ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಸುತ್ತಿಗೆ ಸೆರೆನಾ

ಅಮೆರಿಕ ಓಪನ್ ಟೆನಿಸ್ ಟೂರ್ನಿ: ಡೇವಿಡ್ ಫೆರರ್ಗೆ ಜಯ
Last Updated 3 ಸೆಪ್ಟೆಂಬರ್ 2015, 19:32 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎಎಫ್‌ಪಿ):   ವಿಶ್ವ ಟೆನಿಸ್‌ನ ಅಗ್ರಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್‌  ಮತ್ತು ಸ್ಪೇನ್ ದೇಶದ ರಫೆಲ್ ನಡಾಲ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ  ಮುನ್ನಡೆ ಸಾಧಿಸಿದ್ದಾರೆ.

ಇಲ್ಲಿಯ  ಆರ್ಥರ್ ಆ್ಯಶ್ ಟೆನಿಸ್ ಅಂಕಣದಲ್ಲಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ 7–6 (7–5), 6–3ರಿಂದ 110ನೇ ಶ್ರೇಯಾಂಕದ ನೆದರ್‌ಲೆಂಡ್‌ ಆಟಗಾರ್ತಿ ಕಿಕಿ ಬರ್ಟನ್ಸ್‌ ವಿರುದ್ಧ ಪ್ರಯಾಸದ  ಗೆಲುವು ಸಾಧಿಸಿದರು.
ಮೊದಲ ಸೆಟ್‌ನಲ್ಲಿ ಕಠಿಣ ಸ್ಪರ್ಧೆ ಒಡ್ಡಿದ ಎದುರಾಳಿಯ ಮುಂದೆ ಅಮೆರಿಕದ ಆಟಗಾರ್ತಿ ಸೆರೆನಾ  ಟೈಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದರು.  ಹತ್ತು ಡಬಲ್‌ ಫಾಲ್ಟ್‌ ಮಾಡಿದರು. ಅಲ್ಲದೇ ಬರ್ಟನ್ಸ್‌ 34 ತಪ್ಪುಗಳನ್ನು ಮಾಡಿದ್ದರು. ಆದರೂ, ಅವರು ಸೆರೆನಾಗಿ ಸುಲಭವಾಗಿ ಶರಣಾಗಲಿಲ್ಲ. ಎರಡನೇ ಸೆಟ್‌ನಲ್ಲಿ ಎದುರಾಳಿಯನ್ನು ಸುಲಭವಾಗಿ ಮಣಿಸಿದ ಅವರು ಮೂರನೇ ಸುತ್ತಿಗೆ ನಡೆದರು.

‘ನಾನು ಪ್ರತಿಯೊಂದು ಅಂಕ ಗಳಿಸಲೂ ತೀವ್ರ ಹೋರಾಟ ನಡೆಸಬೇಕಾಯಿತು’ ಎಂದು ಸೆರೆನಾ ತಮ್ಮ ಅನುಭವ ಹೇಳಿಕೊಂಡರು.ಒಟ್ಟು 21 ಸಿಂಗಲ್ಸ್ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ಸೆರೆನಾ ಈ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆಲ್ಲುವತ್ತ ಚಿತ್ತ ನೆಟ್ಟಿದ್ದಾರೆ. ಅದರೊಂದಿಗೆ 1988ರಲ್ಲಿ ಸ್ಟೆಫಿ ಗ್ರಾಫ್  ಮಾಡಿರುವ 22 ಗ್ರ್ಯಾಂಡ್‌ಸ್ಲ್ಯಾಮ್ ವಿಜಯದ ದಾಖಲೆಯನ್ನು ಸರಿಗಟ್ಟುವ ಗುರಿ ಹೊಂದಿದ್ದಾರೆ. 33 ವರ್ಷದ ಸೆರೆನಾ ಕಳೆದ ಮೂರು ವರ್ಷ ಸತತವಾಗಿ (2012, 2013, 2014) ಅಮೆರಿಕ ಓಪನ್ ಟೂರ್ನಿಯ ಚಾಂಪಿಯನ್ ಆಗಿದ್ದಾರೆ.  ಅವರು ಒಟ್ಟು ಆರು ಬಾರಿ ಈ ಪ್ರಶಸ್ತಿಯನ್ನು ಗೆದ್ದಿರುವ ದಾಖಲೆ ಹೊಂದಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಅವರು ಅಮೆರಿಕ ಓಪನ್,  ವಿಂಬಲ್ಡನ್, ಫ್ರೆಂಚ್ ಓಪನ್, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  ಈ ಟೂರ್ನಿಯ ಮೂರನೇ ಸುತ್ತಿನಲ್ಲಿ ಸೆರೆನಾ ತಮ್ಮ ದೇಶದವರೇ ಆದ ಬೇಥನಿ ಮಾಟೆಕ್ ಸ್ಯಾಂಡ್ಸ್ ಅವರನ್ನು ಎದುರಿಸುವರು.

ನಡಾಲ್ ಮುನ್ನಡೆ: ಪುರುಷರ ಸಿಂಗಲ್ಸ್‌ನಲ್ಲಿ ರಫೆಲ್ ನಡಾಲ್ 7–6 (7–5), 6–3, 7–5ರಿಂದ ಅರ್ಜೆಂಟೀನಾದ ಡೀಗೊ ಷವರ್ಮನ್   ಅವರನ್ನು ಪರಾಭವಗೊಳಿಸಿದರು. 14 ಬಾರಿ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ ನಡಾಲ್  ತಮ್ಮ ಪ್ರತಿಸ್ಪರ್ಧಿಯಿಂದ ಕಠಿಣ ಸವಾಲು ಎದುರಿಸಿದರು.  ಎರಡನೇ ಸೆಟ್‌ನಲ್ಲಿ  ಆಕರ್ಷಕ ರ್‌್ಯಾಲಿಗಳ ಮೂಲಕ ಅರ್ಹ ಜಯ ಸಾಧಿಸಿದರು. ಆದರೆ, ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ತೀವ್ರ ಪೈಪೋಟಿ ಎದುರಿಸಿದರು. ನಡಾಲ್ ಟೈಬ್ರೇಕರ್‌ನಲ್ಲಿ ತಮ್ಮ ಎದುರಾಳಿಯನ್ನು ಮೀರಿ ನಿಂತರು.

2010 ಮತ್ತು 2013ರಲ್ಲಿ ನಡಾಲ್ ಅಮೆರಿಕ ಓಪನ್ ಪ್ರಶಸ್ತಿ ಗೆದ್ದಿದ್ದರು.  2011ರಲ್ಲಿ ಫೈನಲ್‌ ತಲುಪಿದ್ದ ಅವರು  ಗಾಯಗೊಂಡಿದ್ದ ಕಾರಣ ರನ್ನರ್‌ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಹಾಲಿ ಚಾಂಪಿಯನ್ ಮರಿನ್ ಸಿಲಿಕ್ ಮತ್ತು ಏಳನೇ ಶ್ರೇಯಾಂಕದ ಡೇವಿಡ್ ಫೆರರ್ ಪ್ರೀಕ್ವಾರ್ಟರ್‌ಫೈನಲ್‌ಗೆ ಸಾಗಿದ್ದಾರೆ.
ಕ್ರೊವೇಷಿಯಾದ ಸಿಲಿಕ್‌ 6–2, 6–3, 7–5ರಿಂದ ರಷ್ಯಾದ ಇವಾಗ್ನಿ ಡಾನ್‌ಸ್ಕೊಯ್ ವಿರುದ್ಧ ಜಯಿಸಿದರು. ಸ್ಪೇನ್‌ ಆಟಗಾರ ಡೇವಿಡ್ ಫೆರರ್   7-5, 7-5, 7-6 (7–4) ರಿಂದ  ಸರ್ಬಿಯಾದ ಫಿಲಿಪ್ ಕ್ರಾಜಿನೊವಿಚ್ ವಿರುದ್ಧ ಕಠಿಣ ಜಯ ದಾಖಲಿಸಿದರು.

ಜೊಕೊವಿಚ್‌ ಗಂಗ್ನಮ್ ಡ್ಯಾನ್ಸ್
 ಪುರುಷರ ಟೆನಿಸ್‌ನಲ್ಲಿ ವಿಶ್ವದ ಅಗ್ರಶ್ರೇಯಾಂಕದ ಆಟಗಾರ ನೊವಾಕ್ ಜೊಕೊವಿಚ್‌ ಆಟದ ಜತೆ ನೃತ್ಯವನ್ನೂ ನೋಡುವ ಅವಕಾಶ ಅಭಿಮಾನಿಗಳಿಗೆ ಲಭಿಸಿತು. ಬುಧವಾರ ಆರ್ಥರ್ ಆ್ಯಶ್ ಕ್ರೀಡಾಂಗಣದ ಟೆನಿಸ್ ಕೋರ್ಟ್‌ನಲ್ಲಿ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಎರಡನೇ ಸುತ್ತಿನ ಪಂದ್ಯ ಗೆದ್ದ ನಂತರ ಅವರು ಅಭಿಮಾನಿಯೊಬ್ಬರ ಜೊತೆ ಗಂಗ್ನಮ್ ಸ್ಟೈಲ್ ನೃತ್ಯ ಮಾಡಿದರು. 

ಸರ್ಬಿಯಾದ ಜೊಕೊವಿಚ್‌ 6–4, 6–1, 6–2ರಿಂದ ಆಸ್ಟ್ರೀಯಾದ ಆ್ಯಂಡ್ರಸ್ ಹೈಡರ್–ಮಾರೆರ್ ಅವರನ್ನು ಮಣಿಸಿದರು. ಅದೇ ಸಂದರ್ಭದಲ್ಲಿ ಟಿವಿ ವಾಹಿನಿಯ ವರದಿಗಾರ ಜೊಕೊವಿಚ್‌ ಸಂದ ರ್ಶನ ಪಡೆಯಲು ಬಂದರು. ಇದೇ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿ ಯಿಂದ ಅಂಕಣಕ್ಕೆ ಜಿಗಿದ ಅಭಿ ಮಾನಿಯೊಬ್ಬರು ಗಂಗ್ನಮ್ ಸ್ಟೈಲ್ ನೃತ್ಯ ಮಾಡುತ್ತ, ಜೊಕೊವಿಚ್‌ ಅವರನ್ನು ಅಭಿನಂದಿಸಿದರು. ತಾವು ತಂದಿದ್ದ ‘ಐ ಲವ್ ನ್ಯೂಯಾರ್ಕ್’ ಎಂಬ ಬರಹ  ಇದ್ದ ಟೀಶರ್ಟ್‌ ಅನ್ನೂ ಕಾಣಿಕೆ ನೀಡಿದರು. ಕ್ರೀಡಾಂಗಣದಲ್ಲಿ ಗಂಗ್ನಮ್ ಹಾಡಿನ ಸಂಗೀತ ಮೊಳಗಿತು. ನೊವಾಕ್ ಕೂಡ ತಮ್ಮ ಅಭಿಮಾನಿಯೊಂದಿಗೆ ನರ್ತಿಸಿದರು. ಟೀ ಶರ್ಟ್‌ ಧರಿಸಿದರು. 

‘ಅವರು (ಅಭಿಮಾನಿ) ಕೋರ್ಟ್‌ಗೆ ಬಂದು ನರ್ತಿಸುತ್ತಿರು ವಾಗ ನನಗೂ ಖುಷಿಯಾಯಿತು.  ಹೆಜ್ಜೆ ಹಾಕಿದೆ. ಇದು ಪೂರ್ವ ನಿಯೋಜಿತವೇನಲ್ಲ. ಆ ವ್ಯಕ್ತಿಯನ್ನು ಬಹಳಷ್ಟು ಪಂದ್ಯಗಳಲ್ಲಿ ನೋಡಿ ದ್ದೇನೆ. ನರ್ತಿಸುತ್ತ ಜನರನ್ನು ಮನ ರಂಜಿಸುತ್ತಾರೆ’ ಎಂದು  ಜೊಕೊ ವಿಚ್‌ ನಂತರ ಸುದ್ದಿಗಾರರಿಗೆ ತಿಳಿಸಿದರು.  ಎರಡು ತಿಂಗಳ ಹಿಂದೆ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದಾಗ,  ಮಹಿಳಾ ಚಾಂಪಿಯನ್ ಸೆರೆನಾ ವಿಲಿಯಮ್ಸ್‌ ಜೊತೆಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT