ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರೂವರೆ ವರ್ಷದ ಹಿಂದೆ ಕೊಲೆ: ಆರೋಪಿ ಸೆರೆ

ಕೋಟಹಳ್ಳಿ ಗ್ರಾಮ: ಹೂಳಲಾಗಿದ್ದ ಬಾಲಕನ ಶವ ಮತ್ತೆ ಹೊರ ತೆಗೆದು ತನಿಖೆ
Last Updated 16 ಏಪ್ರಿಲ್ 2016, 10:28 IST
ಅಕ್ಷರ ಗಾತ್ರ

ರಾಮನಗರ: ಮೂರೂವರೆ ವರ್ಷದ ಹಿಂದೆ ಕಾಣೆಯಾಗಿದ್ದ ತಾಲ್ಲೂಕಿನ ಕೋಟಹಳ್ಳಿ ಗ್ರಾಮದ ಬಾಲಕ ಮಹೇಶ್‌ ಕುಮಾರ್‌ನ (13) ಕಳೆಬರಹವನ್ನು ಅದೇ ಗ್ರಾಮದಲ್ಲಿ ಶುಕ್ರವಾರ ಹೊರ ತೆಗೆಯಲಾಯಿತು.

ಗ್ರಾಮದ ಮುದ್ದಯ್ಯ ಮತ್ತು ಮಂಜುಳಾ ದಂಪತಿ ಪುತ್ರನಾದ ಮಹೇಶ್ ಕುಮಾರ್ ಮೂರೂವರೆ ವರ್ಷಗಳ ಹಿಂದೆ ನಾಪತ್ತೆಯಾಗಿದ್ದನು. ಈ ಕುರಿತು ಅವರು ರಾಮನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೊಲೆ ಆರೋಪದ ಮೇಲೆ   ಶಶಿಕುಮಾರ್‌ನ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚೆಗೆ ಕುಡಿದ ನಶೆಯಲ್ಲಿ ಆರೋಪಿ ಶಶಿಕುಮಾರ್‌ ತನ್ನ ಸ್ನೇಹಿತ ವನರಾಜು  ಹಾಗೂ ಜನರ ಎದುರು ಬಾಲಕ ಮಹೇಶ್‌ ಕುಮಾರ್‌ ಕೊಲೆಯ ವೃತ್ತಾಂತವನ್ನು ಬಿಡಿಸಿ ಹೇಳಿದ್ದರು. ಆ ನಂತರ ಜನರು ಈ ವಿಷಯವನ್ನು ಬಾಲಕನ ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಪೋಷಕರು ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಬೆಂಗಳೂರಿನಲ್ಲಿ ಶಶಿಕುಮಾರ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ಪ್ರಕರಣ ಬಯಲಾಗಿದೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಕೋಟಹಳ್ಳಿಯ ನಿಂಗಮ್ಮ ಗೋಪಾಲಯ್ಯ ಅವರಿಗೆ ಸೇರಿದ ಹಿಪ್ಪುನೆರಳೆ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ ಭೂಮಿಯನ್ನು ಅಗೆದು, ಬಾಲಕನ ಅಸ್ತಿಪಂಜರವನ್ನು ಹೊರ ತೆಗೆಯಲಾಯಿತು. ಇದಕ್ಕೆ ಜೆಸಿಬಿ ಮತ್ತು ಪೌರ ಕಾರ್ಮಿಕರನ್ನು ಬಳಸಿ ಕೊಳ್ಳಲಾಯಿತು.

ಉಪ ವಿಭಾಗಾಧಿಕಾರಿ ಡಾ. ಎಂ.ಎನ್‌.ರಾಜೇಂದ್ರ ಪ್ರಸಾದ್‌, ತಹಶೀಲ್ದಾರ್‌ ಎಚ್‌.ಟಿ.ಮಂಜಪ್ಪ, ಎಸ್ಪಿ ಡಾ. ಚಂದ್ರಗುಪ್ತ, ಡಿಎಸ್‌ಪಿ ಕೆ. ಲಕ್ಷ್ಮೀ ಗಣೇಶ್‌ ಹಾಗೂ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯ ನಡೆಯಿತು. ತಹಶೀಲ್ದಾರ್‌ ಮಂಜಪ್ಪ ಅವರು ಶವದ ಕುರುಹುಗಳ ಪಂಚನಾಮೆ ನಡೆಸಿದರು. ವೈದ್ಯಾಧಿಕಾರಿಗಳು ಕುರುಹುಗಳನ್ನು ಡಿಎನ್ಎ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ
ಕಳುಹಿಸಿಕೊಟ್ಟರು.

ಪ್ರಕರಣದ ವಿವರ: 2012ರ ನವೆಂಬರ್‌ನಲ್ಲಿ ಮನೆ ಎದುರು ಆಟವಾಡಿಕೊಂಡಿದ್ದ ಬಾಲಕ ಮಹೇಶ್ ಕುಮಾರ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದನು. ಇದರಿಂದ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿ, ಪೊಲೀಸರು ದೂರು ನೀಡಿದ್ದರು. ಅದೇ ಗ್ರಾಮದ ಶಶಿಕುಮಾರ್ ಎಂಬಾತನು ಗ್ರಾಮದ ಯುವತಿಯೊಬ್ಬರೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದನ್ನು ಬಾಲಕ ಮಹೇಶ್ ಕುಮಾರ್ ನೋಡಿದ್ದನು.

ಈ ವಿಷಯ ಗೊತ್ತಾಗಿ ಬಾಲಕನನ್ನು ಮುಗಿಸಲು ಶಶಿಕುಮಾರ್‌ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು. ಮನೆಯ ಮುಂದೆ ಸಂಜೆ ಆಟವಾಡಿಕೊಂಡಿದ್ದ ಬಾಲಕನನ್ನು ಹಿಪ್ಪುನೇರಳೆ ತೋಟದ ಬಳಿಗೆ ಕರೆದೊಯ್ದ ಆರೋಪಿ ಶಶಿಕುಮಾರ್‌, ಅಲ್ಲಿ ಬಾಲಕನ ಕತ್ತು ಕೊಯ್ದು ಕೊಲೆ ಮಾಡಿ, ಶವವನ್ನು ತೋಟದಲ್ಲಿಯೇ ಬಿಟ್ಟು ಗ್ರಾಮಕ್ಕೆ ಮರಳಿದ್ದನು.

ಎಲ್ಲರ ಕಣ್ಣಾಲಿಗಳು ತೇವವಾಗಿದ್ದವು..
ರಾಮನಗರ:
ತಾಲ್ಲೂಕಿನ ಕೈಲಾಂಚ ಹೋಬಳಿಯ ಕೋಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೀರವ ಮೌನ ಆವರಿಸಿತ್ತು. ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಾಲಿಗಳು ತೇವವಾಗಿದ್ದವು.

ಕಾಣೆಯಾಗಿದ್ದ ಮಗ ಇಂದಲ್ಲ, ನಾಳೆ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ತಂದೆ, ತಾಯಿಗೆ ಪುತ್ರ ಮಹೇಶ್‌ ಕುಮಾರ್‌ನ ಮರಣದ ಸುದ್ದಿ ಕೇಳಿ ದಿಕ್ಕು ತೋಚದಂತಾಗಿದ್ದರು. ಅವರು ನೆಲದ ಮೇಲೆ ಬಿದ್ದು ಹೊರಳಾಡಿದರು. ಎದೆ ಬಡಿದುಕೊಂಡು ಕಣ್ಣೀರಾಕಿದರು. ಅವರ ದುಃಖ ಮುಗಿಲು ಮುಟ್ಟಿತ್ತು.

ಗ್ರಾಮದ ಮುದ್ದಾದ ಬಾಲಕ ಸಾವನ್ನಪ್ಪಿರುವ ವಿಷಯ ತಿಳಿದು ಇಡೀ ಗ್ರಾಮವೇ ಮರುಕಪಟ್ಟಿತು. ಬಾಲಕನ ತಂದೆ ಮಾದಯ್ಯ, ತಾಯಿ ಮಂಜುಳಾ, ತಂಗಿ ಶ್ವೇತಾ ಅವರನ್ನು ಸಂತೈಸುವುದರಲ್ಲಿ ಗ್ರಾಮದವರು ತೊಡಗಿದ್ದರು.

ಘಟನೆ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಬಾಲಕನ ತಂದೆ ಮುದ್ದಯ್ಯ ಅವರು, '2012ರ ನವೆಂಬರ್‌ನಲ್ಲಿ ನಾನು ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬಂದು ಟಿವಿ ನೋಡುತ್ತಿದ್ದೆ. ಮಗ ಎಲ್ಲಿದ್ದಾನೆ ಕರಿ ಎಂದು ಹೆಂಡತಿಗೆ ಹೇಳಿದೆ, ಅವಳು ಈಚೆ ಆಟವಾಡುತ್ತಿರಬೇಕು ಬರುತ್ತಾನೆ ಬಿಡಿ ಎಂದಳು.

ರಾತ್ರಿ 8 ಗಂಟೆಯಾದರೂ ಮಗ ಬರಲಿಲ್ಲ. ಕೊನೆಗೆ ನಾವು ಊರಿನಲ್ಲೆಲ್ಲ ಹುಡುಕಿದೆವು ಸಿಗಲಿಲ್ಲ. ಇಲ್ಲೆ ಅಂಗಡಿಯ ಹತ್ತಿರ ನಿಂತಿದ್ದನ್ನು ನಾವು ನೋಡಿದೆವು ಎಂದು ಊರಿನವರು ಹೇಳಿದರು. ಆರೋಪಿ ಶಶಿಕುಮಾರ್ ಆಗ ನಮ್ಮ ಜತೆಯೇ ಇದ್ದು ಹುಡುಕಾಡುವ ನಾಟಕ ಮಾಡಿದ್ದ' ಎಂದು ಕಣ್ಣೀರು ಹಾಕಿದರು.

ಬರಲೇ ಇಲ್ಲ: 'ಅಂದು ಭಾನುವಾರ. ಸೋಮವಾರ ಬೆಳಿಗ್ಗೆ ಸ್ಕೂಲಿಗೆ ಹೋಗಬೇಕು ಬಂದು ಸ್ನಾನ ಮಾಡಿಕೊ ಎಂದು ಕರೆದಿದ್ದೆ. ಇರವ್ವ ಆ ಮೇಲೆ ಸ್ನಾನ ಮಾಡಿಕೊಳ್ಳುತ್ತೇನೆ ಎಂದು ಹೋದ ಮಗ ಬರಲೇ ಇಲ್ಲ' ಎಂದು ಮಹೇಶ್‌ನ ತಾಯಿ ಮಂಜುಳಾ ಕಣ್ಣೀರು ಹಾಕಿದರು. ಅಂದಹಾಗೆ ಬಾಲಕ ಮಹೇಶ್‌ ಕುಮಾರ್‌ 2012ರಲ್ಲಿ ಅವ್ವೇರಹಳ್ಳಿಯ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT