ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಳೆ ಮುರಿದವರಿಗಿಲ್ಲಿ ಪುನಶ್ಚೇತನ

Last Updated 3 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನಮ್ಮ ದೇಹದ ಎಲ್ಲಾ ನರಗಳು ಬೆನ್ನುಮೂಳೆಗೆ  ಹೊಂದಿಕೊಂಡಿದ್ದು,  ಪ್ರತಿಯೊಂದು ಚಟುವಟಿಕೆಗೂ ಬೆನ್ನುಮೂಳೆಯೇ ಅತ್ಯವಶ್ಯಕ. ಇದೇನಾದರೂ ಮುರಿದುಬಿಟ್ಟರೆ ದೇಹದ ಚಲನ ವಲನದಲ್ಲಿ ಹಿಡಿತದಲ್ಲಿ ಇರುವುದಿಲ್ಲ. ಇದರಿಂದ ಕಾಲುಗಳು ಸಂಪೂರ್ಣ ಶಕ್ತಿ ಕಳೆದುಕೊಂಡು ಕುಳಿತುಕೊಳ್ಳಲು ಆಗದ ಸ್ಥಿತಿಗೆ ತಲುಪಬಹುದು. ಆಗ ಹಾಸಿಗೆ ಹಿಡಿಯುವ ವ್ಯಕ್ತಿಯು ಸೊಂಟದ ಕೆಳಭಾಗದ ಸ್ಪರ್ಶಜ್ಞಾನವನ್ನೇ ಕಳೆದುಕೊಳ್ಳಬೇಕಾಗುತ್ತದೆ.

ಆದರೆ ಹೊಟ್ಟೆಪಾಡಿಗಾಗಿ ಬಂದು ಕಟ್ಟಡ ನಿರ್ಮಿಸುವ ವೇಳೆ ಆಯ ತಪ್ಪಿ ಬಿದ್ದೋ ಇಲ್ಲವೇ ಕೂಲಿ ಮಾಡುವ ವೇಳೆ ಅಪಘಾತಕ್ಕೀಡಾಗಿಯೋ ಬೆನ್ನುಮೂಳೆ ಮುರಿದುಕೊಳ್ಳುವ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದೆ. ಚಿಕಿತ್ಸೆ ಪಡೆದುಕೊಂಡರೂ ಆ ನಂತರದ ಅವರ ಬದುಕು ದುಸ್ತರವೇ. ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ದೈನಂದಿನ ಕೆಲಸವನ್ನೂ ಮಾಡಿಕೊಳ್ಳಲಾಗದ ಅಸಹಾಯಕರಾಗಿಬಿಡುತ್ತಾರೆ. ಎಲ್ಲ ಕೆಲಸಗಳಿಗೂ ಪರರ ಅವಲಂಬನೆ ಹೆಚ್ಚಾಗುತ್ತದೆ.

ಇಂಥ ಜನರ ನೆರವಿಗೆ ಕೊಪ್ಪಳ ಜಿಲ್ಲೆಯ ಹೊಸಪೇಟೆ- ಕುಷ್ಟಗಿ ರಾಷ್ಟ್ರೀಯ ಹೆದ್ದಾರಿ13ರ ಹೊಸೂರು ಕ್ರಾಸ್ ಹತ್ತಿರ ಸ್ಥಾಪಿತಗೊಂಡಿದೆ ‘ಸಮೂಹ ಸಾಮರ್ಥ್ಯ ’ ಸಂಸ್ಥೆ.  ಈ ಸಂಸ್ಥೆಯಲ್ಲಿ ಬೆನ್ನುಮೂಳೆ ಮುರಿದುಕೊಂಡಿರುವ ವ್ಯಕ್ತಿಗೆ ವಿಶೇಷ ತರಬೇತಿ ನೀಡಿ, ಅವರ ದೈನಂದಿನ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸುವಂತೆ ಮಾಡಲಾಗುತ್ತಿದೆ.

‘ಸಾಮಾಜಿಕ ಪುನಶ್ಚೇತನ ಕೇಂದ್ರ’ ಎಂಬ ಕಾರ್ಯಕ್ರಮದ ಅಡಿಯಲ್ಲಿ  ಇಂಥ ವ್ಯಕ್ತಿಗಳಿಗೆ ನೆರವು ನೀಡಲಾಗುತ್ತಿದೆ. ಅಪಘಾತದಲ್ಲಿ ಬೆನ್ನುಮೂಳೆ ಮುರಿದ ವ್ಯಕ್ತಿಯು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ಮನೆಗೆ ಹೋಗಿ ನರಳುವ ಬದಲು ಈ ಪುನಶ್ಚೇತನ ತರಬೇತಿಯಲ್ಲಿ ಭಾಗವಹಿಸಬಹುದು. ಬೆನ್ನುಮೂಳೆ ತೊಂದರೆಯಿಂದ ಚಲಿಸಲಾಗದೇ , ಸ್ಪರ್ಶಜ್ಞಾನವಿಲ್ಲದೇ, ಖಿನ್ನತೆಗೆ ಒಳಗಾಗಿ, ಮಲಮೂತ್ರ ನಿಯಂತ್ರಣವಿಲ್ಲದೇ ಬಳಲುವವರಿಗೆ ಮೂರು ತಿಂಗಳು ವಿಶೇಷ ತರಬೇತಿ ನೀಡಲಾಗುತ್ತದೆ. ‌

ಕನಿಷ್ಠ 15 ಮಂದಿಯ ಗುಂಪು ಮಾಡಿ ಈ ತರಬೇತಿ ನೀಡಲಾಗುವುದು. ಲಘು ವ್ಯಾಯಾಮ ಮಾಡಿಸಲಾಗುವುದು. ಈ ಕೇಂದ್ರದ ತರಬೇತಿಯ ಚಿಕಿತ್ಸೆಗೆ ಆಯ್ಕೆ ಆಗುವ ವ್ಯಕ್ತಿಗಳಿಗೆ ಊಟ ವಸತಿ ಇದೆ. ವ್ಯಾಯಾಮಕ್ಕೆ ಸೂಕ್ತ ಸಲಕರಣೆ ಒದಗಿಸುವ ಜೊತೆಗೆ ಆಪ್ತ ಸಮಾಲೋಚನೆಯೂ ನಡೆಯುತ್ತದೆ.

ಇದರಿಂದ ರೋಗಿಯ ನರಗಳು ಚೇತರಿಕೆ ಕಂಡು ದಿನನಿತ್ಯ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಮರ್ಥರಾಗುವರು. ತೀರಾ ಬಡವರ ತರಬೇತಿ ವೆಚ್ಚಕ್ಕೆ ರಿಯಾಯಿತಿ ಕೂಡ ಕಲ್ಪಿಸಲಾಗುವುದು. ಈ ಎರಡು ವರ್ಷಗಳಲ್ಲಿ 37 ಮಂದಿಗೆ ಈ ಪುನಶ್ಚೇತನ ತರಬೇತಿ ನೀಡಲಾಗಿದೆ.  ಇವರಲ್ಲಿ ಅನೇಕರು ತಮ್ಮ ದಿನನಿತ್ಯದ  ಕೆಲಸ ಮಾಡಿಕೊಳ್ಳುವುದಲ್ಲದೇ ಕೆಲವರು ಸ್ವ ಉದ್ಯೋಗವನ್ನೂ ಕೈಗೊಳ್ಳುತ್ತಿದ್ದಾರೆ. ಕೇಂದ್ರದ ಸಂಪರ್ಕ ಸಂಖ್ಯೆ: ೯೪೪೯೮೨೧೫೩೮.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT