ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರ ತೊಂದರೆ ನಿಯಂತ್ರಣಕ್ಕೆ ರಿಮೋಟ್

Last Updated 31 ಮಾರ್ಚ್ 2015, 20:15 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಕಾರಣಗಳಿಂದ ಅನಿಯಂತ್ರಿತ ಮೂತ್ರ ವಿಸರ್ಜನೆ ತೊಂದರೆಯಿಂದ ಬಳಲುವವರು ಇನ್ನು ಮುಂದೆ ಮುಜುಗರ, ಸಂಕಟ ತರುವ ತಮ್ಮ ಸಮಸ್ಯೆಯನ್ನು ರಿಮೋಟ್‌ ಮೂಲಕ ನಿಯಂತ್ರಿಸಬಹುದು!

ಪ್ರತಿ ಐದು ನಿಮಿಷಕ್ಕೊಮ್ಮೆ ಮೂತ್ರ ಮಾಡುವ ತೊಂದರೆಯಿಂದ ಬಳಲುತ್ತಿದ್ದ ಮಧ್ಯಪ್ರದೇಶ ಮೂಲದ ಮಹಿಳೆಯೊಬ್ಬರಿಗೆ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ  ವೈದ್ಯರು ಇಂತಹದೊಂದು ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ.

‘ಅನಿಯಂತ್ರಿತ ಮೂತ್ರ ವಿಸರ್ಜನೆ ನಿಯಂತ್ರಿಸುವಂತಹ ‘ಇಂಟರ್‌ ಸ್ಟಿಮ್‌’ ಸಾಧನವನ್ನು ದೇಶದಲ್ಲಿಯೇ ಮೊದಲಿಗೆ ನಾವು ಯಶಸ್ವಿಯಾಗಿ ಮಹಿಳೆಯೊಬ್ಬರಿಗೆ ಅಳವಡಿಸಿದ್ದೇವೆ. ಮೂತ್ರ ವಿಸರ್ಜನೆ ತೊಂದರೆಯಿಂದ ಬಳಲುತ್ತಿದ್ದ ಅವರು  ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ’ ಎಂದು ಆಸ್ಪತ್ರೆಯ ಮೂತ್ರರೋಗ ತಜ್ಞ ಡಾ.ಟಿ.ಮನೋಹರ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡರು.

‘ಮಹಿಳೆಯು 7 ವರ್ಷಗಳಿಂದ ಅನಿಯಂತ್ರಿತ ಮೂತ್ರ ವಿಸರ್ಜನೆ ಸಮಸ್ಯೆಯನ್ನು ಎದುರಿಸುತ್ತಿದ್ದರು. ಹಲವಾರು ಚಿಕಿತ್ಸೆಗಳನ್ನು

ಅಮೆರಿಕದಿಂದ ತರಿಸಿದ ಈ ಸಾಧನ ನಿಯಂತ್ರಿಸಲು ಮಹಿಳೆಗೆ  ರಿಮೋಟ್‌ ನೀಡಲಾಗಿದೆ. ಅವರ ತೊಂದರೆ ಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.
ಡಾ. ಟಿ. ಮನೋಹರ್‌
ಮೂತ್ರರೋಗ ತಜ್ಞ

ಪಡೆದರೂ ಅವರ ಸಮಸ್ಯೆ ಗುಣವಾಗಿರಲಿಲ್ಲ. ಆಸ್ಪತ್ರೆಗೆ ಭೇಟಿ ನೀಡಿದ ಅವರನ್ನು ಪರೀಕ್ಷಿಸಿದಾಗ ಅವರ ಸಮಸ್ಯೆ ನರಕೋಶಕ್ಕೆ ಸಂಬಂಧಿಸಿದ್ದು ಎಂಬುದು ಗೊತ್ತಾಯಿತು’ ಎಂದರು.

‘ಅವರನ್ನು ಸುದೀರ್ಘ ತಪಾಸಣೆಗೆ ಒಳಪಡಿಸಿದಾಗ ಅವರು  ಮಿದುಳಿನಿಂದ ಮೂತ್ರಕೋಶ ಮತ್ತು ಮೂತ್ರ ಕ್ರಿಯೆಗೆ ಸಂಬಂಧಿತ ಸ್ನಾಯುಗಳನ್ನು ನಿಯಂತ್ರಿಸುವ ಸಾಕ್ರಲ್‌ ನರಗಳ ತೊಂದರೆಯಿಂದ ಬಳಲುತ್ತಿರುವುದು ಕಂಡುಬಂತು. ಆಗ ನಾವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು’ ಎಂದು ಹೇಳಿದರು.

‘ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಸೊಂಟದ ಹಿಂಬದಿಯಲ್ಲಿ ಸಣ್ಣ ಪ್ರಮಾಣದ ವಿದ್ಯುತ್‌ ತರಂಗಗಳನ್ನು ಉಂಟು ಮಾಡುವ ಮೂಲಕ ನರಗಳ ಸಮನ್ವಯತೆಯನ್ನು ಕಾಯ್ದುಕೊಳ್ಳುವ ‘ಇಂಟರ್‌ ಸ್ಟಿಮ್‌’ ಎಂಬ ಪುಟ್ಟ ಸಾಧನವನ್ನು ಅಳವಡಿಸಿದೆವು’ ಎಂದರು.

ಶಸ್ತ್ರಚಿಕಿತ್ಸೆಗೆ ಒಳಗಾದ ಹೆಸರು ತಿಳಿಸಲು ಬಯಸದ ಮಹಿಳೆಯು ಮಾತನಾಡಿ, ‘ನನಗೆ 2008ರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿತು. ಅಂದಿನಿಂದ ನಾನು ಮಾರುಕಟ್ಟೆ, ಕುಟುಂಬದ ಸಮಾರಂಭಗಳು, ಪ್ರವಾಸ... ಹೀಗೆ ಯಾವುದೇ ಕಾರ್ಯಕ್ರಮಗಳಿಗಾಗಿ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.  ಪ್ರತಿ ಐದು ನಿಮಿಷಕ್ಕೆ ಒಂದು ಬಾರಿ ಮೂತ್ರ ವಿಸರ್ಜನೆ ಮಾಡಲೇಬೇಕಿತ್ತು. ಅದರಿಂದಾಗಿ ನಿದ್ದೆ ಕೂಡ ಮಾಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದರು.

‘ಬರೋಡದಲ್ಲಿದ್ದ ವೇಳೆ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಪತಿಗೆ ಬೆಂಗಳೂರಿಗೆ ವರ್ಗವಾದಾಗ ಮನೆ ಸಮೀಪದಲ್ಲಿದ್ದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋದಾಗ ವೈದ್ಯರು ‘ಇಂಟರ್‌ ಸ್ಟಿಮ್‌’ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ತಿಳಿಸಿದರು. ಚಿಕಿತ್ಸೆ ತರುವಾಯ ನಾನು ಹಲವು ವರ್ಷಗಳ ನಂತರ ಮೊದಲ ಬಾರಿಗೆ ಏಳು ತಾಸು ನಿದ್ದೆ ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT