ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ: ಬಿಎಂಟಿಸಿ ಬಸ್ ಸಂಚಾರ ಸ್ತಬ್ಧ

ನಗರದ ಹಲವೆಡೆ ಬಸ್ಗಳ ಮೇಲೆ ಕಲ್ಲು ತೂರಾಟ * ಮಂಗಳವಾರವೂ ಪರದಾಟ ಸಾಧ್ಯತೆ
Last Updated 25 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸಾರಿಗೆ ನಿಗಮಗಳ ನೌಕರರ ಮುಷ್ಕರದಿಂದ ಬಿಎಂಟಿಸಿ ಬಸ್‌ಗಳ ಸಂಚಾರ ಸೋಮವಾರ ಸ್ತಬ್ಧಗೊಂಡಿತ್ತು.

ನಗರದಲ್ಲಿ ಪ್ರತಿನಿತ್ಯ 6,106 ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸುತ್ತವೆ. ಆದರೆ, ಸೋಮವಾರ  ಒಂದು ಬಸ್‌ ಕೂಡಾ ರಸ್ತೆಗೆ ಇಳಿಯಲಿಲ್ಲ. ಭಾನುವಾರ ರಾತ್ರಿ 10.30ರಿಂದಲೇ ಬಸ್‌ಗಳ ಸೇವೆ ಸ್ಥಗಿತಗೊಂಡಿತ್ತು. ಬಿಎಂಟಿಸಿಯ ಒಟ್ಟು ನಾಲ್ಕು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಇದರಿಂದ ಸಂಸ್ಥೆಗೆ ₹27 ಸಾವಿರ ನಷ್ಟ ಉಂಟಾಗಿದೆ.

ಬಸ್‌ ಸಂಚಾರ ಇಲ್ಲದಿರುವುದನ್ನು ಬಿಟ್ಟರೆ ನಗರ ಜೀವನ ಎಂದಿನಂತೆ ಇತ್ತು. ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. 

‘ಮಂಗಳವಾರವೂ ಬಿಎಂಟಿಸಿ ಬಸ್‌ಗಳ ಸಂಚಾರ ಸಾಧ್ಯತೆ ಕಡಿಮೆ. ತಡರಾತ್ರಿ ಒಪ್ಪಂದವೇನಾದರೂ ನಡೆದರೆ ಸಂಚಾರ ಆರಂಭವಾಗಬಹುದು’ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ನಮಗೂ ಜನರಿಗೆ ತೊಂದರೆ ಉಂಟು ಮಾಡುವ ಉದ್ದೇಶವಿಲ್ಲ. ನಾವೂ ಮಾತುಕತೆಗೆ ಸಿದ್ಧವಿದ್ದೇವೆ.  ಸಾರಿಗೆ ಸಚಿವರಾಗಲೀ, ಮುಖ್ಯಮಂತ್ರಿಯಾಗಲೀ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ’ ಎಂದು ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ  ಉಪಾಧ್ಯಕ್ಷ ಜಯದೇವ ರಾಜೇ ಅರಸ್‌ ತಿಳಿಸಿದರು. 

ನಗರದಲ್ಲಿ ಸೋಮವಾರ  17 ಬಸ್‌ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಬಸ್‌ಗಳ ಗಾಜುಗಳು ಒಡೆದಿವೆ. ‘ನಗರ ವ್ಯಾಪ್ತಿಯಲ್ಲಿ ತಮಿಳುನಾಡು ಸಾರಿಗೆ ಸಂಸ್ಥೆಯ ಒಂದು ಹಾಗೂ ಕೆಎಸ್‌ಆರ್‌ಟಿಸಿಯ 16 ಬಸ್‌ಗಳ ಮೇಲೆ ಅಪರಿಚಿತರು ಕಲ್ಲು ತೂರಿದ್ದಾರೆ. ಈ ಬಗ್ಗೆ  ಸಂಬಂಧಪಟ್ಟ ಇಲಾಖೆಯವರು ದೂರು ನೀಡಿದರೆ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್‌.ಎಸ್‌. ಮೇಘರಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮೆಜೆಸ್ಟಿಕ್‌ ನಿಲ್ದಾಣ ಸೇರಿ ನಗರದ ಎಲ್ಲ ನಿಲ್ದಾಣ, ಕೆಎಸ್ಆರ್‌ಟಿಸಿ– ಬಿಎಂಟಿಸಿ ಕಚೇರಿಗಳು, ಡಿಪೊಗಳ  ಭದ್ರತೆಗಾಗಿ ಪೊಲೀಸ್‌  ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಬಸ್‌ಗೆ ಕಲ್ಲು ಎಸೆದಿದ್ದು ಬಿಟ್ಟರೆ ಬೇರೆ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ’ ಎಂದು ಅವರು ತಿಳಿಸಿದರು.

ಮೆಜೆಸ್ಟಿಕ್‌ನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಬಸ್‌ಗೆ ನವರಂಗ ವೃತ್ತದ ಬಳಿ  ಬೆಳಿಗ್ಗೆ 5ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಮೈಸೂರು ರಸ್ತೆಯಲ್ಲಿ ತಮಿಳುನಾಡು ಬಸ್‌ ಹಾಗೂ ಯಶವಂತಪುರ ಮತ್ತು ತುಮಕೂರು ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಲ್ಲು ಎಸೆಯಲಾಗಿದೆ.

ಘಟನೆಯಿಂದಾಗಿ ಆತಂಕಕ್ಕೀಡಾದ ಚಾಲಕರು, ಬಸ್‌ಗಳನ್ನು ಡಿಪೊಗೆ ಮರಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ನೆಲಮಂಗಲ  ಸಮೀಪದ ದೇವಣ್ಣಪಾಳ್ಯ ಬಳಿ ಎರಡು ಕೆಎಸ್‍ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್‌ಗಳು ಭಾಗಶಃ ಜಖಂಗೊಂಡಿವೆ.

ವಿಮಾನ ನಿಲ್ದಾಣದಲ್ಲೂ ಪರದಾಟ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಅಲ್ಲಿಂದ ನಗರಕ್ಕೆ ಬರುವ ಪ್ರಯಾಣಿಕರಿಗೆ ಮುಷ್ಕರದ ಬಿಸಿ ತಟ್ಟಿತು.

ಭಾನುವಾರ ರಾತ್ರಿಯಿಂದಲೇ ‘ವಜ್ರ’ ಬಸ್‌ ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು, ಖಾಸಗಿ ವಾಹನಗಳ ಮೊರೆ ಹೋದರು. ಬೇಡಿಕೆ ಹೆಚ್ಚಿದ್ದರಿಂದ ಖಾಸಗಿ ವಾಹನ ಚಾಲಕರು, ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿದರು.

ಈ ಕುರಿತ ದೂರಿನ ಮೇರೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಸೂಕ್ತ ದರ ನಿಗದಿಪಡಿಸಿ ಪ್ರಯಾಣಿಕರನ್ನು  ಖಾಸಗಿ ವಾಹನಗಳಲ್ಲಿ ಕಳುಹಿಸಿಕೊಟ್ಟರು. ಪ್ರತಿದಿನವೂ ವಿಮಾನ ಪ್ರಯಾಣಿಕರ ಪೈಕಿ ಶೇ 40ರಷ್ಟು ಜನ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಮುಷ್ಕರ ನಿಮಿತ್ತ ಬಸ್‌ ಇಲ್ಲದಿದ್ದರಿಂದ ಅವರೆಲ್ಲ ಖಾಸಗಿ ವಾಹನಗಳಲ್ಲೇ ನಿಗದಿತ ಸ್ಥಳಗಳಿಗೆ ತೆರಳಿದರು.

ಬಿಎಂಟಿಸಿಗೆ ₹5 ಕೋಟಿ ನಷ್ಟ
ಸಾರಿಗೆ ಮುಷ್ಕರದಿಂದ ಬಿಎಂಟಿಸಿ ಸಂಸ್ಥೆ ಸೋಮವಾರ ₹5 ಕೋಟಿ ನಷ್ಟ ಅನುಭವಿಸಿದೆ. ಬಿಎಂಟಿಸಿಯ ನಿತ್ಯದ ಸಂಚಾರ  ಆದಾಯ ₹4.8 ಕೋಟಿ. ಬಸ್‌ಗಳು ರಸ್ತೆಗಿಳಿಯದ ಕಾರಣ ಈ ಆದಾಯ ಬರಲಿಲ್ಲ. ಮಂಗಳವಾರವೂ ಮುಷ್ಕರ ಮುಂದುವರಿಯಲಿದೆ. ಹೀಗಾಗಿ ನಷ್ಟ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಇದು ಸಂಸ್ಥೆಗೆ ಕಷ್ಟ ಕಾಲ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಪ್ಪಿದ ಸಂದರ್ಶನ; ಕಣ್ಣೀರಿಟ್ಟ ಅಭ್ಯರ್ಥಿಗಳು
ಹಲವು ಕಂಪೆನಿಗಳ ಕಾರ್ಯಸ್ಥಾನವಾದ ನಗರದಲ್ಲಿ ಕೆಲ ಕಂಪೆನಿಗಳು, ಸೋಮವಾರ ಸಂದರ್ಶನಕ್ಕೆ  ದಿನಾಂಕ ನಿಗದಿಪಡಿಸಿದ್ದವು. ಹೀಗಾಗಿ ದಾವಣಗೆರೆ, ತುಮಕೂರು, ಮಂಡ್ಯ, ಹಾಸನದಿಂದ ಎಂಬಿಎ, ಎಂಸಿಎ ಹಾಗೂ ಬಿ.ಕಾಂ ಪದವೀಧರರು ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಂದಿದ್ದರು. ಸಂದರ್ಶನ ಸ್ಥಳಕ್ಕೆ ಹೋಗಲು ಬಸ್‌ಗಳಿಲ್ಲದ ಕಾರಣ ಅಭ್ಯರ್ಥಿಗಳು ಪಡಿಪಾಟಲು ಪಟ್ಟರು. 

‘ಬೆಳಿಗ್ಗೆ 10ಕ್ಕೆ ಸಂದರ್ಶನವಿತ್ತು. ಹೀಗಾಗಿ ನಮ್ಮೂರಿನಿಂದ ರೈಲಿನಲ್ಲಿ  6 ಗಂಟೆಗೆ ಇಲ್ಲಿಗೆ ಬಂದಿದ್ದೇವೆ. ಹೊಸೂರು ರಸ್ತೆಯಲ್ಲಿರುವ ಕಂಪೆನಿಗೆ ಹೋಗಲು  ಹಲವು ಗಂಟೆ ಕಾದರೂ  ಬಸ್‌ ಇಲ್ಲ’ ಎಂದು ಮಂಡ್ಯದ ಸಿ.ರಾಮು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

‘ಆಟೊದಲ್ಲಿ ಹೋಗಬೇಕೆಂದರೆ ₹500ರಿಂದ ₹600 ಕೇಳುತ್ತಿದ್ದಾರೆ. ಅಷ್ಟು ದುಡ್ಡು ನಮ್ಮಲಿಲ್ಲ. ಖಾಸಗಿ ಬಸ್ಸುಗಳು ತಮ್ಮ ಸಮಯಕ್ಕೆ ನಿಲ್ದಾಣದಿಂದ ಹೋಗುತ್ತಿದ್ದು, ಅದರಲ್ಲಿ ಹೋಗಿದ್ದ ನಮ್ಮಿಬ್ಬರು ಸ್ನೇಹಿತರು, ಇದುವರೆಗೂ ಕಂಪೆನಿ ತಲುಪಿಲ್ಲ. ಅವರು ಸಹ ಅರ್ಧಕ್ಕೆ ವಾಪಸ್‌ ಬರುತ್ತಿದ್ದಾರೆ.

ಬಸ್‌ ಇಲ್ಲವೆಂದು ಕಂಪೆನಿಯವರಿಗೆ ತಿಳಿಸಲಾಗಿದ್ದು, ಅವರು ಇನ್ನೊಮ್ಮೆ ಸಂದರ್ಶನಕ್ಕೆ ಕರೆಯುತ್ತೇನೆ. ಅಲ್ಲಿಯವರೆಗೂ ಕಾಯಿರಿ ಎಂದಿದ್ದಾರೆ. ಹೀಗಾಗಿ ಎಲ್ಲರೂ ವಾಪಸ್‌ ಊರಿಗೆ ಹೋಗುತ್ತೇವೆ’ ಎಂದು ತಿಳಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT