ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದ ಹುಲಿಗೆ ಯುವಕ ಬಲಿ

ಛಾಯಾಚಿತ್ರ ತೆಗೆಯಲು ಹೋಗಿ ಪ್ರಾಣ ಕಳೆದುಕೊಂಡ
Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್):  ಅಪರೂ­ಪದ ಬಿಳಿ ಹುಲಿಯ ಚಿತ್ರ ಸೆರೆ ಹಿಡಿ­ಯಲು ಹೋದ ಯುವಕ­ನೊಬ್ಬ  ಅದೇ ಹುಲಿಗೆ ಬಲಿಯಾದ ಹೃದಯ ವಿದ್ರಾ­ವಕ  ಘಟನೆ ಮಂಗಳ­ವಾರ ದೆಹಲಿಯ ಕೇಂದ್ರ ಭಾಗದಲ್ಲಿ­ರುವ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲ­ಯದಲ್ಲಿ ನಡೆದಿದೆ.

ಮಂಗಳವಾರ ಮಧ್ಯಾಹ್ನ 12.30 ರಿಂದ 1 ಗಂಟೆಯೊಳಗೆ ಸಂಭವಿಸಿದ ಈ ಅನಿ­ರೀಕ್ಷಿತ ಘಟನೆಯನ್ನು ಅಲ್ಲಿದ್ದವರು  ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದು ಆ ದೃಶ್ಯ­ಗಳು ಅಂತರ್ಜಾಲದಲ್ಲಿ ಹರಿದಾ­ಡುತ್ತಿವೆ.

ಕಂದಕದ ಗೋಡೆಗೆ ಒರಗಿಕೊಂಡು ಹೆದರಿಕೆಯಿಂದ ಮುದುಡಿ ಕುಳಿತ ಯುವಕನ ಮುಂದೆ ಆರಡಿ ಉದ್ದದ ದೈತ್ಯ ಬಿಳಿಹುಲಿ ನಿಂತಿದೆ.  ಮುಖದಲ್ಲಿ ಮುಖವಿಟ್ಟು ತನ್ನನ್ನೇ ದಿಟ್ಟಿಸುತ್ತಿರುವ ಹುಲಿಗೆ ಯುವಕ ದೈನ್ಯದಿಂದ ಕೈ ಮುಗಿದು ಪ್ರಾಣಭಿಕ್ಷೆ ಕೇಳುತ್ತಿರುವ ಮನಮಿಡಿಯುವ  ದೃಶ್ಯಗಳನ್ನು
ಅಂತ­ರ್ಜಾಲದಲ್ಲಿರುವ ವಿಡಿಯೊ ಹಾಗೂ ಚಿತ್ರಗಳು ಬಿಚ್ಚಿಟ್ಟಿವೆ. 

ಆವರಣದಲ್ಲಿ ಬಿದ್ದ 20 ವರ್ಷದ ಯುವಕನನ್ನು 10ರಿಂದ 15 ನಿಮಿಷ ದಿಟ್ಟಿಸಿ ನೋಡಿದ ಹುಲಿ,  ನಂತರ ಆತನ ಮೇಲೆ ಎರಗಿ ಕುತ್ತಿಗೆ ಹಿಡಿದು ಎಳೆ-ದಾಡಿ ಬಿಟ್ಟು ಹೋಗಿದೆ. ಪ್ರಾಣಿ ಸಂಗ್ರಹಾಲ­ಯದ ಸಿಬ್ಬಂದಿ ಸೇರಿದಂತೆ ಅಲ್ಲಿದ್ದ ನೂರಾರು ಜನರು ತಮ್ಮ ಎದುರೇ ನಡೆಯುತ್ತಿದ್ದ ಈ ಬೀಭತ್ಸ ಘಟನೆಯನ್ನು ಅಸಹಾಯಕರಾಗಿ ನಿಂತು ನೋಡುತ್ತಿ­ರುವ ದೃಶ್ಯಗಳೂ ಸೆರೆಯಾಗಿವೆ.

ಅನಿರೀಕ್ಷಿತ ಅಂತ್ಯ: ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯಕ್ಕೆ ಬಂದಿದ್ದ ದೆಹಲಿಯ ಆನಂದ ಪ್ರಭಾತ್‌ ಪ್ರದೇಶದ ನಿವಾಸಿ ಹಾಗೂ ಕಾಲೇಜು ವಿದ್ಯಾರ್ಥಿ ಮಕ್ಸೂದ್‌ಗೆ ತನ್ನ ಅಂತ್ಯ ಇಷ್ಟೊಂದು ದಾರುಣವಾಗಿರುತ್ತದೆ ಎಂದು ತಿಳಿದಿರಲಿಲ್ಲ. 

ಕಬ್ಬಿಣದ ತಂತಿ ಬೇಲಿ ಏರಿ ಛಾಯಾ­ಚಿತ್ರ ಸೆರೆ ಹಿಡಿಯುವ ಧಾವಂತದಲ್ಲಿ ಮಕ್ಸೂದ್‌ ಆಯತಪ್ಪಿ ಹುಲಿಯನ್ನು ಕೂಡಿಟ್ಟ ಬಯಲು ಆವರಣದ ನೀರಿಲ್ಲದ 18 ಅಡಿ ಆಳದ ಕಂದಕದೊಳಗೆ ಬಿದ್ದ. ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದ  ಬಿಳಿ­ಹುಲಿ 15 ನಿಮಿಷಗಳ ಕಾಲ ಆಶ್ಚರ್ಯ­ಚಕಿತವಾಗಿ ಯುವಕನನ್ನು ದಿಟ್ಟಿಸುತ್ತ ಸುಮ್ಮನೆ ನಿಂತುಕೊಂಡಿತ್ತು. ಯುವ­ಕನೂ ಉಸಿರು ಬಿಗಿ ಹಿಡಿದು ಅಲುಗಾಡದೆ ಮುದುಡಿ ಕುಳಿತಿದ್ದ.

ಇಷ್ಟೇ ಆಗಿದ್ದರೆ  ಏನೂ ಆಗುತ್ತಿರ­ಲಿಲ್ಲ. ಆದರೆ, ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ತಮ್ಮ ಕೈಯಲ್ಲಿದ್ದ ಲಾಠಿ ಮತ್ತು ಕಟ್ಟಿಗೆಗಳಿಂದ ತಂತಿ ಬೇಲಿಗೆ ಬಡಿದು ಶಬ್ದ ಮಾಡುತ್ತ ಹುಲಿಯ ಗಮನವನ್ನು ಬೇರೆಡೆ ಸೆಳೆಯಲು  ಯತ್ನಿಸಿದರು. ಭಯಭೀತರಾದ ಜನರು ಚೀರಾಡುತ್ತ ಹುಲಿಯತ್ತ ಕಲ್ಲು ತೂರಲು ಆರಂಭಿ­ಸಿದರು.

ಅಲ್ಲಿಯವರೆಗೆ ಅನಿರೀಕ್ಷಿತ ಅತಿಥಿ ಮಕ್ಸೂದ್‌ನನ್ನು ದಿಟ್ಟಿಸಿ ನೋಡುತ್ತ ನಿಂತಿದ್ದ ಹುಲಿ, ಜನರ ಕೂಗಾಟ, ಕಲ್ಲು ತೂರಾಟದಿಂದ ಆತಂಕಕ್ಕೀಡಾಯಿತು. ಏಕಾಏಕಿ ರೊಚ್ಚಿಗೆದ್ದು   ಯುವಕನ ಮೇಲೆ ಎರಗಿ ಕುತ್ತಿಗೆ ಹಿಡಿದು  ಎಳೆದೊಯ್ಯಿತು. ಸ್ವಲ್ಪ ದೂರ  ಹೋದ ನಂತರ ರಕ್ತಸಿಕ್ತ ದೇಹವನ್ನು ಅಲ್ಲಿಯೇ ಬಿಟ್ಟು ತೆರಳಿತು.

ತೀವ್ರ ನೋವಿನಿಂದ ನರಳಿ ಮೃತಪಟ್ಟ ಯುವಕನ ದೇಹ ಎರಡು ಗಂಟೆಗಳ ಕಾಲ  ಅದೇ ಸ್ಥಳದಲ್ಲಿ ಬಿದ್ದಿತ್ತು. ಪ್ರಾಣಿ ಸಂಗ್ರಹಾಲಯ ಸಿಬ್ಬಂದಿ ಅಥವಾ ಪೊಲೀಸರಾಗಲಿ ಅಲ್ಲಿಂದ ದೇಹವನ್ನು  ಹೊರ ತರುವ ಧೈರ್ಯ ತೋರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯ?
ಕಣ್ಣೆದರು ಇಷ್ಟೆಲ್ಲಾ  ನಡೆಯು­ತ್ತಿದ್ದರೂ ಪ್ರಾಣಿ ಸಂಗ್ರಹಾಲಯ ಸಿಬ್ಬಂದಿ ಯುವಕನ ಪ್ರಾಣ ರಕ್ಷಣೆಗೆ ಮುಂದಾ­ಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿ-ಸಿ-ದ್ದಾರೆ. ಬಂದೂಕಿನಿಂದ ಅರಿವಳಿಕೆ ಮದ್ದು ನೀಡಿ ಹುಲಿಯ ಪ್ರಜ್ಞೆ ತಪ್ಪಿಸಲು ಸಾಕಷ್ಟು ಸಮಯಾವಕಾಶವಿತ್ತು. ಪ್ರಾಣಿ ಸಂಗ್ರಹಾಲಯದ ಸಿಬ್ಬಂದಿ ಮನಸ್ಸು ಮಾಡಿದ್ದರೆ ಯುವಕನನ್ನು ಹುಲಿಯ ಬಾಯಿಂದ ಬದುಕಿಸಬಹುದಿತ್ತು ಎಂದು ಇಡೀ ದೃಶ್ಯಾವಳಿಯನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ  ಬಿಟ್ಟು ಎಂಬುವರು ಆರೋಪಿಸಿದ್ದಾರೆ.

ಸಿಬ್ಬಂದಿ ಬಳಿ ಅರಿವಳಿಕೆ ಬಂದೂಕು­ಗಳಿರಲಿಲ್ಲ. ಅವರು ಯುವಕನ ನೆರವಿಗೆ ಧಾವಿಸುವ ಬದಲು, ಜನರನ್ನು ಚದುರಿ­ಸುವಲ್ಲಿಯೇ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದರು ಎಂದು ಅವರು ಆರೋಪಿಸಿದ್ದಾರೆ.

ಮಾನಸಿಕ ಅಸ್ವಸ್ಥ: ಮಕ್ಸೂದ್‌ ಮಾನಸಿಕ ಅಸ್ವಸ್ಥತೆಗಾಗಿ ಕಳೆದ ಎರಡು ವರ್ಷಗಳಿಂದ ಔಷಧ ಸೇವಿಸುತ್ತಿದ್ದ. ಅಲ್ಲದೇ ಅಮಲೇರಿಸುವ ಭಾಂಗ್‌ ಪಾನೀಯ ಕುಡಿಯುತ್ತಿದ್ದ. ಅರ್ಧದಲ್ಲೇ ಶಾಲೆ ಬಿಟ್ಟಿದ್ದ ಆತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಮನೆಯವರಿಗೆ ಹೇಳದೇ ಪದೇಪದೇ ಸುತ್ತಾಡಲು ತೆರಳುತ್ತಿದ್ದ. ಮಂಗಳವಾರವೂ ಒಬ್ಬಂಟಿಯಾಗಿ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿದ್ದ ಎಂದು ಮಕ್ಸೂದ್‌ ತಂದೆ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕಂದಕದೊಳಗೆ ಬಿದ್ದದ್ದು ಹೇಗೆ?: ಮಕ್ಸೂದ್‌ ಹುಲಿಯನ್ನು ಕೂಡಿಟ್ಟ ಆವರಣದ ಬೇಲಿ ದಾಟಿ ಕಂದಕದೊಳಗೆ ಬಿದ್ದದ್ದು ಹೇಗೆ ಎಂಬುದು ಹಲವು ಅನುಮಾನ-ಗಳಿಗೆ ಕಾರಣವಾಗಿದೆ. ಬೇಲಿ ಏರಿ  ಕುಳಿತಿದ್ದ ಯುವಕ ಆಕ­ಸ್ಮಿಕ­ವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಇನ್ನೂ ಕೆಲವರು ‘ಹುಲಿ ಛಾಯಾಚಿತ್ರ ಸೆರೆ ಹಿಡಿಯಲು ತಂತಿ ಬೇಲಿ ಏರಿದ್ದ ಆತ  ಬೇಲಿಯ ಎತ್ತರ ಕಡಿಮೆಯಾಗಿದ್ದ ಕಾರಣ  ಆಕಸ್ಮಿಕವಾಗಿ ಜಾರಿ ಬಿದ್ದ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT