ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ದಿನಗಳ ಸೌಭಾಗ್ಯ!

Last Updated 18 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

‘ಭೂಮಿಕಾ’ದ ಕಳೆದ ಕೆಲವು ಸಂಚಿಕೆಗಳಲ್ಲಿ ಪ್ರಕಟವಾಗುತ್ತಿರುವ ‘ಆ ಮೂರು ದಿನಗಳ’ ಪಡಿಪಾಟಲು’ ಓದುತ್ತಿದ್ದಂತೆಯೇ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ನನಗೆ  ನನ್ನ ಬಾಲ್ಯದ ಕೆಲವು ಸ್ವಾರಸ್ಯಕರ ಘಟನೆಗಳು ನೆನಪಾಗುತ್ತಿವೆ.

ಕುಟುಂಬ ಯೋಜನೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ನನ್ನ ತಂದೆ- ತಾಯಿಯ ಇಳಿವಯಸ್ಸಿನಲ್ಲಿ ಜನಿಸಿದ ನಾನು ಚಿಕ್ಕವಳಿರುವಾಗಲೇ ಅಣ್ಣನಿಗೆ ಮದುವೆಯಾಗಿ ಅತ್ತಿಗೆ ಮನೆಗೆ ಬಂದರು. ನನ್ನ ತಾಯಿಯವರಿಗೆ ಆಗಲೇ ಆರೋಗ್ಯ ಕೈಕೊಡ­ಲಾ­ರಂಭಿಸಿತ್ತು. ಆದ್ದರಿಂದ ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ಅತ್ತಿಗೆಯ ಹೆಗಲೇರಿತು. ಅವರು ಸಮರ್ಥವಾಗೇ ಅದನ್ನು ನಿಭಾಯಿಸುತ್ತಿದ್ದರೂ ನನ್ನ ತಾಯಿಗೆ ಅವರ ಸ್ಥಾನ ತಪ್ಪಿದ್ದರ ಬಗ್ಗೆ ಕಸಿವಿಸಿ ಉಂಟಾಗುತ್ತಿತ್ತು.

ಇಂಥ ಸ್ಥಿತಿಯಲ್ಲಿ ಅತ್ತಿಗೆಯ ೩ ದಿನಗಳ ಅವಧಿ ಶುರುವಾಗುತ್ತಿದ್ದಂತೆ ನನ್ನ ತಾಯಿಗೆ ಸಂತೋಷವಾಗುತ್ತಿತ್ತು. ಆ ೩ ದಿನಗಳಲ್ಲಿ ತಮ್ಮಿಷ್ಟದ ಅಡುಗೆ – ತಿಂಡಿಗಳನ್ನು ಮಾಡುತ್ತಿದ್ದರು. ಅತ್ತಿಗೆಯವರಿಗೆ ಬಡಿಸುವಾಗ ‘ಅಡುಗೆ ಎಂದರೆ ಹೀಗಿರಬೇಕು ತಿಳ್ಕೊ!’ ಎಂಬ ಭಾವ ಅವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ವ್ಯವಹಾರ ಚತುರೆಯಾದ ನಮ್ಮತ್ತಿಗೆ ತನ್ನ ಅತ್ತೆಯ ಕೌಶಲವನ್ನು ಬಾಯ್ತುಂಬಾ ಹೊಗಳಿ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು.

ಅಡಿಕೆ – ಭತ್ತ- ಬಾಳೆ ಇತ್ಯಾದಿಗಳನ್ನು ಬೆಳೆಯುತ್ತಿದ್ದ ನಮ್ಮ ಮನೆಯಲ್ಲಿ ಅತ್ತಿಗೆಯವರಿಗೆ ಬೆಳಗಿನಿಂದ ರಾತ್ರಿವರೆಗೂ ಸಾಕಷ್ಟು ಕೆಲಸಗಳಿರುತ್ತಿದ್ದವು. ಈ 3 ದಿನಗಳು ಅವರ ಅತ್ಯಂತ ಸಂತಸದ ದಿನಗಳು. ದೇವರಿಗೆ ಮೈಲಿಗೆಯಾಗುತ್ತದೆಂದು ಎಲ್ಲಾ ಕೆಲಸಗಳಿಂದ ಸಂಪೂರ್ಣ ವಿನಾಯಿತಿ.  ಮನೆಯ ಮೂಲೆಯಲ್ಲಿ ನಿದ್ದೆ ಮಾಡುವುದು, ಪುಸ್ತಕ ಓದುವುದು, ಇತ್ಯಾದಿಗಳಿಂದ ಸಂತೋಷ ಪಡುತ್ತಿದ್ದರು. ಮೂರನೇ ದಿನದ ಹೊತ್ತಿಗೆ ನನ್ನಮ್ಮನಿಗೆ ಕೆಲಸ ಮಾಡಿ ಸುಸ್ತಾಗಿ ಅತ್ತಿಗೆಗೆ ಅಡುಗೆ ಮನೆ ಒಪ್ಪಿಸಲು ಆತುರದಲ್ಲಿರುತ್ತಿದ್ದರು. ಒಟ್ಟಿನಲ್ಲಿ ೪ನೇ ದಿನ ಎಲ್ಲರೂ ಖುಷ್- ಖುಷ್.

ಕೂಡುಕುಟುಂಬಕ್ಕೆ ಸೊಸೆಯಾಗಿ ಹೋದ ನನ್ನ ಚಿಕ್ಕಮ್ಮನದು ಇನ್ನೊಂದು ಕತೆ. ಅತ್ತೆ- ಮಾವ, ನಾದಿನಿ- ಮೈದುನರಿಂದ ತುಂಬಿದ್ದ ಆ ಮನೆಯಲ್ಲಿ ಅವರಿಗೆ ಬಿಡುವಿಲ್ಲದ ದುಡಿತ. ಅಡುಗೆ, ಮನೆಯವರ ಸೇವೆ, ದೇವತಾ ಕಾರ್ಯಗಳು, ದನ ಕರು, ಜೊತೆಗೆ ಚಿಕ್ಕ ಪುಟ್ಟದ್ದಕ್ಕೆಲ್ಲಾ ರೇಗುವ ಗಂಡ.  ಈ ಪರಿಸ್ಥಿತಿಯಲ್ಲಿ ಆಕೆ ಆ 3 ದಿನಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಾ ಇರುತ್ತಿದ್ದರು.

ಮನೆಯ ಮೂಲೆಯ ಕತ್ತಲ ಕೋಣೆಯಲ್ಲಿ ನಿದ್ದೆ ಮಾಡುತ್ತಲೋ, ಹಳೆಯ ಪುಸ್ತಕ- ಪತ್ರಿಕೆ ಓದುತ್ತಲೋ ಇರುತ್ತಿದ್ದರು. ತನ್ನ ದುಸ್ಥಿತಿಗೆ ಅತ್ತು ಹಗುರಾಗಲು ಏಕಾಂತವನ್ನು ಒದಗಿಸುವ ಮುಟ್ಟಿನ ಮೂರು ದಿನಗಳೆಂದರೆ ಅವರಿಗೆ ಅತಿ ಅಮೂಲ್ಯ.

ನಮ್ಮ ಸಂಬಂಧಿಗಳ ಮನೆಯಲ್ಲಿ ಒಮ್ಮೆ ಹೀಗಾಯಿತು. ಮನೆಯಾಕೆಗೆ ಮುಟ್ಟಿನ ದಿನ ತಪ್ಪುತ್ತಿದ್ದಂತೆ ತಾನು ಗರ್ಭಿಣಿ ಎಂಬ ಅನುಮಾನ ಬಂತು. ಆಗಲೇ ಮೂರು ಹೆಣ್ಣು ಮಕ್ಕಳಿದ್ದ ಆಕೆಗೆ ಈ ಗರ್ಭಾವಸ್ಥೆ ಬೇಡವಾಗಿತ್ತು. ಆದರೆ ಗಂಡು ಮಗುವಿಗೆ ಹಾತೊರೆಯುವ ಆ ಮನೆಯಲ್ಲಿ ಅವಳ ಇಷ್ಟಾನಿಷ್ಟ ಕೇಳುವವರಾರು? ತವರಿನ ಆಶ್ರಯವಿಲ್ಲದ, ಕಡು ಸಂಪ್ರದಾಯಸ್ಥ ಬ್ರಾಹ್ಮಣರ ಸೊಸೆಯಾದ ಆಕೆ ಧೈರ್ಯವಂತೆ.

ಒಂದು ಬೆಳಗ್ಗೆ ಅಸಾಧ್ಯ ಬೆನ್ನುನೋವಿನ ನೆಪ ಹೇಳಿದ ಆಕೆ, ಕಾಡಿ ಬೇಡಿ ಗಂಡನ ಅನುಮತಿ ಪಡೆದು  ತನ್ನಲ್ಲಿದ್ದ ಅಲ್ಪ- ಸ್ವಲ್ಪ ಹಣದೊಂದಿಗೆ ಸಮೀಪದ ಆಸ್ಪತ್ರೆಗೆ ಹೋದರು. ವೈದ್ಯರನ್ನು ವಿನಂತಿಸಿ ಗರ್ಭಪಾತ ಮಾಡಿಸಿಕೊಂಡು, ಮನೆಗೆ ಬಂದು ಮುಟ್ಟು ಎಂದು ಕಾರಣ ಹೇಳಿ ಹೊರಗೆ ಕುಳಿತರು. ೩ ದಿನ ವಿಶ್ರಾಂತಿಯೂ ಸಿಕ್ಕಿತು. ಬೇಡದ ಗರ್ಭವೂ ಹೋಯಿತು.

ಆ ಮೂರು ದಿನಗಳ  ಬಹಿಷ್ಕಾರದ ಬಗ್ಗೆ ಏನೇ ಟೀಕೆಗಳಿರಲಿ. ಬ್ರಾಹ್ಮಣ ಕುಟುಂಬಗಳ ಮಡಿವಂತಿಕೆಯಲ್ಲಿ ನಲುಗುವ ಹೆಣ್ಣು ಜೀವಗಳಿಗೆ ಆ ಮೂರುದಿನಗಳು ವರದಾನವೆಂದರೆ ಅತಿಶಯೋಕ್ತಿಯಲ್ಲ. ಇಂದಿನ ದಿನಗಳಲ್ಲಿ ಹೆಣ್ಣಿನ ಸಾಮಾಜಿಕ ಸ್ಥಾನಮಾನಗಳಲ್ಲಿ ಸಾಕಷ್ಟು ಸುಧಾರಣೆ ಆಗಿದ್ದರೂ, ಹೆಚ್ಚಿನ ಮಹಿಳೆಯರು ಮೂರುದಿನಗಳ ವಿಶ್ರಾಂತಿಗಾಗಿ ಹಂಬಲಿಸುವುದೂ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT