ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತನ ವೀರ್ಯ: ಮಾರ್ಗಸೂಚಿ ಅಗತ್ಯ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಕಳೆದ ವರ್ಷ ಇಂಗ್ಲೆಂಡಿನ ಕ್ಯಾಡಿ ಪಾರ್ಕ್‌ ಎಂಬುವರು ತಾಯಿಯಾದಾಗ ಭಾರಿ ಸುದ್ದಿಯಾಯಿತು. ಏಕೆಂದರೆ ಆಕೆ ತಾಯಿಯಾದದ್ದು ಐದು ವರ್ಷಗಳ ಹಿಂದೆ ಮೃತಪಟ್ಟಿದ್ದ ಪತಿಯ ವೀರ್ಯದ ಮೂಲಕ. 2010ರಲ್ಲಿ ಮೃತಪಟ್ಟ ಅವರ ಗಂಡನ ವೀರ್ಯವನ್ನು ಸಂಗ್ರಹಿಸಿಡಲಾಗಿತ್ತು. ಈ ವೀರ್ಯದಿಂದಲೇ 2012ರಲ್ಲಿ ಮೊದಲನೇ  ಮಗುವಿನ ತಾಯಿಯಾಗಿದ್ದ ಕ್ಯಾಡಿ, ಕಳೆದ ವರ್ಷ ಎರಡನೆಯ ಮಗುವಿಗೆ ಜನ್ಮ ನೀಡಿದ್ದರು. 

ಇದೇ ರೀತಿ, ಎರಡು ವಾರಗಳ ಹಿಂದೆ ದೆಹಲಿಯ ನವವಿವಾಹಿತೆಯೊಬ್ಬರು ತಮ್ಮ ಮೃತ ಗಂಡನ ವೀರ್ಯ ಸಂಗ್ರಹಿಸಿಕೊಡುವಂತೆ ಆತನ ಶವದ ಮುಂದೆ ವೈದ್ಯರನ್ನು ಕೋರುತ್ತಿದ್ದರು. ಅವರ ಸಂಬಂಧಿಕರೂ ವೀರ್ಯ ನೀಡುವಂತೆ ಕೇಳಿದರೂ ಅಲ್ಲಿಯ ವೈದ್ಯರು ಅಸಹಾಯಕರಾಗಿದ್ದರು. ಏಕೆಂದರೆ ಮೃತ ವ್ಯಕ್ತಿಯಿಂದ ವೀರ್ಯ ಸಂಗ್ರಹಿಸುವ ಸಂಬಂಧ ನಮ್ಮಲ್ಲಿ ಯಾವುದೇ ಕಾಯ್ದೆ–ಕಾನೂನು ಹಾಗೂ ನಿಯಮಾವಳಿ ಇಲ್ಲದೇ ಇರುವುದು. ತಮ್ಮ ಗಂಡನ ಮಗುವಿಗೆ ಜನ್ಮ ನೀಡಬೇಕು ಎಂಬ ಆ ಮಹಿಳೆಯ ಕನಸು ಕೊನೆಗೂ ಈಡೇರಲಿಲ್ಲ.

ಮೃತ ಗಂಡನ ವೀರ್ಯವನ್ನು ಕಸಿ ಮಾಡುವ ಪ್ರಕ್ರಿಯೆ  ಆರಂಭವಾದದ್ದು 1980ರಲ್ಲಿ. ಅಮೆರಿಕದಲ್ಲಿ ಅಪಘಾತದಲ್ಲಿ ಮೃತಪಟ್ಟ 30 ವರ್ಷ ತರುಣನ ವೀರ್ಯವನ್ನು ಸಂಗ್ರಹಿಸಿ ಅವನ ಹೆಂಡತಿಗೆ ಕಸಿ ಮಾಡಲಾಗಿತ್ತು. ಇದಾದ ನಂತರ ಅಮೆರಿಕ ಒಂದರಲ್ಲಿಯೇ 1980ರಿಂದ 1995ರ ಅವಧಿಯಲ್ಲಿ 85 ಮಹಿಳೆಯರು ಇದೇ ಬೇಡಿಕೆ ಇಟ್ಟಿದ್ದರು. 1998ರಲ್ಲಿ ಅಲೆನ್‌ ಎಂಬ ಮಹಿಳೆ ಮೊದಲ ಬಾರಿಗೆ ಮೃತ ಪತಿಯ ವೀರ್ಯದಿಂದ ಮಗುವಿಗೆ ಜನ್ಮ ನೀಡಿದರು.

ಈ ಪ್ರಕರಣದ ನಂತರ ಮಾಧ್ಯಮಗಳು ಇದಕ್ಕೆ ಹೆಚ್ಚಿನ ಪ್ರಚಾರ ನೀಡಿದ್ದರಿಂದ ಅನೇಕ ಮಹಿಳೆಯರು ಈ ಪ್ರಕ್ರಿಯೆಗೆ ಮುಂದೆ ಬರತೊಡಗಿದರು. ಭಾರತದಲ್ಲಿ ಕೂಡ ಕೆಲ ಮಹಿಳೆಯರು ಮೃತ ಗಂಡನ ವೀರ್ಯಕ್ಕಾಗಿ ಬೇಡಿಕೆ ಒಡ್ಡಿದ್ದರು. ಆದರೆ ಸೂಕ್ತ ನಿಯಮಾವಳಿ ಕೊರತೆಯಿಂದ ಇದುವರೆಗೆ ಯಾವ ಮಹಿಳೆಯ ಆಸೆಯೂ ಈಡೇರಿಲ್ಲ. ಆದರೆ ಈಗ ದೆಹಲಿ ಘಟನೆಯ ನಂತರ ಮತ್ತೊಮ್ಮೆ  ಈ ಚರ್ಚೆಗೆ ಜೀವ ಬಂದಿದೆ.

ಭಾರತದಲ್ಲಿ ಗರ್ಭಧಾರಣೆ ನೆರವು ತಂತ್ರಜ್ಞಾನ   (ಎಆರ್‌ಟಿ) ನಿಯಮಾವಳಿಯ ಪ್ರಕಾರ, ಮೃತ ಪತಿಯ ವೀರ್ಯವನ್ನು ಕೃತಕ ಗರ್ಭಧಾರಣೆ ವಿಧಾನದ ಮೂಲಕ ಬಳಸಲು ಮಹಿಳೆಗೆ ಅವಕಾಶವಿದೆ. ಆದರೆ ಇದು ಪತಿ ಜೀವಂತವಿದ್ದಾಗ ಸಂಗ್ರಹಿಸಿದ ವೀರ್ಯವಾಗಿರಬೇಕೇ ಹೊರತು ಮೃತ ವ್ಯಕ್ತಿಯದ್ದಲ್ಲ. ಆದ್ದರಿಂದಲೇ ಇಂಥ ಪ್ರಕರಣಗಳಲ್ಲಿ ವೈದ್ಯರು ಅಸಹಾಯಕರಾಗಿದ್ದಾರೆ.

‘ಮೃತ ವ್ಯಕ್ತಿಯ ವೀರ್ಯ ಸಂಗ್ರಹ ಪ್ರಕ್ರಿಯೆ ಕ್ಲಿಷ್ಟವೇನಲ್ಲ. ಅದು ಅತ್ಯಂತ ಸುಲಭವಾದದ್ದು’ ಎನ್ನುತ್ತಾರೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ. ಅವರ ಪ್ರಕಾರ, ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಆತನ ವೃಷಣದಲ್ಲಿ ಒಂದು ದಿನದ ಮಟ್ಟಿಗೆ ವೀರ್ಯ ಜೀವಂತವಿರುತ್ತದೆ. ಅದನ್ನು ಸಂಗ್ರಹಿಸುವುದು ಕೂಡ ಸುಲಭ ವಿಧಾನ. ಕೇವಲ ಐದು ನಿಮಿಷಗಳಲ್ಲಿ ವೀರ್ಯವನ್ನು ಹೊರತೆಗೆಯಬಹುದು. ನಂತರ ಕೆಲವು ಪ್ರಕ್ರಿಯೆಗಳಿಗೆ ಒಳಪಟ್ಟ ನಂತರ ಅದನ್ನು ಪತ್ನಿಗೆ ಕಸಿ ಮಾಡಲಾಗುವುದು.

ಭಾರತದಲ್ಲಷ್ಟೇ ಅಲ್ಲದೆ ವಿವಿಧ ದೇಶಗಳಲ್ಲೂ ಈ ರೀತಿಯ ವೀರ್ಯದಾನ ಕಾನೂನುಬಾಹಿರ. ಇಸ್ರೇಲ್‌ನಲ್ಲಿ ಮೃತ ಪತಿಯ ವೀರ್ಯದಾನಕ್ಕೆ ಅವಕಾಶ ಇದೆ. ಜಪಾನ್‌ ಸೇರಿದಂತೆ ಕೆಲವು ದೇಶಗಳಲ್ಲಿ ಮೃತ ವ್ಯಕ್ತಿಯ ಸಂಬಂಧಿಕರು ಅನುಮತಿ ನೀಡಿದರೆ ವೀರ್ಯ ಸಂಗ್ರಹಣೆ ಸಾಧ್ಯವಿದೆ. ಲಂಡನ್‌ನಲ್ಲಿ ಸಾಯುವ ಮುನ್ನ ವ್ಯಕ್ತಿ ಇದಕ್ಕೆ ಅನುಮತಿ ನೀಡಿರಬೇಕು. ಜರ್ಮನಿ, ಕೆನಡಾ, ಸ್ವೀಡನ್‌, ಆಸ್ಟ್ರೇಲಿಯಾ ಮುಂತಾದ ಕಡೆ ಈ ರೀತಿಯ ವೀರ್ಯ ಸಂಗ್ರಹಕ್ಕೆ ಕಾನೂನಿನಡಿ ಅವಕಾಶ ಇಲ್ಲ.

ಹಾಗೆಂದು ಭಾರತದಲ್ಲಿ ಮಾರ್ಗಸೂಚಿ ರೂಪಿಸುವುದು ಕೂಡ ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಕೆಲವು ಕಾನೂನು ತೊಡಕುಗಳು ಇವೆ. ಅವೆಂದರೆ ‘ಹಿಂದೂ ವಿವಾಹ ಕಾಯ್ದೆ’ಯ ಅನ್ವಯ ದಂಪತಿ ಪ್ರತ್ಯೇಕಗೊಂಡ 280 ದಿನಗಳ ನಂತರ ಮಗು ಹುಟ್ಟಿದರೆ ಆ ಮಗು ‘ಅಕ್ರಮ’ ಮಗು ಎಂದೆನಿಸಿಕೊಳ್ಳುತ್ತದೆ.

ಆದರೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿಯಮಾವಳಿ ಪ್ರಕಾರ ವೀರ್ಯವನ್ನು ಗರ್ಭಧಾರಣೆಗೆ ಬಳಸುವ ಮುನ್ನ ಸೋಂಕು ಆಗಬಾರದು ಎನ್ನುವ ಕಾರಣಕ್ಕೆ ಆರು ತಿಂಗಳು ಅದನ್ನು ತೀವ್ರ ಸಂರಕ್ಷಣಾ ಘಟಕದಲ್ಲಿ ಇರಿಸಲಾಗುತ್ತದೆ. ಆದ್ದರಿಂದ ಇವೆಲ್ಲಾ ಪ್ರಕ್ರಿಯೆ ನಂತರ 280 ದಿನಗಳ ನಂತರವೇ ಮಗು ಹುಟ್ಟುತ್ತದೆ. ಈ ಮಗುವನ್ನು ‘ಸಕ್ರಮ’ ಮಾಡುವ ಸಂಬಂಧವೂ ಕಾನೂನಿನ ತಿದ್ದುಪಡಿಯ ಅಗತ್ಯವಿದೆ.

ಇದರ ಜೊತೆಗೆ ನೈತಿಕತೆಯ ಪ್ರಶ್ನೆಯೂ ಇಲ್ಲಿ ಉದ್ಭವ ಆಗುತ್ತಿರುವುದು ಮಾರ್ಗಸೂಚಿಗೆ ಹಿನ್ನಡೆಯಾಗುತ್ತಿದೆ ಎನ್ನುತ್ತಾರೆ ತಜ್ಞರು. ಅದೇನೆಂದರೆ ಅಪ್ಪ ಸತ್ತ ಮೇಲೆ ತಾನು ಹುಟ್ಟಿದ್ದು ಎಂದು ತಿಳಿದರೆ ಆ ಮಗುವಿನ ಮೇಲೆ ಮಾನಸಿಕ ಪರಿಣಾಮ ಉಂಟಾಗಬಹುದು ಎನ್ನುವುದು ಮಾನಸಿಕ ತಜ್ಞರ ಅಭಿಮತ. ಅಷ್ಟೇ ಅಲ್ಲದೆ ಅಂಥ ಮಗುವನ್ನು ಸಮಾಜ ಸ್ವೀಕರಿಸುವ ರೀತಿ, ಮಗುವನ್ನು ತಾಯಿ ಒಂಟಿಯಾಗಿ ಸಾಕಲು ಇರುವ ಸಾಧ್ಯತೆಗಳ ಪರಾಮರ್ಶೆಯ ಬಗ್ಗೆಯೂ ಚಿಂತಿಸಬೇಕಿದೆ.

ಒಂದು ವೇಳೆ ವೀರ್ಯವನ್ನು ಕಸಿ ಮಾಡುವ ಮುನ್ನವೇ ಹೆಂಡತಿ ಸತ್ತರೆ ಆ ವೀರ್ಯವನ್ನು ಏನು ಮಾಡಬೇಕು? ಅದನ್ನು ಬೇರೆಯವರಿಗೆ ದಾನ ಮಾಡಬೇಕೇ ಅಥವಾ ಅದನ್ನು ನಾಶಪಡಿಸಬೇಕೇ ಎನ್ನುವ ಪ್ರಶ್ನೆಗೂ ಉತ್ತರ ಕಂಡುಕೊಳ್ಳಬೇಕಿದೆ. ಈ ಬಗ್ಗೆ ಇಸ್ರೇಲ್‌ ಕಾನೂನಿನಲ್ಲಿ ಸ್ಪಷ್ಟ ಉತ್ತರವಿದೆ. ಹೆಂಡತಿಯ ಕೋರಿಕೆ ಇದ್ದರೆ ಮೃತ ಗಂಡನ ವೀರ್ಯವನ್ನು ಸಂಗ್ರಹಿಸಲಾಗುವುದು. ಗಂಡ ಸತ್ತ ಒಂದು ವರ್ಷದ ಒಳಗೆ ಅದನ್ನು ಕಸಿ ಮಾಡಬೇಕು. ಆ ಅವಧಿಯೊಳಗೆ ಹೆಂಡತಿ ಸತ್ತರೆ ಅದನ್ನು ಬೇರೆ ಮಹಿಳೆಯರಿಗೆ ಕಸಿ ಮಾಡುವಂತಿಲ್ಲ.

ವೀರ್ಯದ ಜೀವಿತಾವಧಿಯು ಒಂದೊಂದು ವಾತಾವರಣದಲ್ಲಿ ಒಂದೊಂದು ತೆರನಾಗಿ ಇರುತ್ತದೆ.  ಒಬ್ಬರ ವೀರ್ಯ 30 ಗಂಟೆ ಇರಬಹುದಾದರೆ ಕೆಲವರದು ಕೆಲವೇ ಗಂಟೆಗಳಲ್ಲಿ ನಿಷ್ಕ್ರಿಯಗೊಳ್ಳುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ಭಾರತದ ವಾತಾವರಣಕ್ಕೆ ಅನುಗುಣವಾಗಿ ವೀರ್ಯದ ಜೀವಂತಿಕೆಯ ಕುರಿತೂ ಅಧ್ಯಯನ ನಡೆಯಬೇಕಿದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡರೆ, ಮರಣದ ನಂತರವೂ ಪತಿಯ ಮಗುವಿಗೆ ತಾಯಿಯಾಗುವ ಹೆಣ್ಣು ಮಕ್ಕಳ ಕನಸು ನನಸಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT