ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಮೆಟ್ಟಿಲ ಸ್ವರ್ಗ ‘ಟಿಟ್ಲಿಸ್’

Last Updated 19 ಸೆಪ್ಟೆಂಬರ್ 2015, 19:33 IST
ಅಕ್ಷರ ಗಾತ್ರ

ಸ್ವಿಟ್ಜರ್ಲೆಂಡ್‌ನ ವಿಶ್ವವಿಖ್ಯಾತ ಆಲ್ಫ್ಸ್‌ ಪರ್ವತಶ್ರೇಣಿಯ ಬುಡದಲ್ಲಿರುವ ಒಂದು ಪುಟ್ಟ ಗ್ರಾಮ ಏಂಜಲ್‌ಬರ್ಗ್‌. ಹಿಮ ಕವಿದ ವಾತಾವರಣ, ಪರ್ವತಗಳು, ಮರಗಳು, ಕಣ್ಣು ಹಾಯಿಸಿದಲ್ಲೆಲ್ಲ ಹಚ್ಚಹಸುರು– ಹೀಗೆ ಏಂಜಲ್‌ಬರ್ಗ್‌ನ ಪರಿಸರ ಸ್ವರ್ಗದ ಹಾದಿಯಂತೆ ಕಾಣಿಸುತ್ತದೆ. ಈ ಗ್ರಾಮಕ್ಕೆ ಹೊಂದಿಕೊಂಡ ಟಿಟ್ಲಿಸ್‌ ಪರ್ವತ ಪ್ರವಾಸಿಗರ ಪಾಲಿನ ಚುಂಬಕ.

ಟಿಟ್ಲಿಸ್‌ ಸಮುದ್ರ ಮಟ್ಟದಿಂದ 3020 ಮೀಟರ್‌ ಎತ್ತರವಿದೆ. ವೆಂಡೆನ್‌ಸ್ಟಾಕ್‌ ಹಾಗೂ ನೊಲ್ಲೆನ್‌ ಹೆಸರುಗಳಿಂದ ಕರೆಸಿಕೊಳ್ಳುತ್ತಿದ್ದ ಈ ಪರ್ವತವನ್ನು ಟಿಟ್ಲಿಸ್‌ ಎಂದು ಕರೆದದ್ದು1435ರ ನಂತರ ಎಂದು ಸ್ಥಳೀಯರು ಹೇಳುತ್ತಾರೆ. ಟುಟಿಲೊಸ್‌ಬರ್ಗ್‌ ಎನ್ನುವುದು ಜನರ ನಾಲಗೆಗಳಲ್ಲಿ ಟಿಟ್ಲಿಸ್‌ ಆಯಿತು ಎನ್ನುವವರೂ ಇದ್ದಾರೆ. ಹಿಮಾವೃತವಾದ ಈ ಪರ್ವತ ಪರಿಸರ ಪ್ರಿಯರನ್ನು ಮರುಳುಮಾಡುವಂತಿದೆ.

ಕೇಬಲ್‌ ಕಾರ್‌ ಪಯಣ ಟಿಟ್ಲಿಸ್‌ನ ಆಕರ್ಷಣೆಗಳಲ್ಲೊಂದು ಈ ಪಯಣ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯ ಹಂತ ಪರ್ವತದ 1202 ಮೀಟರ್‌ ದೂರದ ಪಯಣ. ಎರಡನೇ ಹಂತ ಪರ್ವತದ 1790 ಮೀಟರ್‌ ಎತ್ತರಕ್ಕೆ ಪ್ರವಾಸಿಗರನ್ನು ಮುಟ್ಟಿಸಿದರೆ, ಮೂರನೇ ಹಂತದಲ್ಲಿ ಕೇಬಲ್‌ ಕಾರ್ ಪರ್ವತದ ತುದಿಯವರೆಗೆ ಪಯಣಿಸುತ್ತದೆ. ಈ ಮೂರೂ ಹಂತಗಳ ಪಯಣ ಸ್ವರ್ಗಕ್ಕೆ ಇರುವ ಮೂರು ಮೆಟ್ಟಿಲುಗಳಂತೆ ಭಾಸವಾಗುತ್ತವೆ.

ಕೊನೆಯ ಭಾಗದಲ್ಲಿ ಬಂದಾಗ ಅಲ್ಲಿನ ವಾತಾವರಣ ಏರುಪೇರಾದರೆ, ಚಳಿ – ಶೀತಗಾಳಿ ಹೆಚ್ಚಾದರೆ ಅದನ್ನು ತಡೆಯಲು ಪರ್ವತದ ಮೇಲೆ ರೆಸ್ಟ್ ರೂಂ ಇದೆ. ಅಲ್ಲಿ ಉಷ್ಣಾಂಶ ಸಮತೋಲನದ  ವ್ಯವಸ್ಥೆಯನ್ನು ಮಾಡಲಾಗಿದೆ. ಅಷ್ಟು ಮಾತ್ರವಲ್ಲ– ಅಂಗಡಿಗಳು, ರೆಸ್ಟೋರೆಂಟ್‌ಗಳು ಕೂಡ ಪರ್ವತದ ಮೇಲಿವೆ. ‘ಬೆಟ್ಟದ ಮೇಲೊಂದು ಮನೆಯ ಮಾಡಿ...’ ಎಂದು ಟಿಟ್ಲಿಸ್‌ ಹತ್ತಿ ಕೊರಗುವಂತಿಲ್ಲ. ಟಿಟ್ಲಿಸ್‌ ಹಲವು ಆಕರ್ಷಣೆಗಳ ಆಗರ. ವಿಶೇಷ ಉಡುಪನ್ನು ಧರಿಸಿಕೊಂಡು ಫೋಟೋವನ್ನು  ತೆಗೆಸಿಕೊಳ್ಳಲು ಇಲ್ಲೊಂದು ಸ್ಟುಡಿಯೋ ಇದೆ. ಒಂದು ಫೋಟೋವಿಗೆ 36 ಯೂರೊ ತೆರಬೇಕು.

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೇಬಲ್‌ ಕಾರಿನ ಮೂಲಕ ಹೋಗುವುದರ ಬಗ್ಗೆ ಮೊದಲೇ ಗೊತ್ತಿದ್ದರಿಂದ ಮೊದಮೊದಲು ಭಯ, ನಡುಕ ಉಂಟಾಗಿತ್ತು. ‘ಹೇಗಪ್ಪಾ ಅಷ್ಟು ಎತ್ತರಕ್ಕೆ ಕೇಬಲ್‌ ಕಾರಿನಲ್ಲಿ ಹೋಗುವುದು? ಜೀವಕ್ಕೆ ಅಪಾಯವಾದರೆ ಗತಿ ಏನು?’ ಎನ್ನುವ ದಿಗಿಲು ನಮ್ಮಲ್ಲಿ ಮನೆ ಮಾಡಿತ್ತು. ಗಟ್ಟಿ ಮನಸ್ಸು ಮಾಡಿಕೊಂಡು ಕೇಬಲ್‌ ಕಾರ್‌ ಸ್ಟೇಷನ್‌ ಪ್ರವೇಶ ದ್ವಾರವನ್ನು  ಪ್ರವೇಶಿಸಿದೆವು.

ಕೇಬಲ್‌ ಕಾರ್‌ ತಿರುಗುತ್ತಾ ಮೇಲೇರಲು ಪ್ರಾರಂಭಿಸಿತು. ಸುತ್ತಲೂ ಮರಗಿಡ ಬಳ್ಳಿ, ರಸ್ತೆಗಳು, ಕಟ್ಟಡಗಳು, ತಮ್ಮ ಸೌಂದರ್ಯದ ಮೆರುಗನ್ನು ಹೆಚ್ಚಿಸಿಕೊಂಡು ಸುಂದರ ವಿನೂತನ ರೀತಿಯಲ್ಲಿ ಕಾಣಿಸುತ್ತಿದ್ದವು. ಆಹಾ! ಎಂಥ ಅದ್ಬುತ ದೃಶ್ಯಗಳು! ಅದು ಬಣ್ಣನೆಗೆ ನಿಲುಕುದ ಅಪೂರ್ವ ಅನುಭವ.  ಟನ್‌ಗಟ್ಟಲೆ ಕಬ್ಬಿಣದ ತೊಲೆಗಳನ್ನು ತಂದು, ಇಲ್ಲಿ ನೆಟ್ಟು, ಅವುಗಳನ್ನು ಸಿಮೆಂಟ್‌ ಜಲ್ಲಿಯಿಂದ ಭದ್ರಪಡಿಸಿ, ಅದರ ಮೇಲೆ ಕೇಬಲ್‌ ಎಳೆದು, ಕಾರಿನ ಭಾರಕ್ಕೆ ಎಲ್ಲೂ ಜಗ್ಗದಂತೆ ಎಳೆದು ಕಟ್ಟಿ, ಸಮತೋಲನವನ್ನ ಕಾಯ್ದಿರಿಸಿ ಅದರ ಮೂಲಕ ಕಾರಿನಲ್ಲಿ ಜನರನ್ನ ಹೊತ್ತು ತರುವ ಸಾಹಸದ ಅನಾವರಣ ಇಲ್ಲಿದೆ. ಈ ಅಪೂರ್ವ ಸೃಷ್ಟಿ ಮಾನವನ ಬುದ್ಧಿಶಕ್ತಿ ಹಾಗೂ ಶ್ರಮಶಕ್ತಿಯ ಸಂಗಮದ ಪ್ರತೀಕದಂತಿತ್ತು.

ಕೇಬಲ್‌ ಕಾರು ಮೇಲೇರಿದಂತೆ ಬೆಟ್ಟಕ್ಕೆ ಹಿಮದ ಬಟ್ಟೆಯನ್ನು ಉಡಿಸಿದಂತೆ ಕಾಣಿಸುತ್ತಿತ್ತು. ಎಲ್ಲಿ ನೋಡಿದರೂ ಹಿಮ! ಸ್ವಚ್ಛ ಬಿಳುಪಿನ ಲತಾಂಗಿಯಂತೆ ಕಂಗೊಳಿಸುವ ಹಿಮದ ಧಾರೆಯನ್ನು ಅನುಭವಿಸುವಾಗಲೇ ಮತ್ತೊಂದು ಸ್ಟೇಷನ್‌ ಬಂದಿತು. ಕೇಬಲ್‌ ಕಾರಿನಿಂದ ಕೇಬಲ್‌ ಬಸ್ಸಿಗೆ ಸ್ಥಳಾಂತರಗೊಂಡೆವು. ಕೇಬಲ್‌ ಕಾರಿನಲ್ಲಿ ಕೇವಲ 8 ಜನಕ್ಕೆ ಸ್ಥಳಾವಕಾಶ. ಬಸ್‌ನಲ್ಲಿ 20–30 ಜನರು ನಿಂತುಕೊಂಡು ಪ್ರಯಾಣ ಮಾಡಬಹುದಿತ್ತು.

ಕೇಬಲ್‌ ಬಸ್‌ ಎರಡು ಪರ್ವತಗಳ ಮಧ್ಯೆ ಚಲಿಸಿದಾಗ, ಸಾವಿರಾರು ಅಡಿಗಳ ಆಳದ ಪ್ರಪಾತವನ್ನು ನೋಡಿ ಎದೆ ನಡುಗಿತು. ಸೂರ್ಯನ ಕಿರಣಗಳಿಗೆ ಮೈಯೊಡ್ಡಿಕೊಂಡಿದ್ದ ಹಿಮ ಹೊಳೆಯುತ್ತಿತ್ತು.  ಅಗಾಧವಾದ ಬಿಳಿಯ ಹಿಮರಾಶಿ ನೋಡಲು ಎರಡು ಕಣ್ಣು ಸಾಲದೇನೋ ಅನ್ನುವ ಭಾವ. ಮತ್ತೊಂದು ಕೇಬಲ್‌ ಬಸ್ಸಿನ ಮೂಲಕ ಮೌಂಟ್‌ ಟಿಟ್ಲಿಸ್‌ನ ಪರ್ವತದ ಮೇಲೆ, ಹತ್ತು ಸಾವಿರ ಅಡಿಯ ಮೇಲೆ ತಲುಪಿದ್ದೆವು.

ಪ್ರಖರವಾದ ಸೂರ್ಯನ ಬೆಳಕಿನಲ್ಲಿ ಹಿಮದ ಮೇಲೆ ಕುಣಿದು ಕುಪ್ಪಳಿಸಿದೆವು. ಹಿಮವನ್ನು  ಒಬ್ಬರ ಮೇಲೆ ಒಬ್ಬರು ಎರಚಾಡಿದೆವು. ಮಕ್ಕಳಂತೆ ಕುಣಿದಾಡಿದೆವು. ಹಿಮದ ಮೇಲೆ ಬಿದ್ದರೆ, ಮೇಲೆದ್ದು ಜಾರಿದರೆ ಹಿಮ ಚೆಲ್ಲಾಪಿಲ್ಲಿಯಾಗುವುದು. ಕೆಲವರಂತೂ ಹಿಮದ ಮೇಲೆ ವಿವಿಧ ಭಂಗಿಗಳಲ್ಲಿ ನಿಂತು ಕ್ಯಾಮೆರಾಗಿ ಫೋಜು ನೀಡುತ್ತಿದ್ದರು. ಸ್ವಿಟ್ಜರ್ಲೆಂಡ್‌ ಭೂಮಿಯ ಮೇಲಿರುವ ಸ್ವರ್ಗ ಎನ್ನುತ್ತಾರೆ. ಆ ಮಾತಿನ ಸಾಕ್ಷಾತ್ಕಾರದಂತೆ ಟಿಟ್ಲಿಸ್‌ ಪರ್ವತ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT