ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ವಿರುದ್ಧ ಆರೋಪ ಪಟ್ಟಿ

ವಿಬ್ಗಯೊರ್ ಶಾಲೆ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ
Last Updated 23 ಅಕ್ಟೋಬರ್ 2014, 20:02 IST
ಅಕ್ಷರ ಗಾತ್ರ

ಬೆಂಗಳೂರು: ವಿಬ್ಗಯೊರ್‌ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಶಾಲೆಯ ಮುಖ್ಯಸ್ಥ ಸೇರಿ ಮೂವರು ಆರೋಪಿಗಳ ವಿರುದ್ಧ ವರ್ತೂರು ಪೊಲೀಸರು ನಗರದ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.

‘ವಿಮಾನ ನಿಲ್ದಾಣ ಉಪ ವಿಭಾಗದ ಎಸಿಪಿ ದುಗ್ಗಪ್ಪ ಅವರು  ನ್ಯಾಯಾ­ಲಯಕ್ಕೆ ಸುಮಾರು 750 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಶೋಷಿತ ಬಾಲಕಿ, ಅವರ ಪೋಷಕರು, ಶಾಲೆಯ ಆಡಳಿತ ಮಂಡಳಿ, ಸಿಬ್ಬಂದಿ, ಬಾಲಕಿಯ ಆರೈಕೆಯಾಗಿಯೇ ನೇಮಕವಾಗಿದ್ದ ವಿಶೇಷ ಸಹಾಯಕಿ ಸೇರಿದಂತೆ ಒಟ್ಟು 70 ಮಂದಿಯ ಹೇಳಿಕೆ ಪಡೆಯಲಾಗಿದೆ. ಅಲ್ಲದೆ, ಆರೋಪಪಟ್ಟಿಗೆ ಪೂರಕವಾಗಿ ವೈದ್ಯಕೀಯ ದಾಖಲೆಗಳನ್ನು ಸಹ ಸಲ್ಲಿಸ­ಲಾಗಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೇಪಟ್ ತಿಳಿಸಿದರು.

‘ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸಂಬಂಧ ಶಾಲೆಯ ಜಿಮ್ನಾಸ್ಟಿಕ್ ತರಬೇತುದಾರರಾದ ಲಾಲ್‌ಗಿರಿ ಮತ್ತು ವಸೀಂ ಪಾಷಾ ಅವರ ವಿರುದ್ಧ ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ – 2012 (ಪೋಕ್ಸೊ) ಅಡಿ ಪ್ರಕರಣ ದಾಖ­ಲಾಗಿತ್ತು. ಶಾಲೆ ಆವರಣದಲ್ಲಿ ಅತ್ಯಾಚಾರ ನಡೆದಿದ್ದರೂ, ಉದ್ದೇಶ­ಪೂರ್ವಕ­ವಾಗಿ ವಿಷಯವನ್ನು ಮುಚ್ಚಿಟ್ಟ ಕಾರಣಕ್ಕೆ ರುಸ್ತುಂ ಕೇರವಾಲ ಅವರ ವಿರುದ್ಧ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪ­ದಡಿ ಪ್ರಕರಣ ದಾಖಲಾಗಿತ್ತು. ಈ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ತಮ್ಮ ತಪ್ಪುಗಳನ್ನು ಒಪ್ಪಿ­ಕೊಂಡಿದ್ದಾರೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ’ ಎಂದು ತನಿಖಾಧಿ­ಕಾರಿಗಳು ಮಾಹಿತಿ ನೀಡಿದರು.

ಏನಿದು ಪ್ರಕರಣ: ಒಂದನೇ ತರಗತಿ ವಿದ್ಯಾರ್ಥಿನಿಯು ಜು.3ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಹಪಾಠಿಗಳೊಂದಿಗೆ ಶಾಲಾ ಆವರಣದಲ್ಲಿನ ಜಿಮ್ನಾಸ್ಟಿಕ್‌ ಕೊಠಡಿಗೆ ಹೋಗಿದ್ದಳು. ಜಿಮ್ನಾಸ್ಟಿಕ್‌ ತರಬೇತಿ ಮುಗಿಸಿಕೊಂಡು ಆಕೆಯ ಸಹ­ಪಾಠಿಗಳು ತರಗತಿಗೆ ಹಿಂದಿರು­ಗಿದ್ದರು. ಆದರೆ, ತರಗತಿಗೆ ಹಿಂದಿರುಗಲು ನಿರಾ­ಕರಿಸಿ ಕೊಠಡಿಯಲ್ಲೇ ಉಳಿದ ಆಕೆಯ ಮೇಲೆ ಲಾಲ್‌ಗಿರಿ ಮತ್ತು ವಸೀಂ ಅತ್ಯಾಚಾರ ಎಸಗಿದ್ದರು.  ಅರ್ಧ ತಾಸಿನ ನಂತರ ಆರೋಪಿಗಳೇ ಆಕೆ­ಯನ್ನು ಜಿಮ್ನಾಸ್ಟಿಕ್‌ ಕೊಠಡಿಯಿಂದ ತರಗತಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದರು.

ಘಟನೆ ನಡೆದ ಕೆಲ ದಿನಗಳ ನಂತರ ಬಾಲಕಿ ಹೊಟ್ಟೆ ನೋವಿನಿಂದ ಅಳಲಾರಂಭಿಸಿದ್ದಳು. ಆಗ ಪೋಷಕರು ಆಸ್ಪತ್ರೆಗೆ ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ಗೊತ್ತಾಗಿತ್ತು. ನಂತರ ಮಕ್ಕಳ ಸಹಾಯವಾಣಿಗೆ ಮೊರೆ ಹೋದ ಪೋಷಕರು, ಜು.14ರಂದು ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಘಟನೆಯಿಂದ ಆತಂಕಗೊಂಡ ಆ ಶಾಲೆಯ ವಿದ್ಯಾರ್ಥಿ­ಗಳ ಪೋಷಕರು, ಮಕ್ಕಳನ್ನು ಶಾಲೆಗೆ ಕಳುಹಿಸದೆ ದಿನವಿಡೀ ಹೋರಾಟ ಮಾಡಿದ್ದರು.

ಈ ನಡುವೆ ಶಾಲೆಯಲ್ಲಿ ನಡೆದಿರುವ ಘಟನೆಯನ್ನು ಬಹಿರಂಗಪಡಿಸಿದಂತೆ ರುಸ್ತುಂ ಕೇರವಾಲ ಶಾಲೆಯ ಇತರೆ ಸಿಬ್ಬಂದಿಗೆ ಬೆದರಿಕೆ ಹಾಕಿದ್ದರು. ಹೀಗಾಗಿ ಜು.21ರಂದು ರುಸ್ತುಂ ಅವರನ್ನು ಬಂಧಿಸ­ಲಾಗಿತ್ತು. ಆ ನಂತರ ವಿದ್ಯಾರ್ಥಿನಿಯ ಹೇಳಿಕೆ, ಸಾಂದರ್ಭಿಕ ಸಾಕ್ಷ್ಯ­ಗಳನ್ನು ಆಧರಿಸಿ ಕೃತ್ಯ ಎಸಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT