ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳು

ಕಥೆ
Last Updated 2 ಏಪ್ರಿಲ್ 2016, 19:46 IST
ಅಕ್ಷರ ಗಾತ್ರ

ಹೂವಿನ ಹೊರಗಡೆ ಮುಳ್ಳಿರಬಹುದೇ ಹೊರತು ಅದರ ಒಳಗಡೆ ಮುಳ್ಳು ಕೂತರೆ... ಆ ಹೂವಿಗೆ ನೆಮ್ಮದಿ ಇರುವುದಾದರೂ ಹೇಗೆ? ಯಾರಲ್ಲೂ ಹೇಳಲಾಗದ, ಯಾರ ಸಲಹೆಯನ್ನೂ ಕೇಳಲಾಗದ ಪರಿಸ್ಥಿತಿ ಹೂವಿಗೆ.

ಹಾಗೆ ತೊಳಲಾಡುತ್ತಿದ್ದ ಡಾ. ಗುಲಾಬಿ, ತನ್ನ ಪಕಳೆಗಳು ಮಾಗತೊಡಗಿದ್ದರೂ ಅದರೊಳಗೆ ಹೊಕ್ಕಿದ್ದ ಮುಳ್ಳು ತುಕ್ಕು ಹಿಡಿದು ಆಗಲೂ ಉಳಿದುಕೊಂಡಿದೆ ಎಂಬ ನೋವಿನೊಂದಿಗೆ ಚಂದ್ರುವಿನ ಆಪ್ತರೂ ತನ್ನ ಸಂಬಂಧಿಯೂ ಗೌರವಾನ್ವಿತ ಸಾಮಾಜಿಕ ಕಾರ್ಯಕರ್ತರೂ ಆದ ಸಾಲಿಯಾನರ ಮುಂದೆ ಕುಳಿತಿದ್ದಳು.
ಅದೊಂದು ಗಾಳಿಮಳೆಯ ಸಂಜೆ.
***
ವಿವಾಹದ ಮೊದಲ ದಿನಗಳಲ್ಲೇ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ಗುಲಾಬಿ, ತನಗಿನ್ನು ಅಪ್ಪ ಅಮ್ಮಂದಿರ, ರೋಗಿಗಳ ಆರೈಕೆ ಮಾಡುವುದರಲ್ಲೇ ಸಾರ್ಥಕ್ಯ ಎಂಬ ತೀರ್ಮಾನಕ್ಕೆ ಬಂದಿದ್ದಳು.

ಸ್ವಂತ ಕ್ಲಿನಿಕ್ ನಡೆಸುತ್ತ, ಬೇರೆ ಬೇರೆ ಆಸ್ಪತೆಗಳಿಗೆ ಭೇಟಿ ನೀಡುತ್ತ, ಹೊಸ ಮಕ್ಕಳಿಗೆ ಹುಟ್ಟುಕೊಡುತ್ತ ನೆಮ್ಮದಿಯ ಬದುಕಿನಲ್ಲಿದ್ದಾಗಲೇ ಚಂದ್ರು ಕಾಣಿಸಿಕೊಂಡದ್ದು. ಆಕೆ ಸಂದರ್ಶನಕ್ಕೆ ಹೋಗುತ್ತಿದ್ದ ‘ಆರೈಕೆ’ ಆಸ್ಪತ್ರೆಯ ಹೆಡ್‌ನರ್ಸ್ ಜ್ಯೋತಿ ಈ ಚಂದ್ರುವನ್ನು ಪರಿಚಯಿಸಿದ್ದು.

ಹೆರಿಗೆಗೆಂದು ಆಸ್ಪತ್ರೆಯಿಂದ ಬುಲಾವ್ ಬಂದು, ಡಾಕ್ಟರ್ ಬಂದ ತಕ್ಷಣ ಹೆರಿಗೆ ಆಗಿಬಿಡುವುದಿಲ್ಲ. ಆ ಅವಧಿ ಕೈಗೆಟಕುವ ತನಕ ಸಿಸ್ಟರ್‌ಜ್ಯೋತಿ ಹಾಗೂ ಡಾ. ಗುಲಾಬಿ ಲೋಕಾಭಿರಾಮ ಮಾತನಾಡುತ್ತಿರುತ್ತಾರೆ. ಅವರದ್ದು ಒಂದು ಬಗೆಯ ಅವ್ಯಕ್ತ ಸಂಬಂಧ. ಅದ್ಯಾಕೊ ಗಂಡನಿಲ್ಲದ ಡಾ. ಗುಲಾಬಿಯನ್ನು ಮತ್ತೊಮ್ಮೆ ದಡಹತ್ತಿಸಬೇಕೆಂಬುದು ಜ್ಯೋತಿಯ ಆಸೆ. ಆ ಕುರಿತು ಆಗಾಗ ಪರೋಕ್ಷ ಪ್ರಸ್ತಾಪ ಮಾಡುತ್ತಿದ್ದರೂ ಡಾ. ಗುಲಾಬಿ ಮನಸ್ಸು ಮಾಡಿರಲಿಲ್ಲ. ಜ್ಯೋತಿಗೆ ಬಹುಕಾಲದಿಂದ ಚಂದ್ರು ಗೊತ್ತು. ಆತನ ಹೆಂಡತಿ ‘ಆರೈಕೆ’ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಳು. ಅದನ್ನು ಕಣ್ಣಾರೆ ಕಂಡಿದ್ದ ಜ್ಯೋತಿಗೆ ಚಂದ್ರು ಅಂದರೆ ಅಪಾರ ಕನಿಕರ.

ಚಂದ್ರುವಿನ ಮನೆಯಿಂದ ಒಂದು ಕಿ.ಮೀ.ನಷ್ಟು ದೂರದ ಚಡಾವಿನಲ್ಲೇ ಜ್ಯೋತಿಯ ಮನೆ. ಹೆರಿಗೆಯಲ್ಲಿ ಬದುಕಿ ಉಳಿದ ಚಂದ್ರುವಿನ ಮಗುವೆಂದರೆ ಆಕೆಗೆ ವಿಶೇಷ ವಾತ್ಸಲ್ಯ. ತಬ್ಬಲಿ ಮಗುವನ್ನು ಆಸ್ಪತ್ರೆಯಿಂದ ಮನೆಗೊಯ್ದು ಕೊಟ್ಟದ್ದೇ ಆಕೆ. ನಿತ್ಯವೂ ಅದನ್ನು ಮುದ್ದುಮಾಡಿಯೇ ಆಕೆ ಆಸ್ಪತ್ರೆಗೆ ಹೋಗುತ್ತಿದ್ದುದು. 

ಹೆರಿಗೆ ತಜ್ಞೆಯಾಗಿ ಡಾ. ಗುಲಾಬಿಗೆ ಒಳ್ಳೆಯ ಹೆಸರಿತ್ತು. ಅದಲ್ಲದಿದ್ದರೂ ಆಕೆಯ ಸೌಮ್ಯ ಸ್ವಭಾವ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಆಕೆಗೆ ‘ಆರೈಕೆ’ ಆಸ್ಪತ್ರೆಯಲ್ಲೂ ರೋಗಿಗಳಿದ್ದುದರಿಂದ ನಿತ್ಯವೂ ಅಲ್ಲಿಗೆ ಬಂದು ಹೋಗುತ್ತಿದ್ದಳು.

‘ನಾನೇನೂ ಹೊಸತಾಗಿ ಯಾರನ್ನೂ ನಿನಗೆ ಪರಿಚಯ ಮಾಡಿಕೊಡ್ತಾ ಇಲ್ಲ. ನಿನಗೂ ಅವನನ್ನು ಸಾಕಷ್ಟು ದಿನಗಳಿಂದ ಗೊತ್ತು’.
‘ಗೊತ್ತಿರಲಿ, ಇಲ್ಲದಿರಲಿ. ಅಪ್ಪ ಅಮ್ಮ ಇರೋತನಕ ನಾನದರ ಬಗ್ಗೆ ಚಿಂತೆ ಮಾಡೊಲ್ಲ’.
‘ಆಮೇಲೆ?’
‘ಆಮೇಲಿನದು ಆಮೇಲೆ. ಡಾ. ಗುಲಾಬಿ ನಕ್ಕು ಸುಮ್ಮನಾಗಿದ್ದಳು’.

ಸ್ವಂತ ಸರ್ಜಿಕಲ್ಸ್ ಹೊಂದಿರುವ ಚಂದ್ರು ಎಂ.ಫಾರ್ಮಾ ಮಾಡಿಕೊಂಡು ಸ್ವಂತ ವ್ಯಾಪಾರದಲ್ಲಿ ತೊಡಗಿ ಹೆಸರು ಗಳಿಸಿದ್ದ. ಉತ್ತಮ ಬದುಕು ಕಟ್ಟಿಕೊಂಡಿರುವ ಆತನ ಸಂಸಾರಕ್ಕೆ ಚುಕ್ಕಾಣಿಯಿಲ್ಲದ್ದೊಂದು ಕೊರತೆ. ಅದು ಅವನನ್ನೂ ಕಾಡುತ್ತಿತ್ತು. ಸಂಸಾರದ ರುಚಿಯಿಂದ ವಂಚಿತನಾದ ಆತನಿಗೆ ತನ್ನ ಮಗು ಅದರಷ್ಟಕ್ಕೆ ಬೆಳೆಯುತ್ತಿದ್ದುದರಿಂದ ಆ ಚಿಂತೆಯಿಲ್ಲದಿದ್ದರೂ ಮನಸ್ಸು ಆಗಾಗ ನಿಯಂತ್ರಣ ಕಳೆದುಕೊಳ್ಳುತ್ತಿತ್ತು.

ಹೆಡ್‌ನರ್ಸ್ ಜ್ಯೋತಿಯೊಂದಿಗೆ ಚಂದ್ರು ತನಗೊಂದು ಬದುಕು ಬೇಕೆಂದು ಹೇಳುತ್ತಿದ್ದ. ಮನೆಯಲ್ಲಿ ಮಗುವಿದ್ದು ಅದಕ್ಕೂ ಹೊಂದಿಕೆಯಾಗುವ, ತನ್ನ ಮಟ್ಟಕ್ಕೆ ನಿಲ್ಲಬಲ್ಲ ಒಬ್ಬ ಸಂಗಾತಿಗಾಗಿ ಆತ ಹುಡುಕಾಟ ನಡೆಸಿದ್ದ. ಅಂಥ ಹೊತ್ತಿಗೆ ಜ್ಯೋತಿ ಗುಲಾಬಿಯ ಬಗ್ಗೆ ಪ್ರಸ್ತಾಪಿಸಿದ್ದು. ತನ್ನ ಸರ್ಜಿಕಲ್ಸ್‌ನಿಂದ ಡಾ. ಗುಲಾಬಿ ಬಯಸುತ್ತಿದ್ದ ವೈದ್ಯಕೀಯ ಸಲಕರಣೆಗಳನ್ನು ಅದುತನಕ ಕೆಲಸದವನಲ್ಲಿ ಕೊಟ್ಟು ಕಳುಹಿಸುತ್ತಿದ್ದ ಚಂದ್ರು ಬಳಿಕ ತಾನೇ ಕೊಂಡೊಯ್ದು ಕೊಡತೊಡಗಿದ್ದ.

‘ನೀವೇ ಯಾಕೆ ಶ್ರಮ ತೆಗೆದುಕೊಳ್ತೀರಾ? ನಿಮ್ಮ ಹುಡುಗರು ಒಳ್ಳೆ ಸರ್ವಿಸ್ ಕೊಡ್ತಾ ಇದ್ದಾರೆ. ಅವರ ಕೈಯಲ್ಲೇ ಕೊಟ್ಟು ಕಳುಹಿಸಿ’. ಡಾ. ಗುಲಾಬಿಯಿಂದ ಹಲವು ಬಾರಿ ಆ ಮಾತುಗಳನ್ನು ಕೇಳಿದ್ದ.

ಒಮ್ಮೆಯಂತೂ ಚಂದ್ರು, ‘ಇಲ್ಲ ಡಾಕ್ಟರ್, ಏನೇ ಹೆಚ್ಚುಕಡಿಮೆಗಳಿದ್ರೂ ನಿಭಾಯಿಸೋದು ಅವರಿಗೆ ಕಷ್ಟ. ಅದಕ್ಕೆ ನಾನೇ ಬಂದು ಕೊಡ್ತಾ ಇದ್ದೀನಿ. ಅದರಿಂದ ನಿಮಗೇನು ತೊಂದರೆ?’ ಎಂದು ಕೇಳಿದ್ದ.

‘ತೊಂದರೆ ನನಗಲ್ಲ, ನಿಮಗೆ. ಎಲ್ರಿಗೂ ನೀವೇ ಹೀಗೆ ಕೊಂಡುಹೋಗಿ ಕೊಡ್ತೀರಾ?’. ಗುಲಾಬಿ ಕೇಳಿದ ಪ್ರಶ್ನೆಗೆ ಆತ ತುಸು ಪೆಚ್ಚಾದ. ಆದರೂ ಸಾವರಿಸಿಕೊಂಡು, ‘ಹಾಗೇನಿಲ್ಲ ಡಾಕ್ಟರ್, ಎಲ್ಲರ ಹಾಗೆ ನಿಮ್ಮನ್ನು ಟ್ರೀಟ್ ಮಾಡಬಾರದು ಅಂತ ಜ್ಯೋತಿಯಕ್ಕ ಪ್ರತ್ಯೇಕವಾಗಿ ಹೇಳಿದ್ದಾರೆ’ ಎಂದ. ಅದರ ಹಿಂದಿನ ಕಾರಣವನ್ನು ಊಹಿಸಿದಳೋ ಎಂಬಂತೆ ಗುಲಾಬಿ ತುಸು ನಕ್ಕಳು. ಆ ನಗುವಿನಲ್ಲಿ ಏನೋ ಇದೆ ಎಂದುಕೊಳ್ಳುತ್ತ ಚಂದ್ರು ಬಹುದಿನಗಳ ತನಕ ಅದನ್ನೇ ಮೆಲುಕು ಹಾಕುತ್ತಿದ್ದ. ಅಲ್ಲಿಂದ ಮುಂದೆ ಇಬ್ಬರಲ್ಲು ಹಂತಹಂತವಾಗಿ ಏರ್ಪಟ್ಟ ಸಲುಗೆ ನಿಮಿತ್ತವಾಗಿ ರೋಗಿಗಳಿಲ್ಲದ ವೇಳೆಯಲ್ಲಿ ಗುಲಾಬಿಯ ಕ್ಲಿನಿಕ್‌ಗೆ ಚಂದ್ರು ಬಂದು ಅದೂ ಇದೂ ಮೆಡಿಕಲ್ ಭಾಷೆಯಲ್ಲಿ ಹರಟಿ ಹೊರಟುಹೋಗುತ್ತಿದ್ದ.

ಒಮ್ಮೆ ಚಂದ್ರು ತುಸು ಧೈರ್ಯಮಾಡಿ ತನ್ನ ಮನದಾಳದ ಬಯಕೆಯನ್ನು ಆಕೆಯ ಮುಂದಿಟ್ಟ: ‘ನಾವಿಬ್ಬರೂ ಸಮಾನ ದುಃಖಿಗಳು. ಸಮಾನ ಮನಃಸ್ಥಿತಿಯವರೂ ಇರಬೇಕೆಂದು ನನ್ನ ಅನಿಸಿಕೆ. ನಿಮಗೆ ಏನನ್ನಿಸುತ್ತದೆ?’ ಎಂದು ಕೇಳಿದ. ಹೀಗೊಂದು ಪ್ರಶ್ನೆ ಸದ್ಯದಲ್ಲೇ ಎದ್ದೇಳಬಹುದೆಂದು ಗುಲಾಬಿ ಊಹಿಸಿದ್ದಳು. ‘ನಾನು ಅಷ್ಟು ದೂರ ತಲುಪಿಲ್ಲ. ನಿಮ್ಮ ಮಾತಿನಲ್ಲಿ ಹುದುಗಿರೋ ತಾತ್ಪರ್ಯ ಗಹನವಾದದ್ದೆ. ಅಷ್ಟು ಮುಂದುವರಿಯುವ ಯೋಚನೆಯಂತೂ ಈಗ ನನಗಿಲ್ಲ’ ಎಂದಳು.
ಗುಲಾಬಿಗೆ ಹೆಚ್ಚು ಮಾತಾಡುವ ಅರಿವು ಆ ವೇಳೆಗೆ ಉಂಟಾಗಿರಲಿಲ್ಲ ಎಂಬುದನ್ನು ಅರ್ಥೈಸಿದ ಚಂದ್ರು, ‘ಹಾಗಾದರೆ ಸದ್ಯಕ್ಕೆ ನಾವು ಗೆಳೆಯರಾಗಿ ಇರೋಣ’ ಎಂದ.
‘ಈಗಲೂ ಇದ್ದೇವಲ್ಲ’ ಎಂದಳು ಗುಲಾಬಿ.

‘ಇಲ್ಲ. ಈಗ ನಾವು ವ್ಯವಹಾರಿಗಳು. ವ್ಯಾಪಾರದ ಲಾಭ ನಷ್ಟಗಳ ಚರ್ಚೆ ಮಾಡುತ್ತೇವೆ. ಇನ್ನು ಮುಂದೆ ಅದಿರಕೂಡದು’.
‘ಪ್ಲೀಸ್, ಒಮ್ಮಿಂದೊಮ್ಮೆಲೆ ಹಾಗೆ ಹಾರಿಬಿಟ್ಟರೆ ಹೇಗೆ? ತುಸು ಕಾಲಾವಕಾಶ ಕೊಡಿ, ಮಾತಾಡೋಣ’. ಗುಲಾಬಿಯ ಮಾತಿನಲ್ಲಿ ಗೊಂದಲ ಮನೆಮಾಡಿತ್ತು.
ಆಕೆಯ ಮಾತಿನಲ್ಲಿ ನಿರ್ದಿಷ್ಟ ಅರ್ಥಕಾಣಲಿಲ್ಲವಾದರೂ ‘ಸರಿ’ ಎಂದು ಆತ ಹೊರಟುಹೋದ.

ಸಂಜೆ ಕ್ಲಿನಿಕ್ ಮುಚ್ಚಿ ‘ಆರೈಕೆ’ ಆಸ್ಪತ್ರೆಗೆ ಬಂದವಳೇ ಸಿಸ್ಟರ್‌ ಜ್ಯೋತಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡಳು. ಎಲ್ಲವನ್ನೂ ಕೇಳಿಸಿಕೊಂಡ ಜ್ಯೋತಿ, ‘ಹೇಗೂ ನೀನು ಸ್ವಲ್ಪ ಕಾಲಾವಕಾಶ ಕೇಳಿದ್ದಿ. ಅದು ಒಳ್ಳೆಯದೆ. ನಿಧಾನವಾಗಿ ಪರಸ್ಪರ ಅರ್ಥಮಾಡ್ಕೊಳ್ಳಿ. ಈಗಿನ ಕಾಲದ ಹುಡುಗಿಯರಿಗೆ ನಾನು ಹೇಳಿಕೊಡಬೇಕೆ?’ ಎಂದಳು.

ಮಾರನೆಯ ದಿನ ಸೂರ್ಯ ಪಶ್ಚಿಮದ ಕಡೆ ತಿರುಗಿದ ಹೊತ್ತಿಗೆ ಚಂದ್ರು ಮತ್ತೆಯೂ ಬಂದ: ‘ಇವತ್ತು ಸಂದರ್ಶಕರು ಕಡಿಮೆ ಇದ್ದಂತಿದೆ ಡಾಕ್ಟರ್. ನಾವ್ಯಾಕೆ ಕ್ಲಿನಿಕ್ ಮುಚ್ಚಿ ಹಾಗೆ ಸುತ್ತಾಡಿ ಬರಬಾರದು? ಹಾಗೆ ಯಾರಾದರೂ ಬಂದರೆ ರಿಸೆಪ್ಷನಿಸ್ಟ್ ನಾಳೆ ಬರಲು ಹೇಳಲಿ. ಏನಂತೀರಿ?’.

ಗುಲಾಬಿ ಅಧೀರಳಾದಳು. ಅಸಂಖ್ಯ ಬಾರಿ ತನ್ನ ಸಹೋದ್ಯೋಗಿಗಳೊಂದಿಗೆ, ಸಹಪಾಠಿಗಳೊಂದಿಗೆ ಸುತ್ತಾಟಕ್ಕೆ ಹೋದದ್ದಿದೆ. ಆವಾಗ ಏನೂ ಅನ್ನಿಸದೇ ಇದ್ದದ್ದು ಇಂದೇಕೆ ಆ ಮಾತು ಅವಳ ಕಿರಿಕಿರಿಗೆ ಕಾರಣವಾಯಿತು? ಚಂದ್ರು ಬಯಸಿದ್ದು ಏನನ್ನು?

‘ಯಾವ ಕಡೆಗೆ?’– ಆತನ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿಯುವ ಉದ್ದೇಶದೊಂದಿಗೆ ಗುಲಾಬಿ ಪ್ರಶ್ನಿಸಿದಳು.
‘ಯಾವ ಕಡೆಗೆ? ಅಂದ್ರೆ? ಎಲ್ಲಿಗಾದರೂ... ಹೀಗೆ.... ಬೀಚ್‌ವರೆಗೆ.... ಅಥವಾ....’

‘ಇಲ್ಲ ಚಂದ್ರು ಅವರೆ. ನಾನು ಹಾಗೆಲ್ಲ ಬರಲಾರೆ. ನೀವು ಗಂಡಸರು, ಏನನ್ನೂ ಜೀರ್ಣಿಸಿಕೊಳ್ಳಬಲ್ಲಿರಿ. ಆದರೆ ನಾವು ಹಾಗಲ್ವಲ್ಲ. ನೀವು ಹೋಗಿಬನ್ನಿ. ನನಗಿನ್ನೂ ಸಂದರ್ಶಕರು ಬರುವವರಿದ್ದಾರೆ’. ಆಕೆ ಯಾವುದೋ ಕೆಲಸದಲ್ಲಿ ಮಗ್ನಳಾದಳು. ಕಸಿವಿಸಿಯೊಂದಿಗೆ ಚಂದ್ರು ಹೋದ.

ತಕ್ಷಣ ಡಾ. ಗುಲಾಬಿ ಸಿಸ್ಟರ್‌ಜ್ಯೋತಿಗೆ ಫೋನ್ ಮಾಡಿದಳು. ‘ಅದ್ಯಾಕೆ ಆತ ಬೀಚ್‌ಗೆಲ್ಲ ಕರಿತಾನೆ? ಮರ್ಯಾದೆ ಬೇಡವೆ? ಏನೂಂತ ತಿಳ್ಕೊಂಡಿದಾನೆ ನನ್ನ?’ ಎಂದು ದಬಾಯಿಸಿದಳು.

ಆ ಮಾತಿಗೆ ಎಳ್ಳಷ್ಟೂ ವಿಚಲಿತಳಾಗದ ಜ್ಯೋತಿ, ‘ನನಗೆಲ್ಲಾ ಗೊತ್ತಮ್ಮಾ, ಮೊದಮೊದಲು ಎಲ್ಲರೂ ಹೀಗೇನೆ. ಅದ್ಯಾಕೆ ಬೀಚಿಗೆ ಕರೆದ್ರೆ ಅಷ್ಟೊಂದು ಬೆಚ್ಚಿಬೀಳ್ತಿಯಾ? ನಾನೇ ಅವನಿಗೆ ಹೇಳಿದ್ದು. ಎಲ್ಲಾದರೂ ದೂರ ಹೋಗಿ ಕುಳಿತು ಮಾತಾಡಿ ಪರಸ್ಪರ ವಿಚಾರ ವಿನಿಮಯ ಮಾಡ್ಕೊಳ್ಳೀಂತ’ ಎಂದಳು.
‘ನೋಡಿ ಜ್ಯೋತಿಯಕ್ಕಾ, ನಾನು ಸಂಪ್ರದಾಯಸ್ಥ ಮನೆತನದವಳು. ನಿಮಗದು ಗೊತ್ತೇ ಇದೆ. ಯಾಕೆ ಇಂಥದ್ದನ್ನೆಲ್ಲ ಅವನ ತಲೆಯೊಳಗೆ ತುರುಕುತ್ತೀರ?’.
‘ಹಾಗಾದರೆ ಚಂದ್ರು ನಿನ್ನ ಹತ್ರ ಬರೋದೇ ಬೇಡ್ವೆ?’.

‘ನಾನು ಹಾಗೆಲ್ಲಿ ಹೇಳಿದೆ? ಬರಲಿ, ಯಾವುದಕ್ಕೂ ಅವಸರಿಸೋದು ಬೇಡಾಂತ. ಅಷ್ಟೇ’.
‘ನಿನ್ನ ಸಮಯ ಆದಾಗ ಹೇಳು ಮಾರಾಯ್ತಿ. ಮುಂದೆ ನೋಡೋಣ. ಅವನಿಗೂ ನಾನು ಹಾಗೆ ಹೇಳ್ತೇನೆ. ಆಗದೆ?’.
‘ಹಾಗೇಂತ ಅವರಿಲ್ಲಿಗೆ ಬರೋದನ್ನು ನಿಲ್ಲಿಸೋದು ಬೇಡ. ನಮ್ಮ ಸಪ್ಲೈ ಅವರೇ ಮುಂದುವರಿಸ್ಲಿ’ ಎಂದು ಹೇಳುತ್ತಾ ಫೋನು ಕೆಳಗಿಟ್ಟಳು. ಅವಳ ವಿಚಿತ್ರ ಮನಸ್ಥಿತಿಯನ್ನು ನೋಡಿ ಜ್ಯೋತಿ ಮನಸಾರೆ ನಕ್ಕಳು. ಇಂಥ ಎಷ್ಟು ಮಂದಿಯನ್ನು ತನ್ನ ಸರ್ವಿಸ್‌ನಲ್ಲಿ ನೋಡಿಲ್ಲ ಎಂಬ ಧೋರಣೆ ಆಕೆಯ ನಗುವಿನೊಳಗೆ ಹುದುಗಿತ್ತು.

ವೃತ್ತಿಯಲ್ಲಿ ಡಾಕ್ಟರ್ ಆಗಿದ್ದರೂ ಗುಲಾಬಿಗೆ ಜ್ಯೋತಿಷ್ಯದಲ್ಲಿ ಬಹಳ ನಂಬಿಕೆ. ಹೆಜ್ಜೆ ಹೆಜ್ಜೆಗೂ ಜ್ಯೋತಿಷ್ಯದ ಜೊತೆಗೇ ಸಾಗಬೇಕೆಂಬುದು ತಲೆಮಾರಿನಿಂದ ಬಂದ ಪದ್ಧತಿ. ಯಾರು ಎಷ್ಟೇ ಗೇಲಿಯೆಬ್ಬಿಸಿದ್ದರೂ ಅದನ್ನಾಕೆ ಬಿಟ್ಟುಕೊಟ್ಟಿರಲಿಲ್ಲ. ಚಂದ್ರುವಿನ ರಾಶಿ, ನಕ್ಷತ್ರಗಳನ್ನು ಮೊದಲೇ ಕೇಳಿ ತಿಳಿದುಕೊಂಡಿದ್ದ ಅವಳು ಪರಿಚಿತ ಜ್ಯೋತಿಷಿಗಳ ಬಳಿಹೋಗಿ ತನ್ನ ಪ್ರಶ್ನೆಯನ್ನು ಮುಂದಿಟ್ಟಳು. ಕವಡೆಗಳ ಜೊತೆ ಆಟವಾಡುತ್ತ ‘ಮುಂದುವರಿಯಿರಿ, ಒಳ್ಳೆಯದಾಗುತ್ತೆ’ ಅಂದರು ಜ್ಯೋತಿಷಿಗಳು. ಗುಲಾಬಿ ಹೊರಡಬೇಕಿದ್ದರೆ ಜ್ಯೋತಿಷಿಗಳು ‘ಹುಡುಗ ಯಾರೂಂತ ಕೇಳ್ಬೋದಾ?’ ಅಂದರು.

‘ನೀವು ಕೇಳಿದ ಮೇಲೆ ಹೇಳದಿರೋಕ್ಕಾಗುತ್ತಾ ಜೋಯಿಸರೆ? ಮೇಲಾಗಿ ನಿಮ್ಗೂ ಅವ್ರು ಗೊತ್ತು. ಚಂದನ್ ಸರ್ಜಿಕಲ್ಸ್‌ನ ಚಂದ್ರು’ ಎಂದಳು.
‘ಅರೆ, ಅವರು ಚಂದ್ರಶೇಖರ ಭಟ್ಟ ಅಲ್ವೆ? ಅವರಿಗೇನು ಕೇಡುಗಾಲ ಬಂತಪ್ಪಾ. ಹಾಗಂತಲ್ಲಾ, ಈ ಕಾಲದಲ್ಲಿ ಎಲ್ಲವೂ ನಡೀತದೆ. ಅಲ್ವೇ ಡಾಕ್ಟ್ರಮ್ಮಾ?’ ಎಂದರು.
‘ಅವರು ಜಾತಿ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ ಜ್ಯೋತಿಷಿಗಳೆ’.

‘ಒಳ್ಳೇದು. ಕಲಿಯುಗ ಅಲ್ವೆ? ಆಗಲಿ ಡಾಕ್ಟ್ರಮ್ಮಾ. ಹೋಗಿಬನ್ನಿ’ ಎಂದು ಆಕೆಯನ್ನು ಕಳುಹಿಸಿಕೊಟ್ಟರು ಜ್ಯೋತಿಷಿಗಳು.
ಸಂಜೆ ಸಿಸ್ಟರ್‌ ಜ್ಯೋತಿಯನ್ನು ಭೇಟಿಮಾಡಿದ ಗುಲಾಬಿ ತನ್ನ ತೀರ್ಮಾನವನ್ನು ಆಕೆಯ ಮುಂದಿಟ್ಟಳು. ಜ್ಯೋತಿ, ‘ಒಳ್ಳೆಯ ತೀರ್ಮಾನ. ಇಷ್ಟು ದಿನ ತಲೆ ತುಂಬ ಭಾರಹೊತ್ತು ನಡೀತಿದ್ದೆ. ಈಗ ನಿರಾಳವಾಯಿತು ನೋಡು. ಅವ್ನಿಗೂ ಭಾಗ್ಯ ಬೇಕು, ನಿನ್ನಂಥ ಗುಣಸಂಪನ್ನೆಯನ್ನು ಪಡೆಯೋದಕ್ಕೆ. ನನಗಂತೂ ತುಂಬ ಖುಷಿಯಾಯಿತು. ಇವತ್ತೇ ಈ ಸುದ್ದಿಯನ್ನು ಚಂದ್ರುವಿಗೆ ಮುಟ್ಟಿಸ್ತೇನೆ. ನಾಳೆ ಮಾತನಾಡೋಣ’. ಎಂದಳು.

ಈ ಸುದ್ದಿಯನ್ನು ತಾನೇ ಚಂದ್ರುವಿಗೆ ತಿಳಿಸಬಹುದಾಗಿತ್ತೆ? ಜಾತಕದ ಬಗೆಗಿನ ತನ್ನ ಅಪರಿಮಿತ ನಂಬಿಕೆ ಅವನಿಗೂ ಗೊತ್ತು. ಅದಾಗಲೇ ಗೇಲಿಯೂ ಮಾಡಿದ್ದ: ‘ನಿಮ್ಮಂಥವರೇ ಇರಬೇಕು; ಹೆರಿಗೆಯ ಸಮಯವನ್ನು ಕೂಡ ಹಿಂದಕ್ಕೆ ಮುಂದಕ್ಕೆ ಮಾಡೋರು. ಒಳ್ಳೆ ಮುಹೂರ್ತದಲ್ಲಿ ಹೆರಿಗೆ ಮಾಡಿಸಿದ್ರೆ ಲಕ್ಷಗಟ್ಟಲೆ ಭಕ್ಷೀಸು ಸಿಗುತ್ತಂತೆ, ಹೌದೆ?’.

ಚಂದ್ರುವಿನ ಆ ಮಾತು ಗುಲಾಬಿಗೆ ಇಷ್ಟವಾಗಲಿಲ್ಲ. ಬೇಕಾದ ರಾಶಿ, ನಕ್ಷತ್ರಗಳಲ್ಲಿ ಹೆರಿಗೆ ಮಾಡಿಸುವುದರಲ್ಲಿ ಆಕೆ ನಿಷ್ಣಾತೆ ಎಂಬುದು ಅದಾಗಲೇ ಜಾಹೀರಾಗಿತ್ತು. ಅಂಥವಳು ಜ್ಯೋತಿಷ್ಯವನ್ನು ನಂಬದಿರುತ್ತಾಳೆಯೆ?

ಮರುದಿನ ಮುಂಜಾನೆ ಸಿಸ್ಟರ್‌ ಜ್ಯೋತಿಯ ಫೋನ್: ‘ನಿನ್ನೆ ಕತ್ತಲೆಗೆ ಚಂದ್ರು ಆಸ್ಪತ್ರೆಯ ಕಡೆ  ಬಂದಿದ್ದ. ಒಂದು ಬಾಂಬ್ ಸಿಡಿಸಿ ಹೋದ. ನನಗೆ ಏನು ಮಾತಾಡಬೇಕೆಂದೇ ತೋಚಲಿಲ್ಲ. ರಾತ್ರೆಯಿಡೀ ನಿದ್ದೆ ಹತ್ತಲಿಲ್ಲ. ನಿನ್ನ ನಿದ್ದೆಯನ್ನು ಕೆಡಿಸೋದು ಬೇಡಾಂತ ಆಗ ಫೋನು ಮಾಡಲಿಲ್ಲ. ಇವತ್ತು ನೀನೇ ಬೇಕಿದ್ದರೆ ಒಮ್ಮೆ ಅವನತ್ರ ಮಾತನಾಡಿ ನೋಡು’.
‘ಯಾಕೆ? ಏನಾಯಿತು?’.

‘ಚಂದ್ರುವಿನ ಮನೆಯವರು ಭಾರೀ ವಿರೋಧ ವ್ಯಕ್ತಪಡಿಸಿದರಂತೆ. ಬ್ರಾಹ್ಮಣರ ಹೊರತಾಗಿ ಅನ್ಯ ಜಾತಿಯಿಂದ ಹುಡುಗಿ ತಂದರೆ ಹೊಸ್ತಿಲು ದಾಟಿ ಒಳಕ್ಕೆ ಬಿಡೋದಿಲ್ಲ ಎಂದರಂತೆ’.

ಒಂದು ಕ್ಷಣ ಗುಲಾಬಿ ಮೂಕಳಾದಳು: ಎಲ್ಲವನ್ನೂ ಆತ ಮೊದಲೇ ಕೇಳಿ ತಿಳಿದುಕೊಂಡಿದ್ದ. ಮಗುವಿರುವುದು ಸಮಸ್ಯೆಯಲ್ಲವೆಂದು ನಾನೂ ಒಪ್ಪಿಕೊಂಡಿದ್ದೆ. ಮನೆಯವರೊಂದಿಗೆ ಹೊಂದಿಕೊಂಡು ಹೋಗುವುದು ನನಗೇನೂ ಕಷ್ಟವಲ್ಲ ಎಂದಿದ್ದೆ. ಅಷ್ಟಕ್ಕೂ ತಾನು ಮನೆಯಲ್ಲಿರುವುದು ಎಷ್ಟು ಹೊತ್ತು? ಇಂದೀಗ ಜಾತಕವೂ ಕೂಡಿಬಂದಿತ್ತು. ಹಾಗಿರುವಾಗ ಇದೇನು ಹುಚ್ಚಾಟ? ಇಷ್ಟು ದಿನ ಆತ ಎಲ್ಲಿದ್ದ? ಜಾತಿಯ ಬಗ್ಗೆ ಮೊದಲೇ ಹೇಳಬಹುದಿತ್ತಲ್ಲ. ಅದನ್ನು ನೆಪಮಾಡುವಷ್ಟೂ ಆತ ಕೇವಲನೆ?
ಗುಲಾಬಿಯ ಯೋಚನೆಗೆ ಜ್ಯೋತಿಯಲ್ಲೂ ಉತ್ತರವಿರಲಿಲ್ಲ. ಯಾವುದಕ್ಕೂ ಗುಲಾಬಿ ಅವನನ್ನು ಕರೆದು ಮಾತನಾಡಿಸುವ ತೀರ್ಮಾನಕ್ಕೆ ಬಂದಿದ್ದಳು.
ಸಂಜೆ ಕ್ಲಿನಿಕ್ ಮುಚ್ಚುವ ಹೊತ್ತು. ಚಂದ್ರು ನೇರ ಬಂದವನೆ ಕುರ್ಚಿ ಎಳೆದು ಕುಳಿತ. ಆತನ ಚರ್ಯೆಗಳಾವುವೂ ಎಂದಿನಂತಿರಲಿಲ್ಲ. ಏನನ್ನೋ ಹೇಳಬೇಕೆಂಬ, ಹೇಗೆ ಹೇಳಬೇಕೆಂಬ ಗೊಂದಲದಲ್ಲಿ ಆತ ಮುಳುಗಿದಂತಿದ್ದ:

‘ಸ್ವಲ್ಪ ಎಡವಟ್ಟಾಯಿತಲ್ಲ ಡಾಕ್ಟರೆ, ಆದರೆ ಅದೇನೂ ದೊಡ್ಡ ಸಂಗತಿಯಲ್ಲ’.
ಏನೂ ಅರಿಯದವಳಂತೆ ಗುಲಾಬಿ ಕೇಳಿದಳು: ‘ಏನಾಯಿತು?’.
‘ಅದೂ.... ನಮ್ಮ.... ಮನೆಯಲ್ಲಿ....’ ಎನ್ನುತ್ತಾ ಜ್ಯೋತಿ ಹೇಳಿದ್ದ ಅದೇ ಪುರಾಣ ಬಿಚ್ಚಿಟ್ಟ. ‘ಆದರೆ ಅದಕ್ಕಾಗಿ ಚಿಂತೆ ಬೇಡ ಡಾಕ್ಟ್ರೆ, ನಾನಿದ್ದೇನಲ್ಲ. ನಿಮ್ಮನ್ನಂತೂ ನಾನು ಯಾವ ಕಾರಣಕ್ಕೂ ಬಿಟ್ಟುಹಾಕೋದಿಲ್ಲ’ ಹೀಗೆಂದು ಆಶ್ವಾಸನೆಯ ಅಭಯಹಸ್ತ ಚಾಚಿದ. ಕುಳಿತಲ್ಲಿಂದಲೆ ಆಕೆಯ ಕೈ ಹಿಡಿದುಕೊಂಡ. ಆಕೆಯ ಬೆರಳುಗಳನ್ನು ತನ್ನ ಅಗಲ ಕೈಯೊಳಗೆ ತುಂಬಿಸಿಕೊಂಡ.

‘ಎಂಥ ಪರಿಸ್ಥಿತಿ ಬಂದರೂ ನಾನು ನಿಮ್ಮ ಕೈ ಬಿಡೋದಿಲ್ಲ. ನೀವೂ ನನ್ನ ಕೈ ಬಿಡಕೂಡದು’ ಎನ್ನುತ್ತ ಆಕೆಯ ಬೆರಳುಗಳನ್ನು ಹಿಚುಕತೊಡಗಿದ.
‘ಅಂದ್ರೆ? ನನ್ನನ್ನು ಮದುವೆ ಆಗೋದು ನಿಜಾನಾ?’ ಕನಸು ಮತ್ತೆ ಚಿಗುರಿತೆಂಬ ಭಾವನೆ ಬಂದು ಡಾ. ಗುಲಾಬಿ ತನ್ನ ಕಣ್ಣುಗಳ ಹೊಳಪನ್ನು ಇನ್ನಷ್ಟು ಹೆಚ್ಚಿಸಿಕೊಂಡಳು!
‘ಅಲ್ಲ, ಹಾಗಲ್ಲ. ಒಂದು ವೇಳೆ ನನಗೆ ಬೇರೆ ಮದುವೆ ಆದ್ರೂ ಆಕೆ ಮಗುವನ್ನು ನೋಡಿಕೊಳ್ಳೋದಕ್ಕೆ ಮಾತ್ರ. ನೆಪಕ್ಕೆ ಒಬ್ಬಳು ಭಟ್ಟತ್ತಿ. ಆದ್ರೆ ನಿಮ್ಮನ್ನು ಬಿಟ್ಟುಹಾಕುವ ಪ್ರಶ್ನೆಯೇ ಇಲ್ಲ’.

‘ಏನದರ ಅರ್ಥ? ಅವಳು ಕಟ್ಟಿಕೊಂಡವಳು, ನಾನು ಇಟ್ಟುಕೊಂಡವಳು ಅಂತಾನೆ?’.
‘ಛೆ! ಛೆ!.. ಇಲ್ಲ ಡಾಕ್ಟ್ರೆ, ನಾನು ಹಾಗೆ ಮಾಡ್ತೇನಾ? ನಿಮಗೆ ಎಲ್ಲ ವ್ಯವಸ್ಥೆ ಮಾಡ್ತೇನೆ. ಅದು ನನ್ನ ಜವಾಬ್ದಾರಿ. ನೀವೊಬ್ರು ಇಷ್ಟು ದೊಡ್ಡ ಡಾಕ್ಟ್ರಾಗಿ ಹೀಗಾ ಮಾತಾಡೋದು?’.
ಚಂದ್ರು ಪುಸಲಾಯಿಸಲು ಒದ್ದಾಡುತ್ತಿದ್ದ ಕ್ರಮ ನೋಡಿ ಗುಲಾಬಿಗೆ ರೇಗಿತು: ‘ದಯವಿಟ್ಟು ಎದ್ದು ಹೊರಟುಹೋಗಿ. ನಾಚಿಕೆಯಾಗ್ತಿದೆ, ನಿಮ್ಮ ಜೊತೆ ಮಾತಾಡಲು’.

ಅದು ಕಳೆದು ವಾರವೊಂದು ಕಳೆಯಬೇಕಿದ್ದರೆ ಹೊಸತೊಂದು ವಾರ್ತೆಯೊಂದಿಗೆ ಜ್ಯೋತಿಯಕ್ಕ ಬಸಬಸ ಬಂದರು: ‘ಜಾತಿಯವರನ್ನು ಮದುವೆಯಾಗೋದಕ್ಕೆ ಮನೆಯವರು ಒತ್ತಡ ಹೇರಿದ್ರೆ ಅವ್ನೇನು ಮಾಡೋಕಾಗುತ್ತೆ? ನಿನ್ನ ಬಿಡ್ಲೇ ಬೇಕಷ್ಟೆ. ಅದಕ್ಕೆ... ನೀನು... ಅದೇನದು ಬ್ಲ್ಯಾಕ್ ಮ್ಯಾಜಿಕ್... ವಶೀಕರಣ... ಎಲ್ಲ ಮಾಡಿಸ್ತೀಯಂತೆ. ಹಾಗೆ ಮಾಡಿದ್ರೆ ದಕ್ಕಿಬಿಡ್ತಾನಾ ನಿನಗೆ? ಒಬ್ಬ ಡಾಕ್ಟ್ರಾಗಿ ಈ ಮಟ್ಟಕ್ಕಾ ಇಳಿಯೋದು? ನಾಚಿಕೆಯಾಗ್ಬೇಕು. ಛೀ!’ ಎಂದರು.

ಗುಲಾಬಿಯನ್ನು ಇಟ್ಟುಕೊಳ್ಳೋದಕ್ಕೆ ಆತ ನಡೆಸಿದ ಸಿದ್ಧತೆಯ ಬಗ್ಗೆ ಜ್ಯೋತಿಯಕ್ಕನಿಗೆ ಏನೂ ಗೊತ್ತಿಲ್ಲ, ಅದಕ್ಕೇ ಹೀಗೆ ಆಡುತ್ತಿದ್ದಾರೆ ಎಂಬುದು ಅರಿವಾದರೂ ಅನುಭವಸ್ಥೆಯಾದ ಜ್ಯೋತಿಯಕ್ಕನಿಂದ ಈ ಬಗೆಯ ಆಕ್ರಮಣವನ್ನು ನಿರೀಕ್ಷೆ ಮಾಡಿರಲಿಲ್ಲ. ಗುಲಾಬಿಗೆ ತಾನು ಯಾವ ಲೋಕದಲ್ಲಿ ನಿಂತು, ಯಾರಿಂದ ಈ ಮಾತು ಕೇಳುತ್ತಿದ್ದೇನೆ ಎಂಬುದೇ ಅರಿವಾಗಲಿಲ್ಲ.

ತುಸು ಸಾವರಿಸಿಕೊಂಡು, ‘ಜ್ಯೋತಿಯಕ್ಕಾ, ಇದೆಲ್ಲಿಂದ ಬಂತು ಸುದ್ದಿ?’ ಎಂದು ಕೇಳಿದಳು.
‘ತಲೆಮಾರಿನಿಂದ ನಿನ್ನ ಮನೆಯವರನ್ನೆಲ್ಲ ನೋಡ್ತಾ ಇದ್ದೇನೆ. ನೀನು ಮಾತ್ರ ಹೀಗೆ ಹೇಗಾದೀಂತ ಅರ್ಥಾನೇ ಆಗೋದಿಲ್ಲ. ನಾನು ಕೂಡ ಸಾಚಾಂತ ಹೇಳಲ್ಲ. ನಮಗೆಲ್ಲ ಅಷ್ಟು ವಿದ್ಯಾಭ್ಯಾಸ ಇಲ್ಲ. ವಿದ್ಯಾಭ್ಯಾಸ ಇರೋ ನಿಮ್ಮಂಥವರೇ ಹೀಗೆ ಮಾಡಿದ್ರೆ?’ ಜ್ಯೋತಿಯ ಸಿಡುಕು ಎಳ್ಳಷ್ಟೂ ಇಳಿಯಲಿಲ್ಲ.

ಆಕೆಯ ಮಾತು ಕೇಳಲು ತಯಾರಿಲ್ಲದವಳಂತೆ ಗುಲಾಬಿ ಹಟಹಿಡಿದಳು: ‘ಹೌದು ಜ್ಯೋತಿಯಕ್ಕಾ, ಇಷ್ಟು ಕಾಲದಿಂದ ನನ್ನನ್ನು ನೋಡ್ತಾ ಇದ್ದೀರಿ. ಒಬ್ಬ ಸಾಮಾನ್ಯ ಮನುಷ್ಯನನ್ನು ಬ್ಲ್ಯಾಕ್ ಮ್ಯಾಜಿಕ್ ಮಾಡಿ ವಶೀಕರಿಸಬೇಕಾದಷ್ಟೂ ದಾರಿದ್ರ್ಯ ಬಂದಿದೆಯಾ ನನಗೆ?’ ಎದೆಯಾಳದ ಉರಿಯಿಂದ ಹೊಮ್ಮಿ ಬಂದ ಅಳಲಾಗಿತ್ತದು.
ಜ್ಯೋತಿಗೆ ಆ ಮಾತಿನಿಂದ ನೆಮ್ಮದಿಯಾಗಲಿಲ್ಲ. ‘ಚಂದ್ರು ಸಾಕ್ಷ್ಯಾಧಾರ ಸಮೇತ ಹೇಳಿದ ವಿಚಾರ ಇದು. ನೀನೂ ಸಾಚಾ ಅಂತ ಆಧಾರ ಸಮೇತ ತೋರಿಸಿಕೊಡು. ಆ ಮೇಲೇ ನಿನ್ನ ಜೊತೆ ಮಾತು’ ಎಂದವಳು ಬಂದಂತೆಯೇ ಬಸಬಸ ಹೊರಟುಹೋದಳು.

ಈ ಅಪವಾದ ನನ್ನ ಎದೆಗೆ ಚುಚ್ಚಿದ ಮುಳ್ಳು. ಇದನ್ನು ಕೀಳದೆ ನನಗೆ ನೆಮ್ಮದಿಯಿಲ್ಲ. ಹೀಗೊಂದು ಅಪವಾದ ಹೊತ್ತುಕೊಂಡು ಎಷ್ಟುಕಾಲ ಬದುಕಿರಲಿ? ಕಣ್ಣಂಚಿನಲ್ಲಿ ನೀರು ತಂದುಕೊಂಡು ಗುಲಾಬಿ ಮನದಲ್ಲೇ ಕನಲಿದಳು.

ಅದು ಕಳೆದು ಒಂದೆರಡು ಬಾರಿ ಚಂದ್ರು ಕಣ್ಣೆದುರು ಸಿಕ್ಕಿದರೂ ಕಂಡೂ ಕಾಣದವನಂತೆ ತಪ್ಪಿಸಿ ಹೊರಟುಹೋಗಿದ್ದ. ಸರ್ಜಿಕಲ್ಸ್‌ನಿಂದ ಕೆಲಸದವರು ಬೇಕಾದ್ದನ್ನು ತಂದು ಕೊಡುತ್ತಿದ್ದರು. ಒಮ್ಮೆ ಡಾ. ಗುಲಾಬಿ ತಾನೇ ಅಲ್ಲಿಗೆ ಹೋಗಿ ಸಲಕರಣೆಗಳನ್ನು ಕೊಂಡುಕೊಳ್ಳುವ ನೆವದಲ್ಲಿ ‘ಯಾಕೆ ನನ್ನ ಮೇಲೆ ಇಂಥ ಅಪವಾದ ಹೊರಿಸಿದಿರಿ?’ ಎಂದು ಕೇಳಿಯೇ ಬಿಟ್ಟಳು.

‘ಅದು ಬಿಡಿ... ಅದುಬಿಡಿ... ಸಾರಿ...’ ಎನ್ನುತ್ತ ಚಂದ್ರು ಅಲ್ಲಿಂದ ಕ್ಷಣದಲ್ಲಿ ತಪ್ಪಿಸಿಕೊಂಡ. ಆತನನ್ನು ಕೈಸೆರೆ ಹಿಡಿಯುವ ಆಕೆಯ ಪ್ರಯತ್ನ ಯಶಸ್ವಿಯಾಗಲೇ ಇಲ್ಲ.
ಐದು ವರುಷಗಳು ಹಾಗೆಯೇ ಉರುಳಿ ಹೋದುವು. ಗುಲಾಬಿಗೆ ಬೇರೆ ಮದುವೆಯಾಗಿ ಇಬ್ಬರು ಮಕ್ಕಳೂ ಹುಟ್ಟಿದರು. ಆದರೆ ಚಂದ್ರು ಹಾಗೂ ಜ್ಯೋತಿ ಚುಚ್ಚಿದ ಮುಳ್ಳಿನ ಆಳ ಮಾತ್ರ ಎಳ್ಳಷ್ಟೂ ಕಡಿಮೆಯಾಗಲಿಲ್ಲ.
***
ಹೊರಗೆ ಗಾಳಿಮಳೆ ಆಗಲೂ ಸದ್ದು ಮಾಡುತ್ತಿತ್ತು....
‘ನನ್ನ ಮನಸ್ಸು ಇವತ್ತಿಗೂ ಒದ್ದಾಡ್ತಿದೆ ಸಾಲ್ಯಾನಂಕಲ್. ಜ್ಯೋತಿಯಕ್ಕನ ಮನಸ್ಸನ್ನು ಕೆಡಿಸಿದ್ದು ಆತನೆ ಎಂಬುದನ್ನು ಚಂದ್ರು ಸ್ವಲ್ಪಮಟ್ಟಿಗೆ ಒಪ್ಪಿಕೊಂಡಿದ್ದಾನೆ. ಹಾಗೆ ಒಪ್ಪಿಕೊಂಡದ್ದರಿಂದ ಏನೂ ಫಲವಿಲ್ಲ. ಐದು ವರ್ಷವಾಯಿತು ಸಾಲ್ಯಾನಂಕಲ್, ನನಗೂ ನನ್ನ ಜ್ಯೋತಿಯಕ್ಕನಿಗೂ ಮಾತಿಲ್ಲದೆ. ನಿತ್ಯವೂ ಆರೈಕೆ ಆಸ್ಪತ್ರೆಗೆ ಹೋಗ್ತೇನೆ. ನಿತ್ಯವೂ ಜ್ಯೋತಿಯಕ್ಕನನ್ನು ಕಾಣ್ತೇನೆ. ನನಗಿದು ನಿತ್ಯದುಃಖ ಅಂಕಲ್’. ಗುಲಾಬಿಯ ಕಣ್ಣುಗಳು ತುಂಬಿಬಂದುವು.

ಸಾಲ್ಯಾನರು ಅವಳಿಗಿಂತ ಒಂದು ಹೆಜ್ಜೆ ಎತ್ತರದಲ್ಲಿ ನಿಂತು, ‘ಅಯ್ಯೋ ಮಾರಾಯ್ತಿ. ನೀನೊಮ್ಮೆ ಸುಮ್ಮನಿರ್ತೀಯಾ. ಈಗ ನಿನಗೆ ಚಿನ್ನದಂಥಾ ಗಂಡ ಸಿಕ್ಕಿದ್ದಾನೆ. ಮಕ್ಕಳಾಗಿದ್ದಾವೆ. ಇನ್ನೂ ಅದೇ ಹೊಂಡದಲ್ಲಿ ಬಿದ್ದು ಒದ್ದಾಡ್ಬೇಕಾ?’ ಎಂದರು. ಅವರ ಮಾತಿನಲ್ಲಿ ಗುಲಾಬಿ ಈಗಲೂ ಚಂದ್ರುವಿನ ಕನಸಿನಲ್ಲಿ  ನರಳುತ್ತಿದ್ದಾಳೆ ಎಂಬ ಭಾವನೆ ಇದ್ದಂತೆ ಕಾಣಿಸಿತು.

‘ಅವನ ಹಾಳು ಮೋರೆ ನನಗೆ ಬೇಡ ಅಂಕಲ್. ನನಗೆ ಬೇಕಾದ್ದಿಷ್ಟೆ: ಜ್ಯೋತಿಯಕ್ಕನ ಮನಸ್ಸಿನಲ್ಲಿ ಉರೀತಿರೋ ವಿಷಜ್ವಾಲೆಯನ್ನು ಆತನೇ ನಂದಿಸಬೇಕು. ಅದು ನಂದಿದರೆ ನನ್ನ ಜ್ಯೋತಿಯಕ್ಕ ನನಗೆ ಮರಳಿ ಸಿಗ್ತಾರೆ. ಮನಸ್ಸು ನಿರಾಳವಾಗ್ತದೆ, ನನಗಷ್ಟು ಸಾಕು’.
‘ಈಗಲೂ ಅವನಿಂದ ನಿನಗೇನಾದರೂ ತೊಂದರೆಯಿದೆಯೆ?’.
‘ಇಲ್ಲ. ಆದರೆ ಮನಸ್ಸಿನ ಖಿನ್ನತೆ ಮಾತ್ರ ಇವತ್ತಿಗೂ ಉಳಿದುಕೊಂಡಿದೆ’.

‘ಎಲ್ಲ ಮನವರಿಕೆಯಾಯಿತು’ ಎಂದುಕೊಂಡು ಸಾಲಿಯಾನರು, ‘ಚಂದ್ರು ಚುಚ್ಚಿದ ಮುಳ್ಳನ್ನು ಚಂದ್ರೂನೇ ತೆಗೀಬೇಕು. ಸಿಸ್ಟರ್‌ ಜ್ಯೋತಿ ಮುಲಾಮು ಹಚ್ಚಿ ಆಕೆಯ ಗಾಯವನ್ನು ಗುಣಪಡಿಸಬೇಕು. ಅಷ್ಟೇ ತಾನೆ? ಹ್ಞುಂ....ನೋಡೋಣ’ ಎನ್ನುತ್ತ ಏನನ್ನೋ ತೀರ್ಮಾನಿಸಿದವರಂತೆ ಎದ್ದುನಿಂತರು.
ಹೊರಗೆ, ಗಾಳಿಮಳೆ ಅದರ ಅಬ್ಬರವನ್ನೇನೂ ಕಡಿಮೆ ಮಾಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT