ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

Last Updated 2 ಅಕ್ಟೋಬರ್ 2014, 7:17 IST
ಅಕ್ಷರ ಗಾತ್ರ

ಕೊಳ್ಳೇಗಾಲ:  ಮೂಲಸೌಲಭ್ಯಗಳಿಗೆ ಆಗ್ರಹಿಸಿ ಪಟ್ಟಣದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಪೋಷಕರು ಬುಧವಾರ ಸಮುದಾಯ ದತ್ತ ಶಾಲೆ ಕಾರ್ಯಕ್ರಮ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಎಂ.ಜಿ.ಎಸ್‌.ವಿ ಸರ್ಕಾರಿ ಪದವಿಪೂರ್ವ ಕಾಲೇಜು ಹಿಂಬಾಗದಲ್ಲಿ ಕಳೆದ 4 ವರ್ಷಗಳ ಹಿಂದೆ ಪ್ರಾರಂಭಗೊಂಡ ಆಂಗ್ಲ ಮಾಧ್ಯಮದ ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳಿಗೆ ಶಾಲಾ ಕೊಠಡಿ, ಶೌಚಾಲಯ ಸೇರಿದಂತೆ ಇತರೆ ಕನಿಷ್ಠ ಮೂಲಸೌಕರ್ಯ ಕಲ್ಪಿಸಿಲ್ಲ.

ಬುಧವಾರ ಆದರ್ಶ ವಿದ್ಯಾಲಯದಲ್ಲಿ ಸಮುದಾಯ ದತ್ತ ಶಾಲೆ ಕಾರ್ಯಕ್ರಮ ನಡೆಸಲು ಶಾಲೆ ಆವರಣವನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು. ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಹೊರಹೊಮ್ಮಿಸಲು ವಿದ್ಯಾರ್ಥಿಗಳು ವಿವಿಧ ವೇಷ ಧರಿಸಿ , ಬಣ್ಣಬಣ್ಣದ ಉಡುಗೆ ತೊಟ್ಟು ಶಾಲೆಗೆ ತಮ್ಮ ಪೋಷಕರ ಜೊತೆ ಬಂದಿದ್ದರು.

ಸಮುದಾಯ ದತ್ತ ಶಾಲೆ ಕಾರ್ಯಕ್ರಮ ಚಾಲನೆಗೊಳ್ಳುವ ಮುನ್ನವೇ ಪೋಷಕರು 4 ವರ್ಷ ಕಳೆದರೂ ಶೌಚಾಲಯ ಸೇರಿದಂತೆ ಇತರೆ ಮೂಲ ಸೌಲಭ್ಯ ಮಕ್ಕಳಿಗೆ ದೊರೆಯದಿರುವುದನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದರು.

ಮುಖ್ಯಶಿಕ್ಷಕರು ಪೋಷಕರ ಪ್ರಶ್ನೆಗಳಿಗೆ ಉತ್ತರಿಸಲು ಅಸಮರ್ಥರಾಗುತ್ತಿದ್ದಂತೆಯೇ ಶಾಲೆಯಿಂದ ಹೊರಗೆ ಬಂದ ಪೋಷಕರು ಹಾಗೂ ವಿದ್ಯಾರ್ಥಿಗಳು ಬಿಸಿಲಿನಲ್ಲೇ ಕುಳಿತು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಾಸಕರು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಶಾಲೆಯ ಕೊಠಡಿಗಳಿಗೆ ಬೀಗ ಹಾಕುವ ಮೂಲಕ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಂತೆಯೇ ಪಟ್ಟಣ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಸಂತೋಷ್‌ ಸಿಬ್ಬಂದಿಯೊಡನೆ ಸ್ಥಳಕ್ಕೆ ಬಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬಂದ ಸಮಸ್ಯೆಗಳನ್ನು ಆಲಿಸಿ ಈಗಾಗಲೇ ಮೂಲ ಸೌಲಭ್ಯ ಸೇರಿದಂತೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಹಿರಿಯ ಅಧಿಕಾರಿಗಳ ಹಾಗೂ ಶಾಸಕರ ಗಮನ ಸೆಳೆಯಲಾಗಿದೆ ಎಂದು ಹೇಳಿದರು.

ಪಟ್ಟಣದಿಂದ ಹೊರಗೆ ಆದರ್ಶ ಶಾಲೆ ಕಟ್ಟಡ ನಿರ್ಮಿಸುವುದನ್ನು ಕೈಬಿಡಬೇಕು ಪಟ್ಟಣ ವ್ಯಾಪ್ತಿಯಲ್ಲೇ ಆದರ್ಶ ಶಾಲೆ ಕಟ್ಟಡ ನಿರ್ಮಿಸಬೇಕು. ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ದೊರೆಯಲು ಉತ್ತಮ ಶಿಕ್ಷಕರನ್ನು ಹಾಗೂ ಮುಖ್ಯಶಿಕ್ಷಕರನ್ನು ಇಲ್ಲಿಗೆ ನೀಡಬೇಕು, ತಕ್ಷಣ ಶೌಚಾಲಯ ಸೇರಿದಂತೆ ಇತರೆ ಮೂಲಸೌಕರ್ಯವನ್ನು ಮಕ್ಕಳಿಗೆ ದೊರಕಿಸಬೇಕು ಎಂದು ಪೋಷಕರು ಆಗ್ರಹಿಸಿದರು.

ಜಿಲ್ಲಾ ಡಿಡಿಪಿಐ ಕಚೇರಿಯಿಂದ ಆಗಮಿಸಿದ ಮಂಜುನಾಥ್‌ ಎಂ.ಜಿ.ಎಸ್‌.ವಿ ಪದವಿಪೂರ್ವ ಕಾಲೇಜು ಹಿಂಭಾಗದಲ್ಲೇ ಅ.15ರೊಳಗೆ ಶಾಸಕರು ಮತ್ತು ಸಂಸದರ ದಿನಾಂಕ ನಿಗದಿಪಡಿಸಿಕೊಂಡು ಆದರ್ಶ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುವ ಭರವಸೆ ನೀಡಿದರು.

15ರೊಳಗೆ ಭೂಮಿಪೂಜೆ ನಡೆಯದಿದ್ದರೆ ಪೋಷಕರು ಮತ್ತು ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ಬೆಂಬಲದೊಡನೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಪೋಷಕರು ತಿಳಿಸಿ ಪ್ರತಿಭಟನೆಯನ್ನು ಕೈಬಿಟ್ಟರು.

ಪೋಷಕರುಗಳಾದ ಶಿವರಾಜು, ಎನ್‌. ರಾಜೇಶ್‌, ನಾಗರಾಜು, ಮಹಾದೇವ, ಮಷಣನಾಯಕ, ಮಾಲಂಗಿ ಬಸವರಾಜು, ಬಸವಣ್ಣ, ಇಂದ್ರೇಶ್‌ಮುಳ್ಳೂರು ಮುಖಂಡ ಚಿನ್ನಸ್ವಾಮಿ ಮಾಳಿಗೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT