಕರ ಒತ್ತಾಸೆಯಂತೆ ವಿವಾಹವಾಗಿ ಮುಂಬೈಗೆ ಬಂದು ನೆಲೆಸಿದರು. ಅಲ್ಪ ಸ್ವಲ್ಪ ಉಳಿತಾಯ ಮಾಡಿದ ಹಣದಲ್ಲೇ ಯಲ್ಲೋಫ್ಯಾಶನ್‌ ಕಂಪೆನಿ ಕಟ್ಟಿದರು. ಇದಕ್ಕೆ ಪಲ್ಲವಿ ಪತಿ ಕೂಡ ಸಾಥ್‌ ನೀಡಿದರು. ಒಂದು ಪುಟ್ಟ ಕೋಣೆಯಲ್ಲಿ ಆರಂಭವಾದ ಈ ಕಂಪೆನಿ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. 

ತಾವು ವಾಸವಿದ್ದ ಮನೆಯ ಪಕ್ಕದಲ್ಲೇ ಒಂದು ಮನೆಯನ್ನು ಬಾಡಿಗೆ ಪಡೆದು ಪಲ್ಲವಿ ವಹಿವಾಟು ಆರಂಭಿಸಿದರು. ಒಂದು ವೆಬ್‌ಸೈಟ್‌ ಅನ್ನು ಅಭಿವೃದ್ಧಿಪಡಿಸಿದರು. ಆರಂಭದಲ್ಲಿ ಮನೆಯ ನಿತ್ಯ ಕೆಲಸಗಳನ್ನು ಮಾಡುತ್ತ ವ್ಯಾಪಾರವನ್ನು ನೋಡಿಕೊಳ್ಳುತ್ತಿದ್ದರು. ಕೆಲವೊಮ್ಮೆ ಗ್ರಾಹಕರ ಮನೆ ಬಾಗಿಲಿಗೆ ಹೋಗಿ ಉಡುಪುಗಳನ್ನು ಕೊಟ್ಟು ಬರುತ್ತಿದ್ದರು. ಹೀಗೆ ಸಣ್ಣದಾಗಿ ಆರಂಭವಾದ ಈ ಕಂಪೆನಿ ಇಂದು ನಿಧಾನವಾಗಿ ವ್ಯಾಪಾರದ ವೇಗವನ್ನು ಹೆಚ್ಚಿಸಿಕೊಂಡಿರುವುದು ವಿಶೇಷ.

ಮಹಿಳೆಯರ ನಾಡಿಮಿಡಿತವನ್ನು ಅರಿತಿರುವ ಪಲ್ಲವಿ ಕಾಲಕ್ಕೆ ತಕ್ಕಂತೆ ನೂತನ ವಿನ್ಯಾಸದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಎಲ್ಲ ವರ್ಗದ ಗೃಹಿಣಿಯರನ್ನು ಗಮನದಲ್ಲಿರಿಸಿಕೊಂಡು ಉಡುಪುಗಳನ್ನು ಸಿದ್ಧಪಡಿಸುತ್ತಾರೆ. ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ  ಮಾತನ್ನು ಸಾಬೀತುಪಡಿಸಿರುವ ಪಲ್ಲವಿ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. www.yellowfashion.in
*
ಮಧುಚಂದನ್‌
ವಿದೇಶಗಳಲ್ಲಿ ಪರಕೀಯರಾಗಿ ಬಾಳುವುದಕ್ಕಿಂತ ನಮ್ಮ ನೆಲದಲ್ಲಿ ಆಳಾಗಿ ಬಾಳುವುದೇ ಲೇಸು ಎಂಬ ಆಧುನಿಕ ನಾಣ್ಣುಡಿಗೆ ಕನ್ನಡಿ ಹಿಡಿದವರು ಮಂಡ್ಯದ ಸಾಫ್ಟ್‌ವೇರ್‌ ಎಂಜಿನಿಯರ್‌ ಮಧುಚಂದನ್‌. ದೂರದ ಅಮೆರಿಕದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಮಧುಚಂದನ್‌ ಮಂಡ್ಯದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ  ಲಕ್ಷಾಂತರ ರೂಪಾಯಿ ಸಂಬಳ ಬರುವ ಕೆಲಸಕ್ಕೆ ರಾಜೀನಾಮೆ ನೀಡಿ ಹುಟ್ಟೂರಿಗೆ ಮರಳಿ ಯಶಸ್ವಿ ಉದ್ಯಮ ಕಟ್ಟಿ ಯುವ ಸಾಧಕರಾಗಿದ್ದಾರೆ.

ಮಧುಚಂದನ್‌, ಕೃಷಿ ಉದ್ಯಮ ಸ್ಥಾಪಿಸುವ ಗುರಿ ಹೊಂದಿರುವುದು ಮಾತ್ರವಲ್ಲದೆ ತನ್ನ ಮಣ್ಣಿನ ಮಕ್ಕಳಾದ ರೈತರಿಗೆ ಆರ್ಥಿಕವಾಗಿ ನೆರವಾಗುವ ದೂರದೃಷ್ಟಿಯನ್ನು ಹೊಂದಿದ್ದರು. 2014ರಲ್ಲಿ ಭಾರತಕ್ಕೆ ಮರಳಿದ ಬಳಿಕ ಮಧುಚಂದನ್‌ ಮೊದಲು ಮಾಡಿದ್ದು  ಸುಮಾರು 300ಕ್ಕೂ ಹೆಚ್ಚು ರೈತರನ್ನು ಸೇರಿಸಿಕೊಂಡು ಸಹಕಾರ ಸಂಘ ಸ್ಥಾಪಿಸುವ ಕೆಲಸವನ್ನು. ನಂತರ ಸಾವಯವ ಪದ್ಧತಿಯಲ್ಲಿ ಬೆಳೆದ ವಿವಿಧ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ  ಸೂಪರ್‌ ಮಾರ್ಕೆಟ್‌ ಕಂಪೆನಿ ಪ್ರಾರಂಭಿಸಿದರು.

ಮಧುಚಂದನ್‌ ಆರಂಭಿಸಿದ ‘ಆರ್ಗ್ಯಾನಿಕ್‌ ಮಂಡ್ಯ’ ಸೂಪರ್‌ ಮಾರುಕಟ್ಟೆಯು ಪ್ರಸ್ತುತ ಬುದನೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಾವಯವ ಹಣ್ಣುಗಳು, ಧಾನ್ಯಗಳು, ತೆಂಗಿನಕಾಯಿ, ತರಕಾರಿಗಳು, ಕಬ್ಬು ಸೇರಿದಂತೆ ಎಲ್ಲಾ ರೀತಿಯ ಸಾವಯವ ಪದಾರ್ಥಗಳು ಈ ಸೂಪರ್‌ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸ್ಥಳೀಯ ರೈತರು ಬೆಳೆದ ಸಾವಯವ ಉತ್ಪನ್ನಗಳನ್ನು ಖರೀದಿಸುವ ಮೂಲಕ ರೈತರಿಗೆ ಮಧುಚಂದನ್‌ ನೆರವಾಗಿದ್ದಾರೆ. ರೈತರು ಬೆಳೆದ ಬೆಳೆಗೆ ನಷ್ಟವಾಗದಂತೆ ದರ ನಿಗದಿಪಡಿಸುವುದು ಈ ಸೂಪರ್‌ ಮಾರುಕಟ್ಟೆಯ ವಿಶೇಷ.

ಈ ಮಾರುಕಟ್ಟೆ ಆರಂಭವಾಗಿ ಒಂದು ತಿಂಗಳಲ್ಲೇ ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿದೆ.  ಗ್ರಾಹಕರ ಆರೋಗ್ಯ ಮತ್ತು ರೈತರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಈ ಸೂಪರ್‌ ಮಾರುಕಟ್ಟೆಯನ್ನು ಆರಂಭಿಸಲಾಗಿದೆ ಎಂದು ಮಧುಚಂದನ್‌ ಹೇಳುತ್ತಾರೆ. ಈ ಉದ್ಯಮದಿಂದ ಮಂಡ್ಯ ಭಾಗದ ನೂರಾರು ಸಾವಯವ ಕೃಷಿಕರಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಬಳಸಿಕೊಂಡು  ಈ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿ ರಾಜ್ಯದ ರೈತರಿಗೆ ಅನುಕೂಲ ಕಲ್ಪಿಸುವ  ಗುರಿ ಮಧುಚಂದನ್‌ ಅವರದ್ದು.
shop.organicmandya.com/
*
ವಿಲಾಸ್‌ ನಾಯಕ್‌
ಬಣ್ಣ ಮತ್ತು ಕುಂಚದಲ್ಲಿ ಆಟವಾಡುವುದು ಎಂದರೆ ಈ ಯುವಕನಿಗೆ ಅತೀವ ಪ್ರೀತಿ. ವೇಗದ ಚಿತ್ರಕಾರ ಎಂದೇ ಗುರುತಿಸಿಕೊಂಡಿರುವ ವಿಲಾಸ್‌ ನಾಯಕ್‌ ತಮ್ಮ ಚಿತ್ರಕೃತಿಗಳ ಮೂಲಕ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಜನಪ್ರಿಯತೆ ಪಡೆದಿದ್ದಾರೆ. ಮಂಗಳೂರು ಮೂಲದ ವಿಲಾಸ್‌ ನಾಯಕ್‌ ಓದಿದ್ದು ಬಿ.ಎ. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಾಯಕ್‌ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದವರಲ್ಲ.  ಚಿಕ್ಕ ವಯಸ್ಸಿನಿಂದಲೇ ಚಿತ್ರಗಳನ್ನು  ಬಿಡಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದರು.


ಜೀವನ ನಿರ್ವಹಣೆಗಾಗಿ ಕೆಲವು ವರ್ಷಗಳು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದರು.  ಆದರೆ  ಆ ಕೆಲಸ ನಾಯಕ್‌ಗೆ ರುಚಿಸಲಿಲ್ಲ. ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಅವರ ಮನಸ್ಸಲ್ಲಿ ಜಾಗೃತವಾಯಿತು. ಚಿತ್ರಕಲೆಯಲ್ಲೇ ಮುಂದುವರೆಯಬೇಕು ಮತ್ತು ಅದೇ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಎಂದು ನಿಶ್ಚಯಿಸಿದ ನಾಯಕ್‌ ಮತ್ತೆ ಹಿಂತಿರುಗಿ ನೋಡಲಿಲ್ಲ. ಎರಡೇ ನಿಮಿಷಗಳಲ್ಲಿ ವ್ಯಕ್ತಿಗಳ ಭಾವ ಚಿತ್ರವನ್ನು ರಚಿಸುವಲ್ಲಿ ನಾಯಕ್‌ ನಿಪುಣರು. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಬಾಲಿವುಡ್‌ ನಟ ಶಾರೂಖ್‌ ಖಾನ್‌  ಸೇರಿದಂತೆ ಹಲವಾರು ಖ್ಯಾತನಾಮರ ಚಿತ್ರಗಳನ್ನು ವೇದಿಕೆಗಳ ಮೇಲೆ ಎರಡೇ ನಿಮಿಷಗಳಲ್ಲಿ ರಚಿಸಿದ ಹೆಗ್ಗಳಿಕೆ ಅವರದ್ದು.

ನಾಯಕ್‌ ಚಿತ್ರ ರಚನೆಯ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.  ಸಾಮಾಜಿಕ ಪಿಡುಗುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರಗಳನ್ನು ಬರೆದು ಪ್ರದರ್ಶನಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಕಲಾಕೃತಿಗಳ ಮಾರಾಟದಿಂದ ಬಂದ ಹಣವನ್ನು ಸಮಾಜ ಸೇವೆಗೆ  ವಿನಿಯೋಗ ಮಾಡುತ್ತಿರುವುದು ವಿಶೇಷ. ನಾಯಕ್‌ ಅವರ ಪ್ರತಿಭೆಗೆ ರಾಜ್ಯ ಸರ್ಕಾರ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮ ಉಪ ಜೀವನದ ನಡುವೆಯೂ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ನಾಯಕ್‌ ಭಿನ್ನವಾಗಿ ಕಾಣುತ್ತಾರೆ. ಹಾಗಾಗಿ ಅವರ ನಡೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿದೆ. www.facebook.com/vilasnayakart
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT