ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ಖತನವೆಂದರೆ...

Last Updated 7 ಏಪ್ರಿಲ್ 2016, 14:15 IST
ಅಕ್ಷರ ಗಾತ್ರ

‘ಮೂರ್ಖತನ’ ವ್ಯಾಖ್ಯಾನಕ್ಕೆ ನಿಲುಕದ ಪದ. ಈ ಮೂರ್ಖತನದ ಮುಷ್ಟಿಗೆ ಪ್ರತಿಯೊಬ್ಬರೂ ಗೊತ್ತೋ ಗೊತ್ತಿಲ್ಲದೋ ಸಿಕ್ಕವರೇ, ನಕ್ಕವರೇ. ಅಂದ ಹಾಗೆ ಮೂರ್ಖರಾಗಲು ಏಪ್ರಿಲ್‌ ತಿಂಗಳೇ ಆಗಬೇಕೆಂದೇನಿಲ್ಲ. ಬೇರೆ ಯಾರೋ ನಮ್ಮನ್ನು ಮೂರ್ಖರನ್ನಾಗಿಸುವ ಅಗತ್ಯವೂ ಇಲ್ಲ. ಎಷ್ಟೋ ಸಂದರ್ಭಗಳಲ್ಲಿ ನಾವು ನಮ್ಮಷ್ಟಕ್ಕೇ ನಮ್ಮದೇ ಕಾರಣಗಳಿಗಾಗಿ ಮೂರ್ಖರಾಗಿರುತ್ತೇವೆ.

ತಕ್ಷಣಕ್ಕೆ ನಮ್ಮ ಪೆದ್ದುತನ ಅವಮಾನ ಅನ್ನಿಸಿದರೂ ನಂತರ ನಮ್ಮನ್ನು ನಕ್ಕು ನಗಿಸಿರುತ್ತವೆ. ಇಂಥ ನಕ್ಕು ನಗಿಸುವ ಮೂರ್ಖತನಗಳನ್ನು ನೆನೆಸಿಕೊಳ್ಳುವ ಸಲುವಾಗಿ ಕಾಮನಬಿಲ್ಲು ಓದುಗರಿಂದ ಪತ್ರಗಳನ್ನು ಆಹ್ವಾನಿಸಿತ್ತು. ಮೂರ್ಖತನವನ್ನು ಬಿಚ್ಚುಮನಸ್ಸಿನಿಂದ ಒಪ್ಪಿಕೊಂಡ, ಮೆಚ್ಚಿಕೊಂಡ ಎಷ್ಟೋ ಪತ್ರಗಳು ಬಂದವು. ಅವುಗಳಲ್ಲಿ ಕೆಲವು ಇಲ್ಲಿವೆ...

*

ಮೀನೂಟ ಹೊಟ್ಟೆ ಸೇರಿತ
ಮೂಡಿಗೆರೆಯ ಬಿಎಸ್‌ಎನ್‌ಎಲ್‌ ಶಾಖೆಯಲ್ಲಿ ಹಂಗಾಮಿ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿರುವ ನಾನು ನನ್ನಷ್ಟಕ್ಕೇ ಮೂರ್ಖನಾದ ಸಂಗತಿಯನ್ನು ಸಂಕೋಚ ಎನಿಸಿದರೂ ಹೇಳಿಕೊಳ್ಳುತ್ತಿದ್ದೇನೆ. ಸುಮಾರು 24 ವರ್ಷಗಳ ಹಿಂದೆ ನಡೆದ ಘಟನೆಯಿದು. ಕೆಲಸದ ನಿಮಿತ್ತ ಬೆಂಗಳೂರಿಗೆ ಪಯಣ ಬೆಳೆಸಿದ್ದೆ.

ಮೂಡಿಗೆರೆಯಿಂದ–ಬೆಂಗಳೂರಿಗೆ ಮೊದಲ ಬಾರಿ ಬಂದಿದ್ದ ನನಗೆ, ಮೆಜೆಸ್ಟಿಕ್‌ ತಲುಪುತ್ತಿದ್ದಂತೆ ಹೊಟ್ಟೆಯ ಹುಳುಗಳು ಸಾಯುವಷ್ಟು ಹಸಿವಾಗುತ್ತಿತ್ತು. ರಾಜಧಾನಿಯಲ್ಲಿ ಮಾಂಸಾಹಾರ ಸವಿಯಬೇಕೆಂಬ ಬಯಕೆಯಲ್ಲಿ ಮೆಜೆಸ್ಟಿಕ್‌ ಹಿಂಭಾಗದ ಗಾಂಧಿನಗರ ರಸ್ತೆಯ ಗಲ್ಲಿ–ಗಲ್ಲಿಯನ್ನು ಜಾಲಾಡಿದೆ. ತಕ್ಷಣವೆ, ಮರಳು ಗಾಡಿನಲ್ಲಿ ಓಯಸಿಸ್‌ ಸಿಕ್ಕಂತೆ ‘ಮೀನು ಊಟ 15 ರೂಪಾಯಿ’ ಎಂದಿದ್ದ ನಾಮಫಲಕ ಕಂಡೆ. ಮಲೆನಾಡಿನವನಾದ ನನಗೆ, 15 ರೂಪಾಯಿಗೆ ಮೀನು ಎಂದರೆ, ಭೂಲೋಕದಲ್ಲೇ ಸ್ವರ್ಗ ಸಿಕ್ಕಂತಾಯಿತು.

ಒಳ ಪ್ರವೇಶಿಸಿದವನೇ ಬಾಗಿಲಿನಲ್ಲಿಟ್ಟಿದ ಬಕೆಟ್‌ ನೀರಿನಿಂದ ಕೈ ತೊಳೆದುಕೊಂಡು ಮಾಣಿಗಾಗಿ ಕಾದುಕುಳಿತೆ, ಅಡುಗೆ ಮನೆಯಿಂದ ಬಂದ ಮಾಣಿ, ಏನು ಬೇಕು ಎಂದ. ನಾನು ಊಟ ಎಂದೊಡನೆ ಯಾವುದು, ಮೀನೂಟಾನಾ ಎಂದ. ತಕ್ಷಣವೇ ಕಣ್ಣರಳಿಸಿ ಸನ್ನೆಯಲ್ಲೆ ಹೌದೆಂದೆ. ಮರುಕ್ಷಣದಲ್ಲೇ ತಟ್ಟೆಯೊಂದಿಗೆ ಬಂದ ಮಾಣಿ.
ಮೀನೊಂದನ್ನು ಹೊರತುಪಡಿಸಿ, ಚಪಾತಿ, ಪಲ್ಯ, ಅನ್ನ, ಹಪ್ಪಳ, ಉಪ್ಪಿನಕಾಯಿ ನೀಡಿದ್ದ. ನಾನು ಮೀನು ತಯಾರಾಗುತ್ತಿರಬಹುದೆಂದು– ಚಪಾತಿಯನ್ನು ಮೆಲ್ಲಗೆ ಸವಿದೆ. ಆದರೆ ಮಾಣಿ ನಾಪತ್ತೆ! ತಟ್ಟೆಯಲ್ಲಿದ್ದ ಅನ್ನ ಖಾಲಿಯಾದರೂ, ಮೀನು ಹೋಗಲಿ, ಮೀನಿನ ವಾಸನೆಯೂ ಮೂಗಿಗೆ ಬಡಿಯಲಿಲ್ಲ.

ಪಕ್ಕದ ಟೇಬಲ್ಲಿಗೆ ಊಟ ಹೊತ್ತು ಬಂದ ಮಾಣಿ ನನ್ನ ಮೇಲೆ ಅನುಮಾನ ಬಂದಂತೆ ನೋಡಿದ. ಎಲ್ಲಿತ್ತೊ ಸಿಟ್ಟು, ‘ಎಲ್ಲಯ್ಯ ಮೀನು’ ಎಂದು ನನ್ನ ಅಪ್ಪಟ ಗ್ರಾಮೀಣ ಭಾಷೆಯಲ್ಲಿ, ಬ್ಯಾಡಗಿ ಮೆಣಸಿನಕಾಯಿಯಂತಹ ಮುಖದಿಂದ ಕೇಳಿದೆ. ಶಾಂತಚಿತ್ತನಾದ ಮಾಣಿ, ‘ಯಾವ ಮೀನು? ಇದು ಸಸ್ಯಾಹಾರಿಯಲ್ಲವೇ’ ಎಂದ. ಎದುರಿಗಿದ್ದ ನಾಲ್ಕೈದು ಮುಖಗಳು ಹಲ್ಲು ಕಿರಿದವು.

ಆ ಹಲ್ಲುಗಳನ್ನು ಕಂಡ ನನಗೆ ಇನ್ನಷ್ಟು ಕೋಪ ಉಕ್ಕಿತು. ‘ಹೊರಗೆ ಮೀನು ಊಟ ಎಂದು ಬೋರ್ಡ್‌ ನೇತು ಹಾಕಿ, ಒಳಗೆ ಪುಳಿಚಾರ್‌ ಕೊಡ್ತಿರ!’ ಎಂದು ಗದರಿಸುತ್ತ ಎದ್ದುನಿಂತೆ. ‘ಸ್ವಾಮಿ ಬೋರ್ಡ್‌ ನೋಡೇ ದುಡ್ಡು ಕೊಡಿ’ ಎಂದ ಮಾಣಿ.

ಕೈ ತೊಳೆದು ಬೋರ್ಡ್‌ ನೋಡಲೆಂದು ಹೊರಬಂದು ಕಣ್ಣಾಡಿಸಿದರೆ ಪೆಚ್ಚಾಗುವ ಸರದಿ ನನ್ನದಾಗಿತ್ತು. ಯಾಕೆಂದರೆ ‘ಮಿನಿ ಊಟ 15 ರೂಪಾಯಿ’ ಎಂದಿತ್ತು. ಹಸಿವಿನ ಧಾವಂತದಲ್ಲಿದ್ದ ನನಗೆ ಮಿನಿ ಊಟ ಮೀನೂಟವಾಗಿ ಗೋಚರಿಸಿತ್ತು, ಕೇಳಿಸಿತ್ತು. ನನ್ನ ಮೂರ್ಖತನಕ್ಕೆ ಪೆಚ್ಚಾಗಿ ಬಸ್‌ ನಿಲ್ದಾಣಕ್ಕೆ ಹೆಜ್ಜೆ ಹಾಕಿದೆ.
- ಕೆ.ಎಲ್‌. ಸಾಗರ್‌

*
ನಕ್ಷತ್ರಗಳು ಕಂಡಿದ್ದು ಹೀಗೆ
ಅದು ನನ್ನ ಮೊದಲ ಅಮೆರಿಕಾ ಪ್ರವಾಸ. ಮಗನ ಮನೆಗೆ ಹೋಗಿ ಒಂದೆರಡು ದಿನವಾಗಿತ್ತಷ್ಟೆ, ತಿರುಗಾಟಕ್ಕೆ ಹೊರಗೆ ಹೋದಾಗ, ಹುಣ್ಣಿಮೆಯ ಚಂದ್ರ ಪ್ರಖರವಾಗಿ ಬೆಳಗ್ತಿದ್ದ. ನೋಡಲು ಬಹಳ ಸುಂದರ. ಆಕಾಶ ನೋಡುವಾಗ ಏನೋ ಕಳಕೊಂಡಂತೆ, ಏನೋ ಮಿಸ್ಸಿಂಗ್, ಎಲ್ಲಿ ಹೋದವು ನಮ್ಮ ಅಶ್ವಿನಿ, ಭರಣಿ, ರೋಹಿಣಿ, ಮೃಗಶಿರಾ, ಸಪ್ತರ್ಷಿಗಳು... ಛೆ ಖಾಲಿ ಆಕಾಶ ನೋಡ್ಬೇಕು ಇಲ್ಲಿ... ಚಂದ್ರ ಮಾತ್ರ ಸಖತ್ತಾಗಿ ಕಾಣ್ತಾನೆ, ಆದ್ರೆ ನಕ್ಷತ್ರಾನೇ ಇಲ್ಲ ಅಂತ ಮಗನಿಗೆ ರೇಗಿಸ್ತಿದ್ದೆ.

ಹೀಗೇ ಒಂದಿನ ಕ್ಯಾಲಿಫೋರ್ನಿಯಾದ ಫ್ರೀಮಾಂಟಿನಿಂದ ಸ್ಯಾನ್‌ಹ್ಯೂಸೆಗೆ ಹೋಗುವಾಗ ಕಾರಿನ ಕಿಟಕಿಯಿಂದ ಆಕಾಶ ನೋಡ್ತೀನಿ, ಫಳಕ್ಕನೆ ಮಿಂಚಿತು ಒಂದು ನಕ್ಷತ್ರ! ಎರಡು!! ಮೂರು !!!,  ‘ಅರುಣ ನೋಡು, ನಾನು ಬೇಜಾರು ಮಾಡ್ಕೊಂಡಿದ್ದೆ ಅಂತ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿಕೊಳ್ಳುತ್ತಿವೆ’.

ಮಗ ದನಿಗೂಡಿಸಿ ‘ಹೌದಮ್ಮಾ ಹೌದು. ನಾಲ್ಕು, ಐದು, ಆರು  ಈ ಕಡೆ ನೋಡು, ಆಕಡೆ ನೋಡು’ ಅಂತ ತೋರುಸ್ಲಿಕ್ಕೆ ಶುರುಮಾಡ್ದ. ನಂಗಂತೂ ಖುಷಿಯೋ ಖುಷಿ, ಮೊಗದ ತುಂಬಾ ನಗು, ಕಾರಿಂದಿಳಿದು ಇಡೀ ಆಕಾಶ ನೋಡ್ಬೇಕು ಅಂತ, ‘ನಿಲ್ಸು ನಿಲ್ಸು, ಕಾರ್ ನಿಲ್ಸು’ ಅಂತ ಬೊಬ್ಬೆ ಹೊಡಿಯಕ್ಕೆ ಶುರು ಮಾಡ್ದೆ. ಪಾಪ ಕಷ್ಟಪಟ್ಟು ಪಾರ್ಕಿಂಗ್ ಏರಿಯಾಗೆ ತಂದು ನಿಲ್ಲಿಸಿದ.

ಸರಿ, ಕಾರಿಂದ ಕೆಳಗಿಳಿದು ನೋಡುವಷ್ಟರಲ್ಲಿ ಅವು ಮಾಯ ! ‘ಏನ್ರೋ ನಕ್ಷತ್ರಗಳು ಕಾಣಿಸ್ತಾನೇ ಇಲ್ವಲ್ಲಾ ಮಾಯವಾಗಿ ಬಿಡ್ತಾ ಎಲ್ಲಿ ಹೋದ್ವು’ ಅಂತ ಕತ್ತೆತ್ತಿ ಆಕಡೆ ಈಕಡೆ, ಹುಡುಕ್ತಾ ಇದ್ರೆ  ಮಗ-ಸೊಸೆ ನಗ್ತಾ ಇದಾರೆ! ಯಾಕೆ ನಗ್ತಿದೀರ ಅಂದ್ರೆ ಇನ್ನೂ ನಗ್ತಾರೆ !! ಆದದ್ದಿಷ್ಟೆ. ನಾನು ನಕ್ಷತ್ರ ಅಂದುಕೊಂಡಿದ್ದೆನಲ್ಲಾ ಅವೆಲ್ಲಾ ವಿಮಾನಗಳಂತೆ! ಸ್ಯಾನ್ ಫ್ರಾನ್ಸಿಸ್ಕೊಗೆ ಬರ್ತಾ ಇದ್ದ ವಿಮಾನಗಳಂತೆ!  ಅಮ್ಮಾ ನಕ್ಷತ್ರ ನೋಡ್ದ್ಯಾ?? ನಕ್ಷತ್ರ ನೋಡ್ದ್ಯಾ?? ಅಂತ ಬೇಸ್ತುಬೀಳಿಸಿಬಿಟ್ಟ... ಮತ್ತೊಮ್ಮೆ ತಿರುಗಾಟದಲ್ಲಿ ಮಧ್ಯರಾತ್ರಿ ಗಾಢಾಂಧಕಾರ ನಿಶ್ಶಬ್ದ ತಣ್ಣನೆಯ ಗಾಳಿಯಲ್ಲಿ ಸುಖ ನಿದ್ರೆ... ಮಗ ಎಬ್ಬಿಸಿದ.

‘ಅಮ್ಮಾ ನಕ್ಷತ್ರ ತೋರುಸ್ತೀನಿ ಏಳು.. ಬಾ..’  ನಾನು ನಂಬಲೇ ಇಲ್ಲ. ಎಷ್ಟೋ ಸಲ ಹೇಳಿದ ಮೇಲೆ ಕಿರುಗಣ್ಣಿಂದ ನೋಡ್ತೀನೀ, ಫಳಫಳ ಅಂತ ಹೊಳೀತಿದೆ.  ಹಾಗೇ ನೋಡ್ತಿದ್ದೆ, ಚಲಿಸ್ತಾ ಇರ್ಲಿಲ್ಲ, ಇದ್ದಲ್ಲೇ ಇತ್ತು. ಸರಿ ನೋಡೋಣ ಅಂತ ಹೊರಗೆ ಬಂದು ನೋಡ್ತೀನೀ ಎತ್ತೆತ್ತ ನೋಡಿದರೂ ಮಲ್ಲಿಗೆ ಚೆಲ್ಲಿದಂತೆ ದೊಡ್ಡ-ಸಣ್ಣ-ಚಿಕ್ಕ-ಪುಟ್ಟ ನಕ್ಷತ್ರಗಳ ರಾಶಿರಾಶಿ.  ಸಪ್ತರ್ಷಿ ಮಂಡಲ, ವ್ಯಾಧ, ನಕ್ಷತ್ರಪುಂಜ. ಓಹ್ ನಮ್ ಹಳ್ಳೀಲಿ ಕಂಡಂತೆಯೇ ಇಲ್ಲೂ ಕಾಣಿಸ್ತಿದೆ. ಬಾಲ್ಯಕ್ಕೆ ಜಾರಿಬಿಟ್ಟೆ. ಮಗ-ಸೊಸೆ ತುಟಿಯಂಚಿನಲ್ಲೇ ನಗುತ್ತಿದ್ದರು...
- ಎಸ್. ಎನ್. ಶ್ರೀಲಕ್ಷ್ಮಿ

*
ಕೊಲೆಯ ಭಯದಲ್ಲಿ
ನಾವು ಬೆಂಗಳೂರಿನಲ್ಲೇ ವಾಸವಾಗಿದ್ದರೂ ನಾವಿರುವ ಕುಮಾರಸ್ವಾಮಿ ಬಡಾವಣೆ ಆಗ ಪಟ್ಟಣದ ನಡುವೆ ಇರುವ ಒಂದು ಹಳ್ಳಿ ಇದ್ದಂತಿತ್ತು. ನಮ್ಮ ಮನೆ ಎದುರುಗಡೆ ವಿಸ್ತಾರ ಬಯಲು. ಸ್ವಲ್ಪ ಮಳೆ ಬಿದ್ದರೂ ಸಾಕು ಪೊದೆ ಬೆಳೆದು ಕಾಡಿನಂತಾಗುತ್ತಿತ್ತು. ಬೇಸಿಗೆಯಲ್ಲಿ ಎಲ್ಲ ಒಣಗಿ, ಈ ವಿಸ್ತಾರ ಜಾಗ, ನಂತರ ಬರುವ ದೊಡ್ಡ ರಾಜಾ ಕಾಲುವೆಯ (ಮೋರಿ) ಒಂದು ಭಾಗ, ಅದರ ನಂತರ ಒಂದು ಸಾಲು ಖಾಲಿ ಸೈಟುಗಳು, ಅಲ್ಲಿಂದ ಮುಂದೆ ಮತ್ತೆ ಮುಂದಿನ ಅಡ್ಡರಸ್ತೆ-ಇದು ಬೇಸಿಗೆಯಲ್ಲಿ ನಮ್ಮ ಕಣ್ಣಿಗೆ ಅಲ್ಲಿಯವರೆಗೂ ಕಾಣುತ್ತಿದ್ದ ನೋಟ.

ಆ ಮೋರಿಯಲ್ಲಿ ಹಕ್ಕಿಪಕ್ಷಿಗಳ ಕಲರವ, ಹದ್ದುಗಳು ಅದರ ಬೇಟೆಗಾಗಿ ಸುತ್ತಾಡುತ್ತಿದ್ದರೆ, ಇದ್ದಬದ್ದ ಮರಗಳ ತುಂಬ ಹಕ್ಕಿಪಕ್ಷಿಗಳು, ಮರಗಿಡ. ಹಸು, ಎಮ್ಮೆ, ಕುರಿಗಳನ್ನು ಮೇಯಿಸಲು ಸುತ್ತ ಇದ್ದ ಹಳ್ಳಿಗರು. ಹೀಗೆ ಹಳ್ಳಿಯೂ ಅಲ್ಲದ ಪಟ್ಟಣವೂ ಅಲ್ಲದ ಜಾಗ.

ನಮ್ಮ ರಸ್ತೆಯಲ್ಲಿ ಎರಡೇ ಮನೆಗಳು-ನಮ್ಮದು ಹಾಗೂ ನಮ್ಮ ಪಕ್ಕದ ಮನೆ. ಇದು ಬಿಟ್ಟರೆ ಎದುರಿಗೆ, ಹಿಂದೆ, ಮುಂದೆ ಸುತ್ತ ಎಲ್ಲ ಬರೀ ಖಾಲಿ ಸೈಟುಗಳು. ಇದೆಲ್ಲವನ್ನೂ ನೋಡುತ್ತ ನಾವು ಆಗಾಗ್ಗೆ ‘ಈ ದೊಡ್ಡ ಮೋರಿಗೆ ರಾತ್ರಿ ಹೊತ್ತು ಯಾರಾದರೂ ಕೊಲೆ ಮಾಡಿ ಹೆಣ ಎಸೆದರೂ ಕೇಳುವವರಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದೆವು.

ಒಂದು ರಾತ್ರಿ ಮಗ ಆಫೀಸಿನಿಂದ ಬಂದಿಲ್ಲವೆಂದು ಕಾಯುತ್ತ, ಪತ್ರಿಕೆಗಳನ್ನು ಹಿಡಿದುಕೊಂಡು ಓದುತ್ತ, ಟಿ.ವಿ. ನೋಡುತ್ತ ಕಾದು ನಂತರ ಹೋಗಿ ಮಲಗೋಣ, ಮಗ ಬಂದಾಗ ಎದ್ದು ಗ್ಯಾರೇಜ್ ಬೀಗ ಹಾಕಿದರಾಯಿತು ಎಂದು ಟಿ.ವಿ. ಆಫ್‌ ಮಾಡಿ  ಮನೆಯ ಎಲ್ಲ ದೀಪಗಳನ್ನೂ ಆರಿಸಿದೆ.

ಆಗ ಇದ್ದಕ್ಕಿದ್ದಂತೆ ನಾಲ್ಕಾರು ಜನರು ಪಿಸುಗುಡುತ್ತಿರುವ ಶಬ್ದ, ಒಂದೆರಡು ಸೆಕೆಂಡಿಗೆ ಮತ್ತೆ ಕೆಲವರು ಮಣ್ಣು ಅಗೆಯುತ್ತಿರುವ ಶಬ್ದ. ಸುಮಾರು ಐದು ನಿಮಿಷ ಆಲಿಸಿದೆ. ಏಕೋ ಭಯವಾಯಿತು. ಎದುರಿಗಿನ ಬಯಲಿನಲ್ಲಿ ಏನಾಗುತ್ತಿರಬಹುದು ಎಂಬ ಊಹೆ. ಅರ್ಧಂಬರ್ಧ ಪೊದೆ ಕಣ್ಣಿಗೆ ಕಾಣುತ್ತಿಲ್ಲ. ಮಲಗಿದ್ದ ನಮ್ಮವರನ್ನು ಎಬ್ಬಿಸಿದೆ. ಅವರೂ ಆಲಿಸಿದರು. ಆದರೆ ಹೊರಗೆ ಹೋಗಿ ನೋಡಲು ಅವರು ಹೊರಟಾಗ ‘ಒಬ್ಬರೇ ಹೋಗಬೇಡಿ, ಆ ಜನಗಳ ಜೊತೆ ಕಷ್ಟ. ಸ್ವಲ್ಪ ಹೊತ್ತು ನೋಡೋಣ ಮಗ ಬರಬಹುದು ಎಂದೆ.

ಹತ್ತು ನಿಮಿಷ ಕಳೆಯುವುದರಲ್ಲಿ ಮಗ ಬಂದ. ಕಾರು ಗ್ಯಾರೇಜಿನಲ್ಲಿ ನಿಲ್ಲಿಸಲು ಹೆಡ್‌ಲೈಟ್ ಇತ್ತು. ಅದರ ಬೆಳಕಲ್ಲಿ ಏನಾದರೂ ಕಾಣುತ್ತ ಎಂದು ನೋಡಿದೆವು. ಏನೂ ಇಲ್ಲ. ಮಗನಿಗೆ ಗಾಬರಿ. ‘ಏಕೆ ಇಷ್ಟು ಹೊತ್ತಿನಲ್ಲಿ ಇಬ್ಬರೂ ಎದ್ದು ಕಾಂಪೌಂಡ್ ಒಳಗೆ ನಿಂತಿದ್ದೀರಿ ಅಂದ. ಅವನಿಗೂ ವಿಷಯ ತಿಳಿಸಿದೆವು. ಅವನೂ ಎರಡು ನಿಮಿಷ ಸದ್ದನ್ನು ಕೇಳಿಸಿಕೊಂಡ.

ಅವನು, ನಮ್ಮವರೂ ಜೋರಾಗಿ ‘ಯಾರದು? ಯಾರದು? ಎಂದು ಹತ್ತಾರು ಸಲ ಕೂಗಿದರು. ಸ್ವಲ್ಪ ಹೊತ್ತು ಸದ್ದು ನಿಲ್ಲುವುದು, ಮತ್ತೆ ಗುದ್ದಲಿಯಲ್ಲಿ ಮಣ್ಣನ್ನು ಅಗೆಯುವುದು ಹೀಗೆ ಸಾಗುತ್ತಲೇ ಇತ್ತೇ ವಿನಾ ನಮ್ಮ ಕೂಗಿಗೆ ಮಾರುತ್ತರವೂ ಇಲ್ಲ ಅಥವಾ ಹೆದರಿ ಓಡಿಹೋಗಲೂ ಇಲ್ಲ. ಪೂರ್ತಿ ಕತ್ತಲು. ಆಗಿನ್ನೂ ಬೀದಿ ದೀಪಗಳೂ ಇರಲಿಲ್ಲ. ಹಾಗಾಗಿ ಏನೂ ಕಾಣುತ್ತಿಲ್ಲ. ಮಗ ಹತ್ತಿರ ಹೋಗಿ ನೋಡ್ತೀನಿ ಅಂದ. ನಾವು ತಡೆದೆವು. ಏನು ಮಾಡಲೂ ತೋಚದೆ ಕೊನೆಗೆ ಒಂದು ತೀರ್ಮಾನಕ್ಕೆ ಬಂದು ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡಿ ವಿಷಯ ತಿಳಿಸಿದೆವು.

ಅವರು ‘ಸಾರ್ ಎಲ್ಲ ಸಿಬ್ಬಂದಿಯನ್ನು ಹೊರಗೆ ಕಳಿಸಲಾಗಿದೆ. ಎಲ್ಲೆಲ್ಲೂ ಕಳ್ಳತನ, ಗಲಾಟೆಗಳೇ, ನಮಗೆ ಸಾಕಾಗಿದೆ. ಆದರೂ ಯಾರಾದರೊಬ್ಬರು ಬಂದ ತಕ್ಷಣ ಕಳಿಸುತ್ತೇವೆ. ಸಾಧ್ಯವಾದರೆ ಇನ್ನೊಂದು ಸ್ವಲ್ಪ ಹೊತ್ತು ಗಮನಿಸಿ ಅಂದು ನಮ್ಮ ಮನೆ ವಿಳಾಸ, ಫೋನ್ ನಂಬರ್ ಎಲ್ಲ ತೆಗೆದುಕೊಂಡರು. ನಾವೂ ಇನ್ನೇನು ಪೊಲೀಸ್ ಬರುತ್ತಾರೆ.

ಅಷ್ಟರಲ್ಲಿ ಇವರುಗಳು ಅವರ ಕೆಲಸ ಮುಗಿಸಿ ಹೋದರೆ ಎಲ್ಲೀಂತ ಹುಡುಕುತ್ತಾರೆ? ಕೊಲೆಯೇ ಮಾಡಿದ್ದಾರೋ ಅಥವಾ ದೊಡ್ಡ ಮೋರಿ ಅಂತ ಕೊಲೆ ಮಾಡಿ ಯಾರನ್ನಾದರೂ ಎಸೆದಿರಬಹುದೇ? ಅಥವಾ ಅಷ್ಟು ಮಣ್ಣು ತೆಗೆಯುತ್ತಿದ್ದಾರೆ, ಅಲ್ಲಿ ಏನನ್ನಾದರೂ ಹೂತಿರಬಹುದೇ ಹೀಗೆ ಬರೀ ಊಹೆಗಳನ್ನು ಮಾಡುತ್ತ ಭಯಪಡುತ್ತಿದ್ದೆವು.
ಅಷ್ಟರಲ್ಲಿ ಯಾವುದೋ ವಾಹನದ ಸದ್ದು, ಆ ಬೆಳಕಲ್ಲಿ ಏನಾದರೂ ಕಾಣುತ್ತಾ ಅಂತ ನಾವು ಮೂವರೂ ಅತ್ತಲೇ ಕಣ್ಣು ಹಾಯಿಸಿದೆವು. ಆಗ ಗೊತ್ತಾಯಿತು ನಿಜಸಂಗತಿ. ಜೊತೆಗೆ ಪೊಲೀಸರು ಬಂದರೆ ಏನು ಹೇಳುವುದು ಎಂದು ತಲೆ ಮೇಲೆ ಕೈ ಹೊತ್ತು ಕುಳಿತೆವು.

ಅಲ್ಲಿ ಅಗಿದ್ದು ಇಷ್ಟೇ. ಎದುರುಗಡೆ ರಸ್ತೆಯಲ್ಲಿ ಯಾರೋ ಮನೆಕಟ್ಟಲು ಪ್ರಾರಂಭಿಸಿದ್ದಾರೆ. ಅಲ್ಲಿಯೂ ರಸ್ತೆ ದೀಪಗಳಿಲ್ಲ, ಓನರ್ ಬಂದಿಲ್ಲ. ಮನೆಕಟ್ಟಲು ಬೇಕಾದ ಮರಳನ್ನು ದೊಡ್ಡ ಲಾರಿಯಲ್ಲಿ ತಂದು, ಲಾರಿಯಿಂದ ಮರಳನ್ನು ಗುದ್ದಲಿಯಿಂದ ಕೆಳಗೆ ಎತ್ತಿ ಎತ್ತಿ ಸುರಿಯುತ್ತಿದ್ದಾರೆ. ಅದು ನಮಗೆ ಗುದ್ದಲಿಯಿಂದ ಮಣ್ಣು ಅಗೆಯುವಂತೆ ಕೇಳಿಸುತ್ತಿದೆ.

ಪೂರ್ತಿ ಕತ್ತಲಾದ್ದರಿಂದ ನಮಗೆ ಕಾಣುತ್ತಿಲ್ಲ. ಜೊತೆಗೆ ದೂರ ಇದ್ದುದರಿಂದ ಅವರು ಮಾತನಾಡುವುದು ಪಿಸುಗುಟ್ಟಿದಂತೆ ಕೇಳಿಸುತ್ತಿದೆ. ನಾವು ಕೂಗುತ್ತಿರುವುದು ಅವರಿಗೆ ಕೇಳಿಸಿಲ್ಲ. ನಂತರ ಪೊಲೀಸರೂ ಬಂದರು, ಅವರ ಕ್ಷಮೆಯಾಚಿಸಿ ವಿಚಾರ ತಿಳಿಸಿದೆವು. ಅವರು ‘ಪರವಾಗಿಲ್ಲ ಬಿಡಿ, ಎಷ್ಟೋ ಜನ ನಿಜವಾಗಿ, ಕೊಲೆ, ಸುಲಿಗೆ ಆಗಿದ್ದನ್ನು ಕಂಡರೂ ನಾವು ಸಿಕ್ಕಿಹಾಕಿಕೊಂಡರೇ ಅನ್ನೋ ತಳಮಳದಲ್ಲಿ ನಮಗೆ ತಿಳಿಸುವುದೇ ಇಲ್ಲ, ನೀವು ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಬೇಕು ಅಂದುಕೊಂಡಿರಲ್ಲ’ ಎಂದು ಹೇಳಿ ನಗುತ್ತಾ ಹೊರಟರು.
- ಎ.ಆರ್. ಅನ್ನಪೂರ್ಣ

*
ಹೆಣದ ಹಣ
ಅದೊಂದು ಬೆಳಗಿನ ಸಮಯ ಟ್ಯೂಷನ್‌ ಮುಗಿಸಿಕೊಂಡು ನಟರಾಜ ಸರ್ವಿಸ್‌ (ಕಾಲ್ನಡಿಗೆ)ನಲ್ಲಿ ಕಾಲೇಜ್‌ ಕಡೆ ಹೋಗುತ್ತಿದ್ದೆವು. ಬೆಳ್ಳಿಗ್ಗೆ ಬೆಳ್ಳಿಗೆ ಹಾಲು ಮಾರುವವನು, ಕೊಳ್ಳುವವರು, ಪೇಪರ್‌ ಹಾಕುವವರು, ಹುಡುಗರು, ಚೆಂದ ಹುಡುಗಿಯರು. ಹೀಗೆ ರಸ್ತೆಯಲ್ಲಿ ಗಿಜುಗುಡುತ್ತಿತ್ತು. ದಾರಿ ಮಧ್ಯೆಯಲ್ಲಿ, ನಾನು ನನ್ನ ಸ್ನೇಹಿತರು ನಡೆದುಕೊಂಡು ಹೋಗುತ್ತಿರುವಾಗ ನನಗೆ 50 ಪೈಸೆ ನಾಣ್ಯ ಸಿಕ್ಕಿತು.

ಖುಷಿ ಪಟ್ಟೆ. ಹಾಗೇ ತೆಗೆದುಕೊಂಡೆ. ಹಾಗೇ ನಡೆದುಕೊಂಡು ಹೋಗುತ್ತಿರುವಾಗ ಮತ್ತೆ 1 ರೂ., 2 ರೂ. ನಾಣ್ಯಗಳು ಸಿಕ್ಕಿದವು. ಅದನ್ನು ತೆಗೆದುಕೊಂಡೆ. ಹೀಗೆ ಅಲ್ಲಲ್ಲಿ ನನಗೆ ದುಡ್ಡು ಸಿಗುತ್ತಾ ಹೋಯಿತು. ಸುಮಾರು 12 ರೂಪಾಯಿ ದಕ್ಕಿತ್ತು.  ಸ್ನೇಹಿತರೆಲ್ಲಾ ‘ಅದೃಷ್ಟವಂತ ಕಣೋ ನೀನು’ ಎಂದು ಹೊಗಳುತ್ತಿದ್ದರು.

ಇನ್ನೇನು ರಸ್ತೆ ಕೊನೆ ಸಿಕ್ಕಿತು. ಅಲ್ಲಿ ಸ್ಮಶಾನ ನಮ್ಮ ಎದುರಿಗೇ ಕಾಣಿಸಿತು. ಅಲ್ಲಿ ಒಂದು ಕಡೆ ಆಗ ತಾನೇ ಒಂದು ಶವ ಸಂಸ್ಕಾರ ಮಾಡುತ್ತಿದ್ದರು. ಅವನ ಮೇಲೆ ಬಂಧುಗಳು ಕಡಲೆಪುರಿ ಮತ್ತು ನಾಣ್ಯಗಳನ್ನು ಎಸೆಯುತ್ತಿದ್ದರು. ಆ ಹೆಣ ನಾವು ಬಂದ ಹಾದಿಯಲ್ಲೇ ಸಾಗಿಬಂದಿತ್ತು. ತಕ್ಷಣ ಹುಡುಗರೆಲ್ಲಾ ನನ್ನ ನೋಡಿ ಗೊಳ್‌ ಎಂದು ನಕ್ಕರು. ನನಗೆ ಅರ್ಥವಾಗಿ 12 ರೂಪಾಯಿಗಳನ್ನು ಅಲ್ಲೇ ಬಿಸಾಡಿದೆ.

ನನ್ನ ದಡ್ಡತನದಿಂದ ಎಲ್ಲರ ಎದುರಿಗೆ ಮೂರ್ಖನಾದೆ, ಆ ಸಂದರ್ಭದಲ್ಲಿ ಅವಮಾನ ಆದಂತೆ ಆಗಿತ್ತು. ಅಲ್ಲಿಂದ ಒಂದು ಕ್ಷಣ ನಿಲ್ಲದೆ ಓಡಿಹೋಗಿದ್ದೇನು. ಅಂದಿನಿಂದ ನನ್ನ ಹೆಸರು ‘ಹನ್ನೆರಡು ರೂಪಾಯಿ’ ಎಂದೇ ಉಳಿಯಿತು.
- ತಿಮ್ಮಯ್ಯ. ಕೆ.

*
ಗುರುವಿಗೆ ಗರ ಬಡಿದದ್ದು
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಾನು ಮತ್ತು ನನ್ನಿಬ್ಬರು ಸಹಶಿಕ್ಷಕರು ಸುಮಾರು ನೂರೈವತ್ತು ಹೈಸ್ಕೂಲು ವಿದ್ಯಾರ್ಥಿಗಳ ಜೊತೆಗೆ ಚೆನ್ನೈ, ಪಾಂಡಿಚೆರಿ ಇತ್ಯಾದಿ ಸ್ಥಳಗಳಿಗೆ ಐದು ದಿನಗಳ ಶಾಲಾಪ್ರವಾಸಕ್ಕೆ ಹೋಗಿದ್ದೆವು. ಮೂರನೇ ದಿನ ಪಾಂಡಿಚೆರಿಯಲ್ಲಿ ಪ್ರವಾಸ ಮುಗಿಸಿ ರಾತ್ರಿಯಾಗುತ್ತಿದ್ದಂತೆಯೇ ಹೋಟೆಲ್ಲಿಗೆ ಬಂದೆವು.

ಮಕ್ಕಳಿಗೆ ಅವರ ಕೊಠಡಿಗಳ ಕೀಲಿ ಕೊಟ್ಟೆವು.  ಮಕ್ಕಳನ್ನು ಕರೆದು, ಇಲ್ಲಿ ನಾನಾ ಬಗೆಯ ಜನರು ತಂಗಿರುತ್ತಾರೆ. ಆದ್ದರಿಂದ ನಮ್ಮ ಅನುಮತಿಯಿಲ್ಲದೆ ಕೋಣೆ ಬಿಟ್ಟು ಹೊರಬರಬೇಡಿ. ಮೈಮುಚ್ಚುವ ಬಟ್ಟೆ ಧರಿಸಿ... ಇತ್ಯಾದಿ ಸುರಕ್ಷತಾ ನಿಯಮಗಳನ್ನು ವಿವರಿಸಿದೆವು.

ಸರಿ. ರಾತ್ರಿ ಹನ್ನೆರಡರ ಸುಮಾರಿಗೆ ಒಮ್ಮೆ ಮಕ್ಕಳನ್ನೆಲ್ಲ ನೋಡಿಕೊಂಡು ಬರೋಣ ಎಂದುಕೊಂಡು ಹುಡುಗಿಯರ ಕೊಠಡಿಗಳಿದ್ದ ಎರಡನೇ ಮಹಡಿಗೆ ಬಂದೆ. ನೋಡಿದರೆ ಅಲ್ಲೊಂದು ಮಕ್ಕಳ ಗುಂಪು. ನಾಲ್ಕು ಹುಡುಗಿಯರು ಮೂರು ಹುಡುಗರು!. ನಗು- ಮಾತಿನಲ್ಲಿ ಮೈಮರೆತಿದ್ದಾರೆ.

ಛೆ.. ನನ್ನ ಮಾತಿಗೆ ಬೆಲೆಯೇ ಇಲ್ಲವಲ್ಲ, ಶಾಲೆಗೆ ಅಪಕೀರ್ತಿ ತರುತ್ತಾರಲ್ಲ ಹೀಗೆಲ್ಲಾ ವಿಚಾರಗಳು ಮನಸ್ಸಿನಲ್ಲಿ ಬಂದವು. ಇಡೀ ದಿನ ಅಲೆದು ಸುಸ್ತಾಗಿದ್ದಕ್ಕೋ,ಅರೆ ನಿದ್ದೆಯಲ್ಲಿ ಎದ್ದು ಬಂದಿದ್ದಕ್ಕೋ ಏನೋ ಸಿಟ್ಟು ನೆತ್ತಿಗೇರಿತು. ಸರಸರನೇ ಅವರ ಬಳಿ ಹೋಗಿ ಬೈಗುಳ ಆರಂಭಿಸಿದೆ. ‘ಸಾರ್ವಜನಿಕ ಸ್ಥಳಗಳಲ್ಲಿ ಬಟ್ಟೆ ಹೇಗಿರಬೇಕೆಂಬ ಪ್ರಜ್ಞೆ ಬೇಡವೇ? ಇಂಥ ರಾತ್ರಿಯಲ್ಲಿ ಯಾಕೆ ಹೊರಗಡೆ ಬಂದಿರಿ? ಶಾಲೆಯ, ಹುಡುಗರು ತಮ್ಮ ಮೂರನೇ ಮಹಡಿಯಿಂದ ಇಲ್ಲಿಗೆ ಬಂದದ್ದೇಕೆ?’ ಇತ್ಯಾದಿ...ಇತ್ಯಾದಿ.

ಆದರೆ ನಾನಷ್ಟು ಬಯ್ಯುತ್ತಿದ್ದರೂ ಅವರಿಂದ ಪ್ರತಿಕ್ರಿಯೆಯೇ ಇಲ್ಲ. ನನ್ನ ಮುಖವನ್ನೇ ದಿಟ್ಟಿಸುತ್ತಿದ್ದಾರೆ. ನನಗಂತೂ ಇನ್ನೂ ಸಿಟ್ಟು ಬಂದು ಒಂದು ಕ್ಷಣ ಮಾತು ನಿಲ್ಲಿಸಿದೆ. ಅವರಲ್ಲೊಬ್ಬ ಹುಡುಗಿ ತಣ್ಣಗಿನ ಧ್ವನಿಯಲ್ಲಿ ‘ಮ್ಯಾಮ್... ನಾವು ನಿಮ್ಮ ಶಾಲೆಯ ವಿದ್ಯಾರ್ಥಿಗಳಲ್ಲ...’ ಎಂದಳು! ನನಗೆ ಗರಬಡಿದಂತಾಯಿತು. ನಾನು ಕೊಂಚ ಸುಧಾರಿಸಿಕೊಳ್ಳುವಷ್ಟರಲ್ಲಿ ಗುಂಪು ಕಣ್ಮರೆಯಾಯಿತು.

ನನ್ನ ಈ ರೀತಿಯ ಅತಿ ಜಾಗ್ರತೆಯಿಂದ ನಾನು ಮೂರ್ಖಳಾಗಿದ್ದಂತೂ ನಿಜ. ಮಾರನೇ ದಿನ ಯಾವ ತೊಂದರೆಯಾಗದೇ ಪಾಂಡಿಚೆರಿ ಬಿಟ್ಟಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.
- ವೇದಾ ಅಠವಳೆ

*
ಹೀಗೂ ಮೂರ್ಖರಾಗಬಹುದು
ಅದೊಂದು ಮಳೆಗಾಲದ ಸಮಯ. ನಾನು ಸೈಕಲ್‌ ಮೇಲೆ ಕಾಲೇಜಿಗೆ ಬರುತ್ತಿದ್ದೆ. ಕಾಲೇಜು ಮುಗಿಸಿಕೊಂಡು ಬರುತ್ತಿರುವ ಸಂದರ್ಭದಲ್ಲಿ ಸೈಕಲ್‌ ಹಿಂದೆ ನನ್ನ ಛತ್ರಿ ಇಟ್ಟುಕೊಂಡು ಬರುತ್ತಿದ್ದೆ.

ಪ್ರತಿಸಲವು ನನ್ನ ಛತ್ರಿ ಬಿದ್ದೀತೆಂದು ಹಿಂದೆ ಕೈ ಮಾಡಿ ಛತ್ರಿಯನ್ನು ಮುಟ್ಟಿ ಪರೀಕ್ಷಿಸಿ, ಇದೆ ಎಂದು ಖಾತ್ರಿ ಮಾಡಿಕೊಳ್ಳುತ್ತಿದ್ದೆ. ಹೀಗೆ ಹೋಗುತ್ತಿರುವಾಗ ಮಳೆ ಜೋರಾಗಿ ಬರೋಕೆ ಪ್ರಾರಂಭಿಸಿತು. ಹಿಂದೆ ಇದ್ದ ಛತ್ರಿನ ತೊಗೊಂಡು ಒಂದು ಕೈಯಲ್ಲಿ ಛತ್ರಿ, ಒಂದು ಕೈಯಲ್ಲಿ ಸೈಕಲ್‌ ಹೊಡೆಯುತ್ತ ಸಾಗಿದೆ.

ಹಾಗೆ ಹೋಗುತ್ತಿರುವಾಗ ಮತ್ತೆ ಹಿಂದೆ ಕೈ ಚಾಚಿ ಛತ್ರಿನ ಪರೀಕ್ಷಿಸಿದೆ. ಛತ್ರಿ ಇರಲಿಲ್ಲ. ಗಾಬರಿಯಾಗಿ ಸೈಕಲ್‌ ಇಳಿದು ಹಿಂದೆ ಎಲ್ಲೋ ಬಿದ್ದಿರಬಹುದೆಂದು ಮಳೆಯಲ್ಲಿ ಹುಡುಕುತ್ತಾ ಸಾಗಿದೆ.

ರಸ್ತೆಯಲ್ಲಿ ಬಿದ್ದ ಗುಂಡಿಗಳಲ್ಲಿ ಹುಡುಕಾಡಿದೆ. ಇವತ್ತು ಮನೇಲಿ ಬೈಯ್ಸಿಕೊಳ್ಳುವ ಪ್ರೋಗ್ರಾಂ ಇದೆ ಎಂದು ಹಾಗೇ ಸೈಕಲ್‌ ಹತ್ತಿ ಸಾಗಿದೆ. ಮಳೆ ಕಡಿಮೆಯಾಯಿತೆಂದು ಛತ್ರಿ ಮಡಚಿ ಮತ್ತೆ ಹಿಂದೆ ಇಟ್ಟು ಮತ್ತೊಮ್ಮೆ ಪರೀಕ್ಷಿಸಿದೆ.

ಛತ್ರಿ ಅಲ್ಲೇ ಇತ್ತು. ಏಕೆಂದರೆ ಮಳೆ ಬರೋವಾಗ ಛತ್ರಿ ನನ್ನ ಕೈಯಲ್ಲೆ ಇತ್ತು. ಕೈಯಲ್ಲಿ ಹಿಡಿದುಕೊಂಡೇ ಛತ್ರಿನ ಹುಡುಕಾಡಿದ್ದೆ. ಮಳೆ ಹೋದ ಮೇಲೆ ಮತ್ತೆ ಹಿಂದೆ ಇಟ್ಟಿದ್ದು ಮರೆತಿದ್ದೆ. ಅವತ್ತು ನನ್ನಷ್ಟಕ್ಕೆ ನಾನೇ ಮೂರ್ಖನಾದೆ.
- ಸಿದ್ಧಾರೂಢ. ಸಿ.ಎಂ.

*
ಮೂರ್ಖತನ ತಂದಿತು ಮರೆಯಲಾರದ ನಗು...
ಅಂದು ಸಂಜೆ ಸುಮಾರು ಆರು ಗಂಟೆ ಇರಬಹುದು. ಒಂದು ಸರ್ಕಲ್‌ ಬಳಿ ನಾನು ಪೊಲೀಸ್‌ ಡ್ರೆಸ್‌ನಲ್ಲಿ ನನ್ನ ಅಪರೂಪದ ಗೆಳೆಯನ ಜೊತೆ ಮಾತನಾಡುತ್ತ ನಿಂತಿದ್ದೆ. ಸುಮಾರು ಐವತ್ತು ವರ್ಷದ ಒಬ್ಬ ಭಿಕ್ಷುಕ ಬಂದ. ‘ಸ್ವಾಮಿ ಪೊಲೀಸ್‌ನವರೇ ತುಂಬಾ ಹೊಟ್ಟೆ ಹಸಿಯುತ್ತಿದೆ ಏನಾದರೂ ಧರ್ಮ ಮಾಡಿ’ ಎಂದ.

ನಾನು ಅವನಿಗೆ ಐದು, ಹತ್ತೂ ರೂಪಾಯಿ ಕೊಟ್ಟಿದ್ದರೆ ಚೆನ್ನಾಗಿತ್ತು. ನಾನು ನನ್ನ ಗೆಳೆಯ ನಿಂತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಒಂದು ಪರಿಚಯದ ಕಾಂಡಿಮೆಂಟ್‌ ಸ್ಟೋರ್‌ ಮತ್ತು ಬೇಕರಿ ಇತ್ತು.

ನಾನು ಭಿಕ್ಷುಕನಿಗೆ ‘ನೀನು ಹೋಗಿ ಆ ಬೇಕರಿಯಲ್ಲಿ ತಿನ್ನಲು ಏನು ಬೇಕೋ ಅದನ್ನು ತೆಗೆದುಕೊ. ಆದರೆ ನಾನು ಯಾರಿಗೂ ಕಾಸು ಕೊಡುವುದಿಲ್ಲ’ ಎಂದು ಮೆಲ್ಲನೆ ಗದರುವ ಧ್ವನಿಯಲ್ಲಿ ಹೇಳಿ ನಂತರ ನಾನು ನಿಂತ ಜಾಗದಿಂದಲೇ ಬೇಕರಿಯವನಿಗೆ ಜೋರಾಗಿ ಚಪ್ಪಾಳೆ ತಟ್ಟಿ ಈತನಿಗೆ ಏನು ಬೇಕೋ ಕೊಡು ನಿನಗೆ ಆಮೇಲೆ ಹಣ ಕೊಡುತ್ತೇನೆ ಎಂದು ಜೋರಾಗಿ ಕೂಗಿ ಹೇಳಿದೆ.

ಭಿಕ್ಷುಕ ಪಾಪ ನನ್ನ ಪೊಲೀಸ್‌ ಠೀವಿಯನ್ನು ನೋಡಿ ಸ್ವಲ್ಪ ಹೆದರಿದಂತೆ ಕಂಡ ಮತ್ತು ನಾನು ತಿಳಿಸಿದ ಬೇಕರಿಯ ಕಡೆ ಹೊರಟುಹೋದ. ನಂತರ ಸುಮಾರು ಹದಿನೈದು ಇಪ್ಪತ್ತು ನಿಮಿಷದ ನಂತರ ನನ್ನ ಸ್ನೇಹಿತನ ಜೊತೆಯ ಮಾತುಕತೆ ಮುಗಿಸಿ ಬೇಕರಿಯವನಿಗೆ ಭಿಕ್ಷುಕನಿಗೆ ನೀಡಿದ ತಿಂಡಿಯ ದುಡ್ಡು ಕೊಡಲು ಹೋಗಿ 20 ರೂಪಾಯಿ ನೋಟನ್ನು ನೀಡಿದೆ.

ಬೇಕರಿಯವನು ನನ್ನ ಮುಖವನ್ನು ನೋಡುತ್ತಾ ‘ಸಾರ್‌ ಒಟ್ಟು 673 ರೂಪಾಯಿ ಆಗಿದೆ ಸಾರ್‌’ ಅಂದ. ‘ಯಾಕಪ್ಪ, ಏನು ತಿಂದ ಅವನು’ ಅಂದೆ. ಅದಕ್ಕೆ ಬೇಕರಿಯವನು ‘ಸಾರ್‌ ಅವರು ಇಲ್ಲಿ ಏನೂ ತಿನ್ನಲಿಲ್ಲ ಎಲ್ಲವನ್ನು ಪಾರ್ಸಲ್‌ ಮಾಡಿಸಿಕೊಂಡ’ ಎಂದ.

‘ಏನನ್ನು’ ಅಂದೆ. ಅದಕ್ಕೆ ಬೇಕರಿಯವನು ‘ಸಾರ್‌, ಎರಡು ಪ್ಯಾಕ್‌ ಎ.ಬಿಸಿ. ಸಿಗರೇಟ್‌, ಎರಡು ದೊಡ್ಡ ಬಾಟಲ್‌ ಮಿರಿಂಡಾ, ಒಂದೂವರೆ ಕೆ.ಜಿ. ಬರ್ತ್‌ಡೇ ಕೇಕ್‌, ಚಿಪ್‌ ಆರು ಪ್ಯಾಕೆಟ್‌, ಡೈರಿ ಮಿಲ್ಕ್‌ ಚಾಕಲೇಟ್‌ ದೊಡ್ಡದು ಮೂರು ಇತರೆ ಎಲ್ಲಾ ಸೇರಿ 673 ರೂ. ಆಯಿತು ಸಾರ್‌. ಏನು ಸಾರ್‌ ಇವತ್ತು ನಿಮ್ಮ ಮನೆಯಲ್ಲಿ ಯಾರದಾದರೂ ಬರ್ತ್‌ಡೇನಾ’ ಎಂದ ಬೇಕರಿಯವನು.

ನಾನು ಅದಕ್ಕೆ ‘ಇಲ್ಲಪ್ಪಾ ಇಂದು ನನ್ನ ತಿಥಿ. ಇದನ್ನೆಲ್ಲ ತೆಗೆದುಕೊಂಡು ಹೋದನಲ್ಲ ಅವನದು ಬರ್ತ್‌ಡೇ’ ಎಂದೆ. ಅಂದಿನಿಂದ ಭಿಕ್ಷುಕರು ಯಾರಾದರೂ ಭಿಕ್ಷೆ ಕೇಳಿದರೆ ತಕ್ಷಣ ಒಂದೋ, ಎರಡೋ ರೂಪಾಯಿ ಕೊಟ್ಟುಬಿಡುತ್ತೇನೆ. ಚಪ್ಪಾಳೆ ಮಾತ್ರ ಹೊಡೆಯುವುದಿಲ್ಲ.
- ಕೃಷ್ಣಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT