ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಣಾಲಿನಿ ಸರ್ಪೋಪಖ್ಯಾನ!

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ಸರ್ಪತಜ್ಞರ ಸಂಖ್ಯೆ ನಮ್ಮಲ್ಲಿ ತೀರಾ ಕಡಿಮೆ. ಸರ್ಪತಜ್ಞೆಯರಂತೂ ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. ಇಂಥ ಅಪರೂಪದ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಬೆಂಗಳೂರಿನ ಮೃಣಾಲಿನಿ, ಹಾವುಗಳ ಬಗ್ಗೆ ಮಾಡಿರುವ ಸಂಶೋಧನೆ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದೆ.

ಹಾವು, ಹುಳ, ಹಲ್ಲಿ, ಜಿರಲೆ ಕಂಡರೆ ಹೆದರುವ ಮಹಿಳೆಯರೇ ಹೆಚ್ಚು (ಪುರುಷರೇನೂ ಹೊರತಲ್ಲ). ಕನಸಿನಲ್ಲಿ ಹಾವು ಕಂಡರೂ ಬೆಚ್ಚಿ ಬೀಳುವ ಜನ ನಮ್ಮಲ್ಲಿದ್ದಾರೆ. ಆದರೆ ಇಲ್ಲೊಬ್ಬ ಯುವತಿ ತನ್ನ ಮೇಲೆ ಎರಗಲು ಯತ್ನಿಸಿದ ಹಾವಿನಿಂದ ಸ್ಫೂರ್ತಿ ಪಡೆದು ಹಾವಿನ ಬಗ್ಗೆಯೇ ಅಧ್ಯಯನ ಕೈಗೊಂಡಿದ್ದಾರೆ. ಹಾವುಗಳ ಬಗ್ಗೆಯೇ ಪಿಎಚ್‌.ಡಿ ಮಾಡಿದ್ದಾರೆ.

ಹಾವುಗಳನ್ನು ಹುಡುಕಿಕೊಂಡು ದೇಶ ವಿದೇಶ ಸುತ್ತಿದ್ದಾರೆ. ಈಗಲೂ ಸುತ್ತುತ್ತಿದ್ದಾರೆ. ಬುಸುಗುಟ್ಟುವ ಹಾವನ್ನು ಮೈಮೇಲೆ ಬಿಟ್ಟುಕೊಂಡು ಅದರ ಸ್ವಭಾವನ್ನು ಅರಿಯಲು ಯತ್ನಿಸುತ್ತಿದ್ದಾರೆ. ಔಷಧ ಸಂಶೋಧನೆಗೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಅವರ ಹೆಸರು ಮೃಣಾಲಿನಿ. ನಮ್ಮ ಬೆಂಗಳೂರಿನವರು. ತಂದೆ ಎಂ. ಶ್ರೀಧರಾಜೇ ಅರಸ್. ತಾಯಿ ಊರ್ಮಿಳಾ ರಾಜೇಶ್ವರಿ. ಮೃಣಾಲಿನಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಣಿಶಾಸ್ತ್ರದಲ್ಲಿ ಬಿಎಸ್‌.ಸಿ, ಎಂಎಸ್‌.ಸಿ ಮಾಡಿದ್ದಾರೆ. ನಂತರ ಬ್ರಿಟನ್‌ನ ಬ್ಯಾಂಗೊರ್‌ ವಿಶ್ವವಿದ್ಯಾಲಯದಲ್ಲಿ ಹಾವುಗಳ ಬಗ್ಗೆ ಪಿಎಚ್‌.ಡಿ ಮಾಡಿದ್ದಾರೆ. ಜೊತೆಗೆ ಕೀಟಗಳ ಬಗ್ಗೆಯೂ ಅಧ್ಯಯನ ನಡೆದಿದ್ದಾರೆ. ಈಗ ಅವರು ಅಂತರರಾಷ್ಟ್ರೀಯ ಮಟ್ಟದ ಸರ್ಪ ತಜ್ಞೆ.

ವಿಶ್ವದಲ್ಲಿ ಸುಮಾರು 3 ಸಾವಿರ ಜಾತಿಯ ಹಾವುಗಳಿವೆ. ಅದರಲ್ಲಿ 600 ಹಾವುಗಳು ಮಾತ್ರ ವಿಷಕಾರಿ. ಕೇವಲ 200 ಹಾವುಗಳಿಗೆ ಸಂಬಂಧಿಸಿದಂತೆ ಮಾತ್ರ ಈಗ ಔಷಧಿ ತಯಾರಿಸಲಾಗಿದೆ.

ಜನವಸತಿ ಬಳಿಯೇ ಇರುವ ವಿಷಕಾರಿ ಹಾವುಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಔಷಧ ತಯಾರಿಸಲಾಗುತ್ತದೆ. ಕಾಡಿನ ಮಧ್ಯದಲ್ಲಿ, ಮರುಭೂಮಿಯ ಒಳಗೆ ಎಷ್ಟೇ ವಿಷಕಾರಿ ಹಾವುಗಳಿದ್ದರೂ ಅವುಗಳಿಂದ ಮಾನವನಿಗೆ ಹೆಚ್ಚಿನ ಸಂಕಷ್ಟ ಇಲ್ಲದೇ ಇರುವುದರಿಂದ ಆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ.

ಹಾವಿನ ವಿಷದಲ್ಲಿಯೂ ಪ್ರಮುಖವಾಗಿ ಎರಡು ಬಗೆ ಇವೆ. ನರಗಳ ಮೇಲೆ ಪ್ರಭಾವ ಬೀರುವ ವಿಷ (ನ್ಯೂರೊ ಟಾಕ್ಸಿಕ್). ಇನ್ನೊಂದು ರಕ್ತದಲ್ಲಿ ಸೇರುವ (ಹೀಮೊ ಟಾಕ್ಸಿಕ್) ವಿಷ. ನ್ಯೂರೊ ಟಾಕ್ಸಿಕ್‌ನಲ್ಲಿ  ನಾಗರಹಾವು, ಕಾಳಿಂಗ ಸರ್ಪ, ಬ್ಲಾಕ್ ಮಾಂಬಾ (ಆಫ್ರಿಕನ್), ತೈಪಾನ್ (ಆಸ್ಟ್ರೇಲಿಯ), ಕೋರಲ್‌ ಸ್ನೇಕ್ (ದಕ್ಷಿಣ ಅಮೆರಿಕ) ಮುಂತಾದ ಹಾವುಗಳು ಬರುತ್ತವೆ. ಈ ಹಾವುಗಳು ಅತ್ಯಂತ ವಿಷಕಾರಿ. ಅಲ್ಲದೆ ಇವು ಕಚ್ಚಿದರೆ ಮನುಷ್ಯನ ನರಮಂಡಲದ ಮೇಲೆ ಪರಿಣಾಮವಾಗಿ ಅತ್ಯಂತ ವೇಗವಾಗಿ ವಿಷ ಹರಡಿ ಮನುಷ್ಯ ಸಾಯುತ್ತಾನೆ.

ಹೀಮೊ ಟಾಕ್ಸಿಕ್‌ನಲ್ಲಿ ಮಂಡಲದ ಹಾವು, ಕನ್ನಡಿ ಹಾವು (ಕೊಳಕು ಮಂಡಲ), ಕಟ್ಟು ಹಾವು ಸೇರಿವೆ. ಇವು ಕಚ್ಚಿದರೆ ವಿಷ ರಕ್ತದಲ್ಲಿ ಸೇರುತ್ತದೆ. ಈ ಎರಡೂ ವರ್ಗಕ್ಕೆ ಸೇರದ ಕೆಲವು ವಿಷಕಾರಿ ಹಾವುಗಳೂ ಇವೆ. ಭಾರತದಲ್ಲಿ ಸಾವಿರಾರು ಜಾತಿಯ ಹಾವುಗಳು ಇದ್ದರೂ ಅತ್ಯಂತ ಅಪಾಯಕಾರಿಯಾದ ಮತ್ತು ವಿಷಕಾರಿಯಾದ ಹಾವುಗಳು ಇರುವುದು ಕೇವಲ ನಾಲ್ಕು. ಕಾಳಿಂಗ ಸರ್ಪ, ನಾಗರ ಹಾವು, ಕೊಳಕು ಮಂಡಲ ಅಥವಾ ಕನ್ನಡಿ ಹಾವು, ಕಟ್ಟುಹಾವು ಮಾತ್ರ ವಿಷಕಾರಿ. ಉಳಿದ ಹಾವುಗಳಿಂದ ಹೆಚ್ಚಿನ ಅಪಾಯವೇನೂ ಇಲ್ಲ.

ಹಾವುಗಳು ಅತ್ಯಂತ ಸೂಕ್ಷ್ಮ ಜೀವಿಗಳು. ತಣ್ಣನೆಯ ರಕ್ತವನ್ನು ಹೊಂದಿರುವ ಹಾವುಗಳು ತೆವಳುವುದನ್ನೇ ಅಭ್ಯಾಸ ಮಾಡಿಕೊಂಡಿರುವುದರಿಂದ ಅವುಗಳಿಗೆ ಪಾದ ಇಲ್ಲ. ಕಿವಿಯೂ ಇಲ್ಲ. ಆದರೆ ಎರಡು ಮೂಗು ಇವೆ. ಒಂದು ಬುಸುಗುಡುತ್ತಿದ್ದರೆ ಇನ್ನೊಂದು ಬಾಯಿಯಲ್ಲಿರುತ್ತದೆ.

ಅದಕ್ಕೇ ಹಾವುಗಳು ಬುಸುಗುಡುತ್ತಿದ್ದರೂ ಅವುಗಳ ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ. ಹಾವಿನ ದ್ವೇಷ, ಹನ್ನೆರಡು ವರ್ಷ ಎಂಬ ಭಾವನೆ ನಮ್ಮ ಜನರಲ್ಲಿದೆ. ಆದರೆ ನಿಜವಾಗಿ ಹಾವುಗಳು ದ್ವೇಷ ಭಾವನೆಯನ್ನು ಹೊಂದಿಲ್ಲ. ಅವುಗಳಿಗೆ ಅಪಾಯ ಎದುರಾಗದೆ ಯಾರನ್ನೂ ಅವು ಕಚ್ಚುವುದಿಲ್ಲ.

ಸಾಮಾನ್ಯವಾಗಿ ಅತಿ ಚಿಕ್ಕ ಜಾಗದಲ್ಲಿ ಅವು ವಾಸಿಸುತ್ತವೆ. ಜೋಡಿಯಾಗಿರುವ ಹಾವುಗಳಲ್ಲಿ ಒಂದನ್ನು ಕೊಂದರೆ ಇನ್ನೊಂದು ಹಾವು ಆ ಜಾಗವನ್ನು ಬಿಟ್ಟು ಹೋಗುವುದು ಕಡಿಮೆ. ಅದಕ್ಕೇ ಹಾವಿನ ದ್ವೇಷ 12 ವರ್ಷ ಎಂಬ ಭಾವನೆ ಜನರಲ್ಲಿ ಬಂದಿದೆ.

ಹಾವಿನಲ್ಲಿ ವಿಷ ಇರುವುದು ಬೇರೆಯವರನ್ನು ಕೊಲ್ಲುವುದಕ್ಕಾಗಿಯೇ ಎಂಬ ಭಾವನೆ ಜನರಲ್ಲಿದೆ. ಆದರೆ ಹಾವಿನಲ್ಲಿ ವಿಷ ಇರುವುದು ಸ್ವರಕ್ಷಣೆಗೆ ಮಾತ್ರ. ಹಾವುಗಳು ತಮ್ಮ ರಕ್ಷಣೆಗೆ ಹಲವಾರು ತಂತ್ರಗಳನ್ನು ಹೂಡುತ್ತವೆ. ಅಮೆರಿಕದ ಆರಿಜಾನ್‌ ಮರುಭೂಮಿಯಲ್ಲಿ ಇರುವ ಯಾಟಲ್‌ ಸ್ನೇಕ್‌ನ ಬಾಲ ಕ್ಯಾಕ್ಟಸ್‌ ತರಹವೇ ಇರುತ್ತದೆ. ಇದು ನಮ್ಮ ನಾಗರ ಹಾವಿನ ತರಹ ಹೆಡೆ ಅಲ್ಲಾಡಿಸುವುದಿಲ್ಲ.

ಅಪಾಯಕಾರಿ ಸನ್ನಿವೇಶ ಎದುರಾದರೆ ಬಾಲವನ್ನೇ ಅಲ್ಲಾಡಿಸುತ್ತದೆ. ಇದರ ಬಾಲ ಬಣ್ಣದಿಂದ ಕೂಡಿರುತ್ತದೆ. ಸುರುಳಿ ಸುತ್ತಿಕೊಂಡು ಈ ಬಣ್ಣದ ಬಾಲ ಕಾಣುವಂತೆ ಇದು ಮಲಗುತ್ತದೆ. ಬಣ್ಣವನ್ನು ಯಾವುದೋ ಹಣ್ಣು ಎಂದುಕೊಂಡು ಹತ್ತಿರಕ್ಕೆ ಬರುವ ಕ್ರಿಮಿ ಕೀಟಗಳನ್ನು ಹಿಡಿದು ಇದು ತಿನ್ನುತ್ತದೆ.

ದಕ್ಷಿಣ ಅಮೆರಿಕದಲ್ಲಿ ಕೋರಲ್‌ ಸ್ನೇಕ್‌ ಎಂಬ ವಿಷಕಾರಿ ಹಾವುಗಳಿವೆ. ಇದರ ಮೈಬಣ್ಣ ಕೆಂಪು, ಕಪ್ಪು ಬಣ್ಣದಿಂದ ಕೂಡಿದೆ. ಅದೇ ರೀತಿ ಕಿಂಗ್‌ ಸ್ನೇಕ್‌ ಎಂಬ ಬಣ್ಣ ಬದಲಾಯಿಸುವ ಹಾವು ಇದೆ. ಇದೂ ಕೂಡ ಅತ್ಯಂತ ವಿಷಕಾರಿ. ವಾತಾವರಣಕ್ಕೆ ತಕ್ಕಂತೆ ಅಥವಾ ತಾನು ಇರುವ ಪ್ರದೇಶಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿಕೊಳ್ಳುವ ಹಾವುಗಳೂ ಇವೆ. ರ್‍್ಯಾಟಲ್‌ ಸ್ನೇಕ್‌ಗಳು ಹೀಗೆ ಮಾಡುತ್ತವೆ. ಇದು ರಕ್ಷಣಾ ತಂತ್ರವೂ ಹೌದು. ಅಪಾಯಕಾರಿಯೂ ಹೌದು. ಆಫ್ರಿಕಾದಲ್ಲಿ ಸ್ಪಿಟ್ಟಿಂಗ್‌ ಕೋಬ್ರಾಗಳಿವೆ. ಇವು ವಿಷವನ್ನು ಉಗುಳುತ್ತವೆ.

ಹಾವುಗಳ ವಿಷ ಏರದಂತೆ ಔಷಧಿ ತಯಾರಿಸುವ ಹಾಗೆಯೇ ಹಾವಿನ ವಿಷದಿಂದಲೂ ಔಷಧಿ ತಯಾರಿಸುತ್ತಾರೆ. ಹೃದಯ ರೋಗ, ರಕ್ತ ಹೆಪ್ಪುಗಟ್ಟಿದ್ದರೆ ಅದನ್ನು ತೆಳು ಮಾಡಲು ಹಾವಿನ ವಿಷವನ್ನು ಔಷಧವಾಗಿ ಬಳಸಲಾಗುತ್ತದೆ.

ಕ್ಯಾನ್ಸರ್ ತಡೆಗೆ, ಪಾರ್ಶ್ವವಾಯು ತಡೆಗೂ ಹಾವಿನ ವಿಷವನ್ನು ಔಷಧವಾಗಿ ಬಳಸಲಾಗುತ್ತದೆ. ಮೃಣಾಲಿನಿ ಹಾವುಗಳನ್ನೇ ತನ್ನ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡ ಕತೆ ಕೂಡ ರೋಮಾಂಚಕಾರಿಯಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್‌.ಸಿ ಮುಗಿಸಿದ ನಂತರ ಸ್ನೇಹಿತರೊಂದಿಗೆ ಒಮ್ಮೆ ಅವರು ಗೋವಾಕ್ಕೆ ಹೋಗಿದ್ದರು. ಅಲ್ಲಿ ಹಾವುಗಳ ಪ್ರದರ್ಶನ ಇತ್ತು. ಹಾವುಗಳ ಛಾಯಾಚಿತ್ರ ತೆಗೆಯಲು ಮುಂದಾದಾಗ ಒಂದು ಹೆಬ್ಬಾವು ಸರಕ್ಕನೆ ತಲೆ ಎತ್ತಿ ಮೃಣಾಲಿನಿ ಅವರ ಮೇಲೆ ಹಾರಿತು. ಆ ಕ್ಷಣಕ್ಕೆ ಅವರಿಗೆ ಭಾರೀ ಭಯ ಉಂಟಾಯಿತು.

ಆದರೆ ಅದರ ಆರ್ಭಟ, ಬಾಯಿ ತೆರೆದ ಪರಿ, ಕ್ಯಾಮೆರಾದತ್ತ ಅದರ ನೋಟ, ಚುರುಕುತನ ಎಲ್ಲವೂ ಮೃಣಾಲಿನಿ ಅವರಲ್ಲಿ ಹೊಸ ಬೆಳಕನ್ನು ಮೂಡಿಸಿದವು. ‘ಹಾವುಗಳ ಬಗ್ಗೆಯೇ ಯಾಕೆ ಸಂಶೋಧನೆ ನಡೆಸಬಾರದು?’ ಎಂಬ ಹುಕ್ಕಿ ಅವರಿಗೆ ಬಂದುಬಿಟ್ಟಿತು.

ಬೆಂಗಳೂರಿಗೆ ವಾಪಸು ಬಂದ ನಂತರ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಹಾವುಗಳ ಬಗ್ಗೆ ಸಂಶೋಧನೆ ನಡೆಸಲು ಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿಯೂ ಹಾವುಗಳ ಅಧ್ಯಯನಕ್ಕೆ ಸೂಕ್ತ ಅವಕಾಶ ದೊರೆಯದೇ ಇರುವುದರಿಂದ ಬ್ರಿಟನ್‌ನ ವೇಲ್ಸ್ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷದ ಎಂ.ಎಸ್ಸಿ ಮಾಡಿದರು. ನಂತರ ಬ್ಯಾಂಗೋರ್‌ ವಿಶ್ವವಿದ್ಯಾಲಯದಲ್ಲಿ ಏಷ್ಯನ್ ಹಾವುಗಳ ಬಗ್ಗೆ ಪಿಎಚ್‌.ಡಿ ಮಾಡಿದರು.

ಈಗ ಸಿಂಗಪುರದ ನ್ಯಾಷನಲ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮುಂದುವರಿಸಿರುವ ಅವರು ಅಮೆರಿಕದ ರೊಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕಿಯಾಗಿ 3 ವರ್ಷ  ಕಾರ್ಯ ನಿರ್ವಹಿಸಿದ್ದಾರೆ. ಅವರ ಹಲವಾರು ಸಂಶೋಧನಾ ಪ್ರಬಂಧಗಳು ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವಾರು ಪ್ರಶಸ್ತಿಗಳೂ ಅವರಿಗೆ ಬಂದಿವೆ.

ಭಾರತದಲ್ಲಿ ಸರ್ಪ ತಜ್ಞೆಯರು ಕಡಿಮೆ. ಕರ್ನಾಟಕದಲ್ಲಿಯಂತೂ ಇಲ್ಲವೇ ಇಲ್ಲ. ಹಾವು ಹಿಡಿಯುವ, ಅದರ ವರ್ತನೆಯನ್ನು ಅಭ್ಯಾಸ ಮಾಡುತ್ತಿರುವ ಮೃಣಾಲಿನಿಗೆ ಒಂದೇ ಚಿಂತೆ.

‘ಭಾರತದಲ್ಲಿ ಬೇಕಾದಷ್ಟು ಹಾವುಗಳಿವೆ. ಆದರೆ ಅಧ್ಯಯನಕ್ಕೆ ಸೂಕ್ತ ವಾತಾವರಣವಿಲ್ಲ. ಆದರೆ ವಿದೇಶಗಳಲ್ಲಿ ಅಧ್ಯಯನಕ್ಕೆ ಬೇಕಾದ ಎಲ್ಲ ಸೌಲಭ್ಯಗಳಿವೆ. ಆದರೆ ಹಾವುಗಳೇ ಇಲ್ಲ’ ಎಂದು ಅವರು ವಿಷಾದಿಸುತ್ತಾರೆ.

ವಿದೇಶಿ ಹಾವುಗಳ ಬಗ್ಗೆ ಅಧ್ಯಯನ ನಡೆಸಿರುವ ಮೃಣಾಲಿನಿ ಈಗ ಭಾರತದ ಹಾವುಗಳ ಬಗ್ಗೆಯೂ ಅಧ್ಯಯನದ ಆಸಕ್ತಿ ಹೊಂದಿದ್ದಾರೆ. ಮೃಣಾಲಿನಿ ಅವರ ಜೊತೆ ಮಾತಿಗೆ ಕುಳಿತರೆ ಸರ್ಪ ಲೋಕ ತೆರೆದುಕೊಳ್ಳುತ್ತದೆ. ಹಾವುಗಳೂ ಕೂಡ ಮನುಷ್ಯರಂತೆಯೇ ಅಗತ್ಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುತ್ತವೆ. ಆದರೆ ಹಾವುಗಳು ಎಂದೂ ಅನಗತ್ಯವಾಗಿ ವಿಷ ಕಾರುವುದಿಲ್ಲ ಮನುಷ್ಯನಂತೆ. 

ಹಲ್ಲುಕಿತ್ತ ಹಾವು
ಹಲ್ಲುಕಿತ್ತ ಹಾವು ಅಪಾಯಕಾರಿಯಲ್ಲ ಎಂಬ ಭಾವನೆ ನಮ್ಮ ಜನರಲ್ಲಿದೆ. ಹಾವಿನ ಹಲ್ಲಿನಲ್ಲಿಯೇ ವಿಷ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ. ಹಲ್ಲಿನ ಮೂಲಕವೇ ಹಾವು ವಿಷವನ್ನು ಕಕ್ಕುತ್ತದೆ ನಿಜ. ಆದರೆ ಹಲ್ಲಿನಲ್ಲಿಯೇ ವಿಷ ಇರುವುದಿಲ್ಲ.

ಹಾವಿನ ಬಾಯಿಯ ಕೆಳಗೆ ವಿಷದ ಚೀಲವೊಂದು ಇರುತ್ತದೆ. ಈ ವಿಷ ಉತ್ಪಾದನೆಗೆ ಹಾವುಗಳು ಅತ್ಯಂತ ಶ್ರಮ ಪಡಬೇಕು. ಅದಕ್ಕಾಗಿ ಹಾವುಗಳು ವಿಷವನ್ನು ನಷ್ಟ ಮಾಡಿಕೊಳ್ಳಲು ಬಯಸುವುದಿಲ್ಲ.

ಕತ್ತರಿಸಿದರೂ ಜೀವಂತ!
ಮನುಷ್ಯನ ತಲೆ ಕತ್ತರಿಸಿದರೆ ಆತ ಕ್ಷಣಾರ್ಧದಲ್ಲಿ ಸಾಯುತ್ತಾನೆ. ಆದರೆ ಹಾವುಗಳು ಹಾಗಲ್ಲ. ಅವುಗಳ ತಲೆ ತುಂಡರಿಸಿದರೂ ಸಾಕಷ್ಟು ಕಾಲ ಎರಡೂ ತುಂಡುಗಳಲ್ಲಿ ಜೀವ ಇರುತ್ತದೆ.

ಚೀನಾದವರು ಹಾವುಗಳನ್ನು ತಿನ್ನುತ್ತಾರೆ. ಹೀಗೆ ಚೀನಾದ ಒಬ್ಬ ಹಾವಿನ ತಲೆಯನ್ನು ಕತ್ತರಿಸಿ ಇಟ್ಟು ಅಡುಗೆ ಮಾಡುತ್ತಿದ್ದಾಗ ಹಾವಿನ ತುಂಡು ಆತನಿಗೆ ಕಚ್ಚಿ ಕೆಲವೇ ಗಂಟೆಯಲ್ಲಿ ಆತ ಮರಣ ಹೊಂದಿದ. ಹಾವಿನ ವಿಷವನ್ನು ತೆಗೆದು ಚೀನಿಯರು ಆಹಾರವಾಗಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT