ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗುತಿ ಮ್ಯಾಟ್ರು

ಒಡಲಾಳ
ಅಕ್ಷರ ಗಾತ್ರ

ಯವಿ ಯವಿ, ಸಾನಿಯಾ ಏನು ಆಟ ಆಡ್ತಾಳೆ ಶಿವಾ? ಅಂತ ನಮ್ಮ ಗಂಡೈಕ್ಳು ಮೂಗಿನ ಮ್ಯಾಲೆ ಬೆಳ್ಳ್ ಇಟ್ಕೊಂಡಿದ್ದೋ ಇಟ್ಕಂಡಿದ್ದು. ಇಲ್ಲಿ ನಾನು ಹೇಳೋದಕ್ಕೆ ಹೊರಟಿರೋದು ಆ ತಾಯಿ ಆಟದ ಬಗ್ಗೆ ಅಲ್ಲಾ. ಯಾವಾಗಲೂ ಅವಳು ಧರಿಸಿರ್ತಾಳಲ್ಲ ಮೂಗುತಿ! ಅದೇ ಮೂಗುತಿ ಮೇಲೆ ಮಾತಾಡ್ತಯಿದ್ದೀನಿ.

ಸಾನಿಯಾ ಫೇಮಸ್ ಆಗೋದರ ಜೊತೆಗೆ ಅವಳ ಮೂಗುತಿಯೂ ಫೇಮಸ್ ಆಯ್ತು ಅನ್ನೋದಕ್ಕಿಂತ ಮೂಗುತಿಯಿಂದ ಸಾನಿಯಾ ಮೇಡಂ ಅಭಿಮಾನಿ ಬಳಗ ದೊಡ್ಡದಾಗುತ್ತಾ ಹೋಯ್ತು ಅನ್ನೋದೇ ಸೂಕ್ತ.ಅದೇನೋ ಅಂತಾರಲ್ಲ ‘ಹೂವಿನ ಜೊತೆ ನಾರು ಸ್ವರ್ಗಕ್ಕೆ ಹೋಯ್ತು’ ಅಂತ, ಹಂಗಾಯ್ತು ಕತೆ.

ಇದೆಲ್ಲಾ ಎಲ್ಲಾದ್ರೂ ಹೋಗ್ಲಿ, ಈಗಿನ ಕಾಲದ ಹೆಣ್ಮಕ್ಳು ಯಾಕೆ ಮೂಗುತಿ ಅಂದ್ರೆ, ಮೇಕಪ್ ಮಾಡ್ಕೊಂಡಿರೋ ತಮ್ಮ ಮುಖವನ್ನು ಮುರಿತಾರೆ ಅನ್ನೋದು ನನ್ನ ಯಕ್ಷ ಪ್ರಶ್ನೆ.

ಇದಕ್ಕೆ ಕಾರಣವನ್ನು ಇಂಟರ್ನೆಟ್‌ನಲ್ಲಿ ಹುಡುಕ್ತಾಯಿದ್ದೀನಿ. ಮೂಗುತಿಯೆಂಬುದು ಕೇವಲ ಒಡವೆಯಲ್ಲ. ಹುಡುಗಿಯ ಅಂದವನ್ನು ಹೆಚ್ಚುಗೊಳಿಸುವ ಮಾಯದ ಶಕ್ತಿ ಅಂತಲೇ ಹೇಳಬಹುದು ಹಾಗೂ ಹುಡುಗನೆದೆಗೆ ಕಿಚ್ಚನ್ನು ಹಚ್ಚುವ ಛೋಟಾ ಪಂಜು ಅಂತಲೇ ಕರಿಯಬಹುದು.

ನಮ್ಮ ಹುಡುಗರು ಗೆಳತಿಯರಿಗೆ ಮರುಳಾಗುವುದು ಕಣ್ಣು ಮತ್ತು ಮೂಗುತಿಯನ್ನು ನೋಡಿಯೇ. ಆದರೆ ಪ್ರಸ್ತುತ ಜಮಾನದಲ್ಲಿ ಮುಗ್ಧ ಮೂಗುತಿಗಳೆಲ್ಲವೂ ಮನೆಯೊಳಗಿನ ಬೀರುವಿನೊಳಗೋ ಅಥವಾ ಬ್ಯಾಂಕಿನ ಲಾಕರ್ ಒಳಗೋ ಬೆಚ್ಚಗೆ ಕುಳಿತು ಬಿಟ್ಟಿರುತ್ತವೆ.

ಹುಡುಗಿಯರು ಎಷ್ಟೇ ಅಂದವಾಗಿರಲಿ, ಮೂಗುತಿಯ ಅನುಪಸ್ಥಿತಿಯಲ್ಲಿ ಅವಳನ್ನು ನೋಡೋದು ಹುಡುಗರಿಗೂ ಬೋರು. ಆಕಸ್ಮಿಕವಾಗಿ ಮೂಗುತಿ ಧರಿಸಿ ಬಂದ ಗೆಳತಿಯ ಚಂದ ನೋಡಿದಾಕ್ಷಣ ಹುಡುಗನಿಗೆ ಅವಳ ಕೆನ್ನೆ ಮೇಲೆ ತುಟಿಯಿಂದ ದೃಷ್ಟಿ ಬೊಟ್ಟಿಡಬೇಕು ಎಂದೆನಿಸಿಬಿಡುತ್ತದೆ!.

ಅಕಸ್ಮಾತ್ ಅವನೇನಾದ್ರೂ ಗಡ್ಡ ಬಿಟ್ಕೊಂಡು ಕವಿತೆ ಬರೆಯೋ ಗೀಳು ಹತ್ತಿಸಿಕೊಂಡಿದ್ರೆ ಮುಗಿದೇ ಹೋಯ್ತು ಅಂದ್ಕೊಳಿ, ಹಾಗೇ ನಾಲ್ಕು ಸಾಲು ಕವನವನ್ನು ಅವಳ ಮೂಗುತಿಗೆ ಅರ್ಪಿಸಿ ಬಿಡುತ್ತಾನೆ. ಇಲ್ಲಾಂದ್ರೆ ಯಾವುದಾದರೂ ಹಾಡು ಹಾಡಿ ಭೇಷ್ ಅನ್ನಿಸಿಕೊಳ್ತಾನೆ.

ಆದರೆ ಈಗಿನ ಕಾಲದೋರು ಓಲೆ, ಜುಮುಕಿ, ಮೂಗುತಿಗಳನ್ನು ತೊಡದೆ ಅನಾಥರನ್ನಾಗಿಸಿ, ನಿರಾಭರಣರಾಗಿ ಪಾಶ್ಚಿಮಾತ್ಯರ ‘ಟ್ಯಾಟೂ’ ಮೋಹಕ್ಕೆ ಒಳಗಾಗಿದ್ದಾರೆ. ಈ ವಿಷಯದ ಬಗ್ಗೆ ಹುಡುಗಿಯರ ಅಂದದ ಬಗ್ಗೆ ಕಾಳಜಿಯಿರುವಂತಹ ನಮ್ಮಂಥ ಹುಡುಗರು ಏನಾದ್ರು ಕೇಳಿದ್ರೆ ಸಾಕು, ‘ಅಯ್ಯೋ ಮೂಗು ಚುಚ್ಚಿಸುವುದರಿಂದ infection ಆಗುತ್ತೆ’ ಅಂತ ಹೇಳಿ ಜಾರಿಕೊಳ್ತಾರೆ.

ಬುದ್ಧಿವಾದ ಹೇಳೋಣ ಅಂತ ಹೋದ್ರೆ unfriend ಮತ್ತು block ಮಾಡುವ ಭಾಗ್ಯದ ಯೋಜನೆಯನ್ನು ಮುಂದಿಡುತ್ತಾರೆ. ಮೂಗುತಿ ಮರೆತಿರುವ ಮಾರಾಯ್ತಿಗಳೇ, ಇನ್ನಾದರು ಆದಷ್ಟು ಬೇಗ ಮೂಗು ಚುಚ್ಚಿಸಿಕೊಳ್ಳಿ. ಈ ಹೆಸರಿನಲ್ಲಾದರೂ ನಮ್ಮ ಸಂಸ್ಕೃತಿಯನ್ನು ಉಳಿಸಿ.ಏಕೆಂದರೆ ನಿಮ್ಮಿಂದ, ನಿಮ್ಮ ಮೂಗುತಿಯಿಂದ ಬೇಜಾನು ಹುಡುಗರ ಸಾಮೂಹಿಕ ಕಗ್ಗೊಲೆಯಾಗಬೇಕಾಗಿದೆ!!!.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT